ದೇಶ ಅಪಾಯದಲ್ಲಿದೆ; ಪ್ರಿಯಾಂಕಾ ಗಾಂಧಿ

Source: vb | By I.G. Bhatkali | Published on 27th March 2023, 4:00 PM | National News |

ಹೊಸದಿಲ್ಲಿ: ನಾವೆಲ್ಲ ಒಂದಾಗಬೇಕಾಗಿದೆ. ಯಾಕೆಂದರೆ ಈ ದೇಶ ಅಪಾಯದಲ್ಲಿದೆ. ಈ ದೇಶದ ಸಂಪತ್ತನ್ನು ಒಬ್ಬನಿಗೆ ಧಾರೆ ಎರೆಯಲಾಗುತ್ತಿದೆ. ಆತನ ರಕ್ಷಣೆಗೆ ಇಡೀ ಸರಕಾರ ಟೊಂಕ ಕಟ್ಟಿ ನಿಂತಿದೆ. ದೇಶವಾಸಿಗಳೇ ಕಣ್ಣು ತೆರೆಯಿರಿ. ಈ ದೇಶದ ಸತ್ಯಕ್ಕೋಸ್ಕರ ನಾವು ಹೋರಾಡೋಣ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕರೆ ನೀಡಿದ್ದಾರೆ.

ರಾಹುಲ್ ಗಾಂಧಿಯವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ರವಿವಾರ ದೇಶಾದ್ಯಂತ ನಡೆಸಿದ ಪ್ರತಿಭಟನೆಗಳ ನಡುವೆ ಮಹಾತ್ಮಾ ಗಾಂಧಿಯವರ ಸಾರಕ ರಾಜಘಾಟ್ ಸಮೀಪ ನಡೆದ 'ಸಂಕಲ್ಪ ಸತ್ಯಾಗ್ರಹ'ವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಇಡೀ ಸರಕಾರ, ಸಚಿವರು, ಸಂಸದರು ಒಬ್ಬ ವ್ಯಕ್ತಿಯನ್ನು ರಕ್ಷಿಸಲು ಯಾಕೆ ಹೆಣಗಾಡುತ್ತಿದ್ದಾರೆ?ಇವರು ರಕ್ಷಿಸುತ್ತಿರುವ ಈ ಅದಾನಿಗೂ ಬಿಜೆಪಿಗೂ ಇರುವ ಸಂಬಂಧವೇನು?ಅದಾನಿಯ 20 ಸಾವಿರ ಕೋಟಿ ರೂ. ಶೆಲ್ ಕಂಪೆನಿಗಳಿಂದ ಬಂದಿದೆ. ಇದರ ತನಿಖೆ ನಿಮ್ಮಿಂದ ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಸರಕಾರವಿರುವುದು ಜನರ ದಮನಕ್ಕಾಗಿ ಮತ್ತು ಅದಾನಿಯ ರಕ್ಷಣೆಗಾಗಿಯೇ ಎಂದು ಕೇಳಿದರು.

ರಾಹುಲ್ ಸಂಸತ್ತಿನಲ್ಲಿ ಎತ್ತುವ ಪ್ರಶ್ನೆಗಳಿಗೆ ಉತ್ತರವಿಲ್ಲದೆ ಪ್ರಧಾನಿ ಗಾಬರಿಗೊಂಡಿದ್ದಾರೆ. ಅವರು ಹೇಡಿ. ಅಧಿ ಕಾರದ ಹುದ್ದೆಯ ಹಿಂದೆ ಅಡಗಿಕೊಂಡಿದ್ದಾರೆ. ಇವರಿಗೆ ಜನರೇ ಉತ್ತರ ನೀಡುತ್ತಾರೆ ಎಂದ ಅವರು, ಈ ದೇಶ ಅಪಾಯದಲ್ಲಿರುವುದನ್ನು ಜನರು ಗುರುತಿಸದೇ ಇದ್ದರೆ ದೇಶ ಅಪಾಯಕ್ಕೆ ತಳ್ಳಲ್ಪಡುತ್ತದೆ. ದೇಶದ ಸ್ವಾತಂತ್ರ್ಯಕ್ಕಾಗಿ ಜನರು ಯಾಕೆ ರಕ್ತ ಬಸಿದರು? ಅದಾನಿಯಂಥವರನ್ನು ರಕ್ಷಿಸುವುದಕ್ಕಾಗಿಯೇ ? ದೇಶವಾಸಿಗಳೇ, ಕಣ್ಣು ತೆರೆಯಿರಿ. ಭಯ ಪಡಬೇಡಿ. ಈ ದೇಶದ ಸತ್ಯಕ್ಕೋಸ್ಕರ ಹೋರಾಡಿ, ಈ ದೇಶದ ಏಕತೆಗಾಗಿ ಹೋರಾಡಿ ಎಂದು ಕರೆ ನೀಡಿದರು.

ತನ್ನ ಕುಟುಂಬಕ್ಕೆ ಮಾಡಿದ ಅಪಮಾನಗಳನ್ನು ಸ್ಮರಿಸಿಕೊಂಡ ಅವರು, “ಈ ದೇಶದ ಪ್ರಜಾಸತ್ತೆಗೆ ನಮ್ಮ ಕುಟುಂಬದ ರಕ್ತ ಸಿಂಚನವಾಗಿದೆ. ನಮ್ಮನ್ನು ಅವಮಾನಗೊಳಿಸಿ, ಬೆದರಿಸಿ, ತನಿಖಾ ಸಂಸ್ಥೆಗಳನ್ನು ಭೂಬಿಟ್ಟು ಬಾಯಿ ಮುಚ್ಚಿಸಬಹುದು ಎಂದು ಯಾರಾದರೂ ಭಾವಿಸಿರಬಹುದು. ಆದರೆ ನಾವು ಆತಂಕಿತರಾಗಿಲ್ಲ. ನಾವು ಇನ್ನಷ್ಟು ಧೈರ್ಯದಿಂದ ಹೋರಾಡುತ್ತೇವೆ. ಈ ದೇಶದ ಪ್ರಜಾಸತ್ತೆ ಕಾಂಗ್ರೆಸಿನ ಕೊಡುಗೆಯಿಂದ ಬೆಳೆದಿದೆ. ಕಾಂಗ್ರೆಸ್ ಈ ದೇಶದ ಸ್ವಾತಂತ್ರ್ಯಕ್ಕೋಸ್ಕರ ಹೋರಾಡಿದೆ. ಈಗಲೂ ಹೋರಾಡುತ್ತಲೇ ಇದೆ' ಎಂದು ಹೇಳಿದರು.

ಈ ದೇಶದ ಜನರ ಸಂಪತ್ತನ್ನು ಲೂಟಿ ಮಾಡಿ ಉದ್ಯಮಪತಿಗಳಿಗೆ ನೀಡಲಾಗುತ್ತಿದೆ. ಸಾರ್ವಜನಿಕ ಉದ್ಯಮಗಳನ್ನು ಮಾರಿ, ಜನರನ್ನು ನಿರುದ್ಯೋಗಿಗಳನ್ನಾಗಿ ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಸರ್ವಾಧಿಕಾರಿ ರಾಜನನ್ನು ಒಂದಾಗಿ ಪ್ರಶ್ನಿಸುವ ಸಮಯ ಬಂದಿದೆ ಎಂದು ಹೇಳಿದರು.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...