ಆರ್ಯನ್ ಖಾನ್ ಬಿಡುಗಡೆಗೆ ಎನ್‌ಸಿಬಿಯ ವಾಂಖೆಡೆ, ಮಧ್ಯವರ್ತಿಗಳಿಂದ 25 ಕೋ.ರೂ. ಲಂಚದ ಬೇಡಿಕೆ ಸಾಕ್ಷಿ ಆರೋಪ

Source: VB News | By I.G. Bhatkali | Published on 25th October 2021, 11:16 AM | National News |

ಮುಂಬೈ, : ಪ್ರಯಾಣಿಕರ ಹಡಗಿನಲ್ಲಿ ಮಾದಕ ದ್ರವ್ಯ ಪತ್ತೆ ಪ್ರಕರಣದ ಆರೋಪಿಯಾಗಿರುವ ಆರ್ಯನ್ ಖಾನ್ ಬಿಡುಗಡೆಗೆ ಮಾದಕ ದ್ರವ್ಯ ಬ್ಯುರೋ(ಎನ್‌ಸಿಬಿ)ದ ವಲಯ ನಿರ್ದೇಶಕ ಸಮೀರ್‌ ವಾಂಖೆಡೆ ಹಾಗೂ ಇತರರು ಬಾಲಿವುಡ್ ನಟ ಶಾರುಕ್ ಖಾನ್ ಅವರಿಂದ 25 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇರಿಸಿದ್ದರು ಎಂದು ಪ್ರಕರಣದ ಸ್ವತಂತ್ರ ಸಾಕ್ಷಿ ಪ್ರಭಾಕರ್‌ ರಘೋಜಿ ಸೈಲ್ ಪ್ರತಿಪಾದಿಸಿದ್ದಾರೆ.

ಆರ್ಯನ್ ಖಾನ್ ಬಂಧನದ ಬಳಿಕ ಶಾರುಕ್ ಖಾನ್ ಅವರ ಮ್ಯಾನೇಜರ್‌ಗೆ ಖಾಸಗಿ ತನಿಖೆಗಾರ ಕೆ.ಪಿ. ಗೋಸಾವಿ ಹಾಗೂ ಸ್ಯಾಮ್ ಡಿಸೋಜ ಮಾಡಿದ್ದ ಫೋನ್ ಕರೆಯನ್ನು ನಾನು ಲೋವರ್ ಪರೇಲ್‌ನಲ್ಲಿ ಕೇಳಿಸಿಕೊಂಡಿದ್ದೆ. ಫೋನ್ ಕರೆಯಲ್ಲಿ ಅವರು ಆರ್ಯನ್ ಖಾನ್ ಬಿಡುಗಡೆಗೆ 25 ಕೋಟಿ ರೂ.ಗೆ ಬೇಡಿಕೆ ಇರಿಸಿದ್ದರು ಎಂದು ಅಫಿಡವಿಟ್‌ನಲ್ಲಿ ಹಾಗೂ ಬಿಡುಗಡೆ ಮಾಡಿದ ವೀಡಿಯೊ ಸಂದೇಶದಲ್ಲಿ ಸೈಲ್ ಪ್ರತಿಪಾದಿಸಿದ್ದಾರೆ.

ಸೈಲ್ ಅವರು ಕೆ.ಪಿ. ಗೋಸಾವಿ ಅವರ ಆಪ್ತ ಅಂಗರಕ್ಷಕ. ಕೆ.ಪಿ. ಗೋಸಾವಿಯ ಅವರು ಆರ್ಯನ್ ಖಾನ್ ಅವರೊಂದಿಗಿನ ಸೆಲ್ಸಿ ವೈರಲ್ ಆಗಿದೆ.

ಆರ್ಯನ್ ಖಾನ್ ಅವರ ಬಿಡುಗಡೆಗೆ ಗೋಸಾವಿ 25 ಕೋಟಿ ರೂಪಾಯಿ ಬೇಡಿಕೆ ಇರಿಸಿದ್ದರು. ಆದರೆ, ಅಂತಿಮವಾಗಿ 18 ಕೋಟಿ ರೂಪಾಯಿಗೆ ಒಪ್ಪಂದ ಮಾಡಲಾಯಿತು ಎಂದು ಸೈಲ್ ಅಫಿಡವಿಟ್‌ನಲ್ಲಿ ಹೇಳಿದ್ದಾರೆ.

“18 ಕೋಟಿ ರೂಪಾಯಿಯಲ್ಲಿ 8 ಕೋಟಿ ರೂಪಾಯಿ ಎನ್‌ಸಿಬಿಯ ವಲಯ ನಿರ್ದೇಶಕ ಸಮೀರ್‌ ವಾಂಖೆಡೆ ಅವರಿಗೆ ಉಳಿದ 10 ಕೋಟಿ ರೂ. ಇತರರು ಹಂಚಿಕೊಳ್ಳಲು ನಿರ್ಧರಿಸಲಾಗಿತ್ತು. ಲೋವರ್ ಪರೇಲ್‌ನಲ್ಲಿ ಸಭೆ ನಡೆಯಿತು. ಶಾರುಕ್ ಖಾನ್ ಅವರ ಮ್ಯಾನೇಜರ್ ನೀಲಿ ಮರ್ಸಿಡಿಸ್ ಕಾರಿನಲ್ಲಿ ಆಗಮಿಸಿದ್ದರು.

ಆದರೆ, ಶಾರುಕ್ ಖಾನ್ ಅವರ ಮ್ಯಾನೇಜರ್ ಧನಾತ್ಮಕ ಪ್ರತಿಕ್ರಿಯೆ ನೀಡಲಿಲ್ಲ' ಎಂದು ಸೈಲ್ ಅಫಿಡವಿಟ್‌ನಲ್ಲಿ ಹೇಳಿದ್ದಾರೆ.

“ಪ್ರಕರಣದಲ್ಲಿ ತನ್ನನ್ನು ಸಾಕ್ಷಿಯನ್ನಾಗಿ ಮಾಡುವಾಗ ಸಮೀರ್ ವಾಂಖೆಡೆ ಅವರು 8ರಿಂದ 10 ಖಾಲಿ ಹಾಳೆಗೆ ನನ್ನ ಸಹಿ ತೆಗೆದುಕೊಂಡಿದ್ದಾರೆ. ನಾನು ಖಾಲಿ ಹಾಳೆಗೆ ಸಹಿ ಹಾಕಲು ನಿರಾಕರಿಸಿದೆ. ಆದರೆ, ಯಾವುದೇ ತೊಂದರೆ ಆಗದು ಎಂದು ಅವರು ಹೇಳಿದ್ದರು. ಅವರು ನನ್ನ ಆಧಾರ್ ಕಾರ್ಡ್ ಕೂಡ ತೆಗೆದುಕೊಂಡಿದ್ದರು. ಅಲ್ಲದೆ, ಆರ್ಯನ್ ಖಾನ್ ಪ್ರಕರಣದಲ್ಲಿ ನನ್ನನ್ನು ಒಂದನೇ ಸಾಕ್ಷಿಯಾಗಿ ಮಾಡಿದರು. ನನ್ನ ಬಾಸ್ ಕೆ.ಪಿ. ಗೋಸಾವಿ ಕೂಡ ಈ ಪ್ರಕರಣದಲ್ಲಿ ಸಾಕ್ಷಿ. ಪ್ರಯಾಣಿಕರ ಹಡಗಿನ ಮೇಲೆ ದಾಳಿ ಮಾಡುವ ಮುನ್ನ ಕೆ.ಪಿ. ಗೋಸಾವಿ ಅವರು ಅಹ್ಮದಾಬಾದ್‌ಗೆ ಭೇಟಿ ನೀಡಿದ್ದರು. ಮರು ದಿನ ರಾತ್ರಿ ಅವರು ಆಗಮಿಸಿದ್ದರು ಹಾಗೂ ಕಾರ್ಯಾಚರಣೆ ನಡೆಸುವಂತೆ ಎನ್‌ಸಿಬಿಗೆ ತಿಳಿಸಿದ್ದರು'' ಎಂದು ಸೈಲ್ ತಿಳಿಸಿದ್ದಾರೆ.

ತನ್ನ ಬಾಸ್ ಕೆ.ಪಿ. ಗೋಸಾವಿ ನಾಪತ್ತೆಯಾಗಿರುವುದು ತಿಳಿದ ಬಳಿಕ ತನಗೆ ಕೂಡ ಬದುಕಿನ ಬಗ್ಗೆ ಭೀತಿ ಉಂಟಾಯಿತು. ಎನ್‌ಸಿಬಿಯ ಅಧಿಕಾರಿ ಸಮೀರ್ ವಾಂಖೆಡೆ ಅವರಿಂದ ನನ್ನ ಜೀವಕ್ಕೂ ಬೆದರಿಕೆ ಇದೆ ಎಂದು ಅವರು ಹೇಳಿದ್ದಾರೆ.

“ನನ್ನ ಕುಟುಂಬದ ಸದಸ್ಯರು ಗಾಬರಿಗೊಂಡಿದ್ದಾರೆ. ಕೆಲವರು 

ನನ್ನನ್ನು ಹತ್ಯೆಗೈಯುವ ಸಾಧ್ಯತೆ ಇದೆ ಎಂದು ಭಯ ಉಂಟಾ ಗಿದೆ. ಆದುದರಿಂದ ನಾನು ವೀಡಿಯೊ ಬಿಡುಗಡೆ ಮಾಡಲು ಹಾಗೂ ಅಫಿಡವಿಟ್‌ಗೆ ಸಹಿ ಹಾಕಿರುವುದನ್ನು ಬಹಿರಂಗಪಡಿಸಲು ನಿರ್ಧರಿಸಿದೆ. ಒಂದು ವೇಳೆ ನನ್ನ ಜೀವಕ್ಕೆ ಏನಾದರೂ ತೊಂದರೆ ಉಂಟಾದರೆ ಅದಕ್ಕೆ ಎನ್‌ಸಿಬಿ ಅಧಿಕಾರಿಗಳು ಹಾಗೂ ಇತರರು ಹೊಣೆಗಾರರಾಗುತ್ತಾರೆ' ಎಂದು ಸೈಲ್ ಹೇಳಿದ್ದಾರೆ.

ಕೆಲವು ಪ್ರಕರಣಗಳಲ್ಲಿ ಗೋಸಾವಿ ಅವರು 50 ಲಕ್ಷ ರೂಪಾಯಿ ಲಂಚ ತೆಗೆದುಕೊಂಡಿದ್ದಾರೆ. ಈ ಮೊತ್ತದಲ್ಲಿ 38 ಲಕ್ಷ ರೂಪಾಯಿ ಸ್ಯಾಮ್ ಡಿಸೋಜಾ ಅವರಿಗೆ ನೀಡಿದ್ದಾರೆ. ಉಳಿದ ಹಣವನ್ನು ಗೋಸಾವಿ ಇರಿಸಿಕೊಂಡಿದ್ದಾರೆ. ಆದರೆ, ಆರ್ಯನ್ ಖಾನ್ ಪ್ರಕರಣದಲ್ಲಿ ಇದುವರೆಗೆ ಲಂಚದ ಮೊತ್ತ ನೀಡಿಲ್ಲ ಎಂದು ಸೈಲ್ ತಿಳಿಸಿದ್ದಾರೆ.

Read These Next