ರದ್ದಾದ ಐಟಿ ಕಾಯ್ದೆ ಅಡಿ ಪ್ರಕರಣ ದಾಖಲು; ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್

Source: VB | By S O News | Published on 3rd August 2021, 5:31 PM | National News |

ಹೊಸದಿಲ್ಲಿ: ಸುಪ್ರೀಂ ಕೋರ್ಟ್ 2015ರಲ್ಲಿ ರದ್ದುಗೊಳಿಸಿ ತೀರ್ಪು ನೀಡಿದ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಎ ಅಡಿಯಲ್ಲಿ ಈಗಲೂ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಆರೋಪಿಸಿ ಸರಕಾರೇತರ ಸಂಸ್ಥೆಯೊಂದು ಸಲ್ಲಿಸಿದ ಮನವಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಸೋಮವಾರ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಎಲ್ಲ ಉಚ್ಚ ನ್ಯಾಯಾಲಯಗಳ ರಿಜಿಸ್ಟ್ರಾರ್ ಜನರಲ್‌ಗೆ ನೋಟಿಸು ಜಾರಿ ಮಾಡಿದೆ.

ಪೊಲೀಸ್ ವ್ಯವಸ್ಥೆ ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿರುವುದರಿಂದ, ಎಲ್ಲಾ ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಕಕ್ಷಿಗಾರರನ್ನಾಗಿ ಮಾಡುವುದು ಉತ್ತಮ. ಅಲ್ಲದೆ, ನಾವು ಸಮಗ್ರ ಆದೇಶವನ್ನು ಹೊರಡಿಸಿ ಈ ವಿಷಯವನ್ನು ಶಾಶ್ವತವಾಗಿ ಕೊನೆಗೊಳಿಸಬಹುದಾಗಿದೆ ಎಂದು ಪೀಠ ಹೇಳಿತು.

ಸರಕಾರೇತರ ಸಂಸ್ಥೆ ಪಿಯುಸಿಎಲ್‌ನ ಪರವಾಗಿ ಹಾಜರಾದ ಹಿರಿಯ ನ್ಯಾಯವಾದಿ ಸಂಜಯ್ ಪಾರಿಕ್, ಈ ಪ್ರಕರಣದಲ್ಲಿ ಎರಡು ಅಂಶಗಳಿವೆ. ಒಂದು ಪೊಲೀಸ್ ಹಾಗೂ ಇನ್ನೊಂದು ನ್ಯಾಯಾಂಗ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ಅದರ ಬಗ್ಗೆ ಗಮನ ಹರಿಸಲಾಗುತ್ತದೆ ಹಾಗೂ ಉಚ್ಚ ನ್ಯಾಯಾಲಯಗಳಿಗೆ ನೋಟಿಸು ನೀಡಲಾಗುತ್ತದೆ ಎಂದು ಹೇಳಿತು.

ಸುಪ್ರೀಂ ಕೋರ್ಟ್ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿತು.

ರಾಜ್ಯಗಳ ಹೊಣೆ: ಇದಕ್ಕೆ ಮೊದಲು ನ್ಯಾಯಪೀಠದ ಮುಂದೆ ಅಫಿಡವಿಟ್ ಸಲ್ಲಿಸಿದ ಕೇಂದ್ರ ಸರಕಾರ ಸಂವಿಧಾನದ ನಿಯಮಗಳ ಅನುಸಾರ ಪೊಲೀಸ್ ಹಾಗೂ ಸಾರ್ವಜನಿಕ ಆದೇಶಗಳು ರಾಜ್ಯಗಳ ವಿಷಯಗಳಾಗಿವೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 ಎ ಯನ್ನು ರದ್ದುಗೊಳಿಸಿ ನೀಡಲಾದ ತೀರ್ಪನ್ನು ಅನುಷ್ಠಾನಗೊಳಿಸುವ ಪ್ರಾಥಮಿಕ ಜವಾಬ್ದಾರಿ ರಾಜ್ಯಗಳು ಹಾಗೂ ಅದರ ಜಾರಿ ನಿರ್ದೇಶನಾಲಯ ಸಂಸ್ಥೆಗಳಿಗೆ ಸೇರಿದ್ದು ಎಂದಿತು. 2015ರಲ್ಲಿ ರದ್ದಾಗಿರುವ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೈಕನ್ 66ಎ ದುರ್ಬಳಕೆಯಾಗುತ್ತಿದೆ. ಈ ಕಾಯ್ದೆಯನ್ನು ಸಮರ್ಪಕವಾಗಿ ಜಾರಿ ಮಾಡಿಲ್ಲ ಎಂದು ಆರೋಪಿಸಿ ಪಿಯುಸಿಎಲ್ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿತ್ತು. ಈ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ನೋಟಿಸು ಜಾರಿ ಮಾಡಿತ್ತು.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...