ಏಕರೂಪ ನಾಗರಿಕ ಸಂಹಿತೆ ವಿರುದ್ಧ ನಿರ್ಣಯ ಅಂಗೀಕರಿಸಿದ ಕೇರಳ ವಿಧಾನಸಭೆ

Source: Vb | By I.G. Bhatkali | Published on 9th August 2023, 1:50 PM | National News |

ತಿರುವನಂತಪುರಂ: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ)ಯನ್ನು ಹೇರುವ ಕೇಂದ್ರ ಸರಕಾರದ ನಿರ್ಧಾರವನ್ನು ವಿರೋಧಿಸುವ ನಿರ್ಣಯವನ್ನು ಕೇರಳ ವಿಧಾನಸಭೆ ಮಂಗಳವಾರ ಅವಿರೋಧವಾಗಿ ಅಂಗೀಕರಿಸಿದೆ.

ಸಂವಿಧಾನದ ಜಾತ್ಯತೀತ ಸ್ವರೂಪಕ್ಕೆ ಧಕ್ಕೆ ತರುವಂತಹ ಏಕರೂಪ ನಾಗರಿಕ ಸಂಹಿತೆಯನ್ನು ಹೇರುವ ಏಕಪಕ್ಷೀಯ ಹಾಗೂ ಆತುರದ ನಡೆಯಿಂದ ಕೇಂದ್ರ ಸರಕಾರವು ಹಿಂದೆ ಸರಿಯಬೇಕೆಂದು ನಿರ್ಣಯವು ಆಗ್ರಹಿಸಿದೆ.

ಕೇರಳವು ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧಿಸುವ ನಿರ್ಣಯವನ್ನು ಅಂಗೀಕರಿಸಿದ ದೇಶದ ಪ್ರಪ್ರಥಮ ವಿಧಾನಸಭೆಯಾಗಿದೆ.

ಸದನದಲ್ಲಿ ನಿರ್ಣಯ ಮಂಡಿಸಿ ಮಾತನಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇಂದ್ರ ಸರಕಾರವು ಸೈದ್ಧಾಂತಿಕವಾದ ಚರ್ಚೆಯನ್ನು ನಡೆಸದೆಯೇ ಅಥವಾ ಒಮ್ಮತವನ್ನು ಬಯಸದೆಯೇ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವಂತಹ ಏಕಪಕ್ಷೀಯ ನಡೆಯನ್ನಿರಿಸಿದೆ ಎಂದವರು ಹೇಳಿದರು. ಇಂತಹ ನಡೆಯು ಜನಸಮೂಹದ ವಿವಿಧ ವರ್ಗಗಳಲ್ಲಿ ಕಳವಳವನ್ನು ಸೃಷ್ಟಿಸಿದೆ ಎಂದು ನಿರ್ಣಯ ತಿಳಿಸಿದೆ.

ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಜನರು ಹೊಂದಿರುವ ಕಳವಳದಲ್ಲಿ ಕೇರಳ ವಿಧಾನಸಭೆಯೂ ಸಹಭಾಗಿಯಾಗಿದೆ ಎಂದು ನಿರ್ಣಯ ಹೇಳಿದೆ. ಏಕರೂಪ ನಾಗರಿಕ ಸಂಹಿತೆಯು ವಿಭಜನಾತ್ಮಕ ನಡೆಯಾಗಿದ್ದು ಜನತೆಯ ಏಕತೆಗೆ ಬೆದರಿಕೆಯಾಗಿದೆ ಹಾಗೂ ದೇಶದ ಐಕ್ಯತೆಗೆ ಹಿನ್ನಡೆಯುಂಟು ಮಾಡುವಂತಹದ್ದಾಗಿದೆ ಎಂದು ನಿರ್ಣಯ ಹೇಳಿದೆ.

ಏಕರೂಪ ನಾಗರಿಕ ಸಂಹಿತೆಯಂತಹ ದೇಶದ ಸಮಸ್ತ ಜನಸಮುದಾಯದ ಮೇಲೆ ಪರಿಣಾಮ ಬೀರುವಂತಹ ವಿಷಯಗಳ ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಳ್ಳುವುದರಿಂದ ಕೇಂದ್ರ ಸರಕಾರವು ಹಿಂದೆ ಸರಿಯಬೇಕೆಂದು ಕೇರಳ ವಿಧಾನಸಭೆಯು ಅವಿರೋಧವಾಗಿ ಆಗ್ರಹಿಸಿತು.

2019ರ ಡಿಸೆಂಬರ್‌ನಲ್ಲಿ ಕೇರಳ ವಿಧಾನಸಭೆಯು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ನಿರ್ಣಯವನ್ನು ಅವಿರೋಧವಾಗಿ ಅಂಗೀಕರಿಸಿತ್ತು.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...