ಜಾತಿ-ಧರ್ಮಗಳನ್ನು ಮುಂದಿಟ್ಟು ಯಾರೂ ರಾಜಕಾರಣ ಮಾಡಬಾರದು-ದೇಶಪಾಂಡೆ.

Source: SO News | By Laxmi Tanaya | Published on 15th April 2024, 10:30 PM | Coastal News |

ಅಂಕೋಲಾ: ಬಿಜೆಪಿ ಕೇವಲ ಜಾತಿ-ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ ಅಂತಹ ರಾಜಕಾರಣ ಸ್ವಾಸ್ಥ್ಯ ಸಮಾಜಕ್ಕೆ ಮಾರಕ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ ಹೇಳಿದರು.

ಅವರು ಅಂಕೋಲಾ ಬ್ಲಾಕ್ ಕಾಂಗ್ರೆಸ್ ಸಮಿತಿವತಿಯಿಂದ ಲೋಕಸಭಾ ಚುನಾವಣೆಯ ನಿಮಿತ್ತ ತಾಲೂಕಿನ ಭಾವಿಕೇರಿ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು ಬಿಜೆಪಿಯವರಿಗೆ ನ್ಯಾಯ,ನಿಷ್ಠೆ,ಸಂವಿಧಾನದ ಬಗ್ಗೆ ಗೌರವವಿಲ್ಲ, ಅಧಿಕಾರಕ್ಕೋಸ್ಕರ ಏನನ್ನು ಬೇಕಾದರೂ ಮಾಡುತ್ತಾರೆ,ಕಳೆದ ಸಾಲಿನಲ್ಲಿ ನಮ್ಮ ಪಕ್ಷದವರಿಗೆ ಅಮಿಷವೊಡ್ಡಿ ಅನ್ಯಮಾರ್ಗದಿಂದ ಸರಕಾರ ರಚಿಸಿದ್ದರು,ಆದರೆ ಇಂದು ಅವರಿಗೆ ಜನರು ಅಧಿಕಾರದಿಂದ ಕೆಳಕ್ಕೆ ಇಳಿಸಿ ತಕ್ಕ ಪಾಠ ಕಲಿಸಿದ್ದಾರೆ. ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವೈದ್ಯೆಯಾಗಿರುವ ನಮ್ಮ ಲೋಕಸಭೆ ಅಭ್ಯರ್ಥಿ ಕ್ರಿಯಾಶೀಲ ವ್ಯಕ್ತಿತ್ವದವರು, ವಿಧಾನಸಭೆಯಲ್ಲಿ ನೆರನುಡಿಯಿಂದ ಅನೇಕ ಜನಪರ ಕಾರ್ಯಕಮಗಳನ್ನು ಅವರ ಕ್ಷೇತ್ರಕ್ಕೆ ತಂದಿದ್ದರು. ಉತ್ತರ ಕನ್ನಡದ ಹಲವು ಸಮಸ್ಯೆಗಳನ್ನು ಲೋಕಸಭೆಯಲ್ಲಿ ಚರ್ಚಿಸಿ ಬಗೆಹರಿಸುತ್ತಾರೆ ಎಂಬ ನಂಬಿಕೆಯಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಮಾತನಾಡಿ ಚುನಾವಣೆಯಲ್ಲಿ ನಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕೆ ಪೂರಕವಾದ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು.ನಾವು ಕಾಂಗ್ರೆಸ್ಸಿಗರು ಸಂವಿಧಾನವನ್ನು ದೇವರಂತೆ ಕಂಡಿದ್ದೇವೆ,ಕಳೆದ ಚುನಾವಣೆಯಲ್ಲಿ ಎನ್ ಡಿ ಎ ಪ್ರಣಾಳಿಕೆಯಲ್ಲಿ ಹೇಳಿಕೆ ಕೊಟ್ಟಂತೆ ಎಷ್ಟು ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಿದೆ ಎಂಬುದನ್ನು ನಾವು ನೋಡಬೇಕು, ಉಳುವವನೆ ಭೂಮಿಯ ಒಡೆಯ ಕಾಯ್ದೆಯನ್ನು ತಂದು ದೇಶಾದ್ಯಂತ ರೈತರ ಪರವಾಗಿ ನಿಂತ ಏಕಮಾತ್ರ ಪಕ್ಷವೆಂದರೆ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರ. ಪ್ರಧಾನಿ ಮೋದಿಯವರಿಗೆ ಸುಳ್ಳಿನ ಸರದಾರ ಎಂಬ ಪ್ರಶಸ್ತಿಯನ್ನು ಕೊಡಬೇಕಾಗಿದೆ. ಬಡವರ ಹಣದಿಂದ ಅಂಬಾನಿ,ಅದಾನಿವವರ ಸಾಲಮನ್ನ ಮಾಡಿದ ಬಡವರ ವಿರೋಧಿ ಬಿಜೆಪಿ ಕೇಂದ್ರ ಸರ್ಕಾರವನ್ನು ಈ ಬಾರಿ ಕಿತ್ತುಹಾಕಬೇಕಿದೆ ಎಂದರು.

ಶಾಸಕ ಸತೀಶ ಸೈಲ್ ಮಾತನಾಡಿ ಕಾಂಗ್ರೆಸ್ ಸರಕಾರದ ಅವದಲ್ಲಿ ಸ್ತ್ರೀ ಶಕ್ತಿ ಬಲವಾಗಿದೆ,ಕಾಂಗ್ರೆಸ್ ಸರಕಾರ ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳು ಪ್ರತಿ ಮನೆಗಳಿಗೂ ತಲುಪಿಸಲಾಗಿದೆ,ಈ ಜನಪರ ಗ್ಯಾರಂಟಿಗಳನ್ನು ಅಂದು ಬಿಜೆಪಿ ಟೀಕಿಸಿತ್ತು,ಆದರೆ ಇಂದು ಅದೇ ಗ್ಯಾರಂಟಿಗಳಿಂದ ಜನಸಾಮಾನ್ಯರು ನೆಮ್ಮದಿಯಿಂದ ಸ್ವಾವಲಂಬಿ ಜೀವನ ನಡೆಸುತ್ತಿದ್ದು,ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ ಎಂದರು.

ಅಂಜಲಿ ನಿಂಬಾಳ್ಕರ್ ಉತ್ತರಕನ್ನಡದಲ್ಲಿ ಹಲವು ದಶಕಗಳಿಂದ ಸಮಸ್ಯೆಯಾಗಿಯೇ ಉಳಿದಿರುವ ವಿಷಯವನ್ನು ದೆಹಲಿಯಲ್ಲಿ ಚರ್ಚಿಸಿ ಬಗೆಹರಿಸುತ್ತೇನೆ ಎಂಬ ಭರವಸೆ ನನ್ನ ಮೇಲಿಡಿ,ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡುವ ಎನ್ ಡಿ ಎ ಒಕ್ಕೂಟವನ್ನು ಸೋಲಿಸಿ, ಬಡವರ ಪರವಾದ ಕಾಂಗ್ರೆಸ್ ಸರಕಾರವನ್ನು ಬೆಂಬಲಿಸೋಣ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಾಯಿ ಗಾಂವ್ಕರ್, ಮಹಿಳಾ ಕಾಂಗ್ರೆಸ್ ಜಿಲ್ಲಾ ಅದ್ಯಕ್ಷೆ ಸುಜಾತಾ ಗಾಂವ್ಕರ್,ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರವೀಂದ್ರನಾಥ ನಾಯ್ಕ,ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಾಂಡುರಂಗ ಗೌಡ ಹಾಗೂ ಪ್ರಮುಖರಾದ ಮಾಜಿ ಶಾಸಕ ಕೆ ಎಚ್ ಗೌಡ ಮಾಜಿ ಜಿಪಂ ಸದಸ್ಯರಾದ ಜಿ ಎಂ ಶೆಟ್ಟಿ,ಉಷಾ ನಾಯ್ಕ ಹಾಗೂ ಭಾವಿಕೆರಿ ಗ್ರಾಪಂ ಅಧ್ಯಕ್ಷ ದೀಪಾ ನಾಯ್ಕ ಹಾಗೂ ಮುಂತಾದವರು ಉಪಸ್ಥಿತರಿದ್ದರು.

Read These Next