ಕಾರವಾರ: ಕಾಂಪೌಂಡ್ ನಿರ್ಮಾಣದಿಂದ ಶಾಲೆಯ ಸ್ವತ್ತು ರಕ್ಷಣೆ

Source: S O News | By I.G. Bhatkali | Published on 10th February 2024, 4:34 PM | Coastal News |

ಕಾರವಾರ: ಗ್ರಾಮೀಣ ಮಟ್ಟದಲ್ಲಿನ ಸರ್ಕಾರಿ ಶಾಲೆಗಳಲ್ಲಿ ಭದ್ರತೆ ದೃಷ್ಟಿಯಿಂದ ಅಭಿವೃದ್ಧಿ ಅಷ್ಟಕ್ಕಷ್ಟೆ ಆದ್ದರಿಂದ ಇತ್ತೀಚಿನ ದಿನಗಳಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಡಿ ಶಾಲಾ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ.

ಸಿದ್ದಾಪುರ ತಾಲೂಕಿನ ದೊಡ್ಮನೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2022-23ನೇ ಸಾಲಿನಲ್ಲಿ ಅಂದಾಜು ತಲಾ 3 ಲಕ್ಷ ವೆಚ್ಚದಲ್ಲಿ 3 ಶಾಲಾ ಕಾಂಪೌಂಡ್ ನಿರ್ಮಾಣಗೊಂಡಿದ್ದು, ಶಾಲೆಯ ಭದ್ರತೆಗೆ ಅನುಕೂಲ ಕಲ್ಪಿಸಿದೆ. 

ನಮ್ಮ ಶಾಲಾ ಆವರಣಕ್ಕೆ ಯಾವುದೇ ಸೂಕ್ತ ಭದ್ರತೆಯಿಲ್ಲದೆ ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳ ತಾಣವಾಗಿರುತ್ತಿತ್ತು. ಶಾಲೆಯ ಸ್ವತ್ತನ್ನು ಕಾಪಾಡುವುದು ಕಷ್ಟಕರವಾಗಿತ್ತು. ಉದ್ಯೋಗ ಖಾತರಿ ಯೋಜನೆಯಿಂದ ನಮ್ಮ ಶಾಲೆಯ ಸಂರಕ್ಷಣೆಯಾಗಿದೆ ಎಂದು ಬಿಳೆಗೋಡು ಶಾಲೆ ಮುಖ್ಯಾಧ್ಯಾಪಕಿ ಮೋಹಿನಿ ದೇಶ ಬಂಡಾರಿ ಹೇಳಿದರು. 

ಉಡಳ್ಳಿ ಶಾಲೆಯ ಮುಖ್ಯ ಶಿಕ್ಷಕರಾದ ಆನಂದ ಮೊಗೇರ ಮಾತನಾಡಿ ನಾವು ಮಕ್ಕಳೊಂದಿಗೆ ಸೇರಿ ತರಕಾರಿ, ಹೂವಿನಗಿಡಗಳನ್ನು ಬೆಳೆಯುತ್ತಿದ್ದವು ಮೊದಲೆಲ್ಲ ತಂತಿ ಬೇಲಿ ಇದ್ದ ಕಾರಣ ಫಲ ಕೈಗೆ ಸಿಗೋದು ಕಷ್ಟ ಇತ್ತು. ಆದ್ರೀಗ ಕಾಂಪೌಂಡ್ ನಿರ್ಮಾಣದಿಂದ ಇದ್ಯಾವುದರ ತೊಂದರೆ ಇಲ್ಲದೆ ತುಂಬಾ ಅನುಕೂಲವಾಗಿದೆ ಎಂದರು. 

ನಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 2022-23ನೇ ಸಾಲಿನಲ್ಲಿ ಒಟ್ಟು ನಾಲ್ಕು ಶಾಲಾ ಕಾಂಪೌಂಡ್ ಕಾಮಗಾರಿ ಕೈಗೆತ್ತಿಕೊಂಡಿದ್ದು ಇದರಲ್ಲಿ 3 ಪೂರ್ಣಗೊಂಡಿದ್ದು 1 ಪ್ರಗತಿಯಲ್ಲಿದೆ. 2023-24ನೇ ಸಾಲಿನಲ್ಲಿ ಇನ್ನೂ 2 ಕಾಮಗಾರಿಗಳ ಬೇಡಿಕೆಯಿದೆ ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜು ಜಿ. ನಾಯ್ಕ ತಿಳಿಸಿದರು.

Read These Next