ಕೋವಿಡ್ ಪರಿಹಾರ ವಿಳಂಬ; ರಾಜ್ಯಗಳಿಗೆ ಸುಪ್ರೀಂ ಎಚ್ಚರಿಕೆ

Source: VB | By I.G. Bhatkali | Published on 20th January 2022, 5:56 PM | National News |

ಹೊಸದಿಲ್ಲಿ: ಕೋವಿಡ್‌ನಿಂದ ಸಾವನ್ನಪ್ಪಿದ ವರ ಕುಟುಂಬಗಳಿಗೆ ಪರಿಹಾರ ನೀಡಿಕೆಯಲ್ಲಿ ವೈಫಲ್ಯ ಅಥವಾ ವಿಳಂಬಕ್ಕಾಗಿ ಸರ್ವೋಚ್ಚ ನ್ಯಾಯಾಲಯವು ಬುಧವಾರ ಆಂಧ್ರಪ್ರದೇಶ ಮತ್ತು ಬಿಹಾರ ಸರಕಾರಗಳಿಗೆ ಚಾಟಿಯೇಟು ಬೀಸಿದೆ. ಕೇರಳ ಸೇರಿದಂತೆ ಇತರ ರಾಜ್ಯಗಳನ್ನೂ ಅದು ತರಾಟೆಗೆತ್ತಿಕೊಂಡಿದೆ.

ಅವರು (ಆಂಧ್ರಪ್ರದೇಶ ಮತ್ತು ಬಿಹಾರ ಸರಕಾರಗಳು) ಕಾನೂನಿಗಿಂತ ಮೇಲಲ್ಲ ಎಂದು ನ್ಯಾ.ಎಂ.ಆರ್‌. ಶಾ ಅವರು ಕಟುವಾಗಿ ಹೇಳಿದರು. ತುರ್ತಾಗಿ ತನ್ನ ಮುಂದೆ ಹಾಜರಾಗುವಂತೆಯೂ ಉಭಯ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸರ್ವೋಚ್ಚ ನ್ಯಾಯಾಲಯವು ಆದೇಶಿಸಿತು.

ಪರಿಹಾರವನ್ನು ಪಾವತಿಸುವಂತೆ ಈ ಹಿಂದೆಯೇ ನಿರ್ದೇಶವನ್ನು ನೀಡಲಾಗಿತ್ತು. ನಂತರವೂ ಮತ್ತೆ ಮತ್ತೆ ನಿರ್ದೇಶಗಳನ್ನು ಹೊರಡಿಸಲಾಗಿತ್ತು. ಆದಾಗ್ಯೂ ಆಂಧ್ರಪ್ರದೇಶ ಸರಕಾರದ ಅಸಡ್ಡೆಯು ದುರದೃಷ್ಟಕರವಾಗಿದೆ. ಈ ನ್ಯಾಯಾಲಯದ ಆದೇಶವನ್ನು ಪಾಲಿಸುವಲ್ಲಿ ಆಂಧ್ರಪ್ರದೇಶವು ಎಳ್ಳಷ್ಟೂ ಗಂಭೀರವಾಗಿಲ್ಲ ಎಂಬಂತೆ ಕಂಡುಬರುತ್ತಿದೆ. ಪರಿಹಾರವನ್ನು ಪಾವತಿ ಮಾಡದಿರುವುದಕ್ಕೆ ಯಾವುದೇ ಸಮರ್ಥನೆ ಅಗತ್ಯವಿಲ್ಲ ಎಂದು ನ್ಯಾಯಾಲಯ ವ ಹೇಳಿತು.

ಹಿಂದಿನ ಆದೇಶವೊಂದರ ಬಳಿಕ ಆಂಧ್ರಪ್ರದೇಶವು ಸುಮಾರು 36,000 ಪರಿಹಾರ ಕೋರಿಕೆ ಅರ್ಜಿಗಳನ್ನು ತಾನು ಸ್ವೀಕರಿಸಿದ್ದೇನೆ ಮತ್ತು ಈ ಪೈಕಿ 31,000 ಅರ್ಜಿಗಳು ಸಮರ್ಪಕವಾಗಿವೆ ಎಂದು ತಿಳಿಸಿತ್ತು. ಆದರೆ ಕೇವಲ 11,000 ಅರ್ಜಿಗಳಿಗೆ ಮಾತ್ರ ಈವರೆಗೆ ಪರಿಹಾರ ವಿತರಿಸಲಾಗಿದೆ ಎಂದು ಹೇಳಿದ ನ್ಯಾ.ಶಾ, ಅರ್ಹ ಹಕ್ಕುದಾರರಿಗೆ ಪರಿಹಾರವನ್ನು ಪಾವತಿಸದಿರುವುದು ನಮ್ಮ ಹಿಂದಿನ ಆದೇಶಕ್ಕೆ ಅವಿಧೇಯತೆಗೆ ಸಮನಾಗಿದೆ. ಇದಕ್ಕೆ ಮುಖ್ಯ ಕಾರ್ಯದರ್ಶಿಗಳು ಹೊಣೆಯಾಗಿದ್ದಾರೆ. ಮುಖ್ಯ ಕಾರ್ಯದರ್ಶಿಗಳು ಇಂದೇ ವರ್ಚುವಲ್ ಮೂಲಕ ನ್ಯಾಯಾಲಯದಲ್ಲಿ ಹಾಜರಾಗಬೇಕು ಮತ್ತು ನ್ಯಾಯಾಂಗ ನಿಂದನೆ ಕ್ರಮವನ್ನು ಏಕೆ ಆರಂಭಿಸಬಾರದು ಎನ್ನುವುದಕ್ಕೆ ಕಾರಣವನ್ನು ನೀಡಬೇಕು' ಎಂದು ತಿಳಿಸಿದರು.

ಬಿಹಾರ ಸರಕಾರವು ಕೋವಿಡ್ ಸಾವುಗಳನ್ನು ತೀರ ಕಡಿಮೆಯಾಗಿ ವರದಿ ಮಾಡಿದೆ ಎಂದು ಅಭಿಪ್ರಾಯಿಸಿದ ನ್ಯಾಯಾಲಯವು ಅದನ್ನೂ ತರಾಟೆಗೆತ್ತಿಕೊಂಡಿತು.

“ನೀವು ದತ್ತಾಂಶಗಳನ್ನೂ ಪರಿಷ್ಕರಿಸುವುದಿಲ್ಲ. ನೀವು ಹೇಳುವಂತೆ ಕೇವಲ 12,000 ಜನರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ನಮಗೆ ನಿಜವಾದ ಮಾಹಿತಿಗಳು ಬೇಕು. ನಮ್ಮ ಹಿಂದಿನ ಆದೇಶದ ಬಳಿಕ ಇತರ ರಾಜ್ಯಗಳಲ್ಲಿ ಸಂಖ್ಯೆಗಳು ಹೆಚ್ಚಾಗಿವೆ. ನಿಮ್ಮ ಮುಖ್ಯ ಕಾರ್ಯದರ್ಶಿಗಳನ್ನು ಕರೆಯಿರಿ. ಬಿಹಾರದಲ್ಲಿ ಕೇವಲ 12,000 ಜನರು ಸಾವನ್ನಪ್ಪಿದ್ದಾರೆ ಎಂದು ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ' ಎಂದು ನ್ಯಾ.ಶಾ ಹೇಳಿದರು.

ಬಿಹಾರವು ಈವರೆಗೆ ಸುಮಾರು ಎಂಟು ಲ.ಕೋವಿಡ್ ಪ್ರಕರಣಗಳಲ್ಲಿ 12,145 ಸಾವುಗಳನ್ನು ವರದಿ ಮಾಡಿದೆ.

ಸ್ವೀಕರಿಸಲಾದ ಅರ್ಜಿಗಳು ಮತ್ತು ದಾಖಲಾದ ಸಾವುಗಳ ನಡುವಿನ ಅತ್ಯಂತ ಗಂಭೀರ' ಅಂತರದ ಬಗ್ಗೆ ಇತರ ರಾಜ್ಯಗಳನ್ನೂ ತರಾಟೆಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯವು, ಈ ಅಂತರವು ಮುಂದುವರಿದರೆ ಸೂಕ್ತ ಪರಿಹಾರ ವಿತರಣೆಯನ್ನು ಖಚಿತಪಡಿಸಲು ಜಿಲ್ಲಾ ಮಟ್ಟದ ಕಾನೂನು ಸೇವೆಗಳ ಅಧಿಕಾರಿಗಳ ನೆರವು ಪಡೆಯುವಂತೆ ಆದೇಶಿಸುವುದು ತನಗೆ ಅನಿವಾರ್ಯವಾಗುತ್ತದೆ ಎಂದು ಹೇಳಿತು. ಅರ್ಜಿಗಳು ಮತ್ತು ಪರಿಹಾರದ ನಡುವಿನ ಅಂತರವು ಜನರಿಗೆ ಆನ್‌ಲೈನ್ ಪರಿಹಾರ ಅರ್ಜಿ ನಮೂನೆಗಳು ಲಭ್ಯವಾಗುತ್ತಿಲ್ಲವೆಂದು ಅರ್ಥವೇ? ನಾವು ಪೂರಕ ಕಾನೂನು ಸ್ವಯಂಸೇವಕ ವ್ಯವಸ್ಥೆಯನ್ನು ಹೊಂದಿರಬೇಕೇ ಎಂದು ನ್ಯಾ.ಸಂಜೀವ ಖನ್ನಾ ಪ್ರಶ್ನಿಸಿದರು.

10,174 ಸಾವುಗಳನ್ನು ದಾಖಲಿಸಿರುವ, ಆದರೆ ಸುಮಾರು 91,000 ಪರಿಹಾರ ಕೋರಿಕೆ ಅರ್ಜಿಗಳನ್ನು ವರದಿ ಮಾಡಿರುವ ಗುಜರಾತನ್ನು ಸರ್ವೋಚ್ಚ ನ್ಯಾಯಾಲಯವು ಬೆಟ್ಟು ಮಾಡಿತು.

ಇದಕ್ಕೆ ವ್ಯತಿರಿಕ್ತವಾಗಿ ಕೇರಳ 51,000ಕ್ಕೂ ಅಧಿಕ ಸಾವುಗಳನ್ನು ವರದಿ ಮಾಡಿದೆ, ಆದರೆ ಕೇವಲ 27,000 ಅರ್ಜಿಗಳನ್ನು ಸ್ವೀಕರಿಸಿದೆ.

ರಾಜ್ಯದಲ್ಲಿ 10,000ಕ್ಕೂ ಅಧಿಕ ಸಾವುಗಳು ಸಂಭವಿಸಿದ್ದು,7,360 ಅರ್ಜಿಗಳನ್ನು ತಾನು ಸ್ವೀಕರಿಸಿರುವುದಾಗಿ ಹರ್ಯಾಣ ಸರಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತು.

ನೀವು ಹೇಗೆ ಕೇವಲ 27,000 ಅರ್ಜಿಗಳನ್ನು ಸ್ವೀಕರಿಸಿದ್ದೀರಿ? ಇತರ ರಾಜ್ಯಗಳಲ್ಲಿ ವರದಿಯಾಗಿರುವ ಸಾವುಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬಂದಿವೆ. ನಿಮ್ಮಲ್ಲೇಕೆ ಈ ವಿರುದ್ಧ ಪ್ರವೃತ್ತಿ ಎಂದು ಪ್ರಶ್ನಿಸಿದ ನ್ಯಾಯಾಲಯವು, ನಿಮ್ಮ ಬಳಿ ಈಗಾಗಲೇ ಸಾವುಗಳ ಕುರಿತು ವಿವರಗಳಿವೆ. ನಿಮ್ಮ ಅಧಿಕಾರಿಗಳು ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಿ ಅವರಿಗೆ ಪರಿಹಾರದ ಬಗ್ಗೆ ತಿಳಿಸಬೇಕು. ಈ ಜನರು ನೋಂದಾಯಿಸಲ್ಪಟ್ಟಿದ್ದಾರೆ, ಅವರಿಗೆ ಪರಿಹಾರವನ್ನು ಪಾವತಿಸಲೇಬೇಕು ಎಂದು ಹೇಳಿತು.

ಯಾವುದೇ ರಾಜ್ಯವು ಪರಿಹಾರವನ್ನು ನಿರಾಕರಿಸುವಂತಿಲ್ಲ ಮತ್ತು ಅರ್ಜಿ ಸಲ್ಲಿಸಿದ 30 ದಿನಗಳಲ್ಲಿ ಅದನ್ನು ಪಾವತಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಕಳೆದ ಅಕ್ಟೋಬರ್‌ನಲ್ಲಿ ತಾಕೀತು ಮಾಡಿತ್ತು.

Read These Next

ಕಾಂಗ್ರೆಸ್ ತ್ಯಜಿಸಿದ ಸಿಬಲ್ ರಾಜ್ಯಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ

ಕಳೆದ ವಾರ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿರುವುದಾಗಿ ಘೋಷಿಸಿದ ಕಪಿಲ್ ಸಿಬಲ್, ರಾಜ್ಯಸಭೆ ಸ್ಥಾನಕ್ಕೆ ಸಮಾಜವಾದಿ ಪಕ್ಷ ಬೆಂಬಲಿತ ...

ಹೈದರಾಬಾದ್ ಸಾಮೂಹಿಕ ಅತ್ಯಾಚಾರ-ಕೊಲೆ ಪ್ರಕರಣ; ಆರೋಪಿಗಳ ಎನ್‌ಕೌಂಟರ್‌ ನಕಲಿ. ಸುಪ್ರೀಂ ಕೋರ್ಟ್ ನೇಮಿತ ಆಯೋಗ

ದಿಶಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳ ಸಾವಿನ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ನಿಂದ ...