ಹೊಸದಿಲ್ಲಿ:ಕೋವಿಡ್ ಮೃತರ ಕುಟುಂಬಗಳಿಗೆ ಆರು ವಾರಗಳಲ್ಲಿ ಪರಿಹಾರ: ​ಕೇಂದ್ರ ಸರಕಾರಕ್ಕೆ ಸುಪ್ರೀಂಆದೇಶ

Source: VB | By S O News | Published on 1st July 2021, 8:07 PM | National News |

ಹೊಸದಿಲ್ಲಿ: ಕೋವಿಡ್-19ರಿಂದ ಮೃತಪಟ್ಟಿರುವವರ ಕುಟುಂಬಗಳು ಪರಿಹಾರಕ್ಕೆ ಅರ್ಹವಾಗಿವೆ ಎಂದು ಹೇಳಿದ ನ್ಯಾ. ಅಶೋಕ್ ಭೂಷಣ್ ನೇತೃತ್ವದ ಸರ್ವೋಚ್ಚ ನ್ಯಾಯಾಲಯದ ಪೀಠವು, ಪರಿಹಾರ ನೀಡಲು ಮಾರ್ಗಸೂಚಿಗಳನ್ನು ಆರು ವಾರಗಳಲ್ಲಿ ರೂಪಿಸುವಂತೆ ಮತ್ತು ನೀಡಬಹುದಾದ ಪರಿಹಾರ ಮೊತ್ತವನ್ನು ನಿಗದಿಗೊಳಿಸುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಎನ್‌ಡಿಎಂಎ)ಕ್ಕೆ ಆದೇಶಿಸಿದೆ.

ಕೊರೋನದಿಂದ ಮೃತಪಟ್ಟಿರುವ ಎಲ್ಲರ ಕುಟುಂಬಗಳಿಗೆ ತಲಾ ನಾಲ್ಕು ಲಕ್ಷ ರೂ. ಪರಿಹಾರವನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿದೆ. ಪ್ರತಿ ಕುಟುಂಬಕ್ಕೆ ಎಷ್ಟು ಪರಿಹಾರವನ್ನು ನೀಡಬೇಕು ಎನ್ನುವುದು ಎನ್‌ಡಿಎಂಎ ವಿವೇಚನೆಗೆ ಸೇರಿದೆ ಎಂದು ಅದು ತಿಳಿಸಿದೆ.

ವಿಪತ್ತು ನಿರ್ವಹಣೆ ಕಾಯ್ದೆಯ ಕಲಂ 12 ಕಡ್ಡಾಯ ನಿಬಂಧನೆಯಲ್ಲ ಎಂಬ ಸರಕಾರದ ವಾದವನ್ನು ತಿರಸ್ಕರಿಸಿದ ನ್ಯಾಯಾಲಯವು, ಕನಿಷ್ಠ ಪರಿಹಾರವನ್ನು ಶಿಫಾರಸು ಮಾಡದಿರುವ ಮೂಲಕ ಅಧಿಕಾರಿಗಳು ಈ ಕಲಮ್ ನಡಿ ತಮ್ಮ ಶಾಸನಬದ್ಧ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂದು ಬೆಟ್ಟು ಮಾಡಿತು. ಈ ಕಲಮ್‌ಡಿ ಪರಿಹಾರದ ಕನಿಷ್ಠ ಮಾನದಂಡಗಳನ್ನು ರೂಪಿಸುವುದು ಕಡ್ಡಾಯವಾಗಿದೆ ಎಂದು ಸ್ಪಷ್ಟಪಡಿಸಿತು. ಆದರೆ, ಇಂತಿಷ್ಟೇ ಪರಿಹಾರವನ್ನು ನೀಡುವಂತೆ ತಾನು ಕೇಂದ್ರ ಸರಕಾರಕ್ಕೆ ನಿರ್ದೇಶಿಸುವಂತಿಲ್ಲ ಎಂದು ಅದು ಹೇಳಿತು.

ಅರ್ಜಿಗೆ ಉತ್ತರವಾಗಿ ಅಫಿಡವಿಟ್‌ನ್ನು ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಿರುವ ಕೇಂದ್ರವು, ನಾಲ್ಕು ಲ.ರೂ.ಯನ್ನು ಪರಿಹಾರವಾಗಿ ನೀಡುವುದು ರಾಜ್ಯ ಸರಕಾರಗಳ ಸಾಮರ್ಥ್ಯವನ್ನು ಮೀರಿದೆ ಮತ್ತು ಪ್ರತಿಯೊಂದು ಕುಟುಂಬಕ್ಕೆ ನಾಲ್ಕು ಲ.ರೂ.ಯನ್ನು ಪಾವತಿಸಿದರೆ ರಾಜ್ಯ ವಿಪತ್ತು ಪರಿಹಾರ ನಿಧಿ ಸಂಪೂರ್ಣವಾಗಿ ಬರಿದಾಗಬಹುದು ಮತ್ತು ಸಾಂಕ್ರಾಮಿಕವನ್ನು ಎದುರಿಸಲು ಅಥವಾ ಇತರ ರೋಗಗಳನ್ನು ನಿಭಾಯಿಸಲು ರಾಜ್ಯಗಳಿಗೆ ಹಣಕಾಸಿನ ಕೊರತೆಯುಂಟಾಗುತ್ತದೆ ಎಂದು ತಿಳಿಸಿತ್ತು.

ಮರಣ ಪ್ರಮಾಣಪತ್ರಗಳ ವಿತರಣೆಗಾಗಿ ಮಾರ್ಗಸೂಚಿಗಳನ್ನು ಸರಳಗೊಳಿಸುವಂತೆ ಮತ್ತು ಸಾವಿಗೆ ನಿಖರವಾದ ಕಾರಣವನ್ನು ಉಲ್ಲೇಖಿಸುವಂತೆಯೂ ಸರ್ವೋಚ್ಚ ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.

Read These Next

ಹುಬ್ಬಳ್ಳಿ: ಹುಬ್ಬಳ್ಳಿಯ ಚರ್ಚ್‌ಗೆ ನುಗ್ಗಿ ಭಜನೆ ಮಾಡಿದ ಸಂಘಪರಿವಾರದ ಕಾರ್ಯಕರ್ತರು

ಬಲವಂತದಿಂದ ಮತಾಂತರಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿ ರವಿವಾರ ಬೆಳಗ್ಗೆ ಇಲ್ಲಿಯ ಭೈರಿದೇವರ ಕೊಪ್ಪದಲ್ಲಿರುವ ಚರ್ಚೆಂದಕ್ಕೆ ...

ಫೇಸ್ ಕ್ರೀಂನಲ್ಲಿ 24 ಲಕ್ಷ ರೂ. ಮೌಲ್ಯದ ಚಿನ್ನ ಕಳ್ಳಸಾಗಣೆ ಯತ್ನ: ಏರ್ ಪೋರ್ಟ್ ನಲ್ಲಿ ಆರೋಪಿ ಬಂಧನ

ಹೈದರಾಬಾದ್: ಹೈದರಾಬಾದ್ ಆರ್ ಜಿ ಐ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಫೇಸ್ ಕ್ರೀಮ್ ನಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ...