ಗೌರವಯುತವಾಗಿ ಬದುಕುವ ಹಕ್ಕು ಎಲ್ಲರಿಗೂ ಸೇರಿದೆ; ಪ್ರಧಾನ ಜಿಲ್ಲಾ ನ್ಯಾಯಾಧೀಶ ಈಶಪ್ಪ ಭೂತೆ

Source: so news | Published on 11th December 2019, 12:06 AM | State News | Don't Miss |


ಧಾರವಾಡ: ಸಮಾಜದಲ್ಲಿ ಗೌರವಯುತವಾಗಿ ಬದುಕುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಅದರ ಉಲ್ಲಂಘನೆ ಆಗದಂತೆ ಎಚ್ಚರ ವಹಿಸಿ, ಪರಸ್ಪರ ಗೌರವದಿಂದ ಮುನ್ನಡೆಯಬೇಕೆಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಈಶಪ್ಪ ಭೂತೆ ಹೇಳಿದರು.

ಅವರು ಇಂದು ಬೆಳಿಗ್ಗೆ, ಆಲೂರು ವೆಂಕಟರಾವ್ ಸಭಾಭವನದಲ್ಲಿ ಜಿಲ್ಲಾಢಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ ಹಾಗೂ ಧಾರವಾಡ ವಕೀಲರ ಸಂಘ ಸಂಯುಕ್ತವಾಗಿ ಆಯೋಜಿಸಿದ್ದ ‘ವಿಶ್ವ ಮಾನವ ಹಕ್ಕುಗಳ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

ಪ್ರತಿ ವ್ಯಕ್ತಿಯ ವೈಯಕ್ತಿಕ ಬದುಕು ಸ್ವತಂತ್ರವಾಗಿ, ಸ್ವಚ್ಛಂದವಾಗಿ ಇರಬೇಕು. ಪರಸ್ಪರ ಗೌರವದಿಂದ ಬದುಕಬೇಕೆನ್ನುವುದು ನಮ್ಮ ಸಂವಿಧಾನದ ಮೂಲ ಆಶಯವಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆಯಾದಾಗ ನ್ಯಾಯಾಂಗ ಮಧ್ಯಪ್ರವೇಶಿಸಿ ಅನೇಕ ತೀರ್ಪು, ನಿರ್ದೇಶನಗಳನ್ನು ನೀಡಿದೆ. ಸರಕಾರ ರೂಪಿಸುವ ಕಾನೂನುಗಳನ್ನು ಮತ್ತು ನ್ಯಾಯಾಲಯದ ತೀರ್ಪುಗಳನ್ನು ಪಾಲಿಸುವುದರಿಂದ ಎಲ್ಲರಿಗೂ ನೆಮ್ಮದಿಯ ಬದುಕು ಸಿಗುತ್ತದೆ ಎಂದರು.

ಮಾನವ ಹಕ್ಕುಗಳ ಉಲ್ಲಂಘನೆಗಳಿಂದಾಗಿ ಮಕ್ಕಳು, ಮಹಿಳೆಯರು ಸೇರಿದಂತೆ ದುರ್ಬಲ ವರ್ಗದ ಜನರಿಗೆ ಅನ್ಯಾಯವಾಗುವ ಸಾಧ್ಯತೆ ಇರುತ್ತದೆ. ಯಾವುದೇ ಹಕ್ಕುಗಳ ಉಲ್ಲಂಘನೆಯಾದಾಗ ಸರ್ಕಾರ ಅಥವಾ ನ್ಯಾಯಾಂಗದ ಗಮನಕ್ಕೆ ತರಬೇಕು ಎಂದು ಅವರು ಹೇಳಿದರು.

ಮಾನವ ಹಕ್ಕುಗಳ ಕುರಿತು ವ್ಯಾಪಕ ಪ್ರಚಾರ, ತಿಳುವಳಿಕೆ ಕಾರ್ಯಕ್ರಮಗಳಾಗಬೇಕು. ಒಂದು ಆಂದೋಲನದ ರೂಪದಲ್ಲಿ ಮಾನವ ಹಕ್ಕುಗಳ ಜಾಗೃತಿ ಮಾಡುವ ಅಗತ್ಯವಿದೆ ಎಂದು ಈಶಪ್ಪ ಭೂತೆ ತಿಳಿಸಿದರು.

ಹಿರಿಯ ನ್ಯಾಯವಾದಿ ಬಸವಪ್ರಭು ಹೊಸಕೇರಿ ವಿಶ್ವ ಮಾನವ ಹಕ್ಕುಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಧಾರವಾಡ ವಕೀಲರ ಸಂಘದ ಅಧ್ಯಕ್ಷ ಬಿ.ಎಸ್. ಘೋಡಸೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಮಾನವ ಹಕ್ಕುಗಳು ಜಾತಿ, ಲಿಂಗ, ಜನ್ಮಸ್ಥಳ, ಧರ್ಮ, ವಯಸ್ಸು, ಬಣ್ಣ, ಅಂತಸ್ತು ಲೆಕ್ಕಿಸದೆ ಸರ್ವರಲ್ಲಿ ಸಮಾನತೆಯನ್ನು ಗುರುತಿಸುತ್ತವೆ ಎಂದು ಹೇಳಿದರು.

ಭಾರತ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳ ವಿಸ್ತøತ ರೂಪವೇ ಮಾನವ ಹಕ್ಕುಗಳು. ಇವುಗಳ ಉಲ್ಲಂಘನೆಯಾದರೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‍ಗಳು ನ್ಯಾಯ ನೀಡಿ, ಹಕ್ಕುಗಳ ಮರುಸ್ಥಾಪನೆ ಮಾಡುತ್ತವೆ ಎಂದರು.

ಮಾನವ ಹಕ್ಕುಗಳ ವ್ಯಾಪಕ ಪ್ರಚಾರ ಮತ್ತು ಜಾಗೃತಿಗೆ ಯುವ ಸಮೂಹ, ವಿದ್ಯಾರ್ಥಿಗಳು ಕೈ ಜೋಡಿಸಬೇಕು. ವಿದ್ಯಾರ್ಥಿಗಳು ತಮ್ಮ ಹಂತದಲ್ಲಿ ಮತ್ತು ತಮ್ಮ ಸುತ್ತಲಿನ ಪರಿಸರದಲ್ಲಿ ಯಾವುದೇ ರೀತಿಯಿಂದಲೂ ಮಾನವ ಹಕ್ಕುಗಳ ಉಲ್ಲಂಘನೆ ಆಗದಂತೆ ಜಾಗೃತ ವಹಿಸಬೇಕೆಂದು ಹೇಳಿದರು.

ವೇದಿಕೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಿಣ್ಣನ್ನವರ ಆರ್. ಎಸ್, ಎಸ್.ಪಿ ಕಚೇರಿಯ ಡಿವಾಯ್‍ಎಸ್‍ಪಿ ಗುರು ಮತ್ತೂರು, ಉಪ ಪೊಲೀಸ್ ಆಯಕ್ತ ಡಿ.ಎಲ್. ನಾಗೇಶ, ಸಹಾಯಕ ಪೊಲೀಸ್ ಆಯುಕ್ತ ಎಂ.ಎನ್.ರುದ್ರಪ್ಪ, ಮಹಾನಗರ ಪಾಲಿಕೆ ಜಂಟಿ ಆಯುಕ್ತ ಅಜೀಜ ದೇಸಾಯಿ ಉಪಸ್ಥಿತರಿದ್ದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆರತಿ ದೇವಶಿಖಾಮಣಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯಾಲಯದ ವಿವಿಧ ನ್ಯಾಯಾಧೀಶರು, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

​​

Read These Next

ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟ; ಬಾಲಕಿಯರೇ ಮೇಲುಗೈ; ಶೇ.73.40ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ

ರಾಜ್ಯಾದ್ಯಂತ 2023-24ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಶೇ.73.40ರಷ್ಟು ಉತ್ತೀರ್ಣತೆ ದಾಖಲಾಗಿದೆ. ...

ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟ; 76.91ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ, ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ

ಈ ವರ್ಷದ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಶೇ 94 ರಷ್ಟು ಪ್ರಥಮ ಹಾಗೂ ದಕ್ಷಿಣ ಕಾಂಡ ಶೇ 92.12 ರಷ್ಟು ಫಲಿತಾಂಶದೊಂದಿಗೆ ದ್ವಿತೀಯ ...