ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಭಾವಚಿತ್ರ. ಕೇಂದ್ರ ಸರಕಾರಕ್ಕೆ ಕೇರಳ ಹೈಕೋರ್ಟ್ ನೋಟಿಸ್

Source: VB News | By Laxmi Tanaya | Published on 10th October 2021, 5:12 PM | National News |

ಮುಂಬೈ : ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಇಲ್ಲದ ಕೋವಿಡ್ ಲಸಿಕೆ ಪ್ರಮಾಣಪತ್ರವನ್ನು ಒದಗಿಸುವಂತೆ ಕೋರಿ ಸಲ್ಲಿಸಲಾದ ಮನವಿಯ ಹಿನ್ನೆಲೆಯಲ್ಲಿ ಕೇರಳ ಉಚ್ಚ ನ್ಯಾಯಾಲಯ ಶುಕ್ರವಾರ ಕೇಂದ್ರ ಸರಕಾರಕ್ಕೆ ನೋಟಿಸು ಜಾರಿ ಮಾಡಿದೆ.

ದೂರುದಾರ ಕೊಟ್ಟಾಯಂ ನಿವಾಸಿ ಎಂ. ಪೀಟರ್, ಪ್ರಸಕ್ತ ಕೋವಿಡ್ ಲಸಿಕೆಯ ಪ್ರಮಾಣಪತ್ರ ನಾಗರಿಕರ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ. ಆದ್ದರಿಂದ ಪ್ರಧಾನಿ ಅವರ ಭಾವಚಿತ್ರ ಇಲ್ಲದ ಕೋವಿಡ್ ಪ್ರಮಾಣ ಪತ್ರ ನೀಡುವಂತೆ ಕೋರಿದ್ದಾರೆ.

ಮನವಿಯ ವಿಚಾರಣೆ ನಡೆಸಿದ ಕೇರಳ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಪಿ.ಬಿ. ಸುರೇಶ್ ಎರಡು ವಾರಗಳ ಒಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡಿದ್ದಾರೆ.

ಅಮೆರಿಕ, ಇಂಡೋನೇಶ್ಯ, ಇಸ್ರೇಲ್ ಹಾಗೂ ಜರ್ಮನಿ ಸೇರಿದಂತೆ ವಿವಿಧ ದೇಶಗಳ ಕೋವಿಡ್ ಲಸಿಕೆಯ ಪ್ರಮಾಣ ಪತ್ರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವ ದೂರುದಾರ, ಎಲ್ಲ ದೇಶಗಳ ಪ್ರಮಾಣ ಪತ್ರಗಳು ಅಗತ್ಯದ ಮಾಹಿತಿಗಳನ್ನು ಒಳಗೊಂಡಿದೆ. ಸರಕಾರದ ಮುಖ್ಯಸ್ಥರ ಭಾವಚಿತ್ರವನ್ನು ಒಳಗೊಂಡಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ತಾನು ಪ್ರಯಾಣಿಸುವ ಹಲವು ಪ್ರದೇಶಗಳಿಗೆ ಕೋವಿಡ್ ಪ್ರಮಾಣ ಪತ್ರವನ್ನು ತೆಗೆದುಕೊಂಡು ಹೋಗುತ್ತೇನೆ. ಆದರೆ, ಪ್ರಮಾಣ ಪತ್ರದಲ್ಲಿ ಇರುವ ಪ್ರಧಾನಿ ಅವರ ಭಾವಚಿತ್ರದ ಉಪಯುಕ್ತತೆ, ಪ್ರಸಕ್ತತೆ ಇಲ್ಲ ಎಂದು ಅವರು ಹೇಳಿದ್ದಾರೆ.

Read These Next