ಎರಡನೇ ದಿನದಲ್ಲಿ ಭಾರತ ಜೋಡೊ ನ್ಯಾಯ ಯಾತ್ರೆ; ಮಣಿಪುರದಲ್ಲಿ ಶಾಂತಿ, ಸೌಹಾರ್ದವನ್ನು ಮರಳಿಸಲು ಬಯಸಿದ್ದೇವೆ: ರಾಹುಲ್

Source: Vb | By I.G. Bhatkali | Published on 16th January 2024, 1:40 AM | National News |

ಸೇನಾಪತಿ: ಕಾಂಗ್ರೆಸ್ ಮಣಿಪುರದ ಜನರೊಂದಿಗೆ ನಿಂತಿದೆ ಮತ್ತು ರಾಜ್ಯವನ್ನು ಮತ್ತೆ ಶಾಂತಿಯುತ ಹಾಗೂ ಸೌಹಾರ್ದಯುತವಾಗಿಸಲು ಬಯಸಿದೆ ಎಂದು ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ಹೇಳಿದರು. ತನ್ನ ಭಾರತ ಜೋಡೊ ನ್ಯಾಯ ಯಾತ್ರೆಯ ಎರಡನೇ ದಿನ ಅವರು ಸ್ಥಳೀಯರೊಂದಿಗೆ ಸಂವಾದವನ್ನು ನಡೆಸಿದರು.

ಬೆಳಗ್ಗೆ ವಿಶೇಷವಾಗಿ ಸಿದ್ಧಪಡಿಸಲಾಗಿರುವ ವೋಲ್ಲೋ ಬಸ್‌ನಲ್ಲಿ ಯಾತ್ರೆಯನ್ನು ಆರಂಭಿಸಿದ ರಾಹುಲ್ ಜನರನ್ನು ಭೇಟಿಯಾಗುತ್ತ, ಅವರ ಸಮಸ್ಯೆಗಳನ್ನು ಆಲಿಸುತ್ತ ಕೆಲವು ದೂರ ನಡೆದುಕೊಂಡೇ ಸಾಗಿದರು.

ಯಾತ್ರೆಯ ಮಾರ್ಗದುದ್ದಕ್ಕೂ ಸಾಲುಗಟ್ಟಿ ನಿಂತಿದ್ದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಭಾರೀ ಸಂಖ್ಯೆಯ ಜನರು ರಾಹುಲ್ ಅವರ ಬಸ್ ಇಲ್ಲಿಯ ಹಲವಾರು ಜನನಿಬಿಡ ಪ್ರದೇಶಗಳಿಂದ ಹಾದು ಹೋಗುತ್ತಿದ್ದಂತೆ ಹರ್ಷೋದ್ಗಾರಗಳನ್ನು ಮಾಡಿದರು.

ಸೇನಾಪತಿಯಲ್ಲಿ ತನ್ನ ಬಸ್ಸಿನ ಮೇಲಿನಿಂದ ಜನರನ್ನುದ್ದೇಶಿಸಿ ಮಾತನಾಡಿದ ರಾಹುಲ್, “ಕಾಂಗ್ರೆಸ್ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಾತ್ರೆ ನಡೆಸಿದ್ದು, ಭಾರತದ ಜನರನ್ನು ಒಗ್ಗೂಡಿಸುವುದು ಯಾತ್ರೆಯ ಉದ್ದೇಶವಾಗಿತ್ತು. ಅದು ಅತ್ಯಂತ ಯಶಸ್ವಿ ಯಾತ್ರೆಯಾಗಿದ್ದು, ನಾವು 4,000 ಕಿ.ಮೀ. ಗೂ ಅಧಿಕ ದೂರ ನಡೆದಿದ್ದೆವು. ಪೂರ್ವದಿಂದ ಪಶ್ಚಿಮಕ್ಕೆ ಇನ್ನೊಂದು ಯಾತ್ರೆಯನ್ನು ನಡೆಸಲು ನಾವು ನಿರ್ಧರಿಸಿದಾಗ ಮಣಿಪುರದ ಜನರು ಅನುಭವಿಸಿರುವ ಸಂಕಷ್ಟಗಳ ಬಗ್ಗೆ ಭಾರತದ ಜನರು ತಿಳಿದುಕೊಳ್ಳುವಂತಾಗಲು ಇಲ್ಲಿಂದಲೇ ಯಾತ್ರೆ ಆರಂಭಿಸುವುದನ್ನು ಆಯ್ಕೆ ಮಾಡಿಕೊಂಡಿದ್ದೆವು' ಎಂದು ಹೇಳಿದರು.

“ನೀವು ದುರಂತಗಳನ್ನು ಎದುರಿಸಿದ್ದೀರಿ, ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದೀರಿ, ಆಸ್ತಿಗಳನ್ನು ಕಳೆದುಕೊಂಡಿದ್ದೀರಿ ಎನ್ನುವುದು ನನಗೆ ಅರ್ಥವಾಗಿದೆ. ನಾವು ಸಂಪೂರ್ಣವಾಗಿ ನಿಮ್ಮ ಜೊತೆಯಲ್ಲಿದ್ದೇವೆ. ಮಣಿಪುರಕ್ಕೆ ಶಾಂತಿಯನ್ನು ಮತ್ತು ಸಾಮರಸ್ಯವನ್ನು ಮರಳಿಸಲು ನಾವು ಬಯಸಿದ್ದೇವೆ. ಮಣಿಪುರದಲ್ಲಿ ಆದಷ್ಟು ಬೇಗ ಶಾಂತಿಯು ನೆಲೆಸುತ್ತದೆ ಎಂದು ನಾನು ಆಶಿಸಿದ್ದೇನೆ' ಎಂದರು.

ರವಿವಾರ ಥೌಬಲ್‌ ನಿಂದ  ಆರ೦ಭಗೊಂಡಿದ್ದ ಯಾತ್ರೆಯು ಸೋಮವಾರ ರಾತ್ರಿ ನಾಗಾಲ್ಯಾಂಡ್‌ನಲ್ಲಿ ತಂಗಲಿದೆ.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...