ಕಾರವಾರ: ಗ್ರಾಮೀಣ ಜನರ ಬದುಕಿಗೆ ಆಸರೆಯಾದ ನರೇಗಾ : ತಾ.ಪಂ. ಇಓ ಸುನಿಲ್

Source: S O News | By I.G. Bhatkali | Published on 6th February 2024, 1:20 PM | Coastal News |

ಕಾರವಾರ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಮೂಲಕ ತಾಲ್ಲೂಕಿನಲ್ಲಿ ಉತ್ತಮ ಕಾರ್ಯ ಮಾಡಲಾಗುತ್ತಿದ್ದು, ಜಲಸಂರಕ್ಷಣೆ, ಅಂತರ್ಜಲ ಮಟ್ಟ ಹೆಚ್ಚಳ, ಮೂಲಸೌಕರ್ಯ ಸ್ವತ್ತುಗಳ ನಿರ್ಮಾಣ ಸೇರಿದಂತೆ ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಆ ಮೂಲಕ ಅಭಿವೃದ್ಧಿಯೊಂದಿಗೆ ಗ್ರಾಮೀಣ ಜನರ ಬದುಕಿಗೂ ನರೇಗಾ ಆಸರೆಯಾದಂತಾಗಿದೆ ಎಂದು ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಹಾಯಕ ನಿರ್ದೇಶಕ ಸುನಿಲ್ ಎಮ್ ಹೇಳಿದರು. 

ಅವರು ಇಂದು ಹಟ್ಟಿಕೇರಿ ಗ್ರಾ.ಪಂ. ವ್ಯಾಪ್ತಿಯ ಐ.ಎನ್.ಎಸ್. ವಜ್ರಕೋಶದಲ್ಲಿ ಅಮೃತ ಸರೋವರ ಅಭಿಯಾನದಡಿ ನಿರ್ಮಿಸಲಾಗುತ್ತಿರುವ ಕೆರೆಯ ಕಾಮಗಾರಿ ಸ್ಥಳದಲ್ಲಿ ಆಯೋಜಿಸಲಾಗಿದ್ದ ನರೇಗಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಯೊಂದಿಗೆ ದೀರ್ಘ ಕಾಲ ಬಾಳಿಕೆ ಬರುವ ಸ್ವತ್ತು ನಿರ್ಮಾಣ ಮಾಡುವುದು ನರೇಗಾ ಉದ್ದೇಶವಾಗಿದ್ದು, ಜನರು ಸ್ವಯಂ ಪ್ರೇರಿತರಾಗಿ ಯೋಜನೆಯ ಲಾಭ ಪಡೆದು ತಮ್ಮ ತಮ್ಮ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು. 

ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ವಜ್ರಕೋಶದ ಸಿಇಓ ಕ್ಯಾಪ್ಟನ್ ರವಿ ಕಿಶನ್ ಜೊತೆಗೂಡಿ ಸದರಿ ಅಮೃತ ಸರೋವರದ ರೂಪುರೇಷೆಯ ಬಗ್ಗೆ ಚರ್ಚಿಸಿ, ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು. 

ಇದೇ ವೇಳೆ ಕೂಲಿಕಾರರ ಸಮಸ್ಯೆಗಳನ್ನು ಆಲಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಗ್ರಾ.ಪಂ. ವ್ಯಾಪ್ತಿಯಲ್ಲಿ 100 ಮಾನವ ದಿನಗಳನ್ನು ಪೂರೈಸಿದ ಅಕುಶಲ ಕೆಲಸಕಾರರಿಗೆ ಉಡುಗೊರೆ ನೀಡಿ, ಪ್ರೋತ್ಸಾಹಿಸಿದರು. ತದನಂತರ ಕೂಲಿ ಕಾರ್ಮಿಕರಿಗೆ ವಿವಿಧ ಮನರಂಜನಾ ಚಟುವಟಿಕೆಗಳನ್ನು ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸಿ, ಅಭಿನಂದಿಸಲಾಯಿತು. 

ಈ ಸಂದರ್ಭದಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಾದ ಲೀಲಾ ಬಿ ಆಗೇರ್, ಕಾರ್ಯದರ್ಶಿ ಮೀನಾಕ್ಷಿ ಗೌಡ, ಗ್ರಾ.ಪಂ. ಅಧ್ಯಕ್ಷೆ ನೀಶಾ ಎನ್ ನಾಯ್ಕ್, ಉಪಾಧ್ಯಕ್ಷ ಮಾನಸಾ ಮಹೇಶ ನಾಯ್ಕ್, ಸದಸ್ಯರುಗಳಾದ ವಿನೋದ ಆರ್ ನಾಯ್ಕ್, ಶಾಂತೀಶ್ ಎಸ್ ನಾಯ್ಕ್, ರಾಜು ವಿ ಗೌಡ, ವಸಂತಿ ದೇ ಗೌಡ, ಅನುರಾಧಾ ಎಸ್ ನಾಯ್ಕ, ಇಂದಿರಾ ಜಿ ಲಾಂಜೇಕರ್, ಕಾಯಕ ಬಂಧು ನವೀನಾ ಸುಕ್ರು ಗೌಡ, ತಾಲ್ಲೂಕಾ ತಾಂತ್ರಿಕ ಸಂಯೋಜಕರು, ಐಇಸಿ ಸಂಯೋಜಕರು, ತಾಂತ್ರಿಕ ಸಹಾಯಕರು, ಅಭಿಯಂತರರು ಸೇರಿದಂತೆ ತಾ.ಪಂ. ಸಿಬ್ಬಂದಿಗಳು, ವಜ್ರಕೋಶ ಸಿಬ್ಬಂದಿಗಳು, ಸ್ಥಳೀಯ ಪ್ರಮುಖರು ಹಾಗೂ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.

Read These Next