ಇಂಡಿಯಾ ಮೈತ್ರಿಕೂಟದ ಅಧ್ಯಕ್ಷರಾಗಿ ಖರ್ಗೆ ನೇಮಕ; ಸಂಚಾಲಕ ಹುದ್ದೆ ತಿರಸ್ಕರಿಸಿದ ನಿತೀಶ್

Source: Vb | By I.G. Bhatkali | Published on 15th January 2024, 11:10 PM | National News |

ಹೊಸದಿಲ್ಲಿ: 14 ಪ್ರತಿಪಕ್ಷಗಳ ನಾಯಕರು ಭಾಗವಹಿಸಿದ್ದ ವರ್ಚುವಲ್ ಸಭೆಯಲ್ಲಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆಯವರನ್ನು ಇಂಡಿಯಾ ಮೈತ್ರಿಕೂಟದ ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿದೆ.

ಈ ನಡುವೆ ಸಂಚಾಲಕ ಹುದ್ದೆಯನ್ನು ತಿರಸ್ಕರಿಸಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಎಲ್ಲ ಪಕ್ಷಗಳು ಒಮ್ಮತಕ್ಕೆ ಬಂದರೆ ಮಾತ್ರ ಹುದ್ದೆಯನ್ನು ತಾನು ಒಪ್ಪಿಕೊಳ್ಳುವುದಾಗಿ ತಿಳಿಸಿದ್ದಾರೆ. ಕಾಂಗ್ರೆಸ್ ನಾಯಕರು, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ಮತ್ತು ಮೈತ್ರಿ ಕೂಟದ ಇತರ ಪಕ್ಷಗಳ ಹಿರಿಯ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.

ಶನಿವಾರ ನಡೆದ ವರ್ಚುವಲ್ ಸಭೆಯಲ್ಲಿ ಇಂಡಿಯಾ ಮೈತ್ರಿಕೂಟದ ಹೆಚ್ಚಿನ ಘಟಕ ಪಕ್ಷಗಳು ಸಂಚಾಲಕರಾಗಿ ನಿತೀಶ್ ಮತ್ತು ಅಧ್ಯಕ್ಷರಾಗಿ ಖರ್ಗೆ ನೇಮಕವನ್ನು ಬೆಂಬಲಿಸಿದ್ದವು ಎನ್ನಲಾಗಿದೆ. ಆದರೆ ಸಭೆಗೆ ಗೈರುಹಾಜರಾಗಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ನಿತೀಶ್‌ರನ್ನು ಮುಖ್ಯ ಸಂಚಾಲಕರನ್ನಾಗಿ ನೇಮಕಗೊಳಿಸುವ ನಿರ್ಧಾರವನ್ನು ವಿರೋಧಿಸಿರುವುದು ಮೈತ್ರಿಕೂಟದ ಪಕ್ಷಗಳು ಅವರು ಬೆಂಬಲ ಘೋಷಿಸುವವರೆಗೆ ನಿರ್ಧಾರವನ್ನು ಬಾಕಿಯಿರಿಸಲು ಕಾರಣವಾಗಿದೆ. ತಾನು ಯಾವುದೇ ಹುದ್ದೆಗೆ ಆಕಾಂಕ್ಷಿಯಲ್ಲ ಎಂದು ನಿತೀಶ್ ಕುಮಾರ್ ಹೇಳಿದ್ದರು.

ನಿರ್ಧಾರವು ಜೆಡಿಯು ಪ್ರತಿನಿಧಿಗಳು ಮತ್ತು ಪಕ್ಷಾಧ್ಯಕ್ಷ ಲಲನ್ ಸಿಂಗ್ ಅವರನ್ನೂ ಅಸಮಾಧಾನಗೊಳಿಸಿರುವಂತಿದೆ. ಸಭೆಯ ಬಗ್ಗೆ ಹೆಚ್ಚು ಮುಂಚಿತವಾಗಿ ತಿಳಿಸುವ ಬದಲು ಕೇವಲ 16 ಗಂಟೆಗಳ ಮೊದಲು ಮಾಹಿತಿ ನೀಡಲಾಗಿದೆ ಎಂದು ಹೇಳಿದ್ದ ಮಮತಾ ಬ್ಯಾನರ್ಜಿ ಸಭೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದರು. ಎಸ್‌ಪಿ ವರಿಷ್ಠ ಅಖಿಲೇಶ್ ಯಾದವ್ ಮತ್ತು ಶಿವಸೇನೆ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರೂ ಇಂದಿನ ವರ್ಚುವಲ್ ಸಭೆಗೆ ಗೈರುಹಾಜರಾಗಿದ್ದರು.

ಮುಂಬರುವ ಲೋಕಸಭಾ ಚುನಾವಣೆಗಳಿಗಾಗಿ ಸ್ಥಾನ ಹಂಚಿಕೆ, ಭಾರತ್ ಜೋಡೊ ನ್ಯಾಯ ಯಾತ್ರೆಯಲ್ಲಿ ಭಾಗವಹಿಸುವಿಕೆ ಮತ್ತು ಇತರ ವಿಷಯಗಳನ್ನು ಪುನರ್‌ಪರಿಶೀಲಿಸಲು ಸಭೆಯನ್ನು ಕರೆಯಲಾಗಿತ್ತು. ತಾನು ರವಿವಾರದಿಂದ ಭಾರತ್ ಜೋಡೊ ನ್ಯಾಯ ಯಾತ್ರೆಯನ್ನು ಆರಂಭಿಸುವುದಾಗಿ ತಿಳಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮೈತ್ರಿಕೂಟದ ಇತರ ಎಲ್ಲ ಪಕ್ಷಗಳು ತಮ್ಮ ರಾಜ್ಯಗಳಲ್ಲಿ ಯಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂದು ಬಯಸಿದ್ದಾರೆ.

ಸಂಚಾಲಕ ಹುದ್ದೆಗೆ ನಿತೀಶ್ ನೇಮಕಕ್ಕೆ ಒಪ್ಪಿಗೆ ನೀಡುವಂತೆ ಮಮತಾರ ಮನವೊಲಿಕೆಯ ಹೊಣೆಯನ್ನು ಕೇಜ್ರವಾಲ್ ಮತ್ತು ಪವಾರ್ ಅವರಿಗೆ ಒಪ್ಪಿಸಲಾಗಿದೆ ಎಂದು ಸಭೆಯಲ್ಲಿ ಭಾಗವಹಿಸಿದ ಕನಿಷ್ಠ ಇಬ್ಬರು ನಾಯಕರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ತನ್ಮಧ್ಯೆ ಬಿಹಾರದಲ್ಲಿ ನಿತೀಶ್ ಮಿತ್ರಪಕ್ಷ ಆರ್‌ಜೆಡಿಯ ಲಾಲುಪ್ರಸಾದ್ ಯಾದವ್‌ ಮತ್ತು ತೇಜಸ್ವಿ ಯಾದವ್ ಅವರು ಸಂಚಾಲಕ ಹುದ್ದೆಯನ್ನು ಒಪ್ಪಿಕೊಳ್ಳುವಂತೆ ನಿತೀಶ್ ಮನವೊಲಿಸಲಿದ್ದಾರೆ ಎನ್ನಲಾಗಿದೆ.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...