ರೈತರ ಬಿಡುಗಡೆಗೆ ಆಗ್ರಹಿಸಿ ಪೊಲೀಸ್‌ ಠಾಣೆ ಮುಂದೆ ಟಿಕಾಯತ್‌, ಯಾದವ್‌ ಧರಣಿ

Source: PTI | By MV Bhatkal | Published on 6th June 2021, 6:41 PM | National News |

ಟೊಹಾನಾ, ಹರಿಯಾಣ: ಬಂಧಿತ ಇಬ್ಬರು ರೈತರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ರೈತ ಮುಖಂಡರಾದ ರಾಕೇಶ್‌ ಟಿಕಾಯತ್, ಗುರ್ನಾಮ್ ಸಿಂಗ್‌ ಚದೂನಿ ಹಾಗೂ ಸಂಯುಕ್ತ ಕಿಸಾನ್‌ ಮೋರ್ಚಾ ಮುಖಂಡ ಯೋಗೇಂದ್ರ ಯಾದವ್ ಅವರು ಫತೇಹಾಬಾದ್‌ನ ಸದರ್‌ ಪೊಲೀಸ್‌ ಠಾಣೆ ಮುಂದೆ ಶನಿವಾರ ರಾತ್ರಿ ಧರಣಿ ನಡೆಸಿದರು.
ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಪಂಜಾಬ್‌ ಹಾಗೂ ಹರಿಯಾಣದ ವಿವಿಧೆಡೆ  ಪ್ರತಿಭಟನೆ ಹಮ್ಮಿಕೊಂಡಿದ್ದವು. ಈ ವೇಳೆ ಫತೇಹಾಬಾದ್‌ನಲ್ಲಿರುವ ಜೆಜೆಪಿ ಶಾಸಕ ದೇವಂದ್ರ ಬಬ್ಲಿ ಅವರ ಮುಂದೆ ಕೆಲ ರೈತರು ಧರಣಿ ನಡೆಸಿ, ಘೇರಾವ್‌ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ರೈತರ ಬಗ್ಗೆ ಅವಮಾನಕರ ರೀತಿಯಲ್ಲಿ ಮಾತನಾಡಿರುವ ಶಾಸಕ ಬಬ್ಲಿ ವಿರುದ್ಧ ಪ್ರಕರಣ ದಾಖಲಿಸುವಂತೆಯೂ ಟಿಕಾಯತ್‌ ಹಾಗೂ ಇತರ ಪ್ರತಿಭಟನಕಾರರು ಒತ್ತಾಯಿಸಿದರು.
ಪೊಲೀಸ್‌ ಠಾಣೆ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಯೋಗೇಂದ್ರ ಯಾದವ್‌, ‘ಬಂಧಿತ ಇಬ್ಬರು ರೈತರನ್ನು ಬಿಡುಗಡೆ ಮಾಡಬೇಕು ಎಂಬುದು ನಮ್ಮ ಬೇಡಿಕೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಇಲಾಖೆಯೊಂದಿಗಿನ ಮಾತುಕತೆ ಫಲಪ್ರದವಾಗದ ಕಾರಣ, ಬಿಕ್ಕಟ್ಟು ತಲೆದೋರಿದೆ’ ಎಂದರು.
‘ನಾವು ಎರಡು ಬೇಡಿಕೆಗಳನ್ನು ಮುಂದಿಟ್ಟಿದ್ದೇವೆ. ಬಂಧಿತ ರೈತರಾದ ವಿಕಾಸ್‌ ಹಾಗೂ ರವಿ ಆಜಾದ್‌ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು. ಇಲ್ಲವೇ ನಮ್ಮನ್ನೆಲ್ಲಾ ಬಂಧಿಸಿ, ಜೈಲಿಗೆ ಕಳುಹಿಸಬೇಕು ಎಂಬುದು ಮೊದಲನೇ ಬೇಡಿಕೆ’ ಎಂದರು.
‘ರೈತರನ್ನು ನಿಂದಿಸಿದ್ದ ಶಾಸಕ ಬಬ್ಲಿ ಈಗಾಗಲೇ ಕ್ಷಮೆ ಕೇಳಿದ್ದಾರೆ. ಹೀಗಾಗಿ ಎರಡನೇ ಬೇಡಿಕೆ ಈಡೇರಿದೆ’ ಎಂದು ಯಾದವ್‌ ಹೇಳಿದರು.
‘ಈ ಇಬ್ಬರು ರೈತರ ವಿರುದ್ಧ ಶಾಸಕ ಬಬ್ಲಿ ದೂರು ನೀಡಿಲ್ಲ. ಆದರೂ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಹಿಂತೆಗೆದುಕೊಳ್ಳಲು ಹರಿಯಾಣ ಸರ್ಕಾರ ಸಿದ್ಧವಿಲ್ಲ’ ಎಂದು ಯಾದವ್‌ ದೂರಿದರು
ಇದಕ್ಕೂ ಮುನ್ನ ಅವರು ಇಲ್ಲಿನ ಮಾರುಕಟ್ಟೆಯಲ್ಲಿ ಜಮಾಯಿಸಿ, ನಂತರ ಮೆರವಣಿಗೆ ಮೂಲಕ ಪೊಲೀಸ್‌ ಠಾಣೆಗೆ ಬಂದರು. ಈ ವೇಳೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಹಾಕಲಾಗಿತ್ತು

 

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...