ಉತ್ತರಕನ್ನಡ ಜಿಲ್ಲೆಯಲ್ಲಿ ಗರ್ಭಿಣಿಯರ ಆರೋಗ್ಯದ ದತ್ತು ಯೋಜನೆಗೆ ಅಭೂತಪೂರ್ವ ಯಶಸ್ಸು

Source: SO News | By Laxmi Tanaya | Published on 14th June 2024, 1:53 PM | Coastal News | Don't Miss |

ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಗರ್ಭಿಣಿ ಮಹಿಳೆಯರ ಆರೋಗ್ಯವನ್ನು ಸುರಕ್ಷಿತವಾಗಿ ಕಾಪಾಡುವ ದೃಷ್ಠಿಯಿಂದ, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರ ಆಲೋಚನೆಯಲ್ಲಿ ಮೂಡಿಬಂದ, ಅತ್ಯಂತ ಅಪರೂಪದ ಹಾಗೂ ವಿನೂತನ ಯೋಜನೆಯಾದ, ಗರ್ಭಿಣಿ ಮಹಿಳೆಯರ ಆರೋಗ್ಯದ ಕಾಳಜಿಯನ್ನು ದತ್ತು ನೀಡುವ ಯೋಜನೆಗೆ ಅಭೂತಪೂರ್ವ ಯಶಸ್ಸು ದೊರೆತಿದ್ದು, ಈ ಯೋಜನೆಯಡಿ ಗುರುತಿಸಲಾಗಿದ್ದ ಎಲ್ಲಾ ಮಹಿಳೆಯರಿಗೆ ಸುರಕ್ಷಿತವಾಗಿ ಹೆರಿಗೆ ಆಗಿದ್ದು, ಈ ಸಂದರ್ಭದಲ್ಲಿ ಯಾವುದೇ ತಾಯಿ ಮಗುವಿನ ಮರಣ ಸಂಭವಿಸಿಲ್ಲ..

ಸೆಪ್ಟಂಬರ್ 2023 ರಲ್ಲಿ ಆರಂಭಿಸಿದ ಈ ಯೋಜನೆಯಡಿ ಆರೋಗ್ಯ ಇಲಾಖೆಯ ಆರ್.ಸಿ.ಹೆಚ್. ತಂತ್ರಾ0ಶದಲ್ಲಿ ದಾಖಲಾದ 358 ಗರ್ಭಿಣಿ ಮಹಿಳೆಯರಿಗೆ , ಅವರಿಗೆ ದೊರೆಯಬೇಕಾದ ಆರೋಗ್ಯ ಸೇವೆಗಳನ್ನು ಸಕಾಲದಲ್ಲಿ ದೊರಕಿಸಲು ಮತ್ತು ಅವರು ಸುರಕ್ಷಿತವಾಗಿ, ಆರೋಗ್ಯವಂತ ಶಿಶುವಿಗೆ ಜನ್ಮ ನೀಡುವವರೆಗೆ , ಅವರನ್ನು ನಿರಂತರ ಅನುಸರಣೆ ಮಾಡುವ ಜವಾಬ್ದಾರಿಯನ್ನು , ಜಿಲ್ಲಾಧಿಕಾರಿ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಜಿಲ್ಲೆಯ ಎಲ್ಲಾ ಜಿಲ್ಲಾ ಮಟ್ಟದ ಮತ್ತು ತಾಲೂಕುಮಟ್ಟದ ಅಧಿಕಾರಿಗಳಿಗೆ,ಒಬ್ಬ ಮಹಿಳೆಯ ಯೋಗಕ್ಷೇಮದ ವಿಚಾರಣೆಯ ದತ್ತು ನೀಡಲಾಗಿತ್ತು.

ಈ ಯೋಜನೆಯಡಿ ಗುರುತಿಸಲಾಗಿದ್ದ ಮಹಿಳೆಯರಲ್ಲಿ ಮೇ 2024 ರ ವೇಳೆಗೆ 345 ಮಹಿಳೆಯರಿಗೆ ಸುರಕ್ಷಿತವಾಗಿ ಹೆರಿಗೆ ಆಗಿದ್ದು, ತಾಯಿ ಮತ್ತು ಮಗು ಇಬ್ಬರೂ ಸಂಪೂರ್ಣ ಆರೋಗ್ಯವಾಗಿದ್ದಾರೆ. ವಿವಿಧ ಆರೋಗ್ಯ ಸಮಸ್ಯೆಗಳಿಂದ 13 ಮಹಿಳೆಯರಿಗೆ ಗರ್ಭಪಾತವಾಗಿದೆ. ಸುರಕ್ಷಿತ ಹೆರಿಗೆಯಾಗಿರುವ ಮಹಿಳೆಯರಲ್ಲಿ 121 ಮಂದಿಗೆ ಸಿ ಸೆಕ್ಷನ್ ಹೆರಿಗೆಯಾಗಿದ್ದರೆ, 224 ಮಂದಿಗೆ ಸಾಮಾನ್ಯ ಹೆರಿಗೆಯಾಗಿರುವುದು ಗಮನಾರ್ಹವಾಗಿದೆ.

ದತ್ತು ನೀಡಿದ ಸಂಬ0ಧಪಟ್ಟ ಅಧಿಕಾರಿಗಳು , ತಮಗೆ ದತ್ತು ವಹಿಸಲಾದ ಗರ್ಭಿಣಿ ಮಹಿಳೆಯರಿಗೆ ವಿವಿಧ ಆರೋಗ್ಯ ಸೇವೆಗಳನ್ನು ಸಕಾಲದಲ್ಲಿ ಪಡೆದಿದ್ದಾರೆಯೇ ಎಂದು ನಿಯಮಿತವಾಗಿ ದೂರವಾಣಿ ಮುಖಾಂತರ ಸಂಪರ್ಕಿಸಿ ಖಚಿತಪಡಿಸಿಕೊಳ್ಳುತ್ತಿದ್ದು ಹಾಗೂ ಆರೋಗ್ಯ ಸೇವೆಗಳನ್ನು ಪಡೆಯದೇ ಇದ್ದಲ್ಲಿ ಸಂಬ0ದಿಸಿದ ನೋಡೆಲ್ ಅಧಿಕಾರಿಗಳನ್ನು ಅಥವಾ ತಾಲೂಕಾ ವೈದ್ಯಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ , ಸದರಿಯವರಿಗೆ ಸಕಾಲದಲ್ಲಿ ಸೇವೆಗಳು ದೊರಕುವಂತೆ ಮಾಡುವ ಮೂಲಕ ಯೋಜನೆ ಸಂಪೂರ್ಣ ಯಶಸ್ವಿಯಾಗುವಂತೆ ಮಾಡಿದ್ದಾರೆ.

ಪ್ರತಿ ಗರ್ಭಿಣಿ ಮಹಿಳೆಯರ ಆರೋಗ್ಯದ ಜವಾಬ್ದಾರಿಯನ್ನು ಅಧಿಕಾರಿಗಳಿಗೆ ವಹಿಸಿದ್ದ ಕಾರಣ, ಗರ್ಭಿಣಿ ಮಹಿಳೆ ವಾಸವಾಗಿದ್ದ ಪ್ರದೇಶದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಕೂಡಾ ಗರ್ಭಿಣಿ ಮಹಿಳೆಯರ ಕುರಿತು ವಿಶೇಷ ಕಾಳಜಿ ವಹಿಸಿದ್ದು, ಅವರಿಗೆ ನಿಯಮಿತ ತಪಾಸಣೆ, ಆರೋಗ್ಯ ಸಂಬ0ದಿತ ಸಲಹೆ ಸೂಚನೆಗಳನ್ನು ನೀಡಿ ಅವುಗಳನ್ನು ಪಾಲನೆ ಕುರಿತಂತೆ ನಿಗಾ ಇರಿಸಿದ್ದರು.

ಈ ಯೋಜನೆಗಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನಲ್ಲಿ 79, ಅಂಕೋಲ 24, ಕುಮಟಾ 30, ಹೊನ್ನಾವರ 42), ಭಟ್ಕಳ 21, ಶಿರಸಿ 40, ಸಿದ್ದಾಪುರ 25, ಯಲ್ಲಾಪುರ 20, ಹಳಿಯಾಳ 43, ಮುಂಡಗೋಡು 16, ಜೊಯಿಡಾ ತಾಲೂಕಿನಲ್ಲಿ 18 ಸೇರಿದಂತೆ ಒಟ್ಟು 358 ಗರ್ಭಿಣಿ ಮಹಿಳೆಯರನ್ನು ಗುರುತಿಸಿ, ಅವರ ಯೋಗಕ್ಷೇಮ ವಿಚಾರಣೆಯ ಜವಾಬ್ದಾರಿಯ ಕಾರ್ಯವನ್ನು ಜಿಲ್ಲಾ ಮತ್ತು ತಾಲೂಕುಮಟ್ಟದ ಅಧಿಕಾರಿಗಳಿಗೆ ದತ್ತು ನೀಡಲಾಗಿತ್ತು.

ನನ್ನ ಆರೋಗ್ಯದ ಜವಾಬ್ದಾರಿ ವಹಿಸಿದ್ದ ಅಧಿಕಾರಿಗಳು, ಆರಂಭದಿ0ದಲೂ ನನಗೆ ಕರೆ ಮಾಡಿ, ಯೋಗಕ್ಷೇಮ ವಿಚಾರಿಸುತ್ತಿದ್ದರು. ನನಗೆ 8 ನೇ ತಿಂಗಳಲ್ಲಿ ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದಿದ್ದು ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿದೆ. ಅವರು ಕೂಡಲೇ ಆರೋಗ್ಯದ ಇಲಾಖೆಯ ಸಂಬ0ದಪಟ್ಟ ಅಧಿಕಾರಿಗಳಿಗೆ ತಿಳಿಸಿ, ಅಗತ್ಯ ಚಿಕಿತ್ಸೆಗೆ ಎಲ್ಲಾ ವ್ಯವಸ್ಥೆ ಮಾಡಿದರು. ನಂತರ 9 ನೇ ತಿಂಗಳಲ್ಲಿ ಆಸ್ಪತ್ರೆಗೆ ದಾಖಲಾಗುವುದರಿಂದ , ಹೆರಿಗೆಯಾಗಿ ಮನೆಗೆ ಬರುವವರೆಗೆ ಕರೆ ಮಾಡಿ ಆರೋಗ್ಯ ವಿಚಾರಿಸುತ್ತಿದ್ದರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಲು ನಗು-ಮಗು ಆಂಬುಲೆನ್ಸ್ ವ್ಯವಸ್ಥೆಯನ್ನೂ ಸಹ ಮಾಡಿಕೊಟ್ಟರು ಎಂದು ದತ್ತು ಪಡೆದ ಮಹಿಳೆ ದೇವಳಮಕ್ಕಿಯ ನೂತನ ಗೌಡ ಹೇಳಿದ್ದಾರೆ.

ಜಿಲ್ಲಾಧಿಕಾರಿಗಳು ನನಗೆ ಪ್ರತೀ ತಿಂಗಳು ಕರೆ ಮಾಡುತ್ತಿದ್ದರು. ಅಂಗನವಾಡಿಯಿ0ದ ನಿಯಮಿತವಾಗಿ ಪೌಷ್ಠಿಕ ಆಹಾರ ದೊರೆಯುತ್ತಿದೆಯೇ, ವೈದ್ಯರು ಚೆಕಪ್ ಮಾಡಿಸಲು ಹೋದಾಗ ದೊರೆಯುತ್ತಾರೆಯೇ, ಎಲ್ಲಾ ಔಷಧಗಳು ಆಸ್ಪತ್ರೆಯಿಂದ ಉಚಿತವಾಗಿ ದೊರೆಯುತ್ತಿವೆಯೇ , ಏನದರೂ ಸಮಸ್ಯೆ ಇದೆಯೇ ಎಂದು ಸಂಪೂರ್ಣವಾಗಿ ನನ್ನ ಆರೋಗ್ಯದ ಕಾಳಜಿ ವಿಚಾರಿಸುತ್ತಿದ್ದರು. ಪ್ರಸ್ತುತ ನನಗೆ ಹೆರಿಗೆಯಾಗಿದ್ದು ನಾನು ಮತ್ತು ಮಗು ಆರೋಗ್ಯವಾಗಿದ್ದೇವೆ ಎಂದು ಮಲ್ಲಾಪುರದ ಕೋಮಲ್ ಎಂಬುವವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

ಜಿಲ್ಲೆಯಲ್ಲಿನ ಗರ್ಭಿಣಿ ಮಹಿಳೆಯರ ಸುರಕ್ಷಿತ ಆರೋಗ್ಯ ಪರಿಶೀಲನೆಯ ದತ್ತು ಕಾರ್ಯಕ್ಕೆ ಅಧಿಕಾರಿಗಳನ್ನು ನಿಯೋಜಿಸುವ ಯೋಜನೆಯು ಸಂಪೂರ್ಣ ಯಶಸ್ವಿಯಾಗಿದೆ. ಎಲ್ಲಾ ಅಧಿಕಾರಿಗಳು ತಮಗೆ ವಹಿಸಲಾಗಿದ್ದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಎಲ್ಲಾ ಗರ್ಭಿಣಿ ಮಹಿಳೆಗೆ ಸುರಕ್ಷಿತ ಹೆರಿಗೆಯಾಗಿದ್ದು, ತಾಯಿ ಮತ್ತು ಮಗು ಯಾವುದೇ ಅಪಾಯಕ್ಕೆ ಒಳಗಾಗದಂತೆ ನೋಡಿಕೊಳ್ಳಲಾಗಿದೆ. ಈ ಯೋಜನೆಯ ಮೂಲಕ ಜಿಲ್ಲೆಯಲ್ಲಿ ತಾಯಿ ಮತ್ತು ಶಿಶು ಮರಣವನ್ನು ಶೂನ್ಯಕ್ಕೆ ತರುವ ಉದೇಶ ಮತ್ತು ಯಾವುದೇ ಹಂತದಲ್ಲೂ ಗರ್ಭಿಣಿ ಮಹಿಳೆಯರು ಪ್ರಸವಪೂರ್ಣ ಲಿಂಗಪತ್ತೆಗೆ ಒಳಗಾಗಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾವಹಿಸಲು ಹಾಗೂ ಭ್ರೂಣ ಹತ್ಯೆ ತಡೆಯಲು ಸಾಧ್ಯವಾಗಿದೆ. ಈ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದನ್ನು ಮುಂದುವರೆಸಲಾಗುವುದು ಎಂದು ಜಿಲ್ಲಾಧಿಕಾರಿ ಗ0ಗೂಬಾಯಿ ಮಾನಕರ  ಹೇಳಿದ್ದಾರೆ.

Read These Next

ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರ ಶಾಸಕ ಸತೀಶ್ ಸೈಲ್ ಅಪರಾಧಿ :ನ್ಯಾಯಾಲಯ ತೀರ್ಪು

ಬೆಂಗಳೂರು: ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕಾರವಾರ ಶಾಸಕ ಸತೀಶ್ ಸೈಲ್ ಸೇರಿದಂತೆ ಈ ...

ಸ್ಕ್ಯಾನಿಂಗ್ ಸೆಂಟರ್‌ಗಳ ತಪಾಸಣೆ ನಿರಂತರವಾಗಿರಲಿ; ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ

ಜಿಲ್ಲೆಯಲ್ಲಿರುವ ಎಲ್ಲಾ ಸ್ಕ್ಯಾನಿಂಗ್ ಸೆಂಟರ್‌ಗಳನ್ನು ನಿಯಮಿತವಾಗಿ ತಪಾಸಣೆ ಮಾಡುವ ಮೂಲಕ, ಜಿಲ್ಲೆಯಲ್ಲಿ ಗರ್ಭ ಪೂರ್ವ ಮತ್ತು ...

ಕಾರವಾರ: ದೀಪಾವಳಿ ಹಬ್ಬವನ್ನು ಬೆಳಕಿನ ಹಬ್ಬವಾಗಿ ಮತ್ತು ಪರಿಸರ ಸ್ನೇಹಿಯಾಗಿ ಆಚರಿಸಿ; ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ

ತಿ ವರ್ಷವು ದೀಪಾವಳಿ ಹಬ್ಬವನ್ನು ಸಾಂಪ್ರ‍್ರದಾಯಿಕವಾಗಿ ದೇಶದಾದ್ಯಂತ ಆಚರಿಸಲಾಗುತ್ತಿದ್ದು, ದೀಪಾವಳಿ ಹಬ್ಬವನ್ನು ದೀಪಗಳ ಸಾಲಿನ ...