ಕೊರೋನ ಸೋಂಕಿತರ ಆರೈಕೆಯಲ್ಲಿ ಭಟ್ಕಳದ ನಿಸ್ವಾರ್ಥಿ ಸೇವಕ ಟಾಪ್ ನಿಸಾರ್

Source: sonews | By Staff Correspondent | Published on 4th June 2020, 6:48 PM | Coastal News |

*ಎಂ.ಆರ್.ಮಾನ್ವಿ

ಉತ್ತರಕನ್ನಡ ಜಿಲ್ಲೆಯ ಭಟ್ಕಳ ಪ್ರಾಕೃತಿಕ ಸೌಂದರ್ಯದೊಂದಿಗೆ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ. ಹಾಗೆಯೆ ಇಲ್ಲಿನ ಜನರು ಮಾನವೀಯತೆ, ಸಹೋದರತೆ ಮತ್ತು ಸಮಾಜ ಸೇವೆಗೆ ಬಹಳಷ್ಟು ಆಧ್ಯತೆ ನೀಡುತ್ತಾರೆ. ಈ ನಗರಕ್ಕೆ ಕಳಂಕ ತರುವಂತಹ ಸುದ್ದಿಗಳು ಕೆಲವೊಮ್ಮೆ ಮಾಧ್ಯಮಗಳಲ್ಲಿ ವರದಿಯಾಗುತ್ತಿವೆಯಾದರೂ ಅದೇ ಸತ್ಯವಲ್ಲ. ಭಟ್ಕಳ ಹೊರಜಗತ್ತಿಗೆ ಕೆಟ್ಟ ಹೆಸರಿನಿಂದ ಪರಿಚಿತವಾಗಿದೆ. ಆದರೆ ಅದರ ಮೊತ್ತೊಂದು ಮುಖವನ್ನು ಇಲ್ಲಿ ಅನಾವರಣ ಮಾಡಲಾಗಿದೆ. ಸಮಾಜಿಕ ಕಳಕಳಿಯೊಂದಿಗೆ ಇಲ್ಲಿ ಹಲವು ಸಂಘ ಸಂಸ್ಥೆ, ವ್ಯಕ್ತಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅಂತಹ ವ್ಯಕ್ತಿಗಳ ಸಾಲಿನಲ್ಲಿ ರುಕ್ನುದ್ದೀನ್ ನಿಸಾರ್ ಆಹ್ಮದ್ ರವರ ಹೆಸರು ಮುಂಚೂಣಿಯಲ್ಲಿದೆ. ಟಾಪ್ ನಿಸಾರ್ ಎಂದೇ ಖ್ಯಾತರಾಗಿರುವ ನಿಸಾರ್ ಆಹ್ಮದ್ ರ ಸಮಾಜ ಸೇವೆ ಕಾರ್ಯವನ್ನು ಪರಿಚಯಿಸುವುದೇ ಈ ಲೇಖನದ ಉದ್ದೇಶವಾಗಿದೆ.

ರೋಗಿಗಳ ಆರೈಕೆಯಲ್ಲಿ ನಾನು ದೇವರನ್ನು ಕಾಣುತ್ತಿದ್ದೇನೆ ಎಂದು ಕೋಲ್ಕತ್ತಾದ ಮದರ್ ಥೆರೆಸಾ ಅವರ “ಹೌಸ್ ಫಾರ್ ಡೈಯಿಂಗ್” ನಲ್ಲಿ ರೋಗಿಯೊಬ್ಬರ ದೇಹದಿಂದ ಹುಳಗಳನ್ನು ತೆಗೆಯುತ್ತ ಸೇವಕಿಯೊಬ್ಬರು ಹೇಳಿದ ಮಾತು ನೆನಪಾಗುತ್ತಿದೆ. ಭಟ್ಕಳದ ನಿಸ್ವಾರ್ಥ ಸಮಾಜ ಸೇವಕ ನಿಸಾರ್ ಆಹ್ಮದ್ ರುಕ್ನುದ್ದೀನ್ ಯಾನೆ ಟಾಪ್ ನಿಸಾರ್ ಕಳೆದ 2 ತಿಂಗಳುಗಳಿಂದ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದು ನನಗೆ ಈ ಕಾರ್ಯವು ಮನಶ್ಶಾಂತಿಯನ್ನು ನೀಡುತ್ತದೆ. ನಾನು ಈ ಕಾರ್ಯ ಮಾಡುವಾಗ ತೃಪ್ತನಾಗುತ್ತೇನೆ ಎಂದು ಹೇಳುತ್ತಾರೆ. 

ಸಮಾಜಸೇವೆ ಎನ್ನುವುದು ಫ್ಯಾಷನ್ ಆಗಿರುವ ಮತ್ತು ಅದನ್ನೆ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವ ಸಾಧನನ್ನಾಗಿ ಮಾಡಿಕೊಂಡಿರುವ ನಕಲಿ ಸಮಾಜ ಸೇವಕರ ನಡುವೆ ಭಟ್ಕಳದಲ್ಲಿ ಕಳೆದ 20 ವರ್ಷಗಳಿಂದ ತನ್ನನ್ನು ನಿಸ್ವಾರ್ಥ ಸಮಾಜ ಸೇವಾ ಕಾರ್ಯದಲ್ಲಿ ತೊಡಿಗಿಸಿಕೊಂಡಿರುವ ಟಾಪ್ ನಿಸಾರ್ ಇದಕ್ಕಾಗಿ ಯಾವುದೇ ಪ್ರತಿಫಲವನ್ನು ಬಯಸದೆ ಕೇವಲ ದೇವಸಂಪ್ರೀತಿಗಾಗಿ ಕೆಸಲ ಮಾಡುತ್ತಿರುವುದು ಭಟ್ಕಳ ಹಾಗೂ ಉತ್ತರಕನ್ನಡ ಜಿಲ್ಲೆಗೆ ಅಭಿಮಾನದ ವಿಷಯವಾಗಿದೆ. ಈ ಕೊರೋನಾ ಸಂಕಷ್ಟದ ಸಮಯದಲ್ಲಂತೋ ಇಡಿ ದಿನ ಸರ್ಕಾರಿ ಆಸ್ಪತ್ರೆಯಲ್ಲಿದ್ದುಕೊಂಡು ವೈದ್ಯರ ಜೊತೆ ವೈದ್ಯನಾಗಿ, ದಾದಿಗಳ ಜೊತೆಯಾಗಿ ದಾದಿಯಾಗಿ ರೋಗಿಗಳನ್ನು ಉಪಚರಿಸಿದ ರೀತಿ ನಿಜಕ್ಕೂ ಪ್ರಶಂಸನೀಯ. ಈ ಕಾರಣಕ್ಕಾಗಿಯೆ ಅವರ ಶತ್ರುಗಳು ಕೂಡ ಅವರನ್ನು ಇಷ್ಟಪಡುತ್ತಾರೆ ಮತ್ತು ಪ್ರತಿಯೊಂದು ಊರಿಗೊಬ್ಬ ನಿಸ್ವಾರ್ಥಿ ನಿಸಾರ್ ಇರಬೇಕು ಎನ್ನುತ್ತಾರೆ.  

ಮಳೆ ಇರಲಿ ಬಿಸಿಲು ಚಳಿ ಇರಲಿ ಅಥವಾ ರಾತ್ರಿಯ ಅಂಧಾಕಾರವಿರಲಿ ಯಾವುದನ್ನೂ ಲೆಕ್ಕಿಸದೆ ಹೆದ್ದಾರಿಯಲ್ಲಿ ಉಂಟಾದ ರಸ್ತೆ ಅಪಘಾತದ ಘಟನಾ ಸ್ಥಳಕ್ಕೆ ತಲುಪಿ ಗಾಯಾಳುಗಳನ್ನು ಅಥವಾ ಅಪಘಾತದಲ್ಲಿ ಮೃತ ವ್ಯಕ್ತಿಗಳನ್ನು ತಮ್ಮ ಕೈಯಾರೆ ಎತ್ತಿ ಅಂಬ್ಯುಲನ್ಸ್ ನಲ್ಲಿ ಹಾಕಿ ಆಸ್ಪತ್ರೆ ಸೇರಿಸುತ್ತಾರೆ. ಪೆÇಲೀಸರೇ ಮುಟ್ಟಲು ಹೆದರಿಕೊಳ್ಳುವಂತಹ ಕೆಲವೊಂದು ಪ್ರಕರಣಗಳಲ್ಲಿ ನಿಸಾರ್ ಆಹ್ಮದ್ ಮಾತ್ರ ಯಾವುದೇ ಅಂಜು ಅಳುಕು ಇಲ್ಲದೆ ಧೆರ್ಯದೊಂದಿ ಆ ಕಾರ್ಯವನ್ನು ಸುಲಭವಾಗಿ ನೆರವೇರಿಸುತ್ತಾರೆ. ಏಕೆಂದರೆ ಅವರಿಗೆ ಈ ಕಾರ್ಯ ಸಂತೃಪ್ತಿಯನ್ನು ನೀಡುತ್ತದೆ.ಮನುಷ್ಯ ಸೇವೆ ಅವರಿಗೆ ಪ್ರಿಯಾವಾದ ಕೆಲಸವಾಗಿದೆ. ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಮಾತುಗಳಂತೆ ಅವರು ಮಾಡುವ ಕಾಯಕದಲ್ಲಿ ಕೈಲಾಸವನ್ನು ಕಾಣುತ್ತಾರೆ. ಈ ಕಾರ್ಯಾಕ್ಕಾಗಿ ಇವರನ್ನು ಸರ್ಕಾರ ಗುರುತಿಸಿ ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದ ಪ್ರಶಸ್ತಿಗಳನ್ನು ನೀಡಿದೆ. ಆದರೆ ಈ ಪ್ರಶಸ್ತಿಗಳಿಂದ ಯಾವತ್ತೂ ಹೊಟ್ಟೆ ತುಂಬದು. ಇಂತಹ ಸಮಾಜಿಕ ಕಾರ್ಯಕರ್ತರಿಗೆ ಸರ್ಕಾರ ಮಾಶಾಸನ ನೀಡುವುದರ ಮೂಲಕ ಅವರ ಕುಟುಂಬಗಳಿಗೆ ನೆರವಾಗಬೇಕು ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. 

ಕೊರೋನಾ ಹೆಸರು ಕೇಳಿದೊಡನೆ ಬೆಚ್ಚಿ ಬೀಳುವ ಜನರನ್ನು ನಾವು ನೋಡಿದ್ದೇವೆ. ಆದರೆ ಕೊರೋನಾ ಪಾಸಿಟಿವ್ ವ್ಯಕ್ತಿಗಳೊಂದಿಗಿದ್ದು ಯಾವುದೆ ಅಂಜು ಅಳುಕು ಇಲ್ಲದೆ ಉಪಚರಿಸುತ್ತಿರುವ ಟಾಪ್ ನಿಸಾರ್ ದೈರ್ಯಕ್ಕೆ ಮೆಚ್ಚಲೇ ಬೇಕು. ನಿಸಾರ್ ರವರ ನಿಸ್ವಾರ್ಥ ಕಾರ್ಯವನ್ನು ಕಂಡ ಭಟ್ಕಳ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸವಿತಾ ಕಾಮಾತ್ ‘ಕೋರೋನಾ ಪ್ರಕರಣಕ್ಕೂ ಮುಂಚೆಯಿಂದಲೂ ತಾಲೂಕಾಸ್ಪತ್ರೆಯ ಸಂಪರ್ಕದಲ್ಲಿದ್ದ ಟಾಪ್ ನಿಸ್ಸಾರ ಎಲ್ಲಾ ತುರ್ತು ಸಂಧರ್ಬದಲ್ಲಿ ನಮ್ಮ ಜೊತೆಗೆ ನಿಂತಿದ್ದಾರೆ. ಈಗ ಕೋರೋನಾ ವೇಳೆಯಲ್ಲಿಯೂ ತಮ್ಮ ಜೀವದ ಹಂಗು ತೊರೆದು ಓರ್ವ ಸಮಾಜ ಸೇವಕರಾಗಿ ಸ್ವಯಂ ಪ್ರೇರಿತರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಸರಕಾರದಿಂದ ಸಂಬಳ ಪಡೆದು ಕೆಲಸ ಮಾಡುವವರಿಗಿಂತ ಹೆಚ್ಚಾಗಿ ದಿನದ 24 ಗಂಟೆ ಕೆಲಸ ಮಾಡಿದ್ದಾರೆ. ಇವರ ಈ ಕಾರ್ಯಕ್ಕೆ ತಾಲೂಕಾಸ್ಪತ್ರೆ ವತಿಯಿಂದ ಅಭಿನಂದಿಸುತ್ತೇನೆ ಎನ್ನುತ್ತಾರೆ. 

ನಾನು ಕಳೆದ 20 ವರ್ಷಗಳಿಂದ ಭಟ್ಕಳದಲ್ಲಿ ಆರೋಗ್ಯ ಇಲಾಖೆ ಪೊಲೀಸ್ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳೊಂದಿಗೆ ಉತ್ತಮ ಬಾಂಧವ್ಯವನ್ನಿಟ್ಟುಕೊಂಡಿದ್ದೇನೆ. ಜನರ ಯಾವುದೇ ಕೆಲಸವಿರಲಿ ಅವರ ಸಹಾಯಕ್ಕೆ ಹೋಗುತ್ತೇನೆ.ಕೊರೋನಾ ವಿಷಯದಲ್ಲಿ ನನ್ನ ಮನೆಯಿಂದಲೇ ನನಗೆ ತೀವ್ರ ಆಕ್ಷೇಪ ವ್ಯಕ್ತವಾಯಿತು. ಆದರೆ ನಂತರದ ದಿನಗಳಲ್ಲಿ ಅವರು ಸರಿ ಹೋದರು. ದೇವರ ದಯದಿಂದ ಸಧ್ಯಕ್ಕೆ ಭಟ್ಕಳದಿಂದ ಕೊರೋನಾ ಸೋಂಕು ಕಾಲ್ಕಿತ್ತಿದೆ. ಎಲ್ಲರೂ ಗುಣಮುಖರಾಗಿ ಮನೆಗಳಿಗೆ ಬಂದಿದ್ದಾರೆ.ಇದು ನನಗೆ ಅತ್ಯಂತ ಹೆಚ್ಚು ಸಂತೋಷ ನೀಡಿದೆ ನನಗೆ ಮತ್ತಿನ್ನೇನು ಬೇಕು ಎಂದು ಧನ್ಯತಾಭಾವ ಪ್ರದರ್ಶಿಸುತ್ತಾರೆ ನಿಸಾರ್ ರುಕ್ನುದ್ದೀನ್. 

ಇಂತಹ ನಿಸ್ವಾರ್ಥಿ ವ್ಯಕ್ತಿಗಳಿಗೆ ಸಮಾಜದ ಸಂಘಸಂಸ್ಥೆಗಳು ಸರ್ಕಾರಗಳು ಗೌರವಿಸಬೇಕು. ಅವರ ಬೆನ್ನಿಗೆ ನಿಂತುಕೊಂಡು ಸಾಧ್ಯವಾದಷ್ಟು ಅವರಿಗೆ ಬೆಂಬಲ ವ್ಯಕ್ತಪಡಿಸಬೇಕು ಸರ್ಕಾರದಿಂದ ಇಂತಹ ವ್ಯಕ್ತಿಗಳ ಕುಟುಂಬಕ್ಕೆ ಸಹಾಯ ಸಿಗಬೇಕು ಎಂಬುದೇ ನಮ್ಮ ಆಶಯವಾಗಿದೆ. 

ಸಾವು ಕಣ್ಣ ಮುಂದೆ ಕಾಣುತ್ತಿದ್ದರೂ ಮತ್ತೊಬ್ಬರ ಜೀವ ಉಳಿಯಬೇಕು ಎಂದು ಬಯಸುವವರು ಬಹಳ ಕಡಿಮೆ. ಆದರೆ ಈ ನಿಸಾರ್ ಭಾಯಿ ಮಾತ್ರ ಇಂತಹ ಸಾಹಸಕ್ಕೆ ಹಲವು ಬಾರಿ ಸಾಕ್ಷಿಯಾಗಿದ್ದಾರೆ. ಈ ಕೋರೋನಾ ಮಹಾಮಾರಿಯ ವಿಷಯದಲ್ಲೂ ಕೂಡ ಇದರಲ್ಲಿ ತಮ್ಮ ಜೀವಕ್ಕೆ ಅಪಾಯವೆಂದು ಅರಿತಿದ್ದರೂ ಕೋರೋನಾ ಸೋಂಕಿತರ ಸಹಾಯಕ್ಕೆ ಧಾವಿಸಿ ಬಂದು ಪ್ರತಿ ಹಂತದಲ್ಲೂ ಕೋರೋನಾ ಪಾಸಿಟಿವ್ ಸೋಂಕಿತರಿಂದ ಕೋರೋನಾ ಮುಕ್ತ ಭಟ್ಕಳದ ತನಕ ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ ಜಿಲ್ಲಾ ಮತ್ತು ತಾಲೂಕಾಡಳಿತ ನಿಸಾರ್ ರವರ ನಿಸ್ವಾರ್ಥ ಸೇವೆಗೆ ಅಭಿನಂದನೆ ಸಲ್ಲಿಸಿದೆ. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...