ಪತಂಜಲಿಯಿಂದ ನ್ಯಾಯಾಲಯದ ಆದೇಶ ಉಲ್ಲಂಘನೆ; ಕಾನೂನು ಕ್ರಮ ಎದುರಿಸಲು ಸಿದ್ದರಾಗಿ ಪತಂಜಲಿಗೆ ಸುಪ್ರೀಂ ಕೋರ್ಟ್ ಚಾಟಿ

Source: vb | By I.G. Bhatkali | Published on 3rd April 2024, 7:50 PM | National News |

ಹೊಸದಿಲ್ಲಿ: ವೈಜ್ಞಾನಿಕ ತಳಹದಿಯ ಔಷಧಿಗಳನ್ನು ಟೀಕಿಸುವ ಹಾಗೂ ಜನರನ್ನು ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸುವುದನ್ನು ನಿಲ್ಲಿಸದೇ, ಕೇವಲ ಕಾಟಾಚಾರಕ್ಕೆ ನ್ಯಾಯಾಲಯಕ್ಕೆ ಕ್ಷಮೆಯಾಚನೆಯ ಅಫಿಡವಿಟ್ ಸಲ್ಲಿಸಿದ್ದ ಪತಂಜಲಿ ಸಂಸ್ಥೆಯ ಸಂಸ್ಥಾಪಕ ಬಾಬಾ ರಾಮದೇವ್ ಹಾಗೂ ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರನ್ನು ಸುಪ್ರೀಂಕೋರ್ಟ್ ಮಂಗಳವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಪತಂಜಲಿ ಸಂಸ್ಥೆಯ ಕ್ಷಮೆಯಾಚನೆ ಪತ್ರವು ನ್ಯಾಯಾಲಯದ ಮನವೊಲಿಸುವಲ್ಲಿ ಸೋತಿದೆ ಎಂದು ಹೇಳಿದ ನ್ಯಾಯಪೀಠವು ಕಾನೂನುಕ್ರಮ ಎದುರಿಸಲು ಸಿದ್ದರಾಗುವಂತೆಯೂ ರಾಮದೇವ್ ಹಾಗೂ ಅಚಾರ್ಯ ಬಾಲಕೃಷ್ಣ ಅವರಿಗೆ ಎಚ್ಚರಿಕೆ ನೀಡಿದೆ.

ಇಂತಹ ಜಾಹೀರಾತುಗಳ ಪ್ರಸಾರವನ್ನು ನಿಲ್ಲಿಸಬೇಕೆಂದು ನ್ಯಾಯಾಲಯ ಆದೇಶ ನೀಡಿರುವುದು ತನ್ನ ಪ್ರಚಾರ ಮಾಧ್ಯಮ ವಿಭಾಗಕ್ಕೆ ತಿಳಿದಿಲ್ಲವೆಂಬ ಪತಂಜಲಿ ಸಂಸ್ಥೆಯು ನೀಡಿರುವ ಹೇಳಿಕೆಗೆ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಅಹ್ವಾನುದ್ದೀನ್ ಅಮಾನುಲ್ಲಾ ಅವರನ್ನೊಳಗೊಂಡ ನ್ಯಾಯಪೀಠವು ತೀವ್ರ ಆಕ್ಷೇಪ ವ್ಯಕ್ತಪಡಿಸಿತು.

ಔಷಧಗಳು ಹಾಗೂ ಪ್ರಸಾಧನ (ಮಾಂತ್ರಿಕ ಪರಿಹಾರಗಳು) ಕಾಯ್ದೆಯು ಸವಕಲಾದುದು ಎಂಬ ಆಚಾರ್ಯ ಬಾಲಕೃಷ್ಣ ಅವರ ಹೇಳಿಕೆಗೂ ಸುಪ್ರೀಂಕೋರ್ಟ್ ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸಿತು.

ಪತಂಜಲಿ ಆಯುರ್ವೇದ ಸಂಸ್ಥೆ ಹಾಗೂ ಅದರ ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರು ಆಧುನಿಕ ಔಷಧಿಗಳನ್ನು ಗುರಿಯಿರಿಸಿ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ಮಾರ್ಚ್ 21ರಂದು ಸುಪ್ರೀಂಕೋಟ್ ್ರನಲ್ಲಿ ಕ್ಷಮೆಯಾಚಿಸಿದ್ದರು. ತಮ್ಮ ವಿರುದ್ಧದ ನ್ಯಾಯಾಂಗ ನಿಂದನೆ ಆರೋಪಗಳಿಗೆ ಸಂಬಂಧಿಸಿದಂತೆ ಶೋಕಾಸ್ ನೋಟಿಸ್‌ಗೆ ಉತ್ತರಿಸಲು ವಿಫಲರಾದ ಬಳಿಕ ಅವರಿಗೆ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇವರಿಬ್ಬರೂ ಇಂದು ನ್ಯಾಯಾಲಯಕ್ಕೆ ಆಗಮಿಸಿದ್ದರು. 'ಕೇವಲ ಸುಪ್ರೀಂಕೋರ್ಟ್ ಮಾತ್ರವಲ್ಲ, ದೇಶಾದ್ಯಂತ ನ್ಯಾಯಾಲಯಗಳು ಹೊರಡಿಸುವ ಪ್ರತಿಯೊಂದು ಆದೇಶವನ್ನು ಎಲ್ಲರೂ ಗೌರವಿಸಬೇಕಾಗಿದೆ. ಆದರೆ ಇಲ್ಲಿ ನ್ಯಾಯಾಲಯದ ಆದೇಶವನ್ನು ಸಂಪೂರ್ಣ ಉಲ್ಲಂಘಿಸಲಾಗಿದೆ'' ಎಂದು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಆಹ್ವಾನುದ್ದೀನ್ ಅಮಾನುಲ್ಲಾ ಅವರನ್ನೊಳಗೊಂಡ ನ್ಯಾಯವೀಠ ತಿಳಿಸಿತು.

ಆಧುನಿಕ ಔಷಧಿಗಳ ಕುರಿತಾಗಿ ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಕಟಿಸುವುದಿಲ್ಲವೆಂದು ನ್ಯಾಯಾಲಯಕ್ಕೆ ನೀವು ಬರೆದುಕೊಟ್ಟಿದ್ದ ಮುಚ್ಚಳಿಕೆಯನ್ನು ನೀವು ಪಾಲಿಸಬೇಕಿತ್ತು. ಆದರೆ ನೀವು ಎಲ್ಲಾ ಮಿತಿಗಳನ್ನು ಉಲ್ಲಂಘಿಸಿದ್ದೀರಿ ಎಂದು ನ್ಯಾಯಪೀಠವು, ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಬಾಬಾರಾಮದೇವ್ ಹಾಗೂ ಆಚಾರ್ಯ ಬಾಲಕೃಷ್ಣ ಅವರಿಗೆ ಖಾರವಾಗಿ ಹೇಳಿತು. ಅಧುನಿಕ ಔಷಧಿ (ಅಲೋಪಥಿ)ಯಲ್ಲಿ ಕೋವಿಡ್-19ಗೆ ಪರಿಹಾರವಿಲ್ಲವೆಂದು ಪತಂಜಲಿ ಸಂಸ್ಥೆಯು ಘಂಟಾಘೋಷವಾಗಿ ಸಾರುತ್ತಿದ್ದಾಗ, ಕೇಂದ್ರ ಸರಕಾರವು ಯಾಕೆ ಕಣ್ಣುಮುಚ್ಚಿ ಕುಳಿತುಕೊಂಡಿತ್ತೆಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.

ರಾಮದೇವ್ ಅವರ ವಕೀಲರಾದ ಬಲಬೀರ್ ಸಿಂಗ್ ವಾದ ಮಂಡಿಸುತ್ತಾ, ಯೋಗಗುರು ಅವರು ನ್ಯಾಯಾಲ ಯಕ್ಕೆ ಖುದ್ದಾಗಿ ಹಾಜರಾಗಿದ್ದಾರೆ ಹಾಗೂ ಜಾಹೀರಾತುಗಳ ಪ್ರಸಾರಕ್ಕೆ ಸಂಬಂಧಿಸಿ ನಿಶ್ಚರ್ತವಾಗಿ ಕ್ಷಮೆಯಾಚಿಸಿದ್ದಾರೆ ಎಂದು ಹೇಳಿದರು.

ಕೇಂದ್ರ ಸರಕಾರದ ಸಾಲಿಸಿಟ‌ರ್ ಜನರಲ್ ತುಷಾರ್ ಮೆಹ್ರಾ ಅವರು, ಇಡೀ ವಿವಾದಕ್ಕೆ ಪರಿಹಾರವನ್ನು ಹುಡುಕಲು ಇತ್ತಂಡಗಳ ವಕೀಲರಿಗೆ ನೆರವಾಗುವ ಕೊಡುಗೆಯನ್ನು ತಾನು ನೀಡಿದ್ದಾಗಿ ತಿಳಿಸಿದರು.

ಜನರನ್ನು ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಸಾರ ಮಾಡದಂತೆ ಪತಂಜಲಿಗೆ ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದ ಕೆಲವೇ ದಿನಗಳ ಬಳಿಕ ರಾಮದೇವ್ ಅವರು ಪತ್ರಿಕಾಗೋಷ್ಠಿ ನಡೆಸಿದ್ದನ್ನು ಕೂಡಾ ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು.

ನ್ಯಾಯಾಲಯದ ಆದೇಶ ಅನುಸರಣೆ ಕುರಿತ ಅಫಿಡವಿಟ್ ಸಲ್ಲಿಸಲು ಕಾಲಾವಕಾಶ ನೀಡುವಂತೆ ಪತಂಜಲಿ ಸಂಸ್ಥೆಯ ವಕೀಲರು ಮನವಿ ಸಲ್ಲಿಸಿದಾಗ, ನ್ಯಾಯಪೀಠವು ಒಂದು ವಾರದೊಳಗೆ ಅದನ್ನು ಸಲ್ಲಿಸುವುದಕ್ಕೆ ಕೊನೆಯ ಅವಕಾಶವನ್ನು ನೀಡಿತು. ಪ್ರಕರಣದ ಮುಂದಿನ ಆಲಿಕೆಯು ಎಪ್ರಿಲ್ 10ರಂದು ನಡೆಯಲಿದ್ದು, ಆಗ ಇಬ್ಬರೂ ನ್ಯಾಯಾಲಯದಲ್ಲಿ ಉಪಸ್ಥಿತರಿರಬೇಕೆಂದು ನ್ಯಾಯಾಲಯ ಆದೇಶಿಸಿತು.

ಬಾಬಾ ರಾಮದೇವ್ ಪರ ಹಿರಿಯ ವಕೀಲ ಬಲಬೀರ್ ಸಿಂಗ್, ಪತಂಜಲಿ ಪರ ಹಿರಿಯ ನ್ಯಾಯವಾದಿ ವಿಪಿನ್ ಸಾಂಘಿ, ಪತಂಜಲಿ ವಿರುದ್ದ ಮೊಕದ್ದಮೆ ದಾಖಲಿಸಿದ್ದ ಭಾರತೀಯ ವೈದ್ಯ ಸಂಘದ ವಕೀಲ ಪಿ.ಎಸ್.ಪಟ್ಟಾಲಿಯಾ ಹಾಗೂ ಕೇಂದ್ರ ಸರಕಾರದ ಪರವಾಗಿ ತುಷಾರ್ ಮೆಹ್ರಾ ವಾದ ಮಂಡಿಸಿದರು.

ಆಧುನಿಕ ಔಷಧಿಗಳ ಪರಿಣಾಮಕಾರಿತ್ವವನ್ನು ಟೀಕಿಸುವ ಹಾಗೂ ಕೆಲವು ನಿರ್ದಿಷ್ಟ ರೋಗಗಳನ್ನು ಗುಣಪಡಿಸುವ ಸಾಮರ್ಥ್ಯದ ಕುರಿತು ಪತಂಜಲಿ ಸಂಸ್ಥೆಯು ಪ್ರಕಟಿಸಿದ ಜಾಹೀರಾತುಗಳನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಅಹಸಾನುದ್ದೀನ್ ಖಾನ್ ಅವರನ್ನೊಳಗೊಂಡ ನ್ಯಾಯಪೀಠ ನಡೆಸುತ್ತಿದೆ

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...