ಮುರುಡೇಶ್ವರದಲ್ಲಿ ಮತ್ತೆ ಕೇಳಿಸಿದ ಮರಣ ಮೃದಂಗ; ಇಬ್ಬರು ಪ್ರವಾಸಿಗರು ನೀರು ಪಾಲು; ಶವ ಪತ್ತೆ

Source: S O News | Published on 17th January 2023, 11:46 PM | Coastal News |

ಭಟ್ಕಳ: ಪ್ರವಾಸಿ ತಾಣ ಮುರುಡೇಶ್ವರದಲ್ಲಿ ನಿತ್ಯವೂ ಸಾವು ಕೈ ಬೀಸಿ ಕರೆಯುತ್ತಿರುವಂತೆ ವಾತಾವರಣ ನಿರ್ಮಾವಾಗಿದೆ. ಸೋಮವಾರ ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ಬಂದ ಇಬ್ಬರು ನೀರು ಪಾಲಾಗಿದ್ದು, ಓರ್ವನ ಶವ ಮಂಗಳವಾರ ಮಧ್ಯಾಹ್ನ ಪತ್ತೆಯಾಗಿದ್ದರೆ,  ಮತ್ತೋರ್ವ ಯುವಕನ ಮೃತ ದೇಹ ಬುಧವಾರ ಚಂದ್ರು ಹಿತ್ಲು ಎಂಬಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಮೃತರನ್ನು ಪಕ್ಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೊಸಳ್ಳಿ ತುಮರಿಯ ನಿವಾಸಿ ರಾಘವೇಂದ್ರ ರಮೇಶ ಚುಟ್ಟಿಕೇರಿ (18) ಹಾಗೂ ಆಟೋ ಚಾಲಕ ಪುನೀತ್ ಚೌಡಪ್ಪ ತುಮರಿ (28) ಎಂದು ಗುರುತಿಸಲಾಗಿದೆ.

ಮೃತ ಪುನೀತ್ ಶವ ಮುರುಡೇಶ್ವರ ಚರ್ಚ ಸಮೀಪ ಕಡಲ ತೀರದಲ್ಲಿ ಮಂಗಳವಾರ ಪತ್ತೆಯಾಗಿದ್ದು, ಇನ್ನೋರ್ವರ ಮತ್ತೋರ್ವ ಯುವಕನ ಮೃತ ದೇಹ ಬುಧವಾರ ಚಂದ್ರು ಹಿತ್ಲು ಎಂಬಲ್ಲಿ ಪತ್ತೆಯಾಗಿದೆ.

ಮೃತರು ಇವರ ಇನ್ನೋರ್ವ ಗೆಳೆಯ ಆದಿತ್ಯನೊಂದಿಗೆ ಸೇರಿಕೊಂಡು ಲಗೇಜ್ ಆಟೋ ರಿಕ್ಷಾವೊಂದರಲ್ಲಿ ಸಾಗರ ಹೊಸಳ್ಳಿಯಿಂದ ಹೊರಟು, ಇಲ್ಲಿನ ಮಾರುಕೇರಿಯಲ್ಲಿರುವ ಮೃತ ರಾಘವೇಂದ್ರ ಸಂಬಂಧಿಕರೋರ್ವರ ಮನೆಗೆ ಭೇಟಿ ನೀಡಿ, ಅಲ್ಲಿಂದ ಅದೇ ರಿಕ್ಷಾದಲ್ಲಿ ಮುರುಡೇಶ್ವರಕ್ಕೆ ಆಗಮಿಸಿದ್ದರು ಎಂದು ತಿಳಿದು ಬಂದಿದೆ. ಇವರ ಪೈಕಿ ಆದಿತ್ಯ ಎಂಬಾತ ರಿಕ್ಷಾದಲ್ಲಿ ನಿದ್ರೆಗೆ ಜಾರಿದ್ದು, ಉಳಿದ ಇಬ್ಬರು ಸಮುದ್ರಕ್ಕೆ ಈಜಲು ತೆರಳಿದ್ದ ಸಂದರ್ಭದಲ್ಲಿ ಅವಘಡ ಸಂಭವಿಸಿದೆ. ಈ ಕುರಿತು ಮೃತ ರಾಘವೇಂದ್ರ ಅವರ ಸಹೋದರ ನವೀನಕುಮಾರ ಮುರುಡೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕೂಗಾಡಿಕೊಂಡರೂ ಕೇಳುವುದಿಲ್ಲ: 
ಮುರುಡೇಶ್ವರಕ್ಕೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಿದ್ದು, ಪ್ರವಾಸಿಗರು ಸೂಚನಾ ಫಲಕ, ಜೀವರಕ್ಷಕ ಸಿಬ್ಬಂದಿ, ಪೊಲೀಸರು ಸೇರಿದಂತೆ ಯಾರ ಮಾತನ್ನೂ ಕೇಳದೇ ಸಮುದ್ರಕ್ಕೆ ಇಳಿಯುತ್ತಿರುವುದು ಮುರುಡೇಶ್ವರ ಕಡಲ ತೀರದಲ್ಲಿ ಆತಂಕವನ್ನು ಹೆಚ್ಚಿಸಿದೆ. ಹೊಳೆ, ನದಿಯಲ್ಲಿ ಈಜಾಡಿ ಅನುಭವ ಇದ್ದವರು ತಮಗೆ ಸಮುದ್ರದಲ್ಲಿನ ಈಜು ಯಾವ ಲೆಕ್ಕ ಎಂದು ಸಮುದ್ರಕ್ಕೆ ನುಗ್ಗುತ್ತಿದ್ದು, ನಂತರ ಕ್ಷಣ ಮಾತ್ರದಲ್ಲಿಯೇ ಕಡಲ ಸೆಳೆತ ಸೃಷ್ಟಿಸುತ್ತಿರುವ ಅನಾಹುತಕ್ಕೆ ಕಂಗಾಲಾಗುತ್ತಿದ್ದಾರೆ. ಕೆಲವರನ್ನು ಜೀವ ರಕ್ಷಕ ಸಿಬ್ಬಂದಿಗಳು ಮೇಲೆ ಎಳೆದುಕೊಂಡು ಬರುತ್ತಿದ್ದರೆ, ಮತ್ತೆ ಕೆಲ ಪ್ರವಾಸಿಗರು ಸಮುದ್ರದಾಳದಲ್ಲಿ ಕಣ್ಮರೆಯಾಗುತ್ತಿದ್ದಾರೆ. ಮುರುಡೇಶ್ವರದ ಕಡಲ ತೀರದಲ್ಲಿ ಸಾವು, ನೋವು ನಿರಂತರವಾಗಿದ್ದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದ್ದ ಜಿಲ್ಲಾಡಳಿತ ಮೌನವಾಗಿದೆ. 

 

Read These Next