ರಮಜಾನ್ ಮಾಸಾಚರಣೆ ಅಂತ್ಯಗೊಳ್ಳಲು 10 ದಿನ ಬಾಕಿ, ಭಟ್ಕಳದಲ್ಲಿ ಬೀಡುಬಿಟ್ಟ ಸಾವಿರಾರು ಭಿಕ್ಷುಕ ವೇಷಧಾರಿಗಳು!

Source: Vasanth Devadiga | Published on 25th June 2016, 12:31 PM | Coastal News | Special Report |

ಭಟ್ಕಳ: ಉಪವಾಸ ಮತ್ತು ದಾನಕ್ಕೆ ಹೆಚ್ಚು ಮಹತ್ವ ನೀಡುವ ಮುಸ್ಲೀಮ್ ಧರ್ಮೀಯರ ರಮಜಾನ್ ಮಾಸಾಚರಣೆ ಅಂತ್ಯಗೊಳ್ಳಲು 10 ದಿನ ಬಾಕಿ ಇದ್ದು, ದೇಶದ ವಿವಿಧ ಭಾಗಗಳಿಂದ ಸಾವಿರಾರು ಭಿಕ್ಷುಕರು ಹಾಗೂ ಭಿಕ್ಷುಕ ವೇಷಧಾರಿಗಳು ಭಟ್ಕಳದತ್ತ ಮುಖ ಮಾಡಿದ್ದಾರೆ.


 ಭಟ್ಕಳದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಧರ್ಮ ನಿಷ್ಠ ಮುಸ್ಲೀಮರು ವಿದೇಶಿ ಉದ್ಯಮಿಗಳಾಗಿದ್ದು, ಮೊದಲಿನಿಂದಲೂ ದಾನಕ್ಕೆ (ಜಕಾತ್) ಹೆಸರುವಾಸಿಯಾಗಿದ್ದಾರೆ. ರಮಜಾನ್ ಮಾಸಾಚರಣೆಯ ಸಂದರ್ಭದಲ್ಲಿ ಭಟ್ಕಳ ಹಾಗೂ ಸುತ್ತಮುತ್ತಲಿನ ಬಡ ಕುಟುಂಬದವರಿಗೆ ದಾನ ಮಾಡುವುದು ಇಲ್ಲಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಭಟ್ಕಳದಲ್ಲಿನ ದಾನ ಧರ್ಮದ ಸುದ್ದಿ ದೇಶವ್ಯಾಪಿಯಾಗಿದ್ದು, ಕಳೆದ 5-6 ವರ್ಷಗಳಿಂದ ದಾನಕ್ಕೆ ಕೈಯೊಡ್ಡುವವರ ಸಂಖ್ಯೆ ಬೆಳೆಯುತ್ತಲೇ ಇದೆ. ಅರ್ಧಕ್ಕಿಂತ ಹೆಚ್ಚು ಜನರು ಉಪವಾಸ ನಿರತರಾದವರಲ್ಲ! ಅಲ್ಲದೇ ಇವರ ಮೂಲ ವೃತ್ತಿ ಭಿಕ್ಷಾಟಣೆಯೂ ಅಲ್ಲ.  ದೂರದ ಕಾಶ್ಮೀರದಿಂದ ಹಿಡಿದು ಆಂಧ್ರಪ್ರದೇಶ, ತಮಿಳ್ನಾಡು ರಾಜ್ಯಗಳಿಂದಲೂ ದಾನ ಸ್ವೀಕರಿಸಲು ಜನರು ಭಟ್ಕಳಕ್ಕೆ ಬರುತ್ತಿದ್ದಾರೆ. ಭಟ್ಕಳ ಶಹರದ ಗಲ್ಲಿ ಗಲ್ಲಿಗಳಲ್ಲಿ ನಿತ್ಯವೂ ಭಿಕ್ಷುಕರ ದರ್ಶನವಾಗುತ್ತಿದೆ. ಬೇರೆ ಬೇರೆ ರಾಜ್ಯಗಳ ನರಳಾಡುವ ಅಂಗವಿಕಲರು ದುಡಿಮೆಗಾಗಿ ಬಂದವರಂತೆ ಇಲ್ಲಿ ಓಡಾಡಿಕೊಂಡಿದ್ದಾರೆ. ದಾನ ಸ್ವೀಕರಿಸಲು ಕೆಲವು ಕುಟುಂಬಗಳೇ ಇಲ್ಲಿ ಬಂದು ಕುಳಿತಿವೆ. ವಿಪರ್ಯಾಸವೆಂದರೆ ಬಡವರು, ಭಿಕ್ಷಕರೊಂದಿಗೆ ಸಾವಿರಾರು ಸಂಖ್ಯೆಯಲ್ಲಿ ಭಿಕ್ಷಕ ವೇಷಧಾರಿಗಳು ಸೇರಿಕೊಂಡಿದ್ದಾರೆ. ಕುಂಟ, ಕುರುಡರ ವೇಷಗಳೂ ಕಡಿಮೆ ಏನಿಲ್ಲ. ಕೈ ಕಾಲು ಸರಿ ಇದ್ದವರು ಪುಟ್ಟ ಮಕ್ಕಳನ್ನು ಮುಂದೆ ಮಾಡುತ್ತಿದ್ದಾರೆ. ಹಗಲಿಡೀ ಕೇರಿ ಕೇರಿ ಸುತ್ತಾಡುವ ಇವರು ರಾತ್ರಿ ವೇಳೆ ಬಸ್ ನಿಲ್ದಾಣ, ಅಂಗಡಿ ಮುಂಗಟ್ಟುಗಳಲ್ಲಿಯೇ ನಿದ್ದೆಗೆ ಶರಣಾಗುತ್ತಾರೆ. ಕೆಲವರ ಊಟ ತಿಂಡಿಗಳು ಇಂತಹ ಜಾಗದಲ್ಲಿಯೇ ಮುಗಿದು ಹೋಗುತ್ತಿವೆ. ಇನ್ನೂ ಕೆಲವರು ವಸತಿ ಗೃಹಗಳಲ್ಲಿ ವಾಸ್ತವ್ಯ ಮಾಡಿ ಬೆಳಿಗ್ಗೆ ಹೊರಟು ಬಿಡುತ್ತಾರೆ ಎಂಬ ವರ್ತಮಾನವೂ ಇದೆ. ಇದೀಗ ರಮಜಾನ್ ಪೇಟೆಯೂ ಸಿಂಗಾರಗೊಳ್ಳುತ್ತಿದ್ದು, ಪೇಟೆಯಲ್ಲಿಯೂ ನೂಕುನುಗ್ಗಲು ಆರಂಭವಾಗಿದೆ.


ಕಳ್ಳರ ಹಾವಳಿ: ದಾನಕ್ಕೆ ಕೈಯೊಡ್ಡಲು ದೂರದೂರದ ಜನರು ಭಟ್ಕಳಕ್ಕೆ ಬರುವುದು ಹೆಚ್ಚುತ್ತಿರುವಂತೆ ಇಲ್ಲಿ ಕಳ್ಳರ ಹಾವಳಿಯೂ ಹೆಚ್ಚಾಗಿದೆ. ಮನೆ ಮಂದಿ ಪ್ರಾರ್ಥನೆಗೆ ಹೋಗುವದನ್ನೇ ಕಾಯುತ್ತಿರುವ ಕಳ್ಳರು ಮನೆಯ ಬಾಗಿಲು ಮುರಿದು ದೋಚುತ್ತಿದ್ದಾರೆ. ಈ ವರ್ಷದ ಉಪವಾಸ ತಿಂಗಳಿನಲ್ಲಿಯೇ 4-5 ಮನೆ ಕಳ್ಳತನವಾಗಿದ್ದು, ಲಕ್ಷಾಂತರ ರುಪಾಯಿ ನಗದು, ಚಿನ್ನಾಭರಣಗಳನ್ನು ದೋಚಲಾಗಿದೆ. ಎಷ್ಟೇ ಎಚ್ಚರ ವಹಿಸಿದರೂ ಕಳ್ಳರ ಪತ್ತೆ ಸಾಧ್ಯವಾಗಿಲ್ಲ. ಭಿಕ್ಷುಕರ ಹಿಂಡಿನ ನಡುವೆ ಕಳ್ಳರನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಈ ಕುರಿತು ಮಾತನಾಡಿರುವ ಭಟ್ಕಳ ಎಎಸ್‍ಪಿ ಡಾ.ಅನೂಪ್ ಶೆಟ್ಟಿ, ಭಟ್ಕಳಕ್ಕೆ ಹೆಚ್ಚಿನ ಸಂಖ್ಯೆಯ ಭಿಕ್ಷುಕರ ಆಗಮನವಾಗಿದ್ದು, ಅವರ ಚಲನವಲದ ಬಗ್ಗೆ ನಿಗಾ ವಹಿಸಿದ್ದೇವೆ. ರಾತ್ರಿ ವೇಳೆ ಪೊಲೀಸ್ ಬೀಟ್ಸ್‍ಗಳನ್ನು ಹೆಚ್ಚಿಸಲಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಕರೆಯಿಸಿಕೊಳ್ಳಲಾಗಿದ್ದು, ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Read These Next