ಕಂದಾಯ ಸಚಿವ ಕೃಷ್ಣಬೈರೇಗೌಡರಿಂದ ನಾಡ ಕಚೇರಿ, ತಹಸಿಲ್ದಾರ ಕಚೇರಿಗಳಿಗೆ ಅನಿರೀಕ್ಷಿತ ಭೇಟಿ; ಇಲಾಖಾ ಕಾರ್ಯಗಳ ಪರಿಶೀಲನೆ

Source: SO News | By Laxmi Tanaya | Published on 14th September 2023, 11:05 PM | State News | Don't Miss |

ಧಾರವಾಡ : ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು, ಇಲಾಖೆ ಪ್ರಗತಿ ಪರಿಶೀಲನೆಗಾಗಿ ಇಂದು ಧಾರವಾಡ ಜಿಲ್ಲೆಗೆ ಆಗಮಿಸಿದ್ದಾರೆ.

ಬೆಳಿಗ್ಗೆಯಿಂದ ವಿವಿಧ ಕಂದಾಯ ಇಲಾಖೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಇಲಾಖೆ ಸಾರ್ವಜನಿಕರಿಗೆ ನೀಡುವ ವಿವಿಧ ಸೇವೆಗಳ ಗುಣಮಟ್ಟ, ಕಾಲಮಿತಿ ಅನುಷ್ಠಾನ, ಜನಸ್ನೇಹಿ ಮತ್ತು ಸಾರ್ವಜನಿಕರ ಅಭಿಪ್ರಾಯ ಹಾಗೂ ಸಿಬ್ಬಂದಿಗಳ ಅನುಭವ ತಿಳಿಯಲು ಸ್ವತಃ ಗ್ರಾಮ ಆಡಳಿತಾಧಿಕಾರಿ ಕಚೇರಿ, ನಾಡಕಚೇರಿ ಮತ್ತು ತಹಸಿಲ್ದಾರ ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಸಂಬಂಧಿಸಿದ ಸಿಬ್ಬಂದಿಗಳೊಂದಿಗೆ ಚರ್ಚಿಸಿದರು.

ಧಾರವಾಡದಿಂದ ಹೊರಟ ಕಂದಾಯ ಸಚಿವರು ಮೊದಲಿಗೆ ದುಮ್ಮವಾಡ ಉಪತಹಸಿಲ್ದಾರ ಇರುವ ನಾಡಕಚೇರಿಗೆ ತೆರಳಿದರು.
ಅಲ್ಲಿನ ಸಿಬ್ಬಂದಿಗಳಿಂದ ಕಂದಾಯ ಇಲಾಖೆಯ ಸೇವೆಗಳು, ಜನರಿಗೆ ತಲುಪಿಸುವಲ್ಲಿ ಆಗುವ ತಾಂತ್ರಿಕ ಸಮಸ್ಯೆ, ಕೆಲಸದಲ್ಲಿ ಬರುವ ಸಾಮಾನ್ಯ ಸಮಸ್ಯೆ ಮತ್ತು ಅದಕ್ಕೆ ಕಂಡುಕೊಳ್ಳುವ ಪರಿಹಾರಗಳ ಕುರಿತು ಮಾಹಿತಿ ಪಡೆದರು.

   ಪಿಂಚಣಿ, ಈ-ಸ್ವತ್ತು, ಸರ್ವೆಗಳ ದಾಖಲಾತಿ ಕುರಿತು ಸಾರ್ವಜನಿಕರಿಂದ ಬಂದ ದೂರುಗಳ ಕುರಿತು ಸಚಿವರು, ಅಧಿಕಾರಿಗಳ ಗಮನ ಸೆಳೆದರು. ಮತ್ತು ರೈತರಿಗೆ ತಾಂತ್ರಿಕ ವಿಳಂಬ ಹಾಗೂ ಅವುಗಳ ಪರಿಹಾರ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಕುರಿತು ವಿವರಿಸಿದರು.

ಅಲ್ಲಿಂದ ಹಿರೇಹೊನ್ನಳ್ಳಿ ಗ್ರಾಮಕ್ಕೆ ತೆರಳಿ, ಅಲ್ಲಿನ ಗ್ರಾಮ ಆಡಳಿತ ಅಧಿಕಾರಿ ಕಚೇರಿಗೆ ಭೇಟಿ ನೀಡಿ, ದಿನನಿತ್ಯದ ಕಾರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ರೈತರ ಸಾಗುವಳಿ ಚೀಟಿ, ಹಿಡುವಳಿಗಳ ವಹಿ ನಿರ್ವಹಣೆ, ರೈತರ ಜಮೀನುಗಳ ಕಾಲಂ ಎಂಟ್ರಿ ಕುರಿತು ತಲಾಠಿಯಿಂದ ತಿಳಿದುಕೊಂಡು, ಅದರಲ್ಲಿ ಅಗತ್ಯವಿರುವ ಸುಧಾರಣೆಗಳನ್ನು ತಿಳಿಸಿದರು.

ಹಿರೇಹೊನ್ನಳ್ಳಿ ಗ್ರಾಮ ಪಂಚಾಯತ್ ಆವರಣದಲ್ಲಿ ವಿವಿಧ ಸರಕಾರಿ ಕಚೇರಿ, ಸೌಲಭ್ಯಗಳು ಇರುವುದನ್ನು ಕಂಡು ಸಂತಸ ವ್ಯಕ್ತಪಡಿಸಿ, ಈ ರೀತಿಯಲ್ಲಿ ಗ್ರಾಮ ಆಡಳಿತಸೌಧ ನಿರ್ಮಿಸುವುದರಿಂದ ಗ್ರಾಮಸ್ಥರಿಗೆ ಎಲ್ಲ ಸೇವೆಗಳು ಒಂದೇ ಸೂರಿನಡಿ ಸಿಗುತ್ತವೆ. ಈ ಕುರಿತು ಪರಿಶೀಲಿಸಿ ಕ್ರಮವಹಿಸಲು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸಚಿವರು ಸೂಚಿಸಿದರು.

  ಅಲ್ಲಿಂದ ನೇರವಾಗಿ ಸಚಿವರು ಹುಬ್ಬಳ್ಳಿ ತಹಸಿಲ್ದಾರ ಕಚೇರಿಗೆ ತೆರಳಿ, ದಿಢೀರ್ ಪರಿಶೀಲನೆ ಕೈಗೊಂಡರು. ಸಾರ್ವಜನಿಕರ ಕುಂದುಕೊರತೆ, ಟಪಾಲು ಸ್ವೀಕರಿಸುವ ಕೇಂದ್ರಕ್ಕೆ ಭೇಟಿ ನೀಡಿ, ಟಪಾಲು ವಿಲೇವಾರಿ ಆಗುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ವಿಚಾರಿಸಿ, ಕಚೇರಿಯಲ್ಲಿ ಕಡ್ಡಾಯವಾಗಿ ಇ- ಆಫೀಸ್ ಅಳವಡಿಸಿಕೊಳ್ಳಲು ತಹಸಿಲ್ದಾರ ಅವರಿಗೆ ನಿರ್ದೇಶಿಸಿದರು. ನಂತರ ಉಪನೋಂದಣಿ ಅಧಿಕಾರಿಗಳ ಕಚೇರಿ, ರೆಕಾರ್ಡ್ ರೂಮ್ ಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು.

ಬರುವ ಅಕ್ಟೋಬರ್ 1 ರೊಳಗೆ ತಹಸಿಲ್ದಾರ ಹಂತದವರೆಗೆ ಎಲ್ಲ ಕಂದಾಯ ಇಲಾಖೆ ಕಚೇರಿಗಳಲ್ಲಿ ಇ-ಆಫೀಸ್ ತಂತ್ರಾಂಶ ಅಳವಡಿಸಿಕೊಳ್ಳಲು ಸೂಚಿಸಿದರು. ರೆಕಾರ್ಡ್ ರೂಮ್ ನ ಎಲ್ಲ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ, ತಂತ್ರಾಂಶದಲ್ಲಿ ಅಳವಡಿಸುವ ಪ್ರಕ್ರಿಯೆ ರಾಜ್ಯದಾದ್ಯಂತ ಆರಂಭವಾಗಲಿದೆ. ಈ ಕುರಿತು ಈಗಾಗಲೇ ಕ್ರಮಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

     ಸಚಿವರ ಈ ಪ್ರವಾಸ ಸಂದರ್ಭದಲ್ಲಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಕಠಾರಿಯಾ, ಕಂದಾಯ ಇಲಾಖೆ ಆಯುಕ್ತ ಪಿ.ಸುನೀಲಕುಮಾರ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಭೂದಾಖಲೆಗಳ ವಿಭಾಗದ ಜಿಲ್ಲಾ ಉಪನಿರ್ದೇಶಕ ಮೋಹನ ಶಿವಣ್ಣನವರ, ತಹಸಿಲ್ದಾರ ದೊಡ್ಡಪ್ಪ ಹೂಗಾರ, ಕಲ್ಲಗೌಡ ಪಾಟೀಲ, ಪ್ರಕಾಶ ನಾಶಿ, ಯಲ್ಲಪ್ಪ ಗೊಣೆನ್ನವರ, ಸುಧೀರ ಸಾಹುಕಾರ, ಗ್ರೇಡ್2 ತಹಸಿಲ್ದಾರ ಶ್ರವಣ ಕೊಚ್ಚರಗಿ, ಶಿವಾನಂದ ಹೆಬ್ಬಳ್ಳಿ, ಜಿ.ವಿ.ಪಾಟೀಲ, ಉಪತಹಸಿಲ್ದಾರ ದಾನೇಶ ಬೆಲೂಡಿ, ಪ್ರವೀಣ ಪೂಜಾರ, ರಮೇಶ ಬಂಡಿ, ಕಂದಾಯ ನಿರೀಕ್ಷಕರಾದ ಗುರು ಸುಣಗಾರ, ನಾಸೀರ ಅಮರಗೋಳ, ಪಿ.ಎನ್.ಶಿವಳ್ಳಿಮಠ, ರವಿ ಬೆನ್ನೂರ, ಐ.ಎಪ್.ಐಯ್ಯನಗೌಡರ ಸೇರಿದಂತೆ ಇತರರು ಇಲಾಖೆ ಅಧಿಕಾರಿಗಳು, ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಬಿಜೆಪಿ ಮುಖಂಡನಿಗೆ ಪೆನ್‌ಡ್ರೈವ್ ನೀಡಿದ್ದೆ; ಪ್ರಜ್ವಲ್ ಕಾರು ಚಾಲಕನಿಂದ ಹೇಳಿಕೆ

ಪ್ರಜ್ವ ರೇವಣ್ಣರದ್ದು ಎನ್ನಲಾದ ಅಶ್ಲೀಲ ವೀಡಿಯೊ ಪೆನ್ ಡ್ರೈವ್ ಬಿಜೆಪಿ ಮುಖಂಡರೂ ಆಗಿರುವ ವಕೀಲ ದೇವರಾಜೇಗೌಡ ಬಿಟ್ಟು ಬೇರೆ ಯಾರಿಗೂ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಅವಧಿ ಉಲ್ಲೇಖಿಸದೇ ಪ್ರಜ್ವಲ್ ರೇವಣ್ಣ ಜೆಡಿಎಸ್‌ನಿಂದ ಅಮಾನತು

ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಪ್ರಕರಣ ಸಂಬಂಧ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ರೇವಣ್ಣ, ಪ್ರಜ್ವಲ್ ಉಚ್ಚಾಟನೆಗೆ ಜೆಡಿಎಸ್ ಶಾಸಕರ ಪಟ್ಟು

ರಾಜ್ಯದ ಜನತೆಯ ಮುಂದೆ ತಲೆ ತಗ್ಗಿಸುವಂತಹ ಕೆಲಸ ಮಾಡಿದವರನ್ನು ರಾಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಘನತೆಯನ್ನು ಉಳಿಸಬೇಕಿದೆ ಎಂದು ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ: ಕುಮಾರಸ್ವಾಮಿ

ಜೆಡಿಎಸ್ ಸಂಸದ ಪ್ರಜಿ ಕುಮಾರಸ್ವಾಮಿ ಡ್ರೈವ್ ಪ್ರಕರಣದಲ್ಲಿ ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ' ಎಂದು ಮಾಧ್ಯಮಗಳ ಮುಂದೆ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ತ್ವರಿತಗತಿಯಲ್ಲಿ ತನಿಖೆ ನಡೆಸಿ, ವರದಿ ಸಲ್ಲಿಸಲು ಸೂಚನೆ: ಪರಮೇಶ್ವ‌ರ್

ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಿ, ವರದಿ ಸಲ್ಲಿಸುವಂತೆ ...