ಮೋದಿ 'ಮೌನ ವ್ರತ' ಮುರಿಯಲು ಅವಿಶ್ವಾಸ ನಿರ್ಣಯ ಅನಿವಾರ್ಯ; ನಿರ್ಣಯ ಮಂಡಿಸಿ ಮಾತನಾಡಿದ ಕಾಂಗ್ರೆಸ್

Source: Vb | By I.G. Bhatkali | Published on 9th August 2023, 12:17 PM | National News |

ಹೊಸದಿಲ್ಲಿ: ಮಣಿಪುರಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿಯ 'ಮೌನ ವ್ರತ'ವನ್ನು ಮುರಿಯಲು ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಪ್ರತಿಪಕ್ಷ ಮೈತ್ರಿಕೂಟ 'ಇಂಡಿಯಾ' ತರಬೇಕಾಯಿತು ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯಿ ಮಂಗಳವಾರ ಹೇಳಿದರು.

“ಈ ಸದನವು ಸಚಿವ ಸಂಪುಟದ ಮೇಲೆ ವಿಶ್ವಾಸದ ಕೊರತೆಯನ್ನು ವ್ಯಕ್ತಪಡಿಸುತ್ತದೆ'' ಎಂದು ಹೇಳುವ ನಿರ್ಣಯವನ್ನು ಲೋಕಸಭೆಯಲ್ಲಿ ಮಂಡಿಸಿದ ಬಳಿಕ ಕಲಿಯಬೋರ್ ಕ್ಷೇತ್ರದ ಸಂಸದ ಗೊಗೊಯಿ ಮಾತನಾಡಿದರು.

ಮುಖ್ಯಮಂತ್ರಿಯನ್ನು ಯಾಕೆ ವಜಾಗೊಳಿಸಿಲ್ಲ?
ಮಣಿಪುರ ಹೊತ್ತಿ ಉರಿಯುತ್ತಿದ್ದರೂ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್‌ರನ್ನು ಇನ್ನೂ 'ಯಾಕೆ ಮೋದಿ ವಜಾಗೊಳಿಸಿಲ್ಲ ಎಂದು ಸಂಸದ ಗೌರವ್ ಗೊಗೊಯಿ ಪ್ರಶ್ನಿಸಿದರು .

ನೀವು ಗುಜರಾತ್, ಉತ್ತರಾಖಂಡ ಮತ್ತು ತ್ರಿಪುರಾಗಳಲ್ಲಿ ಚುನಾವಣೆಗಳಿಗೆ ಮೊದಲು ಮುಖ್ಯಮಂತ್ರಿಗಳನ್ನು ಹಲವು ಬಾರಿ ಬದಲಾಯಿಸಿದ್ದೀರಿ. ಮಣಿಪುರ ಮುಖ್ಯಮಂತ್ರಿಗೆ ನೀವು ಯಾವ ವಿಶೇಷ ಆಶೀರ್ವಾದಗಳನ್ನು ನೀಡಿದ್ದೀರಿ' ಎಂದು ಅವರು ಪ್ರಶ್ನಿಸಿದರು.


ಡಬಲ್ ಇಂಜಿನ್ ಸರಕಾರ ವಿಫಲವಾಗಿದೆ
ಮಣಿಪುರದ ಡಬಲ್ ಇಂಜಿನ್ ಸರಕಾರ ವಿಫಲವಾಗಿದೆ ಎನ್ನುವುದನ್ನು ಮೋದಿ ಒಪ್ಪಿಕೊಳ್ಳಬೇಕು ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯಿ ಹೇಳಿದರು. 

ರಾಜ್ಯದಲ್ಲಿನ ಆಡಳಿತಾತ್ಮಕ ಕ್ರಮಗಳ ಮೇಲೆ ನಿಗಾ ಇಡಲು ಸುಪ್ರೀಂ ಕೋರ್ಟ್ ಸಮಿತಿಯೊಂದನ್ನು ಸ್ಥಾಪಿಸಿರುವುದು, ಕೇಂದ್ರ ಮತ್ತು ಮಣಿಪುರ ಸರಕಾರಗಳು ತೆಗೆದುಕೊಂಡ ಕ್ರಮಗಳಿಂದ ಸುಪ್ರೀಂ ಕೋರ್ಟ್‌ಗೆ ತೃಪ್ತಿಯಾಗಿಲ್ಲ ಎನ್ನುವುದನ್ನು ತೋರಿಸುತ್ತದೆ ಎಂದರು.

“ಒಂದು ಭಾರತದ ಬಗ್ಗೆ ಮಾತನಾಡುವ ಸರಕಾರವು ಎರಡು ಮಣಿಪುರಗಳನ್ನು ಸೃಷ್ಟಿಸಿದೆ- ಒಂದು ಮಣಿಪುರವು ಬೆಟ್ಟ ಪ್ರದೇಶಗಳಲ್ಲಿ ವಾಸಿಸುತ್ತಿದೆ ಮತ್ತು ಇನ್ನೊಂದು ಮಣಿಪುರವು ಕಣಿವೆಯಲ್ಲಿ ವಾಸಿಸುತ್ತಿದೆ'' ಎಂದು ಅವರು ಆರೋಪಿಸಿದರು.

“ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ತರುವ ಅನಿವಾರ್ಯತೆಗೆ ಇಂಡಿಯನ್ ನ್ಯಾಶನಲ್ ಡೆವೆಲಪ್‌ಮೆಂಟಲ್ ಇನ್‌ಕ್ಲುಸಿವ್ ಅಲಯನ್ಸ್ (ಇಂಡಿಯಾ) ಮೈತ್ರಿಕೂಟದ ಪಕ್ಷಗಳು ಒಳಗಾದವು. ಇದು ಬಲಾಬಲಕ್ಕೆ ಸಂಬಂಧಿಸಿದ ವಿಷಯವಲ್ಲ, ಇದು ಮಣಿಪುರದ ನ್ಯಾಯಕ್ಕೆ ಸಂಬಂಧಿಸಿದ ವಿಚಾರ” ಎಂದು ಅವರು ಹೇಳಿದರು.

“ಮಣಿಪುರ ನ್ಯಾಯ ಕೇಳುತ್ತಿದೆ. ಅನ್ಯಾಯ ಎಲ್ಲಿದ್ದರೂ ಎಲ್ಲೆಡೆ ಇರುವ ನ್ಯಾಯಕ್ಕೆ ಬೆದರಿಕೆಯಾಗಿದೆ ಎಂದು ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಹೇಳಿದ್ದರು. ಮಣಿಪುರ ಉರಿಯುತ್ತಿದ್ದರೆ ಇಡೀ ಭಾರತವೇ ಉರಿದಂತೆ, ಮಣಿಪುರ ವಿಭಜನೆಗೊಂಡರೆ ದೇಶವೇ ವಿಭಜನೆಗೊಂಡಂತೆ, ದೇಶದ ನಾಯಕರಾಗಿರುವ ಪ್ರಧಾನಿ ಮೋದಿ ಸದನಕ್ಕೆ ಬಂದು ಮಣಿಪುರದ ಬಗ್ಗೆ ಮಾತನಾಡಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ. ಆದರೆ, ತಾನು ಲೋಕಸಭೆಯಲ್ಲೂ ಮಾತನಾಡುವುದಿಲ್ಲ, ರಾಜ್ಯಸಭೆಯಲ್ಲೂ ಮಾತನಾಡುವುದಿಲ್ಲ ಎನ್ನುವಂತೆ 'ಮೌನವ್ರತ'ವನ್ನು ಪಾಲಿಸುತ್ತಿದ್ದಾರೆ'' ಎಂದು ಗೊಗೊಯಿ ಹೇಳಿದರು.

“ಈ ಅವಿಶ್ವಾಸ ನಿರ್ಣಯದ ಮೂಲಕ ಅವರ ಮೌನವ್ರತವನ್ನು ಮುರಿಯಲು ನಾವು ಬಯಸಿದ್ದೇವೆ” ಎಂದರು.

“ರಾಹುಲ್ ಗಾಂಧಿ ಮಣಿಪುರಕ್ಕೆ ಹೋಗಿದ್ದಾರೆ. 66 ಗೃಹ ಸಚಿವ ಅಮಿತ್‌ ಶಾ ಮತ್ತು ಸಹಾಯಕ ಗೃಹ ಸಚಿವ ನಿತ್ಯಾನಂದ ರಾಯ್ ಕೂಡ ರಾಜ್ಯಕ್ಕೆ ಹೋಗಿದ್ದಾರೆ. ಆದರೆ ಪ್ರಧಾನಿ ಯಾಕೆ ಹೋಗಿಲ್ಲ ಎಂದು ನಾವು ಕೇಳಬಯಸುತ್ತೇವೆ'' ಎಂದು ಗೊಗೊಯಿ ಹೇಳಿದರು.

“ಮಣಿಪುರದ ಬಗ್ಗೆ ಮಾತನಾಡಲು ಪ್ರಧಾನಿ ಮೋದಿ 80 ದಿನಗಳನ್ನು ಯಾಕೆ ತೆಗೆದುಕೊಂಡರು? ಅದು ಕೂಡ ಕೇವಲ 30 ಸೆಕೆಂಡ್ ಮಾತನಾಡಿದರು. ಅದರ ಬಳಿಕವೂ, ಶಾಂತಿ ಕಾಯ್ದುಕೊಳ್ಳುವಂತೆ ಅವರುಮಣಿಪುರದ ಜನರಿಗೆ ಮನವಿ ಮಾಡಿಲ್ಲ. ನಾವು ಮಾತನಾಡುತ್ತೇವೆ ಎಂದು ಸಚಿವರು ಹೇಳುತ್ತಿದ್ದಾರೆ. ಆದರೆ, ಓರ್ವ ಪ್ರಧಾನಿಯಾಗಿ ಅವರು ಆಡುವ ಮಾತುಗಳನ್ನು ಸಚಿವರ ಮಾತುಗಳಿಗೆ ಹೋಲಿಸಲು ಸಾಧ್ಯವಿಲ್ಲ' ಎಂದು ಗೊಗೊಯಿ ನುಡಿದರು.

ಮಣಿಪುರದಲ್ಲಿನ ಹಿಂಸಾಚಾರದ ಬಗ್ಗೆ ಮೋದಿ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಮಾತನಾಡಬೇಕು ಎಂದು ಅವರು ಒತ್ತಾಯಿಸಿದರು. ಅದೂ ಅಲ್ಲದೆ, ಸಂಘರ್ಷಪೀಡಿತ ರಾಜ್ಯಕ್ಕೆ ಮೋದಿ ನೇತೃತ್ವದಲ್ಲಿ ಸರ್ವಪಕ್ಷ ನಿಯೋಗವೊಂದನ್ನು ಒಯ್ಯಬೇಕು ಮತ್ತು ಅಲ್ಲಿನ ನಾಗರಿಕ ಸಮಾಜದ ಸಂಘಟನೆಗಳೊಂದಿಗೆ ಮಾತುಕತೆಗಳನ್ನು ನಡೆಸಬೇಕು ಎಂದರು.

ಮಣಿಪುರದಲ್ಲಿ ಮೂರು ತಿಂಗಳುಗಳಿಂದ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದಲ್ಲಿ ಕನಿಷ್ಠ 187 ಮಂದಿ ಮೃತಪಟ್ಟಿದ್ದಾರೆ ಮತ್ತು ಸುಮಾರು 60,000 ಮಂದಿ ತಮ್ಮ ಮನೆಗಳಿಂದ ಪಲಾಯನಗೈದಿದ್ದಾರೆ.

ಹಿಂದೆ ಸರಿದ ರಾಹುಲ್ ಗಾಂಧಿ: ಆವಿಶ್ವಾಸ ನಿರ್ಣಯವನ್ನು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಮಂಡಿಸಿ ಚರ್ಚೆಯ ನೇತೃತ್ವವನ್ನು ವಹಿಸಲಿದ್ದಾರೆ ಎಂಬ ಸೂಚನೆಗಳಿದ್ದವು. ಆದರೆ, ಚರ್ಚೆಯ ನೇತೃತ್ವವನ್ನು ವಹಿಸದಿರಲು ಮಂಗಳವಾರ ರಾಹುಲ್ ಗಾಂಧಿ ನಿರ್ಧರಿಸಿದರು.

ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪ್ರತಿಪಕ್ಷಗಳ ಪರವಾಗಿ ಮೊದಲು ರಾಹುಲ್ ಗಾಂಧಿ ಮಾತನಾಡಲಿದ್ದಾರೆ ಎಂಬುದಾಗಿ ಮಾಧ್ಯಮಗಳೂ ವರದಿ ಮಾಡಿದ್ದವು. ಆದರೆ, ಈ ದಿಢೀರ್ ಬದಲಾವಣೆಯ ಬಳಿಕ, ಚರ್ಚೆಯ ನೇತೃತ್ವವನ್ನು ಕಾಂಗ್ರೆಸ್ ಸಂಸದ ಗೌರವ್ ಗೊಗೊಯಿ ವಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ, “ಬಹುಶಃ ರಾಹುಲ್‌ ಗಾಂಧಿ ಇಂದು ತಯಾರಾಗಿಲ್ಲವೇನೋ ಅಥವಾ ಅವರು ತಡವಾಗಿ ಎದ್ದಿರಬಹುದು” ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಸ್ಸಾಮ್‌ ನ ಕಲಿಯಬೋರ್ ಕ್ಷೇತ್ರವನ್ನು ಪ್ರತಿನಿಧಿಸುವ ಗೋಗೋಯಿ, ನಾನೋರ್ವ ಮಣಿಪುರ ಹಿಂಸಾಚಾರದ ಸಂತ್ರಸ್ತನಾಗಿದ್ದೇನೆ ಎಂದರು. “ಅಲ್ಲಿ ನನ್ನ ಮಾವ ಸಂಕಷ್ಟಕ್ಕೊಳಗಾಗಿದ್ದಾರೆ ಮತ್ತು ಗಾಯಗೊಂಡಿದ್ದಾರೆ” ಎಂದರು.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...