ಕಾರವಾರ : ರಶೀದಿ ಇಲ್ಲದ ಖರೀದಿ ಸಲ್ಲದು : ನ್ಯಾ. ಎನ್ ಸಂತೋಷಕುಮಾರ ಶೆಟ್ಟಿ

Source: S O News | By I.G. Bhatkali | Published on 24th December 2021, 7:25 PM | Coastal News |

ಕಾರವಾರ : ಯಾವುದೇ ವಸ್ತುವನ್ನು ಖರೀದಿಸಿ ಮೋಸ ಹೋದಲ್ಲಿ,   ರಶೀದಿ ಇಲ್ಲದೇ ದಾವೆ ಹೂಡಲು ಸಾಧ್ಯವಾಗದೇ ಇರುವದರಿಂದ ಗ್ರಾಹಕರು ರಶೀದಿಯೊಂದಿಗೆ ವಸ್ತುಗಳನ್ನು ಖರೀದಿಸುವುದು ಅವಶ್ಯಕ ಎಂದು ಹಿರಿಯ ಸಿವೀಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧೀಕಾರದ ಸದಸ್ಯ ಕಾರ್ಯದರ್ಶಿ ಎನ್ ಸಂತೋಷಕುಮಾರ ಶೆಟ್ಟಿ ಹೇಳಿದರು. 

ಅವರು ಶುಕ್ರವಾರ ನಗರದ ಕಾರವಾರ ಬಜಾರದಲ್ಲಿ ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾಧಿಗಳ ಸಂಘ ಹಾಗೂ ಜಿಲ್ಲಾ ಗ್ರಾಹಕರ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಅಂಗಡಿಯವನು ರಶೀದಿಗೆ ಜಿ ಎಸ್ ಟಿ ಕೊಡಬೇಕಾಗುತ್ತದೆ, ರಶೀದಿ ಇಲ್ಲದೇ ತೆಗೆದುಕೊಳ್ಳಿ ಕಡಿಮೆ ಆಗುತ್ತೆ ಎಂದು ಹೇಳಿದಾಗ ಆಮೀಷಕ್ಕೆ ಒಳಗಾಗದೇ ರಶೀದಿ ಪಡೆಯಬೇಕು. ಗ್ರಾಹಕರಿಗೆ ವಸ್ತುವಿನ ಗುಣಮಟ್ಟದ ಮಾನದಂಡಗಳ ಅರಿವು ಇರಬೇಕು. ಗ್ರಾಹಕರ ರಕ್ಷಣಾ ಕಾಯ್ದೆಯು ಎಲ್ಲಾ ಗ್ರಾಹಕರಿಗೆ ಹಕ್ಕುಗಳನ್ನು ನೀಡಿದೆ. ಈ ಹಕ್ಕುಗಳ ಬಗ್ಗೆ ಜಾಗೃತಿ ಮೂಡಬೇಕಾಗಿದೆ. ಖರೀದಿಸುವ ವಸ್ತುವಿನಲ್ಲಿರುವ ಅಂಶಗಳ ವಿವರಗಳು, ಎಂಆರ್‍ಪಿ ಇತ್ಯಾದಿ ಮಾಹಿತಿಗಳನ್ನು ಅರಿಯುವುದು ಗ್ರಾಹಕರ ಹಕ್ಕಾಗಿದೆ. ಗ್ರಾಹಕರಿಗೆ ಆಯ್ಕೆಯ ಅವಕಾಶ ಇರಬೇಕು. ಇವುಗಳ ಬಗ್ಗೆ ಅರಿಯಲು ಗ್ರಾಹಕರ ಹಕ್ಕು ಕಾಯ್ದೆ ಬಗ್ಗೆ ಪ್ರತಿಯೊಬ್ಬರೂ ತಿಳುವಳಿಕೆ ಹೊಂದಿರಬೇಕಾಗಿದೆ ಎಂದು ಹೇಳಿದರು. 

ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅನಿರುದ್ದ ಹಳದಿಪುರ ಅವರು ಮಾತನಾಡಿ ಮಾನವ ಹಕ್ಕುಗಳು ಎಷ್ಟು ಮುಖ್ಯವೋ ಅಷ್ಟೇ ಗ್ರಾಹಕರ ಹಕ್ಕುಗಳು ಮುಖ್ಯವಾಗಿವೆ, ವಸ್ತುಗಳನ್ನು ಖರೀದಿಸುವವನ ಆರ್ಥಿಕ ಸ್ಥಾನ ಮಾನ ಏನೇ ಆಗಿದ್ದು, ಗ್ರಾಹಕನಾಗಿ ಮೋಸ ಹೋಗಿದ್ದಲ್ಲಿ ಗ್ರಾಹಕರ ವೇದಿಕೆಗೆ ದೂರು ನೀಡಬಹುದಾಗಿರುತ್ತದೆ. ಈ ವರ್ಷದ ರಾಷ್ಟ್ರೀಯ ಗ್ರಾಹಕರ ದಿನಾಚಾರಣೆಯ ಘೋಷವಾಕ್ಯ ಕೂಡ ಗ್ರಾಹಕರೇ ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳಿ ಎಂದು ಆಗಿದ್ದು ಈ ಕುರಿತು ಜನರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದರು. 

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಸದಸ್ಯೆ ನಯನಾ ತಾಮಟೆ ಅವರು ಮಾತನಾಡಿ ಗ್ರಾಹಕ ಹಿತರಕ್ಷಣೆ ಕಾಪಾಡಲು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗ್ರಾಹಕ ನ್ಯಾಯಾಲಯಗಳು ಕಾರ್ಯ ನಿರ್ವಹಿಸುತ್ತವೆ. ಗ್ರಾಹಕರ ವೇದಿಕೆಯಲ್ಲಿ ಒಂದು ರೂಪಾಯಿ ಯಿಂದ ಹಿಡಿದು ಒಂದು ಕೋಟಿವರೆಗೂ ದೂರು ನೀಡಬಹುದಾಗಿರುವದರಿಂದ  ಈ ಕುರಿತು ಅರಿವು ಮೂಡಿಸುವುದು ಮುಖ್ಯವಾಗಿದೆ ಎಂದು ಹೇಳಿದರು.
  
 ಕಾರ್ಯಕ್ರಮದಲ್ಲಿ ಸರಕಾರಿ ಕಲಾ ಮತ್ತು ವಿಜ್ಞಾನ ಪದವಿ ಮಾಹಾವಿದ್ಯಾಲಯದ ಸಹ ಪ್ರಾಧ್ಯಾಪಕಿ ವಿದ್ಯಾ ಡಿ ನಾಯಕ ಅವರು ಗ್ರಾಹಕರ ಹಕ್ಕುಗಳು ಮತ್ತು ನೂತನ ಗ್ರಾಹಕರ ಸಂರಕ್ಷಣಾ ಕಾಯ್ದೆ 2019 ಕುರಿತು ಉಪನ್ಯಾಸ ಹಾಗೂ  ನ್ಯಾಯವಾದಿ ಶ್ರೀಪಾದ ಕೃಷ್ಣಮೂರ್ತಿ ಅವರು ಬೀದಿ ಬದಿ ವ್ಯಾಪಾರಸ್ತರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.   ತೂಕ ಮತ್ತು ಅಳತೆ ಕಾನೂನು ಮಾಪನಶಾಸ್ತ್ರ ಇಲಾಖೆ ವತಿಯಿಂದ ತೂಕ ಮತ್ತು ಅಳತೆಗಳ ವಸ್ತು ಪ್ರದರ್ಶನ ಹಾಗೂ ಗ್ರಾಹಕರಲ್ಲಿ ಜಾಗೃತಿ ಮೂಡಿಸಲಾಯಿತು. 
 ಜಿಲ್ಲಾ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಮಂಜುನಾಥ ರೇವಣಕರ್ ಅವರು ಸ್ವಾಗತಿಸಿದರು. ಪ್ಯಾರಾ ಲೀಗಲ್ ವ್ಯಾಲೆಂಟರ್ ಹೇಮಲತಾ ಅವರಿಂದ ನಿರೂಪಣೆ ಹಾಗೂ ತೂಕ ಮತ್ತು ಅಳತೆ ಕಾನೂನು ಮಾಪನಶಾಸ್ತ್ರ ಇಲಾಖೆಯ ರಾಮಚಂದ್ರ ಶರ್ಮಾ ಅವರಿಂದ ವಂದನಾರ್ಪಣೆ ಸಲ್ಲಿಸಲಾಯಿತು. 

ಈ ಸಂದರ್ಭದಲ್ಲಿ ಜಿಲ್ಲಾ ಗ್ರಾಹಕರ ವಾಜ್ಯಗಳ ಪರಿಹಾರ ವೇದಿಕೆಯ ಸದಸ್ಯ ನಜೀರ ಅಹ್ಮದ್ ಯು. ಶೇಖ್ ಸೇರಿದಂತೆ ಇತರರು ಇದ್ದರು. 

Read These Next