ಹೊಸದಿಲ್ಲಿ: ಕೇಂದ್ರ ಸರಕಾರವಲ್ಲ ಒಕ್ಕೂಟ ಸರಕಾರ, ವಿಧಾನಸಭೆಯಲ್ಲಿ ಸ್ಟಾಲಿನ್ ಸ್ಪಷ್ಟನೆ

Source: VB | By S O News | Published on 24th June 2021, 7:00 PM | National News |

ಹೊಸದಿಲ್ಲಿ: ತಮಿಳುನಾಡು ಸರಕಾರದ ಇಲಾಖೆಗಳು ಇನ್ನು ಮುಂದೆ ಕೇಂದ್ರ ಸರಕಾರವನ್ನು ಒಕ್ಕೂಟ ಸರಕಾರವೆಂಬುದಾಗಿ ಉಲ್ಲೇಖಿಸಲಿವೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಿಳಿಸಿದ್ದಾರೆ. ಸಂವಿಧಾನ ಕೂಡಾ ಕೇಂದ್ರ ಸರಕಾರವನ್ನು ಒಕ್ಕೂಟ ಸರಕಾರ (ಯೂನಿಯನ್ ಗವರಮೆಂಟ್) ಎಂದೇ ಉಲ್ಲೇಖಿಸಿರುವುದಾಗಿ ಅವರು ಹೇಳಿದ್ದಾರೆ.

ಕೇಂದ್ರ ಸರಕಾರವನ್ನು ಒಕ್ಕೂಟ ಸರಕಾರವೆಂದು ಕರೆಯುವುದು 'ಸಾಮಾಜಿಕ ಅಪರಾಧ'ವೆಂದು ಪರಿಗಣಿಸುವುದು ತಪ್ಪಾದ ಗ್ರಹಿಕೆಯಾಗಿದೆ. ಒಕ್ಕೂಟವೆಂಬ ಪದವು ಸಂಯುಕ್ತ ವ್ಯವಸ್ಥೆಯ ತತ್ವವನ್ನು ಪ್ರತಿಪಾದಿಸುತ್ತದೆಯೆಂದು ಅವರು ಹೇಳಿದ್ದಾರೆ. ತಮಿಳುನಾಡಿನ ಅಧಿಕಾರಿಗಳು ಸಂವಿಧಾನ ಹೇಳಿರುವ ಹಾಗೆ ಕೇಂದ್ರ ಸರಕಾರವನ್ನು ಒಕ್ಕೂಟ ಸರಕಾರವೆಂದು ಉಲ್ಲೇಖಿಸಲಿದ್ದಾರೆಂದು ಅವರು ಹೇಳಿದರು.

ಬುಧವಾರ ನಡೆದ ತಮಿಳುನಾಡು ವಿಧಾನಸಭಾ ಕಲಾಪದ ವೇಳೆ ಬಿಜೆಪಿ

ಇಂಡಿಯಾ ಎಂದರೆ ಭಾರತವಾಗಿದ್ದು, ಅದು ರಾಜ್ಯಗಳ ಒಂದು ಒಕ್ಕೂಟವಾಗಿದೆ. ಎಂದು ನಮ್ಮ ಸಂವಿಧಾನದ ಮೊದಲ ಸಾಲಿನಲ್ಲಿ ಹೇಳಲಾಗಿದೆ. ನಾವು ಅದನ್ನು ಅನುಸರಿಸಿದ್ದೇವೆಯೇ ಹೊರತು ಬೇರೇನೂ ಅರ್ಥ ಕಲ್ಪಿಸಬಾರದು.

ಎಂ.ಕೆ. ಸ್ಟಾಲಿನ್, ತಮಿಳುನಾಡು ಮುಖ್ಯಮಂತ್ರಿ

ಸದಸ್ಯ ನೈನಾರ್ ನಾಗೇಂದ್ರನ್ ಅವರು ಡಿಎಂಕೆಯು ದೀರ್ಘ ಸಮಯದಿಂದ 'ಮಾದಿಯಾ ಅರಸು' (ತಮಿಳಿನಲ್ಲಿ ಕೇಂದ್ರ ಸರಕಾರ ಎಂದು ಅರ್ಥ) ಪದಕ್ಕೆ ಪರ್ಯಾಯವಾಗಿ 'ಒಂಡ್ರಿಯಾ ಅರಸು' (ಒಕ್ಕೂಟ ಸರಕಾರ) ಎಂಬ ಪದವನ್ನು ಬಳಸುತ್ತಿದೆಯೆಂದು ಆಕ್ಷೇಪ ವ್ಯಕ್ತಪಡಿಸಿದಾಗ, ಮುಖ್ಯಮಂತ್ರಿ ಸ್ಟಾಲಿನ್ ಹೀಗೆ ಉತ್ತರಿಸಿದ್ದಾರೆ.

ಮೇ ತಿಂಗಳಲ್ಲಿ ಡಿಎಂಕೆ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ತಮಿಳುನಾಡು ಸರಕಾರವು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ಒಕ್ಕೂಟ ಸರಕಾರ ಎಂದು ಉಲ್ಲೇಖಿಸುತ್ತಿದೆ. ಇದಕ್ಕೆ ಬಿಜೆಪಿ ಬೆಂಬಲಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು ಮೋದಿ ಆಡಳಿತದ ವಿರುದ್ಧ ಸ್ಟಾಲಿನ್ ಆಳ್ವಿಕೆಯ ರಾಜಕೀಯ ನಡೆ ಇದಾಗಿದೆಯೆಂದು ಅವರು ಟೀಕಿಸಿದ್ದಾರೆ.

“ಡಿಎಂಕೆಯು ಕೇಂದ್ರ ಸರಕಾರಕ್ಕೆ ಒಕ್ಕೂಟ ಸರಕಾರವೆಂಬ ಪದ ಬಳಸುತ್ತಿರುವುದು ಹೊಸದೇನೂ ಅಲ್ಲ. 1957ರ ಚುನಾವಣಾ ಪ್ರಣಾಳಿಕೆಯಲ್ಲಿಯೇ ಡಿಎಂಕೆಯು 'ಕೇಂದ್ರ ಒಕ್ಕೂಟ' ಎಂಬ ಪದವನ್ನು ಬಳಸಿಕೊಂಡಿತ್ತು. ಅದಕ್ಕಾಗಿ ಕೆಲವರು ನಮ್ಮನ್ನು ಟೀಕಿಸಿದ್ದರು' ಎಂದವರು ಹೇಳಿದರು. ಅರಿಯಾನ್ನರ್ ಅಣ್ಣಾ (ಅಣ್ಣಾದೊರೈ) ಹಾಗೂ ನಮ್ಮ ನಾಯಕ ಕಲೈನಾರ್ (ಕರುಣಾನಿಧಿ) ಕೂಡಾ ಬಳಸಿಕೊಂಡಿರದ ಪದವನ್ನು ನಾವು ಬಳಸಿದ್ದೇವೆಂದು ಕೆಲವರು ಆಕ್ಷೇಪಿಸಿದ್ದಾರೆ. ಆದರೆ ಅಣ್ಣಾದೊರೈ ಅವರು, 1963ರ ಜನವರಿ 25ರಂದು ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ 'ರಾಜಕೀಯ ಸಾರ್ವಭೌಮತೆಯು ಜನತೆಯಿಂದ ಎತ್ತಿಹಿಡಿಯಲ್ಪಡುತ್ತದೆ ಹಾಗೂ ಕಾನೂನಿನ ಸಾರ್ವಭೌಮತೆಯನ್ನು ಫೆಡರಲ್ ಒಕ್ಕೂಟ (ಕೇಂದ್ರ ಸರಕಾರ) ಹಾಗೂ ಅದರ ಅಂಗಗಳು ಅಂದರೆ ರಾಜ್ಯಗಳ ನಡುವೆ ವಿಭಜಿಸಲಾಗಿದೆ' ಎಂದು ಹೇಳಿದ್ದರೆಂದು ಸ್ಟಾಲಿನ್ ಸದನಕ್ಕೆ ತಿಳಿಸಿದರು.

ತಮಿಳುನಾಡಿನ ಮಹನೀಯರಾದಮೈಲಾಯ್ ಪೊನ್ನಸ್ವಾಮಿ ಶಿವಜ್ಞಾನಮ್ ಅಥವಾ ಮಾ.ಪೊ.ಶಿ. ಅವರು ಕೇಂದ್ರ ಸರಕಾರ ಎಂಬ ಪದದ ಬದಲಿಗೆ ಸಮಷ್ಟಿ ಎಂಬ ಪದವನ್ನು ಬಳಸಿದ್ದರು. 'ಅತಿರೇಕದ ಕೇಂದ್ರೀಯವಾದವನ್ನು ತೊರೆಯಿರಿ ಹಾಗೂ ನೈಜ ಒಕ್ಕೂಟವನ್ನು ಸ್ವಾಗತಿಸಿ' ಎಂದು ಸ್ವಾತಂತ್ರ್ಯ ಹೋರಾಟಗಾರ ರಾಜಾಜಿ ಬರೆದಿದ್ದಾರೆ. ಯಾರೂ ಕೂಡಾ ಒಕ್ಕೂಟ ಎಂಬ ಪದದ ಬಗ್ಗೆ ಭೀತಿಗೊಳ್ಳಬಾರದು. ಹೀಗಾಗಿ ನಾವು ಅದರ ಬಳಕೆಯನ್ನು ಮುಂದುವರಿಸಲಿದ್ದೇವೆ ಎಂದು ಸ್ಟಾಲಿನ್ ತಿಳಿಸಿದರು.
 

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...