ಮಾಧ್ಯಮಗಳು ಪೂರ್ವಾಗ್ರಹ ಪೀಡಿತರಾಗದೆ ಸಮಾಜಕ್ಕೆ ಹಿತವಾಗುವಂತೆ ವರ್ತಿಸಬೇಕು-ಎಂ.ಆರ್.ಮಾನ್ವಿ

Source: SOnews | By Staff Correspondent | Published on 19th January 2024, 5:37 PM | Coastal News |

 

ಭಟ್ಕಳ: ಮಾಧ್ಯಮಗಳು ಸಮಾಜದ ಕನ್ನಡಿಯಾಗಿದ್ದು ಪೂರ್ವಾಗ್ರಹಗಳನ್ನು ಬದಿಗೊತ್ತಿ ಸಮಾಜದ ಹಿತಕ್ಕೆ ಕೆಸಲ ಮಾಡಬೇಕು ಎಂದು ಭಟ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಆರ್.ಮಾನ್ವಿ ಹೇಳಿದರು.

ಅವರು ತಾಲೂಕಿನ ಹಡೀಲ ಪ್ರಾಥಮಿಕ ಶಾಲೆಯಲ್ಲಿ ಅಂಜುಮನ್ ಪದವಿ ಕಾಲೇಜಿನ ಎನ್ನೆಸ್ಸೆಸ್ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ “ಸಮಾಜದ ಸಾಮರಸ್ಯ ಕಾಪಾಡುವಲ್ಲಿ ಮಾಧ್ಯಮಗಳ ಪಾತ್ರ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಸಮಾಜದಲ್ಲಿ ಸಾಮರಸ್ಯ ಕಾಪಾಡುವುದು ಬಹಳ ಮುಖ್ಯ. ವಿವಿಧ ಧರ್ಮ, ಜಾತಿ, ಭಾಷೆ, ಸಂಸ್ಕೃತಿಗಳ ಜನರು ಒಟ್ಟಿಗೆ ಸೌಹಾರ್ದಯುತವಾಗಿ ಬದುಕಬೇಕಾದರೆ, ಸಾಮರಸ್ಯ ಅತ್ಯಗತ್ಯ. ಈ ಸಾಮರಸ್ಯವನ್ನು ಕಾಪಾಡುವಲ್ಲಿ ಮಾಧ್ಯಮದ ಪಾತ್ರ ಬಹಳ ಮಹತ್ವದ್ದಾಗಿದೆ. ಮಾಧ್ಯಮವು ಸಮಾಜದ ಕನ್ನಡಿಯಾಗಿದೆ. ಸಮಾಜದಲ್ಲಿ ಏನಾಗುತ್ತಿದೆ ಎಂಬುದನ್ನು ಮಾಧ್ಯಮವು ಪ್ರತಿಬಿಂಬಿಸುತ್ತದೆ. ಮಾಧ್ಯಮವು ಸಮಾಜದಲ್ಲಿ ಜಾಗೃತಿ ಮೂಡಿಸುವುದು, ಸಾರಾಂಶ ನೀಡುವುದು, ವಿಮರ್ಶೆ ಮಾಡುವುದು ಮುಂತಾದ ಕಾರ್ಯಗಳನ್ನು ಮಾಡುತ್ತದೆ. ಈ ಕಾರ್ಯಗಳ ಮೂಲಕ ಮಾಧ್ಯಮವು ಸಾಮಾಜಿಕ ಸಾಮರಸ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.

ಮಾಧ್ಯಮಗಳು ಸುಳ್ಳು ಮಾಹಿತಿಯನ್ನು ಹರಡುವ ಮತ್ತು ಇತಿಹಾಸವನ್ನು ತಿರುಚುವ ಮೂಲಕ ಒಂದು ರೀತಿಯ ಅರಾಜಕತೆ ಮತ್ತು ಅವ್ಯವಸ್ಥೆಯನ್ನು ಸೃಷ್ಟಿಸುತ್ತಿವೆ. ಇದು ಖಂಡಿತವಾಗಿಯೂ ಕೋಮು ಸಂಘರ್ಷ ಮತ್ತು ಸಮಾಜದಲ್ಲಿ ಕ್ಷೋಭೆಗೆ ಕಾರಣವಾಗುತ್ತದೆ. ಮಾಧ್ಯಮಗಳು ಯಾವಾಗಲೂ ವಸ್ತುನಿಷ್ಠತೆಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದರು.

ಭಟ್ಕಳದ ಇತಿಹಾಸ ಕುರಿತು ಉಪನ್ಯಾಸ ನೀಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಧರ್ ಶೇಟ್, ನಾವು ರಷ್ಯ ಅಮೇರಿಕಾದ ಇತಿಹಾಸ ಓದುತ್ತೇವೆ. ಆದರೆ ನಮ್ಮದೇ ಊರಿನ ಇತಿಹಾಸವನ್ನು ಮರೆಯುತ್ತೇವೆ. ಯಾರು ಇತಿಹಾಸ ಓದುವುದಿಲ್ಲವೋ ಅವರು ಇತಿಹಾಸವನ್ನು ಸೃಷ್ಟಿಸಲಾರರು ಎಂದರು.

ಅಂಜುಮನ್ ಪದವಿ ಕಾಲೇಜಿನ ಎಸ್.ಎನ್.ಎಸ್. ಕಾರ್ಯಕ್ರಮಾಧಿಕಾರಿ ಪ್ರೋ.ಆರ್.ಎಸ್.ನಾಯಕ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಅಂಜುಮನ್ ಪದವಿ ಕಾಲೇಜಿನ ಕಾರ್ಯಾಲಯ ಅಧೀಕ್ಷಕ ಖಮರುದ್ದೀನ್, ಹಡೀಲ್ ಪ್ರಾಥಮಿಕ ಶಾಲೆ ಶಿಕ್ಷಕ ರಾಮ ಗೌಡ ಉಪಸ್ಥಿತರಿದ್ದರು.

 

Read These Next