ಒಡಿಶಾದ ಮುಖ್ಯಮಂತ್ರಿಯಾಗಿ ಮಾಝಿ ಪ್ರಮಾಣ; ಡಿಸಿಎಂಗಲಾಗಿ ಕೆ ವಿ ಸಿಂಗ್ ದೇವ್ ಪಾರ್ವತಿ ಪರಿದಾ

Source: Vb | By I.G. Bhatkali | Published on 13th June 2024, 3:05 PM | National News |

ಭುವನೇಶ್ವರ (ಒಡಿಶಾ): ಬಿಜೆಪಿಯ ಹಿರಿಯ ಬುಡಕಟ್ಟು ನಾಯಕ ಹಾಗೂ ನಾಲ್ಕು ಬಾರಿ ಶಾಸಕರಾಗಿದ್ದ ಮೋಹನ್ ಚರಣ್ ಮಾಝಿ ಅವರು ಒಡಿಶಾದ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.

ಇದರೊಂದಿಗೆ ಮೋಹನ್ ಚರಣ್ ಮಾಝಿ ಅವರು ಒಡಿಶಾದ ಬಿಜೆಪಿಯ ಮೊದಲ ಮುಖ್ಯಮಂತ್ರಿಯಾಗಿ ಹೊರ ಹೊಮ್ಮಿದ್ದಾರೆ.

ಭುವನೇಶ್ವರದ ಜನತಾ ಮೈದಾನದಲ್ಲಿ ಸಂಜೆ ಸುಮಾರು 5 ಗಂಟೆಗೆ ನಡೆದ ಅದ್ದೂರಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪಾಲ್ಗೊಂಡಿದ್ದರು. ಬಿಜೆಪಿ ನಾಯಕರಾದ ಕೆ.ವಿ. ಸಿಂಗ್ ದೇವ್ ಹಾಗೂ ಪಾರ್ವತಿ ಪರಿದಾ ಅವರು ಒಡಿಶಾದ ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು

ಅಲ್ಲದೆ, ಪೃಥ್ವಿರಾಜ್ ಹರಿಚಂದನ್, ಡಾ. ಮುಕೇಶ್ ಮಹಾಲಿಂಗ, ಬಿಭೂತಿ ಭೂಷಣ್ ಜೆನಾ ಹಾಗೂ ಡಾ. ಕೃಷ್ಣ ಚಂದ್ರ ಮೋಹಪಾತ್ರ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣ ವಚನ ಸ್ವೀಕರಿಸಿದ ಇತರ ಸಚಿವರಲ್ಲಿ ಸುರೇಶ್ ಪೂಜಾರಿ, ರಬಿನಾರಾಯಣ ನಾಯ್ಕ, ನಿತ್ಯಾನಂದ ಗೊಂಡ, ಕೃಷ್ಣ ಚಂದ್ರ ಪಾತ್ರ, ಗಣೇಶ್ ರಾಮ್ ಸಿಂಗ್ ಖುಂಟಿಯಾ, ಸೂರ್ಯಬಂಶಿ ಸೂರಜ್ ಹಾಗೂ ಪ್ರದೀಪ್ ಬಾಲಸಮಂತ ಅವರು ಸೇರಿದ್ದಾರೆ.

ರಾಜ್ಯಪಾಲ ರಘುಬರ ದಾಸ್ ಪ್ರಮಾಣ ವಚನ ಬೋಧಿಸಿದರು. ಸಮಾರಂಭದಲ್ಲಿ ಅಮಿತ್‌ಶಾ, ನಿತಿನ್ ಗಡ್ಕರಿ, ಜೆ.ಪಿ. ನಡ್ಡಾ, ಭೂಪೇಂದರ್‌ ಯಾದವ್, ಧರ್ಮೇಂದ್ರ ಪ್ರಧಾನ್, ಜುವಾಲ್ ಓರಾಮ್ ಹಾಗೂ ಅಶ್ವಿನಿ ವೈಷ್ಣವ್ ಸೇರಿದಂತೆ ಬಿಜೆಪಿಯ ಹಲವು ನಾಯಕರು ಪಾಲ್ಗೊಂಡಿದ್ದರು. ಅಲ್ಲದೆ, ಉತ್ತರಪ್ರದೇಶ, ಗೋವಾ, ರಾಜಸ್ಥಾನ, ಮಧ್ಯಪ್ರದೇಶ, ಅಸ್ಸಾಂ, ಗುಜರಾತ್, ಛತ್ತೀಸ್‌ಗಡ ಹಾಗೂ ಉತ್ತರಾಖಂಡ ಸೇರಿದಂತೆ ಬಿಜೆಪಿ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ಭಾಗವಹಿಸಿದ್ದರು.

ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ಪ್ರಧಾನಿ ಮೋದಿ ಅವರು 'ಎಕ್ಸ್'ನ ಪೋಸ್ಟ್‌ನಲ್ಲಿ ಮುಖ್ಯಮಂತ್ರಿ ಹುದ್ದೆ ಸ್ವೀಕರಿಸಿರುವುದಕ್ಕೆ ಮೋಹನ್ ಚರಣ್ ಮಾಝಿ ಅವರನ್ನು ಅಭಿನಂದಿದ್ದಾರೆ. “ಒಡಿಶಾದ ನನ್ನ ಸಹೋದರಿಯರು ಹಾಗೂ ಸಹೋದರರ ಆಶೀರ್ವಾದದೊಂದಿಗೆ ಇಂದು ಒಡಿಶಾದಲ್ಲಿ ಚಾರಿತ್ರಿಕ ದಿನ. ! ಒಡಿಶಾದಲ್ಲಿ ಬಿಜೆಪಿ ಚೊಚ್ಚಲ ಸರಕಾರ ರಚಿಸುತ್ತಿದೆ' ಎಂದು ಅವರು ಹೇಳಿದ್ದಾರೆ.

ಪ್ರಮಾಣ ವಚನ ಸ್ವೀಕಾರಕ್ಕೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮಾಝ್, ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ನೂತನ ಸರಕಾರ ರಚನೆಯಾದ 100 ದಿನಗಳ ಒಳಗೆ ಕಾರ್ಯಾರಂಭಿಸಲಾಗುವುದು ಎಂದರು.

ಇತ್ತೀಚೆಗೆ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ 147 ವಿಧಾನ ಸಭಾ ಕ್ಷೇತ್ರಗಳ ಪೈಕಿ 78ರಲ್ಲಿ ಜಯ ಗಳಿಸುವ ಮೂಲಕ 24 ವರ್ಷದ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿಯ ಆಡಳಿತವನ್ನು ಅಂತ್ಯಗೊಳಿಸಿತ್ತು. ಬಿಜೆಡಿ 51, ಕಾಂಗ್ರೆಸ್ 14, ಸಿಪಿಐ (ಎಂ) 1 ಹಾಗೂ ಪಕ್ಷೇತರ ಅಭ್ಯರ್ಥಿಗಳು 3 ಸ್ಥಾನ ಗಳಿಸಿದ್ದರು.

Read These Next

ಡೆಹ್ರಾಡೂನ್: ಕ್ರೈಸ್ತ ಪ್ರಾರ್ಥನಾ ಸಭೆಯ ಮೇಲೆ ಸಂಘ ಪರಿವಾರದಿಂದ ದಾಳಿ; ಏಳು ಜನರಿಗೆ ಹಲ್ಲೆ

ಸಂಘ ಪರಿವಾರ ಕಾರ್ಯಕರ್ತರ ಗುಂಪೊಂದು ರವಿವಾರ ಇಲ್ಲಿ ಕ್ರೈಸ್ತ ಪ್ರಾರ್ಥನಾ ಸಭೆ ನಡೆಯುತ್ತಿದ್ದ ಮನೆಯ ಮೇಲೆ ದಾಳಿ ನಡೆಸಿದೆ. ಕನಿಷ್ಠ ...

ಲೋಕಸಭಾ ಚುನಾವಣೆಯ ಬಳಿಕ ಮುಸ್ಲಿಮರ ವಿರುದ್ಧ ಗುಂಪು ದಾಳಿ ಪ್ರಕರಣದಲ್ಲಿ ಹೆಚ್ಚಳ; ಜಮಾಅತೆ ಇಸ್ಲಾಮೀ ಹಿಂದ್ ಕಳವಳ

ಹೊಸದಿಲ್ಲಿ : ದೇಶದಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರದ ಪ್ರಕರಣಗಳು ಅಧಿಕಗೊಂಡಿದ್ದು, ಅದರಲ್ಲೂ ಲೋಕಸಭಾ ಚುನಾವಣೆಯ ಬಳಿಕ ...

ಬ್ರಿಟಿಷ್ ಯುಗದ ಕಾನೂನುಗಳಿಗೆ ತೆರೆ; ಇಂದಿನಿಂದ ಮೂರು ನೂತನ ಕ್ರಿಮಿನಲ್ ಕಾಯ್ದೆಗಳು ಜಾರಿ

ಸೋಮವಾರ, ಜುಲೈ 1ರಂದು ಮೂರು ನೂತನ ಕ್ರಿಮಿನಲ್ ಕಾನೂನುಗಳು ದೇಶಾದ್ಯಂತ ಜಾರಿಗೊಳ್ಳಲಿದ್ದು ಬ್ರಿಟಿಷ್ ಯುಗದ ಕಾನೂನುಗಳು ಅಸ್ತಿತ್ವ ...