ಕಾರವಾರ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾ 25 ರಿಂದ ಆರಂಭ; ವಿದ್ಯಾರ್ಥಿಗಳಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ

Source: S O News | By I.G. Bhatkali | Published on 22nd March 2024, 12:48 AM | Coastal News |

ಕಾರವಾರ: ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಗಳು ಮಾರ್ಚ್ 25 ರಿಂದ ಏಪ್ರಿಲ್ 6ರ ವರೆಗೆ ಜಿಲ್ಲೆಯ 73 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಈ ಪರೀಕ್ಷೆಗಳು ಪಾರದರ್ಶಕವಾಗಿ ಮತ್ತು ಸುವ್ಯವಸ್ಥಿತವಾಗಿ ನಡೆಯಬೇಕಾಗಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಕಾನೂನು ಬಾಹಿರ ಚಟುವಟಿಕೆ ಮತ್ತು ಅಹಿತಕರ ಘಟನೆಗಳು ನಡಯದಂತೆ, ಪರೀಕ್ಷೆ ನಡೆಯುವ ಸಮಯದಿಂದ ಪರೀಕ್ಷಾ ಅವಧಿ ಮುಕ್ತಾಯವಾಗುವ ವರೆಗೆ ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ಪ್ರದೇಶವನ್ನು ಸೆಕ್ಷನ್ 144 ರಂತೆ ನಿಷೇಧಿತ ಪ್ರದೇಶವೆಂದು ನಿಷೇದಾಜ್ಞೆಯನ್ನು ಘೋಷಿಸಿ ಹಾಗೂ ಈ ವ್ಯಾಪ್ತಿಯಲ್ಲಿನ ಜೆರಾಕ್ಸ್ ಅಂಗಡಿ ಮತ್ತು ಸೈಬರ್ ಕೆಫೆಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಆದೇಶಿಸಿದ್ದಾರೆ. 

ವಿದ್ಯಾರ್ಥಿಗಳಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ
ಮಾರ್ಚ್ 25 ರಿಂದ ಏಪ್ರಿಲ್ 6 ರವರೆಗೆ ನಡೆಯಲಿರುವ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.

ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರವೇಶ ಪತ್ರ ತೋರಿಸಿ ತಮ್ಮ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರಗಳಿಗೆ ಹೋಗಲು ಹಾಗೂ ಪರೀಕ್ಷೆ ಮುಗಿಸಿ ವಾಸ ಸ್ಥಳಕ್ಕೆ ಹಿಂದಿರುಗಲು ಸಂಸ್ಥೆಯ ನಗರ, ಉಪನಗರ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. 

Read These Next