ರಾಜ್ಯದಲ್ಲಿ ಆಪರೇಷನ್ ಹಸ್ತದ ಮುನ್ಸೂಚನೆ; ಲೋಕಸಭೆ ಚುನಾವಣೆ ಹೊತ್ತಿಗೆ ಏಳೆಂಟು ಶಾಸಕರು ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

Source: VB | By I.G. Bhatkali | Published on 18th August 2023, 8:18 AM | State News |

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಬಿಜೆಪಿಯಲ್ಲಿನ ಅತೃಪ್ತ ಶಾಸಕರನ್ನು ಸೆಳೆಯಲು ಕಾಂಗ್ರೆಸ್ ತೆರೆಮರೆಯಲ್ಲೇ ಕಸರತ್ತು ನಡೆಸಿದ್ದು, ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

ಪಕ್ಷ ಸದೃಢಗೊಳಿಸಲು ದ್ವೇಷ ಬಿಟ್ಟು ಬೇರೆ ಪಕ್ಷಗಳ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಸೂಚನೆಯನ್ನು ನೀಡಿದ್ದೇವೆ.ಯಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕೆಂಬ ತೀರ್ಮಾನವನ್ನು ಸ್ಥಳೀಯ ಮುಖಂಡರ ನಿರ್ಧಾರಕ್ಕೆ ಬಿಡಲಾಗಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸುವ ಮೂಲಕ ಪರೋಕ್ಷವಾಗಿ ಆಪರೇಷನ್‌ ಹಸ್ತದ ಮುನ್ಸೂಚನೆ ನೀಡಿದ್ದಾರೆ.

ದೊಡ್ಡವರನ್ನು ಬಿಟ್ಟು ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಲೋಕಸಭೆ ಚುನಾವಣೆಗೆ ಪಕ್ಷದ ಬಲ ಹೆಚ್ಚಿಸಿ ಕೊಳ್ಳಬೇಕೆಂಬ ಸೂಚನೆಯನ್ನು ನೀಡಿದ್ದೇವೆ. ಚುನಾವಣೆಯಲ್ಲಿ ಪಕ್ಷದ ಮತ ಬ್ಯಾಂಕ್‌ ಅನ್ನು ಹೆಚ್ಚಿಸುವುದಷ್ಟೇ ನಮ್ಮ ಆದ್ಯತೆ ಎಲ್ಲ ದ್ವೇಷ ಮರೆತು ಅನ್ಯ ಪಕ್ಷದವರನ್ನು ಸೇರ್ಪಡೆ ಮಾಡಿಕೊಳ್ಳುತ್ತೇವೆ' ಎಂದು ಶಿವಕುಮಾರ್ ತಿಳಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಮರಳಿ ಮನೆಗೆ: ಕಾಂಗ್ರೆಸ್-ಜೆಡಿಎಸ್ ಸರಕಾರ ಪತನಕ್ಕೆ ಕಾರಣರಾಗಿ ಬಿಜೆಪಿ ಸೇರಿರುವ ಕೆಲ ಶಾಸಕರು, ಇದೀಗ ಮತ್ತೆ ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಸಿದ್ಧರಾಗಿದ್ದಾರೆ. ಈ ಸಂಬಂಧ ಸಮಾಲೋಚನೆ ನಡೆಯುತ್ತಿದೆ. ಲೋಕಸಭಾ ಚುನಾವಣೆಯ ಹೊತ್ತಿಗೆ ಬೆಂಗಳೂರಿನ ನಾಲೈದು ಮಂದಿ ಬಿಜೆಪಿ ಶಾಸಕರೂ ಸೇರಿದಂತೆ ಏಳೆಂಟು ಮಂದಿ ಶಾಸಕರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಬರಬಹುದು: ಪರಮೇಶ್ವರ್: ತಪ್ಪು ಮಾಡಿದ್ದನ್ನು ಸರಿ ಮಾಡಿಕೊಂಡರೆ ಬಿಜೆಪಿಯಿಂದ ಶಾಸಕರು ಕಾಂಗ್ರೆಸ್‌ಗೆ ಬರಬಹುದು. ಆದರೆ, ಅವರಿಗೆ ಮೊದಲನೇ ಸಾಲಿನಲ್ಲಿ ಸ್ಥಾನ ದೊರೆಯುವುದು ಕಷ್ಟ' ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಪಕ್ಷ ಬಿಟ್ಟು ಹೋದವರು ವಾಪಸ್ ಬಂದ ಉದಾಹರಣೆ ಇದೆ. ಆದರೆ, ಅವರಿಗೆ ಮೊದಲ ಸಾಲಿನಲ್ಲಿ ಸ್ಥಾನ ಸಿಗುವುದಿಲ್ಲ. ಅಲ್ಲದೆ, ಬಿಜೆಪಿಯಲ್ಲಿ ಬೇಸರ ಆಗಿ, ಅವರನ್ನು ಬಿಜೆಪಿ ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಶಾಸಕರು ಕಾಂಗ್ರೆಸ್‌ಗೆ ಬರಬಹುದು. ಪಕ್ಷಕ್ಕೆ ಬರುವವರನ್ನು ಸೇರ್ಪಡೆ ಮಾಡಿಕೊಳ್ಳುತ್ತೇವೆ' ಎಂದು ತಿಳಿಸಿದರು.

“ಬರುವ ಶಾಸಕರು ಕಾಂಗ್ರೆಸ್ ಸಿದ್ಧಾಂತ ನಂಬಿ ಬರಲಿ ಎಂದ ಅವರು, ನನ್ನ ಬಳಿ ಕೆಲವು ಶಾಸಕರು ಚರ್ಚೆ ಮಾಡಿದ್ದಾರೆ. ಆದರೆ, ಏನು ಚರ್ಚೆ ಮಾಡಿದ್ದಾರೆ ಎಂಬುದನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಈ ಬಾರಿ ಜನತೆ ನಮಗೆ ಅಧಿಕಾರ ಕೊಟ್ಟಿದ್ದಾರೆ. ಅವರ ವಿಶ್ವಾಸಕ್ಕೆ ತಕ್ಕಂತೆ ಭರವಸೆ ಈಡೇರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ' ಎಂದು ಹೇಳಿದರು.

ನಾನಂತೂ ಬಿಜೆಪಿ ಬಿಡುವುದಿಲ್ಲ: ಮುನಿರತ್ನ: ಬೆಂಗಳೂರು, ಆ.16: 'ಬೇಕಾದರೆ ರಾಜಕೀಯ ನಿವೃತ್ತಿ ಆಗುತ್ತೇನೆಯೇ ಹೊರತು ಕಾಂಗ್ರೆಸ್ ಗೆ ಹೋಗುವ ಅವಶ್ಯಕತೆ ನನಗೆ ಇಲ್ಲ. ಯಾವುದೇ ಕಾರಣಕ್ಕೂ ನಾನಂತೂ ಬಿಜೆಪಿ ಬಿಡುವುದಿಲ್ಲ' ಎಂದು ಮಾಜಿ ಸಚಿವ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿಯ ಹಾಲಿ ಶಾಸಕ ಮುನಿರತ್ನ ಸ್ಪಷ್ಟಪಡಿಸಿದ್ದಾರೆ.

ಬೆದರಿಸುವ ಅವಶ್ಯಕತೆ ಇಲ್ಲ:
ಕ್ಷೇತ್ರದ ಅಭಿವೃದ್ಧಿ ಮಾಡಿಕೊಟ್ಟರೆ ಶಾಸಕ ಸ್ಥಾನವನ್ನೇ ಬಿಟ್ಟುಕೊಡುತ್ತೇನೆ. ಯಾರಾದರೂ ಬಿಜೆಪಿ ತೊರೆದರೆ ಅವರನ್ನು ಮನವೊಲಿಸುವ ಕೆಲಸ ಮಾಡಲ್ಲ. ಆ ಅವಶ್ಯಕತೆ ನನಗೆ ಇಲ್ಲ. ಬಿಟ್ಟು ಹೋಗಿ ಅವರಿಗೆ ಒಳ್ಳೆಯದಾಗುತ್ತದೆ ಅಂದರೆ ನಾನೇಕೆ ತಡೆಯಲಿ ಎಂದು ಮುನಿರತ್ನ ಹೇಳಿದರು.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, '17 ಜನರ ಪೈಕಿ ಯಾರು ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಾರೋ ಗೊತ್ತಿಲ್ಲ, ನಾನಂತೂ ಬಿಜೆಪಿ ಬಿಟ್ಟು ಹೋಗುವುದಿಲ್ಲ. ಕ್ಷೇತ್ರದ ಅಭಿವೃದ್ಧಿ ವಿಚಾರದ ಬಗ್ಗೆ ಚರ್ಚಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿರುತ್ತೇವೆ ಹೊರತು, ಅವರ ಜೊತೆ ಯಾವುದೇ ರಾಜಕೀಯ ಸಂಬಂಧ ಉಳಿಸಿಕೊಂಡಿಲ್ಲ' ಎಂದು ಸ್ಪಷ್ಟಪಡಿಸಿದರು.

ವೈಯಕ್ತಿಕ ದ್ವೇಷವಿಲ್ಲ: ಪಕ್ಷ ಬಿಟ್ಟು ಬಂದರೂ, ವೈಯಕ್ತಿಕವಾಗಿ ಡಿ.ಕೆ.ಸುರೇಶ್‌, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರ ಜೊತೆ ಯಾವುದೇ ದ್ವೇಷ ಇಲ್ಲ. ಆದರೆ, ಅಧಿಕಾರಕ್ಕಾಗಿ ನಾನು ಪಕ್ಷ ಬಿಟ್ಟು ಹೋಗುವುದಿಲ್ಲ. ಮುಂದಿನ 5 ವರ್ಷ ನಾನು ವಿಪಕ್ಷದಲ್ಲಿಯೇ ಇರುತ್ತೇನೆ ಎಂದು ಅವರು ತಿಳಿಸಿದರು. ನಾನು ಮತ್ತು ಡಿ.ಕೆ. ಶಿವಕುಮಾರ್ ಅವರು 40 ವರ್ಷಗಳ ಸ್ನೇಹಿತರು. ನನ್ನ ಜೀವನದ ಗುರು ಹಾಗೂ ರಾಜಕೀಯ ಗುರು ಬಿ.ಕೆ.ಹರಿಪ್ರಸಾದ್. ಅದು ರಾಜಕೀಯ ಕಾರಣ ಅಲ್ಲ, ಅದು ನಮ್ಮ ಊರಿನ ಸಂಬಂಧ. ನನ್ನ ಮುಂದಿನ ಜೀವನದ ಆಧಾರ ಬಿಜೆಪಿ ಚಿಹ್ನೆ. ಬಿಜೆಪಿ ಬಗ್ಗೆ ನಂಬಿಕೆ, ಗೌರವ ಇದೆ ಎಂದು ಅವರು ತಿಳಿಸಿದರು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಬಿಜೆಪಿ ಮುಖಂಡನಿಗೆ ಪೆನ್‌ಡ್ರೈವ್ ನೀಡಿದ್ದೆ; ಪ್ರಜ್ವಲ್ ಕಾರು ಚಾಲಕನಿಂದ ಹೇಳಿಕೆ

ಪ್ರಜ್ವ ರೇವಣ್ಣರದ್ದು ಎನ್ನಲಾದ ಅಶ್ಲೀಲ ವೀಡಿಯೊ ಪೆನ್ ಡ್ರೈವ್ ಬಿಜೆಪಿ ಮುಖಂಡರೂ ಆಗಿರುವ ವಕೀಲ ದೇವರಾಜೇಗೌಡ ಬಿಟ್ಟು ಬೇರೆ ಯಾರಿಗೂ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಅವಧಿ ಉಲ್ಲೇಖಿಸದೇ ಪ್ರಜ್ವಲ್ ರೇವಣ್ಣ ಜೆಡಿಎಸ್‌ನಿಂದ ಅಮಾನತು

ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಪ್ರಕರಣ ಸಂಬಂಧ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ರೇವಣ್ಣ, ಪ್ರಜ್ವಲ್ ಉಚ್ಚಾಟನೆಗೆ ಜೆಡಿಎಸ್ ಶಾಸಕರ ಪಟ್ಟು

ರಾಜ್ಯದ ಜನತೆಯ ಮುಂದೆ ತಲೆ ತಗ್ಗಿಸುವಂತಹ ಕೆಲಸ ಮಾಡಿದವರನ್ನು ರಾಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಘನತೆಯನ್ನು ಉಳಿಸಬೇಕಿದೆ ಎಂದು ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ: ಕುಮಾರಸ್ವಾಮಿ

ಜೆಡಿಎಸ್ ಸಂಸದ ಪ್ರಜಿ ಕುಮಾರಸ್ವಾಮಿ ಡ್ರೈವ್ ಪ್ರಕರಣದಲ್ಲಿ ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ' ಎಂದು ಮಾಧ್ಯಮಗಳ ಮುಂದೆ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ತ್ವರಿತಗತಿಯಲ್ಲಿ ತನಿಖೆ ನಡೆಸಿ, ವರದಿ ಸಲ್ಲಿಸಲು ಸೂಚನೆ: ಪರಮೇಶ್ವ‌ರ್

ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಿ, ವರದಿ ಸಲ್ಲಿಸುವಂತೆ ...