ತಲಾಂದ ರಸ್ತೆಯಲ್ಲಿರುವ ಅತ್ಯಂತ ಕೆಳಮಟ್ಟದಲ್ಲಿ ಇರುವ ಅಪಾಯಕಾರಿ ಸೇತುವೆ

Source: ರಾಧಾಕೃಷ್ಣ ಭಟ್ಟ/S O News | By I.G. Bhatkali | Published on 21st April 2017, 6:09 PM | Coastal News | Special Report |

ಭಟ್ಕಳ: ಅಪಾಯಕಾರಿ ಸೇತುವೆಯಿಂದಾಗಿ ಜನ ತೀವ್ರ ತೊಂದರೆಗೊಳಗಾಗುತ್ತಿದ್ದು ನೂತನ ಸೇವೆಯನ್ನು ನಿರ್ಮಿಸಿಕೊಡುವಂತೆ ಹಾಗೂ ತಕ್ಷಣ ಸೇತುವೆಯ ಇಕ್ಕೆಲಗಳಲ್ಲಿ ಗಾರ್ಡ ಹಾಕಿ ಜನತೆಯ ಪ್ರಾಣ ರಕ್ಷಣೆಗೆ ಮುಂದಾಗುವಂತೆ ಸಂಬಂಧ ಪಟ್ಟ ಅಧಿಕಾರಿಗಳನ್ನು ನಾಗರೀಕರು ಒತ್ತಾಯಿಸಿದ್ದಾರೆ. 

ನಗರಕ್ಕೆ ಹೊಂದಿಕೊಂಡಂತಿದ್ದರೂ ಕೂಡಾ ಮಧ್ಯದಲ್ಲಿ ಹಾದು ಹೋದ ರೈಲ್ವೇ ಲೈನಿನಿಂದಾಗಿ ಮುಟ್ಟಳ್ಳಿ ಭಾಗವು ನಗರದಿಂದ ಬೇರ್ಪಟ್ಟು ಸಂಪೂರ್ಣ ಹಳ್ಳಿಯ ವಾತಾವರಣ ಬಂದಿದೆ.  ಮುಟ್ಟಳ್ಳಿಯಿಂದ ತಲಾಂದ ಹೋಗುವ ರಸ್ತೆಯು ಬಹಳ ಹಿಂದಿನಿಂದಲೂ ಇದ್ದ ರಸ್ತೆಯಾಗಿದ್ದು ಈ ರಸ್ತೆಯಲ್ಲಿ ಅನೇಕ ವಾಹನಗಳು ಓಡಾಡುತ್ತವೆ. ಕಲ್ಲು ಕೋರೆಯಿಂದಾಗಿ ಹೆಚ್ಚಾಗಿ ಲಾರಿಗಳದ್ದೇ ಕಾರುಬಾರು ಎಂದರೂ ತಪ್ಪಾಗಲಾರದು. ತಲಾಂದ ರಸ್ತೆಯಲ್ಲಿ ನಿರ್ಮಾಣವಾಗಿರುವ ಸೇತುವೆಯು ಈ ಹಿಂದೆ ಮಲ್ಟಿ ಪರ್ಪಸ್ ಸೇತುವೆಯಾಗಿತ್ತು.  ಆಗೆಲ್ಲ ವಾಹನ ಓಡಾಟವೂ ಹೆಚ್ಚಾಗಿಲ್ಲ, ಸೇತುವೆಯಿಂದ ಆ ಕಡೆಗಳಲ್ಲಿ ಇದ್ದ ಮನೆಗಳ ಸಂಖ್ಯೆಯೂ ಕೂಡಾ ತೀರಾ ಕಡಿಮೆ ಇದ್ದಿದ್ದರಿಂದ ಸೇತುವೆಯನ್ನು ಅತ್ಯಂತ ತಗ್ಗಿನಲ್ಲಿ ಕಟ್ಟಿ ಸೇತುವೆ ಒಂದು ಭಾಗದಲ್ಲಿಯೇ ಜಂತ್ರಡಿ ನಿರ್ಮಿಸಿ ಬೇಸಿಗೆಯಲ್ಲಿ ನೀರು ನಿಲ್ಲಿಸಲು ಒಡ್ಡು ನಿರ್ಮಾಣಕ್ಕೆ ಹಲಗೆ ಹಾಕಲು ಅವಕಾಶ ಇಟ್ಟಿದ್ದರು. ಇದರಿಂದ ಎರಡು ಉದ್ದೇಶಗಳು ಈಡೇರಿಸಿದ್ದೇವೆ ಎನ್ನುವುದು ಅಂದಿನ ಅಧಿಕಾರಿಗಳ, ಜನಪ್ರತಿನಿದಿಗಳ ಆಶಯವಾಗಿತ್ತು.  

ಆದರೆ ದಿನಗಳೆಂದರೆ ವಾಹನ ಸಂಖ್ಯೆ ಹೆಚ್ಚಾಗಿದ್ದರಿಂದ ಹಾಗೂ ಕಲ್ಲು ಕೋರೆಯಿಂದಾಗಿ ಲಾರಿಗಳ ಸಂಖ್ಯೆ ವಿಪರೀತ ವಾಗಿದ್ದು ಅತ್ಯಂತ ತಗ್ಗಾದ ಹಾಗೂ ಎರಡೂ ಕಡೆಗಳಲ್ಲಿ ಗರ್ಡಲ್ಸ್ ಇಲ್ಲದ ಸೇತುವೆ ಅಪಾಯಕಾರಿಯಾಗಿ ಪರಿವರ್ತನೆಯಾಗಿದೆ. ಒಂದು ಲಾರಿ ಬಂದರೂ ಸೇತುವೆಯ ಮೇಲೆ ಬೈಕು ಕೂಡಾ ಹಾದು ಹೋಗುವಂತಿಲ್ಲ.  ಮಳೆಗಾಲದಲ್ಲಿ ಸ್ವಲ್ಪ ಮಳೆ ಬಂದರೂ ಕೂಡಾ ಸೇತುವೆಯ ಮೇಲೆಯೇ ನೀರು ಹರಿಯುವುದರಿಂದ ಜನ, ಜಾನುವಾರು ಸೇತುವೆ ದಾಟಲು ಗಂಟೆಗಟ್ಟಲೆ ಕಾಯಬೇಕಾಗಿ ಬಂದಿದ್ದೂ ಇದೆ. ಇತ್ತೀಚೆಗಷ್ಟೇ ಲಾರಿಯೊಂದು ವೇಗವಾಗಿ ಬಂದಿದ್ದರಿಂದ ಯುವತಿಯರಿಬ್ಬರು ತಮ್ಮ ದ್ವಿಚಕ್ರ ವಾಹನ ಸಹಿತ ಕೆಳಕ್ಕೆ ಬಿದ್ದು ಸಣ್ಣಪುಟ್ಟ ಗಾಯವಾಗಿದ್ದನ್ನು ಸ್ಮರಿಸುವ ನಾಗರೀಕರು, ಇನ್ನೂ ಹೆಚ್ಚಿನ ಅಪಾಯ ತಪ್ಪಿತು ಎನ್ನುವ ಸಮಾಧಾನದ ನಿಟ್ಟುಸಿರು ಬಿಡುತ್ತಾರೆ.   

ಈ ಭಾಗದಲ್ಲಿ ಇಂದು ನೂರಾರು ವಾಹನಗಳು, ಶಾಲಾ ವಿದ್ಯಾರ್ಥಿಗಳು ಓಡಾಡುತ್ತಿದ್ದು ಸದಾ ಅಪಾಯದ ಗಂಟೆ ಭಾರಿಸುತ್ತಲೇ ಇರುತ್ತದೆ.  ಅಲ್ಲದೇ ಈ ಭಾಗದಲ್ಲಿ ಇರುವ ಕಲ್ಲು ಕೋರೆಗಳಿಗೆ ಲಾರಿಗಳು ಆಗಿದ್ದಾಗ್ಗೆ ಓಡಾಡುತ್ತಿದ್ದು ಜನ ವಾಹನ ಓಡಾಡುವುದು ಕಷ್ಟಕರವಾಗಿದೆ. ಬಹಳ ಹಿಂದೆ ಕಟ್ಟಿದ ಈ ಸೇತುವೆಯು ಶಿಥಿಲವಾಗುತ್ತಾ ಬಂದಿದ್ದು ಸೇತುವೆ ಕೆಳಗಡೆಯಲ್ಲಿ ಹಾಕಿದ ಕಬ್ಬಿಣದ ರಾಡುಗಳು ಕೂಡಾ ಹೊರಬಂದು ನೀರಿನ ಹರಿವಿಗೆ ತೊಂದರೆಯಾಗುತ್ತಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ. ಪ್ರತಿ ದಿನ ಅಪಾಯ ಎದುರಾಗುವ ಈ ಸೇತುವೆಯನ್ನು ಎತ್ತರಿಸಿ ಹೊಸದಾಗಿ ನಿರ್ಮಿಸಬೇಕು ಎನ್ನುವುದು ಈ ಭಾಗದ ಜನರ ಆಶಯವಾಗಿದೆ. 

* ಸೇತುವೆ ಅತ್ಯಂತ ಕೆಳಮಟ್ಟದಲ್ಲಿ ಹಾಗೂ ತಿರುವಿನಲ್ಲಿ ಇರುವುದರಿಂದ ಅಪಾಯವೇ ಹೆಚ್ಚು.  ಮೊನ್ನೆಯಷ್ಟೇ ಇಬ್ಬರು ಯುವತಿಯರು ದ್ವಿಚಕ್ರ ವಾಹನ ಸಮೇತ ಸೇತುವೆಯಿಂದ ಕೆಳಕ್ಕೆ ಬಿದ್ದು ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ.  ಇದೇ ರೀತಿ ಯಾವಾಗಲೂ ಅಪಾಯ ಎದುರಾಗುತ್ತಲೇ ಇರುತ್ತದೆ -  ಪಾರ್ವತಿ ನಾಯ್ಕ, ಮುಟ್ಟಳ್ಳಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ.  
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...