ರಾಜಸ್ಥಾನ: ನೂಪುರ್ ಶರ್ಮಾರನ್ನು ಬೆಂಬಲಿಸಿದಾತನ ಬರ್ಬರ ಹತ್ಯೆ; ಇಬ್ಬರು ಆರೋಪಿಗಳ ಸೆರೆ

Source: Vb | By I.G. Bhatkali | Published on 30th June 2022, 8:18 AM | National News |

ಜೈಪುರ: ಬಿಜೆಪಿಯ ಅಮಾನತುಗೊಂಡ ವಕ್ತಾರೆ ನೂಪುರ್ ಶರ್ಮಾ ಅವರಿಗೆ ಬೆಂಬಲ ನೀಡಿದ ಟೈಲರ್ ಓರ್ವರನ್ನು ರಾಜಸ್ಥಾನದ ಉದಯಪುರದಲ್ಲಿರುವ ಅವರ ಅಂಗಡಿಯಲ್ಲಿ ಮಂಗಳವಾರ ಬರ್ಬರವಾಗಿ ಹತ್ಯೆಗೈಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಕೃತ್ಯ ಎಸಗಿದ ಬಳಿಕ ಆರೋಪಿಗಳು ಸಾಮಾಜಿಕ ಮಾಧ್ಯಮ ದಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದು, ಮುಹಮ್ಮದ್ ರಿಯಾಝ್ ಅಟ್ಟಾರಿ ಹಾಗೂ ಗೌಸ್ ಮುಹಮ್ಮದ್ ಎಂದು ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಇಬ್ಬರು ವ್ಯಕ್ತಿಗಳು ಈ ಹತ್ಯೆಯ ಹೊಣೆ ಹೊತ್ತಿದ್ದಾರೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ.

ಅವರು, “ನರೇಂದ್ರ ಮೋದಿ, ನೀವು ಬೆಂಕಿ ಹಚ್ಚಿದ್ದೀರಿ. ನಾವು ಅದನ್ನು ಆರಿಸಲಿದ್ದೇವೆ'' ಎಂದು ಹೇಳಿದ್ದಾರೆ. ಅಲ್ಲದೆ, ಪ್ರಧಾನಿ ಅವರನ್ನು ಹತ್ಯೆಗೈಯುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಧಾನ್ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಟೈಲರ್ ಕನ್ನಯ್ಯ ಲಾಲ್ ಅವರ ಅಂಗಡಿಗೆ ಮಂಗಳವಾರ ಅಪರಾಹ್ನ ತಲುಪಿದ್ದರು. ಇವರಲ್ಲಿ ರಿಯಾಜ್ ಎಂದು ಗುರುತಿಸಲಾಗುವ ವ್ಯಕ್ತಿ ಕನ್ನಯ್ಯ ಲಾಲ್ ಮೇಲೆ ಹರಿತವಾದ ಆಯುಧದಿಂದ ದಾಳಿ ನಡೆಸಿದ್ದಾನೆ. ಇನ್ನೋರ್ವ ಹತ್ಯೆಯನ್ನು ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹತ್ಯೆ ಹಿನ್ನೆಲೆಯಲ್ಲಿ ಈ ಪ್ರದೇಶದ ಸ್ಥಳೀಯ ಮಾರುಕಟ್ಟೆ ಯನ್ನು ಬಂದ್ ಮಾಡಲಾಯಿತು. ಇಲ್ಲಿನ ವ್ಯಾಪಾರಿಗಳು ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

ಈ ಘಟನೆಯನ್ನು ಮುಖ್ಯಮಂತ್ರಿ ಅಶೋಕ್ ಗೆಹೋಟ್ ಖಂಡಿಸಿದ್ದಾರೆ. ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದ್ದಾರೆ.

ಅಲ್ಲದೆ, ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

Read These Next

ಬೆಲೆಯೇರಿಕೆ, ಜಿಎಸ್‌ಟಿ ಹೆಚ್ಚಳ, ನಿರುದ್ಯೋಗದ ವಿರುದ್ಧ ದಿಲ್ಲಿಯಲ್ಲಿ ಕಾಂಗ್ರೆಸ್‌ ಪ್ರತಿಭಟನೆ; ರಾಹುಲ್, ಪ್ರಿಯಾಂಕಾ ಸೇರಿದಂತೆ ಹಲವಾರು ನಾಯಕರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು

ನಿರುದ್ಯೋಗ, ಬೆಲೆಯೇರಿಕೆ ಮತ್ತು ಜಿಎಸ್‌ಟಿ ಹೆಚ್ಚಳದ ವಿರುದ್ಧ ಶುಕ್ರವಾರ ಬೆಳಗ್ಗೆ ಇಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ಸಂಸದ ...