ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮುಸ್ಸಾವಿರ್ ಹುಸೇನ್ ಶಾಜಿಬ್ ಮತ್ತು ಅಬ್ದುಲ್ ಮತೀನ್ ತಾಹಾನನ್ನು ನ್ಯಾಯಾಧೀಶರು 10 ದಿನಗಳ ಕಾಲ ರಾಷ್ಟ್ರೀಯ ತನಿಖಾ ದಳ ವಶಕ್ಕೆ ನೀಡಿ ಆದೇಶಿಸಿದ್ದಾರೆ.
ರಾಮೇಶ್ವರಂ ಕೆಫೆಯಲ್ಲಿ ಸ್ಫೋಟಗೊಳಿಸಿ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ತಲೆಮರೆಸಿಕೊಂಡಿದ್ದ ಶಂಕಿತ ಉಗ್ರರನ್ನು ಎನ್ಐಎ ಅಧಿಕಾರಿಗಳು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ.
ಇಬ್ಬರನ್ನು ಎನ್ಐಎ ಅಧಿಕಾರಿಗಳು ಮಂಡಿವಾಳದ ಎಫ್ಎಸ್ಎಲ್ ಸೆಂಟರ್ ಬಳಿಯಿರುವ ಇಂಟ್ರಾಗೇಷನ್ ಸೆಲ್ನಲ್ಲಿ ವಿಚಾರಣೆ ನಡೆಸಿದರು. ಬಳಿಕ ಬೆಳಿಗ್ಗೆ 10:30 ಕೋರಮಂಗಲದ ರಾಷ್ಟ್ರೀಯ ಕ್ರೀಡಾ ಗ್ರಾಮ ಸಮುಚ್ಚಯದಲ್ಲಿರುವ ನಿವಾಸದಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಈ ವೇಳೆ ನ್ಯಾಯಾಧೀಶರು 10 ದಿನಗಳ ಕಾಲ ಎನ್ಐಎ ಕಸ್ಟಡಿಗೆ ನೀಡಿ ಆದೇಶ ನೀಡಿದ್ದಾರೆ.