`ನ್ಯೂಸ್‌ಕ್ಲಿಕ್' ಪ್ರಧಾನ ಸಂಪಾದಕರ ಬಂಧನ ಕಾನೂನುಬಾಹಿರ; ಸುಪ್ರೀಂ ಕೋರ್ಟ್

Source: Vb | By I.G. Bhatkali | Published on 16th May 2024, 3:40 PM | National News |

ಹೊಸದಿಲ್ಲಿ: ಭಯೋತ್ಪಾದನೆ ನಿಗ್ರಹ ಕಾನೂನಿನಡಿ ಸುದ್ದಿ ವೆಬ್‌ಸೈಟ್ ನ್ಯೂಸ್‌ಕ್ಲಿಕ್'ನ ಪ್ರಧಾನ ಸಂಪಾದಕ ಪ್ರಬೀರ್ ಪುರಕಾಯಸ್ಥರ ಬಂಧನವು ಕಾನೂನುಬಾಹಿರವಾಗಿದೆ ಎಂದು ಮಹತ್ವದ ತೀರ್ಪೊಂದರಲ್ಲಿ ಸುಪ್ರೀಂ ಕೋರ್ಟ್ ಬುಧವಾರ ಘೋಷಿಸಿದೆ ಹಾಗೂ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿದೆ.

ರಿಮಾಂಡ್ ಅರ್ಜಿಯ ಪ್ರತಿಯನ್ನು 'ನ್ಯೂಸ್ ಕ್ಲಿಕ್' ಪ್ರಧಾನ ಸಂಪಾದಕರಿಗಾಗಲಿ, ಅವರ ವಕೀಲರಿಗಾಗಲಿ ನೀಡಲಾಗಿಲ್ಲ, ಹಾಗಾಗಿ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ನ್ಯಾಯಾಲಯದ ಆದೇಶವು ಅಸಿಂಧು ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸಂದೀಪ್ ಮೆಹ್ರಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವೊಂದು ಹೇಳಿತು.

"ವ್ಯಕ್ತಿಯೊಬ್ಬನನ್ನು ಯಾಕೆ ಬಂಧಿಸಲಾಗಿದೆ ಎನ್ನುವುದನ್ನು ಬಂಧಿತನಿಗೆ ಲಿಖಿತವಾಗಿ ತಿಳಿಸಬೇಕಾಗುತ್ತದೆ. ಅದಕ್ಕಾಗಿ ರಿಮಾಂಡ್ ಅರ್ಜಿಯ ಪ್ರತಿಯೊಂದನ್ನು ಬಂಧಿತನಿಗೆ ನೀಡಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ, ರಿಮಾಂಡ್ ಅರ್ಜಿಯ ಪ್ರತಿಯನ್ನು ಆರೋಪಿಗಾಗಲಿ, ಅವರ ವಕೀಲರಿಗಾಗಲಿ 2023 ಅಕ್ಟೋಬರ್ 4ರಂದು ರಿಮಾಂಡ್ ಆದೇಶ ಹೊರಬೀಳುವ ಮೊದಲು ನೀಡಲಾಗಿಲ್ಲ. ಇದು ಆರೋಪಿಯ ಬಂಧನವನ್ನು ಮತ್ತು ನಂತರದ ರಿಮಾಂಡನ್ನು ಅಸಿಂಧುಗೊಳಿಸುತ್ತದೆ'' ಎಂದು ಪೀಠ ಹೇಳಿದೆ. ಪುರಕಾಯಸ್ಥರನ್ನು ಬಿಡುಗಡೆಗೊಳಿಸಬೇಕು ಎಂದು ಆದೇಶ ನೀಡಿರುವ ಸುಪ್ರೀಂ ಕೋರ್ಟ್, ಬಿಡುಗಡೆಗಿಂತ ಮೊದಲು ಅವರು ವಿಚಾರಣಾ ನ್ಯಾಯಾಲಯಕ್ಕೆ ತೃಪ್ತಿಯಾಗುವಂತೆ ಜಾಮೀನು ಬಾಂಡ್‌ಗಳನ್ನು ಸಲ್ಲಿಸಬೇಕು ಎಂಬುದಾಗಿಯೂ ಹೇಳಿತು.

ದಿಲ್ಲಿ ಪೊಲೀಸರು ಅಕ್ಟೋಬರ್ 3ರಂದು 'ನ್ಯೂಸ್‌ಕ್ಲಿಕ್'ನೊಂದಿಗೆ ನಂಟು ಹೊಂದಿರುವ ಹಲವು ಪತ್ರಕರ್ತರ ಮನೆಗಳಿಗೆ ದಾಳಿ ನಡೆಸಿ, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ದಾಖಲಿಸಲಾಗಿರುವ ಪ್ರಕರಣದಲ್ಲಿ ಪುರಕಾಯಸ್ಥ ಮತ್ತು ವೆಬ್‌ಸೈಟ್‌ನ ಮಾನವ ಸ೦ಪನ್ಮೂಲಗಳ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿಯನ್ನು ಬಂಧಿಸಿದ್ದರು.

ಈ ಪ್ರಕರಣದಲ್ಲಿ ಮಾಫಿ ಸಾಕ್ಷಿ (ಸರಕಾರದ ಪರ ಸಾಕ್ಷಿ)ಯಾಗಲು ದಿಲ್ಲಿಯ ನ್ಯಾಯಾಲಯವೊಂದು ಚಕ್ರವರ್ತಿಗೆ ಅನುಮತಿ ನೀಡಿದ ಬಳಿಕ, ಜನವರಿ 9ರಂದು ಅವರಿಗೆ ಕ್ಷಮಾದಾನ ನೀಡಲಾಗಿತ್ತು. ಅವರನ್ನು ಬಿಡುಗಡೆಗೊಳಿಸುವಂತೆ ಮೇ 6ರಂದು ದಿಲ್ಲಿ ಹೈಕೋರ್ಟ್ ಆದೇಶ ನೀಡಿತ್ತು. ತನ್ನ ಬಂಧನವನ್ನು ಪ್ರಶ್ನಿಸಿ ಪುರಕಾಯಸ್ಥ ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಿದ್ದರು. ನ್ಯಾಯಾಲಯವು ತನ್ನ ಆದೇಶವನ್ನು ಎಪ್ರಿಲ್ 30ರಂದು ಕಾದಿರಿಸಿತ್ತು. ನ್ಯಾಯಾಲಯದ ಆದೇಶದಂತೆ, ತನ್ನ ಬಂಧನಕ್ಕೆ ಕಾರಣಗಳನ್ನು ಲಿಖಿತವಾಗಿ ನೀಡಲಾಗಿಲ್ಲ ಎಂದು ಅವರು ವಾದಿಸಿದ್ದರು.

ಆದರೆ, ರಿಮಾಂಡ್ ಅರ್ಜಿಯಲ್ಲಿ ಬಂಧನಕ್ಕೆ ಕಾರಣಗಳನ್ನು ನೀಡಲಾಗಿದೆ ಎಂದು ದಿಲ್ಲಿ ಪೊಲೀಸರು ವಾದಿಸಿದ್ದರು.

ಪುರಕಾಯಸ್ಥರ ರಿಮಾಂಡ್ ಆದೇಶವನ್ನು ಅಕ್ಟೋಬರ್ 4ರಂದು ಮುಂಜಾನೆ 6 ಗಂಟೆಗೆ ನೀಡಲಾಗಿತ್ತು ಎಂದು ವಿಚಾರಣೆಯ ವೇಳೆ ನ್ಯಾಯಾಲಯ ಹೇಳಿತ್ತು. ಆದರೆ, ಅದರ ಪ್ರತಿಯನ್ನು ನ್ಯೂಸ್‌ಕ್ಲಿಕ್‌ನ ಪ್ರಧಾನ ಸಂಪಾದಕರ ವಕೀಲರಿಗೆ ನಂತರ ನೀಡಲಾಗಿತ್ತು.

ಪುರಕಾಯಸ್ಥರ ವಕೀಲರಿಗೂ ತಿಳಿಸದೆ ಅವರನ್ನು ಅತ್ಯಂತ ಅವಸರದಿಂದ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ ದಿಲ್ಲಿ ಪೊಲೀಸರ 'ಅತ್ಯವಸರ'ವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು.

'ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ದುರ್ಬಲಗೊಳಿಸುವ ಉದ್ದೇಶದಿಂದ' ಪುರಕಾಯಸ್ಥ ಮತ್ತು ಅವರ ಸುದ್ದಿ ವೆಬ್‌ಸೈಟ್‌ನ ಮಾತೃಸಂಸ್ಥೆ 'ಪಿಪಿಕೆ ನ್ಯೂಸ್‌ಕ್ಲಿಕ್ ಸ್ಟುಡಿಯೊ ಪ್ರೈವೇಟ್ ಲಿಮಿಟೆಡ್' ಚೀನಾದ ಸಂಸ್ಥೆಗಳ ಮೂಲಕ ನಿಧಿಗಳನ್ನು ಪಡೆದಿದೆ ಎಂಬುದಾಗಿ ದಿಲ್ಲಿ ಪೊಲೀಸರು ಆರೋಪಿಸಿದ್ದಾರೆ.

ಆದರೆ, ತನ್ನ ವಿರುದ್ಧದ ಆರೋಪಗಳು ಕಪೋಲಕಲ್ಪಿತ ಮತ್ತು ಆಧಾರರಹಿತ ಎಂಬುದಾಗಿ 'ನ್ಯೂಸ್‌ಕ್ಲಿಕ್' ಹೇಳಿದೆ.

Read These Next

ಡೆಹ್ರಾಡೂನ್: ಕ್ರೈಸ್ತ ಪ್ರಾರ್ಥನಾ ಸಭೆಯ ಮೇಲೆ ಸಂಘ ಪರಿವಾರದಿಂದ ದಾಳಿ; ಏಳು ಜನರಿಗೆ ಹಲ್ಲೆ

ಸಂಘ ಪರಿವಾರ ಕಾರ್ಯಕರ್ತರ ಗುಂಪೊಂದು ರವಿವಾರ ಇಲ್ಲಿ ಕ್ರೈಸ್ತ ಪ್ರಾರ್ಥನಾ ಸಭೆ ನಡೆಯುತ್ತಿದ್ದ ಮನೆಯ ಮೇಲೆ ದಾಳಿ ನಡೆಸಿದೆ. ಕನಿಷ್ಠ ...

ಲೋಕಸಭಾ ಚುನಾವಣೆಯ ಬಳಿಕ ಮುಸ್ಲಿಮರ ವಿರುದ್ಧ ಗುಂಪು ದಾಳಿ ಪ್ರಕರಣದಲ್ಲಿ ಹೆಚ್ಚಳ; ಜಮಾಅತೆ ಇಸ್ಲಾಮೀ ಹಿಂದ್ ಕಳವಳ

ಹೊಸದಿಲ್ಲಿ : ದೇಶದಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರದ ಪ್ರಕರಣಗಳು ಅಧಿಕಗೊಂಡಿದ್ದು, ಅದರಲ್ಲೂ ಲೋಕಸಭಾ ಚುನಾವಣೆಯ ಬಳಿಕ ...

ಬ್ರಿಟಿಷ್ ಯುಗದ ಕಾನೂನುಗಳಿಗೆ ತೆರೆ; ಇಂದಿನಿಂದ ಮೂರು ನೂತನ ಕ್ರಿಮಿನಲ್ ಕಾಯ್ದೆಗಳು ಜಾರಿ

ಸೋಮವಾರ, ಜುಲೈ 1ರಂದು ಮೂರು ನೂತನ ಕ್ರಿಮಿನಲ್ ಕಾನೂನುಗಳು ದೇಶಾದ್ಯಂತ ಜಾರಿಗೊಳ್ಳಲಿದ್ದು ಬ್ರಿಟಿಷ್ ಯುಗದ ಕಾನೂನುಗಳು ಅಸ್ತಿತ್ವ ...