'ಅಗ್ನಿಪಥ್' ಆಕಾಂಕ್ಷಿಗಳಿಗೆ ಜಾತಿ ಪ್ರಮಾಣಪತ್ರ ಯಾಕೆ? ಪ್ರತಿಪಕ್ಷಗಳ ಪ್ರಶ್ನೆ

Source: Vb | By I.G. Bhatkali | Published on 20th July 2022, 9:17 AM | National News |

ಹೊಸದಿಲ್ಲಿ: 'ಅಗ್ನಿಪಥ್' ಯೋಜನೆ ಮೂಲಕ ಸೇನಾ ನೇಮಕಾತಿಗೆ ಜಾತಿ ಹಾಗೂ ಧರ್ಮದ ಪ್ರಮಾಣ ಪತ್ರಗಳು ಅಗತ್ಯ ಇದೆಯೇ? ಕೇಂದ್ರ ಸರಕಾರ 'ಅಗ್ನಿವೀರರ' ಬದಲಿಗೆ 'ಜಾತಿ ವೀರ'ರನ್ನು ಸೃಷ್ಟಿಸಲು ಬಯಸುತ್ತಿದೆಯೇ? ಎಂದು ಪ್ರತಿಪಕ್ಷಗಳ ನಾಯಕರು ಮಂಗಳವಾರ ಪ್ರಶ್ನಿಸಿದ್ದಾರೆ.

ಭಾರತೀಯ ಸೇನೆಯ ನೇಮಕಾತಿ ಬ್ಯಾಲಿಯ ಕುರಿತ ಅಧಿಸೂಚನೆ ಅಭ್ಯರ್ಥಿಗಳು ತಹಶೀಲ್ದಾರರು ಅಥವಾ ಜಿಲ್ಲಾಧಿಕಾರಿಯಿಂದ ಜಾತಿ ಪ್ರಮಾಣ ಪತ್ರವನ್ನು ತರುವಂತೆ ತಿಳಿಸಿದೆ. ಇದಲ್ಲದೆ ಜಾತಿ ಪ್ರಮಾಣ ಪತ್ರದಲ್ಲಿ ತಮ್ಮ ಧರ್ಮವಾದ ಸಿಖ್, ಹಿಂದೂ, ಮುಸ್ಲಿಮ್ ಅಥವಾ ಕ್ರಿಶ್ಚಿಯನ್ ಎಂದು ಉಲ್ಲೇಖಿಸದೇ ಇದ್ದರೆ ಅಭ್ಯರ್ಥಿಗಳು ತಹಶೀಲ್ದಾರ್ ಅಥವಾ ಉಪ ವಿಭಾಗೀಯ ದಂಡಾಧಿಕಾರಿಯಿಂದ ಧರ್ಮದ ಪ್ರಮಾಣ ಪತ್ರವನ್ನು ತರಬೇಕು ಎಂದು ಸೂಚಿಸಿದೆ.

ಸಶಸ್ತ್ರ ಪಡೆಗಳಲ್ಲಿ ಮೀಸಲಾತಿಯ ಅವಕಾಶ ಇಲ್ಲದೇ ಇರುವಾಗ ತಮ್ಮ ಜಾತಿಯನ್ನು ತಿಳಿಸುವಂತೆ ಸೇನಾ ಆಕಾಂಕ್ಷಿಗಳಲ್ಲಿ ಸೇನೆ ಯಾಕೆ ಕೇಳುತ್ತಿದೆ ಎಂದು ಪ್ರತಿಪಕ್ಷಗಳ ಹಲವು ನಾಯಕರು ಪ್ರಶ್ನಿಸಿದ್ದಾರೆ.

ಸೇನೆಯಲ್ಲಿ ನಿಯೋಜಿಸಲು ದಲಿತರು, ಆದಿವಾಸಿಗಳು ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದವರನ್ನು ಪ್ರಧಾನಿ ನರೇಂದ್ರ ಮೋದಿ ಪರಿಗಣಿಸುತ್ತಿಲ್ಲವೇ ಎಂದು ಆಮ್ ಆದಿ ಪಕ್ಷದ ಸಂಸದ ಸಂಜಯ್ ಸಿಂಗ್ ಪ್ರಶ್ನಿಸಿದ್ದಾರೆ. ಮೋದಿ ಸರಕಾರದ 'ಕೊಳೆತ ಮುಖ' ಈಗ ದೇಶದ ಮುಂದೆ ಬಹಿರಂಗವಾಗಿದೆ ಎಂದು ಅವರು ಹೇಳಿದರು.

ಸೇನಾ ನೇಮಕಾತಿ ಸಂದರ್ಭ ಅಭ್ಯರ್ಥಿ ಗಳಲ್ಲಿ ಜಾತಿ ಕೇಳುತ್ತಿರುವುದು ಭಾರತದ ಇತಿಹಾಸದಲ್ಲೇ ಮೊಟ್ಟ ಮೊದಲು ಎಂದು ಸಿಂಗ್ ಹೇಳಿದ್ದಾರೆ. “ಮೋದಿ ಜೀ, ನೀವು ಅಗ್ನಿವೀರರನ್ನು ರೂಪಿಸಲು ಬಯಸುತ್ತಿರೋ ಅಥವಾ ಜಾತಿವೀರರನ್ನೋ?” ಎಂದು ಸಿಂಗ್ ಪ್ರಶ್ನಿಸಿದ್ದಾರೆ.

“ಸಂಘ'ದ ಜಾತಿವಾದಿ ಸರಕಾರ ಸೇನಾ ಪಡೆಯ ಶಾಶ್ವತ ನೇಮಕಾತಿಗೆ ಜಾತಿ ಹಾಗೂ ಧರ್ಮದ ಆಧಾರದಲ್ಲಿ ಶೇ. 75 ಅಗ್ನಿ ಪಥ್ ಸಿಬ್ಬಂದಿಯನ್ನು ಅನರ್ಹಗೊಳಿಸಲಿದೆ ಎಂದು ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಪ್ರತಿಪಾದಿಸಿದ್ದಾರೆ.

ಅಗ್ನಿಪಥ್ ಯೋಜನೆ ಮೂಲಕ ಸೇನೆಗೆ ನೇಮಕಾತಿಗೆ ಜಾತಿ ಪ್ರಮಾಣಪತ್ರ ಯಾಕೆ ಬೇಕು? ಎಂಬ ಬಗ್ಗೆ ಸಂಬಂಧಿತ ಇಲಾಖೆಯ ಅಧಿಕಾರಿಗಳು ಸ್ಪಷ್ಟಿಕರಣ ನೀಡಬೇಕು ಎಂದು ಜೆಡಿ (ಯು) ನಾಯಕ ಉಪೇಂದ್ರ ಕುಶ್ವಾಹ ಅವರು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿಯ ವಕ್ತಾರ ಸಂಬಿತ್ ಪಾತ್ರಾ, ಸ್ವಾತಂತ್ರ್ಯ ಪೂರ್ವದಿಂದಲೇ ಸೇನಾ ಆಕಾಂಕ್ಷಿಗಳು ತಮ್ಮ ಧರ್ಮ ಹಾಗೂ ಜಾತಿಯನ್ನು ತಿಳಿಸುವ ಅಗತ್ಯತೆ ಇತ್ತು. ಮೋದಿ ಸರಕಾರ ಅದನ್ನು ಬದಲಾಯಿಸಿಲ್ಲ ಎಂದಿದ್ದಾರೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...