ಕಾರವಾರ: ಭ್ರಷ್ಟಾಚಾರ ನಿರ್ಮೂಲನೆಯಾದರೆ ರಾಷ್ಟ್ರದ ಅಭಿವೃದ್ಧಿ; ನ್ಯಾ. ಮಾಯಣ್ಣ ಬಿ.ಎಲ್

Source: S O News | By I.G. Bhatkali | Published on 5th November 2023, 3:02 PM | Coastal News |

ಕಾರವಾರ: ಭ್ರಷ್ಟಾಚಾರ ದೇಶದ ಜ್ವಲಂತ ಸಮಸ್ಯೆಗಳಲ್ಲಿ ಒಂದಾಗಿದೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಷ್ಟ್ರ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಮೂಲಕ ರಾಷ್ಟ್ರದ ಪ್ರಗತಿಗಾಗಿ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಾಯಾಣ್ಣ ಬಿ.ಎಲ್. ಹೇಳಿದರು.

ಅವರು ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮತ್ತು ಕರ್ನಾಟಕ ಲೋಕಾಯುಕ್ತ ಇವರ ಸಂಯುಕ್ತಾಶ್ರಯದಲ್ಲಿ ನಡೆದ "ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹ -2023" ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಮ್ಮ ಕೆಲಸಗಳಿಗೆ ಪ್ರತಿಫಲ ಬಯಸದೇ ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡು, ಸಾರ್ವಜನಿಕರ ಕೆಲಸಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿ, ದೇಶದ ಪ್ರಗತಿಗೆ ಪಣತೊಡಬೇಕು ಎಂದರು.

ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿ ಸಿಬ್ಬಂದಿಗಳು ಅರ್ಹರಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳನ್ನು ಒದಗಿಸಿ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ ಉತ್ತಮ ಸಮಾಜದ ಜೊತೆಗೆ ಭ್ರಷ್ಟಾಚಾರ ಮುಕ್ತ ರಾಷ್ಟ್ರ ಮಾಡಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ಎಸ್ ದರ್ಗದ್ ಮಾತನಾಡಿ ಭ್ರಷ್ಟಾಚಾರಕ್ಕೆ ಬೇಡ ಎನ್ನಿ; ದೇಶಕ್ಕಾಗಿ ಬದ್ದರಾಗಿ ಎಂಬ ಘೋಷವಾಕ್ಯದೊಂದಿಗೆ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಪ್ರತಿಯೊಬ್ಬರಿಗೂ ಮನದಟ್ಟು ಮಾಡಬೇಕು ಎಂಬ ಆಶಯದೊಂದಿಗೆ ಪ್ರಮಾಣ ಮಾಡಬೇಕು ಎಂಬ ಉದ್ದೇಶದಿಂದ ಕರ್ನಾಟಕ ಲೋಕಾಯುಕ್ತ ಸಂಸ್ಥೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಮಾಜದಲ್ಲಿನ ಜನತೆ ಎಚ್ಚೆತ್ತುಕೊಳ್ಳದಿದ್ದರೆ ಸಮಾಜದಲ್ಲಿನ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಎಂದರು.

ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಮಾತನಾಡಿ, ನೌಕರರು ಪ್ರಾಮಾಣಿಕವಾಗಿ ಸಾರ್ವಜನಿಕರ ಸೇವೆಗಳನ್ನು ಮಾಡಿಕೊಟ್ಟಲ್ಲಿ ಜನರು ಆಶೀರ್ವಾದ ಮಾಡುತ್ತಾರೆ. ನೌಕರರಾದ ನಾವುಗಳು ಸಾರ್ವಜನಿಕರ ಸೇವೆ ಮಾಡಲು ಸರ್ಕಾರಿ ಕೆಲಸಕ್ಕೆ ಸೇರಿದ್ದು ಎಂಬುದನ್ನು ಅರಿತುಕೊಂಡು ಕರ್ತವ್ಯ ನಿರ್ವಹಿಸಿದಾಗ ಜನಸಾಮಾನ್ಯರ ಬಹುತೇಕ ಕೆಲಸ ಕಾರ್ಯಗಳು ಸುಗಮವಾಗಿ ಸಾಗುತ್ತದೆ ಎಂದರು.

ಎಲ್ಲಾ ಸರ್ಕಾರಿ ಅಧಿಕಾರಿಗಳು ನಾವು ಜನ ಸೇವಕರು ಎಂಬುದನ್ನು ಮನದಲ್ಲಿಟ್ಟುಕೊಂಡು ಜವಾಬ್ದಾರಿ ಅರಿತು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಕಡತಗಳ ವಿಲೇವಾರಿ ವಿಳಂಬ ಮಾಡುವುದು, ಸಾರ್ವಜನಿಕ ಕೆಲಸಕ್ಕೆ ಅಲೆದಾಡಿಸುವುದು, ಹಣಕ್ಕೆ ಬೇಡಿಕೆ ಇಡುವುದನ್ನು ಮಾಡದೆ ಕಾನೂನಿನ ಚೌಕಟ್ಟಿನಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.

ಜಿ.ಪಂ. ಸಿಇಒ ಈಶ್ವರಕುಮಾರ ಕಾಂದೂ ಮಾತನಾಡಿ, ಭ್ರಷ್ಟಾಚಾರದ ವಿರುದ್ಧ ಸಮಾಜದಲ್ಲಿ ಅರಿವು ಮೂಡಿಸುವ ಕಾರ್ಯ ನಮ್ಮಿಂದಲೇ ಪ್ರಾರಂಭವಾಗಬೇಕು. ಅಧಿಕಾರಿ ಸಿಬ್ಬಂದಿಗಳು ತಮ್ಮ ಕರ್ತವ್ಯಗಳನ್ನು ಅರಿತು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದಾಗ ಸಮಾಜದಲ್ಲಿನ ಭ್ರಷ್ಟಾಚಾರ ನಿಯಂತ್ರಿಸಲು ಸಾಧ್ಯ ಎಂದರು.

 ಲೋಕಾಯುಕ್ತ ಅಧೀಕ್ಷಕ ಕುಮಾರಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಭ್ರಷ್ಟಾಚಾರ ಎಂಬುದು ಸರ್ಕಾರಿ ನೌಕರರಿಗೆ ಅನ್ವಯಿಸಲಿದೆ. ಅಧಿಕಾರಿ ಅಥವಾ ಸಿಬ್ಬಂದಿ , ಸಂವಿಧಾನಿಕ, ಕಾನೂನುಬದ್ಧ ಹಾಗೂ ನೈತಿಕವಾಗಿ ಕೆಲಸ ಮಾಡದಿದ್ದಲ್ಲಿ ಅದು ಭ್ರಷ್ಟಾಚಾರವಾಗಲಿದೆ. ಅದರ ಹೊರತಾಗಿ ಹಣ ಪಡೆಯುವುದು, ಹಣಕ್ಕೆ ಬೇಡಿಕೆ ಇಡುವುದು, ಕೆಲಸದ ವಿಳಂಬ, ಸ್ವಜನಪಕ್ಷಪಾತ, ನಿರಾಸಕ್ತಿ ಕೂಡ ಲೋಕಾಯುಕ್ತ ಕಾಯ್ದೆ ವ್ಯಾಪ್ತಿಗೆ ಒಳಪಡಲಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಕುರಿತು ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಪ್ರಕಾಶ ರಾಜಪೂತ, ಉಪ ವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಇತರರು ಉಪಸ್ಥಿತರಿದ್ದರು.
 

Read These Next