ರಾಜ್ಯ ಬಜೆಟ್ 2023-24; ಚುನಾವಣೆಯತ್ತ ಬಜೆಟ್ ಚಿತ್ತ; ರೈತರು, ಬಡವರು, ಮಹಿಳೆಯರಿಗೆ ಭರಪೂರ ಯೋಜನೆಗಳ ಘೋಷಣೆ

Source: Vb | By I.G. Bhatkali | Published on 18th February 2023, 3:18 PM | State News |

ಬೆಂಗಳೂರು: ರೈತರಿಗೆ ಬಡ್ಡಿರಹಿತ ಸಾಲ 5ಲಕ್ಷ ರೂ.ಗಳಿಗೆ ಹೆಚ್ಚಳ, ಮಹಿಳೆಯರಿಗೆ ಮಾಸಿಕ 500 ರೂ. ನೆರವು ನೀಡುವ 'ಗೃಹಿಣಿ ಶಕ್ತಿ', ವಿದ್ಯಾರ್ಥಿನಿಯರು-ದುಡಿಯುವ ಮಹಿಳೆಯರಿಗೆ ಉಚಿತ ಬಸ್‌ ಪಾಸ್, ಅಸಂಘಟಿತ ವಲಯಗಳ ಕಾರ್ಮಿಕರಿಗೆ “ಸಿಎಂ ವಿಮೆ', ಸರಕಾರಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿಯ 'ಸಿಎಂ ವಿದ್ಯಾಶಕ್ತಿ', ಟ್ಯಾಕ್ಸಿ, ರಿಕ್ಷಾ ಚಾಲಕರ ಮಕ್ಕಳಿಗೂ 'ವಿದ್ಯಾಸಿರಿ' ವಿಸ್ತರಣೆ ಸೇರಿದಂತೆ ಭರಪೂರ ಯೋಜನೆಗಳ ಘೋಷಣೆಯೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023-24ನೇ ಸಾಲಿನ ಆಯವ್ಯಯ ಮಂಡನೆ ಮಾಡಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ ಬಸವರಾಜ ಬೊಮ್ಮಾಯಿ, ಒಟ್ಟಾರೆ 3,09,182 ಕೋಟಿ ರೂ.ಗಳಷ್ಟು ದಾಖಲೆ ಮೊತ್ತದ ಆಯವ್ಯಯ ಮಂಡಿಸಿದರು. ಮುಂಬರಲಿರುವ ಸಾರ್ವತ್ರಿಕ ಚುನಾವಣೆಯ ಮೇಲೆ ದೃಷ್ಟಿನೆಟ್ಟು ರೈತರು, ಬಡವರು, ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವರ್ಗದ ಜನರಿಗೆ ಭರಪೂರ ಕೊಡುಗೆಗಳನ್ನು ಅವರು ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ರೈತರಿಗೆ 'ಭೂ ಸಿರಿ' ಹೊಸ ಯೋಜನೆ, ಕೃಷಿಕರಿಗೆ 10 ಸಾವಿರ ರೂ. ಹೆಚ್ಚುವರಿ ಸಹಾಯಧನ. 'ರೈತ ಸಿರಿ' ಯೋಜನೆಯಡಿ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತೀ ಹೆಕ್ಟೇರ್‌ಗೆ 10ಸಾವಿರ ರೂ. ಪ್ರೋತ್ಸಾಹ ಧನ, 'ವಿದ್ಯಾವಾಹಿನಿ' ಯೋಜನೆಯಡಿ ವಿದ್ಯಾರ್ಥಿನಿಯರಿಗೆ 350 ಕೋಟಿ ರೂ.ವೆಚ್ಚದಲ್ಲಿ 'ಉಚಿತ ಬಸ್‌ ಪಾಸ್' ಸೌಲಭ್ಯ ನೀಡಲಾಗುವುದು ಎಂದು ಮುಖ್ಯಮಂತ್ರಿ ಘೋಷಣೆ ಮಾಡಿದರು.

ಮಹಿಳೆಯರಿಗೆ 'ಗೃಹಿಣಿ ಶಕ್ತಿ ಯೋಜನೆಯಡಿ ಮಾಸಿಕ 500 ರೂ. ನೆರವು ನೀಡಲು ಒಟ್ಟು 46,278 ಕೋಟಿ ರೂ.ಅನುದಾನವನ್ನು ಒದಗಿಸ ಲಾಗಿದ್ದು, 'ನಮ್ಮ ನೆಲೆ' ಯೋಜನೆಯಡಿ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ನಿವೇಶನ, 'ಸಹ್ಯಾದ್ರಿ ಸಿರಿ' ಯೋಜನೆ ಅಡಿ ಕರಾವಳಿ, ಮಲೆನಾಡು ಹಾಗೂ ಅರೆ ಮಲೆನಾಡಿನಲ್ಲಿ ನೀರು ಸಂರಕ್ಷಣೆಗೆ ಹಾಗೂ ತೋಟಗಾರಿಕೆ ಉತ್ಪಾ ದಕತೆ ಹೆಚ್ಚಿಸಲು ಒಂದು ತೋಟ ಒಂದು ಬೆಳೆ' ಯೋಜನೆಗೆ 10 ಕೋಟಿ ರೂ.ಮೀಸಲಿಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಬಜೆಟ್ ಹೈಲೈಟ್ಸ್:

• 'ಮನೆ ಮನೆಗೆ ಆರೋಗ್ಯ' ಕಾರ್ಯಕ್ರಮ ದಡಿ ದೀರ್ಘಕಾಲಿಕ ಕಾಯಿಲೆಗಳಿಂದ ಬಳಲುತ್ತಿರುವವರ ಮನೆ ಬಾಗಿಲಿಗೆ ಔಷದ
• ಸಾರಿಗೆ ನಿಗಮಗಳ ಮೂಲಕ 100 ಕೋಟಿ ರೂ. ವೆಚ್ಚದಲ್ಲಿ 'ಮಕ್ಕಳ ಬಸ್' ಯೋಜನೆ  
• ನವಜಾತ ಶಿಶುಗಳಿಂದ 6 ವರ್ಷದವರೆಗಿನ ಮಕ್ಕಳ ಆರೋಗ್ಯ ತಪಾಸಣೆಗೆ 'ವಾತ್ಸಲ್ಯ' ಯೋಜನೆ

• ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಪ್ರತೀ ತಿಂಗಳು ತಲಾ 500 ರೂ.
• 5 ಸಾವಿರ ಕೋಟಿ ರೂ. ವೆಚ್ಚದಲ್ಲಿ 5 ಲಕ್ಷ ಮನೆಗಳ ನಿರ್ಮಾಣ
• ವಿದ್ಯಾವಾಹಿನಿ ಯೋಜನೆಯಡಿ ಶಾಲಾ- ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಉಚಿತ ಬಸ್‌ ಪಾಸ್‌ ಸೌಲಭ್ಯ
• ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರು, ಆಶಾಕಾರ್ಯ ಕರ್ತೆಯರು, ಬಿಸಿಯೂಟ ತಯಾರಕರು ಹಾಗೂ ಸಹಾಯಕರು ಮತ್ತು ಗ್ರಂಥಪಾಲಕರ ಮಾಸಿಕ ಗೌರವಧನ 1 ಸಾವಿರ ರೂ.ಗೆ ಏರಿಕೆ.
• ಮೀನುಗಾರರಿಗೆ ಸುರತೆಗೆ ಬೋಟ್ ಗಳಲ್ಲಿ ಜಿಪಿಎಸ್ ವ್ಯವಸ್ಥೆ. 
• ಕಿಸಾನ್ ಹೊಂದಿರುವ ರೈತರಿಗಾಗಿ 'ಭೂಸಿರಿ' ಯೋಜನೆ.

• 'ನಮ್ಮ ನೆಲೆ' ಯೋಜನೆಯಡಿ ಕರ್ನಾಟಕ ಗೃಹ ಮಂಡಳಿಯ ನಿವೇಶನಗಳ ಪೈಕಿ ಮೂರನೇ ಒಂದರಷ್ಟು ಆರ್ಥಿಕ ದುರ್ಬಲರಿಗೆ ಹಂಚಿಕೆ
• ಕೊಳಗೇರಿ ಪ್ರದೇಶಗಳ 3.36 ಲಕ್ಷ ಕುಟುಂಬಗಳಿಗೆ ಭೂಮಾಲಕತ್ವದ ಹಕ್ಕುಪತ್ರ

ಯುವಜನರಿಗೆ ಬದುಕುವ ದಾರಿ: ಆಳ ಸಮುದ್ರ ಮೀನುಗಾರಿಕೆ ಉತ್ತೇಜನಕ್ಕೆ ಮತ್ಸ ಸಿರಿ' ಯೋಜನೆ ಜಾರಿ, 'ಮುಖ್ಯಮಂತ್ರಿ ವಿದ್ಯಾ ಶಕ್ತಿ ಯೋಜನೆಯಡಿ ಪದವಿವರೆಗೂ ರಾಜ್ಯದ ಎಲ್ಲ ಸರಕಾರಿ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, 'ಸಹಸ್ರ ಸರೋವರ' ಯೋಜನೆಯಡಿ ರಾಜ್ಯದ 1ಸಾವಿರ ಸಣ್ಣ ಸರೋವರಗಳ ಅಭಿವೃದ್ಧಿ, 'ಬದುಕುವ ದಾರಿ' ಯೋಜನೆಯಡಿ ಯುವಜನರಿಗೆ 3ತಿಂಗಳು ಐಟಿಐ ತರಬೇತಿ, ಯುವಕರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು 'ಯುವಸ್ನೇಹಿ ಯೋಜನೆಯಡಿ 2 ಸಾವಿರ ರೂ.ನೀಡಲಾಗುವುದು ಎಂದು ಅವರು ಘೋಷಣೆ ಮಾಡಿದರು.

ಸರಕಾರಿ ಪದವಿಪೂರ್ವ ಮತ್ತು ಸರಕಾರಿ ಪದವಿ ಕಾಲೇಜು ವಿದ್ಯಾರ್ಥಿ ಗಳಿಗೆ ಪೂರ್ಣ ಶುಲ್ಕ ವಿನಾಯಿತಿ. 'ಹಳ್ಳಿ ಮುತ್ತು' ಯೋಜನೆಯಡಿ ಗ್ರಾಮೀಣ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿ, ಸಿಇಟಿ ಮೂಲಕ ಸರಕಾರಿ ಕೋಟಾದಲ್ಲಿ ಆಯ್ಕೆಯಾಗುವ 500 ವಿದ್ಯಾರ್ಥಿಗಳ ಸಂಪೂರ್ಣ ಶುಲ್ಕ ಭರಿಸಲು ಕ್ರಮ ವಹಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ಘೋಷಿಸಿದರು.

ಮನೆ ಮನೆಗೆ ಆರೋಗ್ಯ ಕಾರ್ಯಕ್ರಮದಡಿ ಗ್ರಾಮೀಣ ಜನತೆಯ ಸಮಗ್ರ ಆರೋಗ್ಯ ತಪಾಸಣೆ, ಆರೋಗ್ಯ ಸೇವೆಗಳ ಡಿಜಿಟಲೀಕರಣ. ರೋಗಿಗಳ ಆರೋಗ್ಯ ದಾಖಲೆಗಳ ಸುರಕ್ಷಿತ ಕ್ರೋಡೀಕರಣಕ್ಕೆ ಕ್ರಮ, ರಾಯಚೂರಿನಲ್ಲಿ ಏಮ್ಸ್‌ ಮಾದರಿಯ ಆಸ್ಪತ್ರೆ ಹಾಗೂ ಕುಮಟಾದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪನೆ ಮಾಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ನಿವೃತ್ತಿ ಉಪಧನಕ್ಕಾಗಿ 40 ಕೋಟಿ ರೂ. ಅನುದಾನ, ಕಾರ್ಯಕರ್ತೆಯರು, ಸಹಾಯಕಿಯರು, ಬಿಸಿಯೂಟ ತಯಾರಕಿಯರು, ಆಶಾ ಕಾರ್ಯಕರ್ತೆಯರ ಗೌರವ ಧನ 1 ಸಾವಿರ ರೂ.ಹೆಚ್ಚಳ, ನಮ್ಮ ಜಿಲ್ಲೆ ನಮ್ಮ ಸಂಸ್ಕೃತಿ' ಕಾರ್ಯಕ್ರಮದಡಿ ಪ್ರತೀ ಜಿಲ್ಲೆಯಲ್ಲಿ ಜಾನಪದ ಹಬ್ಬ ಆಯೋಜನೆ ಮಾಡಲಾಗುವುದು, 100 ಕೋಟಿ ರೂ.ವೆಚ್ಚದಲ್ಲಿ ಶಾಲೆಗೆ ತೆರಳಲು 'ಮಕ್ಕಳ ಬಸ್' ಯೋಜನೆ ರೂಪಿಸಲಾಗುವುದು ಎಂದು ಅವರು ಘೋಷಣೆ ಮಾಡಿದರು.

'ಜಲನಿಧಿ' ಯೋಜನೆಯಡಿ ರೈತರ ಜಮೀನುಗಳಲ್ಲಿ ಜಲ ಹೊಂಡ, ಗೋ ಶಾಲೆಗಳ ನಿರ್ಮಾಣಕ್ಕೆ 'ಪುಣ್ಯ ಕೋಟಿ ದತ್ತು ಯೋಜನೆ' ಹಣಕಾಸು ನೆರವು, 'ಸ್ವಚೇತನ ಯೋಜನೆಯಡಿ 5 ಸಾವಿರ ಅಂಗವಿಕಲರಿಗೆ ದ್ವಿಚಕ್ರ ವಾಹನ ವಿತರಣೆ ಸೇರಿದಂತೆ ಎಸ್‌ಸಿ-ಎಸ್‌ಟಿ, ಹಿಂ.ವರ್ಗ, ಅಲ್ಪ ಸಂಖ್ಯಾತರು, ರೈತರು ಹಾಗೂ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ ಎಂದು ಅವರು ತಿಳಿಸಿದರು.

ಉಚಿತ ಡಯಾಲಿಸಿಸ್ ಸೇವೆಯನ್ನು ಪ್ರಸಕ್ತ ಸಾಲಿನಲ್ಲಿ 1ಲಕ್ಷ ಡಯಾಲಿಸಿಸ್‌ ಸೈಕಲ್‌ಗೆ ಏರಿಸಲಾಗಿದೆ. ಸ್ವಸಹಾಯ ಗುಂಪುಗಳಿಗೆ ಬಂಡವಾಳ ನಿಧಿ ನೀಡಲು ಹಾಗೂ ಸಹಕಾರ ವಲಯದಲ್ಲಿ ಶೂನ್ಯ ಬಡ್ಡಿ ದರದಲ್ಲಿ ಸಾಲ ಒದಗಿಸಲು ಕ್ರಮ, ದುಡಿಯುವ ಮಹಿಳೆಯರಿಗಾಗಿ ನಗರ ಪ್ರದೇಶಗಳಲ್ಲಿ 4 ಸಾವಿರ ಶಿಶುಪಾಲನಾ ಕೇಂದ್ರ ಮತ್ತು ಗ್ರಾಮೀಣ ಭಾಗದಲ್ಲಿ 500 ಶಿಶು ವಿಹಾರ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.

ವಿಶ್ವದ ಪ್ರತಿಷ್ಠಿತ ವಿವಿಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ವ್ಯಾಸಂಗ ವಿದೇಶದಲ್ಲಿ ಮಾಡಲು ಇಚ್ಛಿಸುವ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ ತಲಾ 20ಲಕ್ಷ ರೂ.ನಂತೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಪಡೆಯಲು ಬಡ್ಡಿ ಸಹಾಯಧನ, ಅಲ್ಪ ಸಂಖ್ಯಾತ ಪದವೀಧರ ಮಹಿಳೆಯರ ಉದ್ಯೋಗಾವಕಾಶಕ್ಕೆ ಹಾಗೂ ಸ್ವಂತ ಉದ್ದಿಮೆ ಸ್ಥಾಪಿಸಲು ಐಐಎಂಬಿ ಬೆಂಗಳೂರು ಇಲ್ಲಿ 300 ಅಭ್ಯರ್ಥಿಗಳಿಗೆ 3 ಕೋಟಿ ರೂ.ವೆಚ್ಚದಲ್ಲಿ ಉದ್ಯಮ ಶೀಲತೆ ತರಬೇತಿ ನೀಡಲಾಗುವುದು.

ಕೃಷಿ ಮತ್ತು ಪೂರಕ ಚಟುವಟಿಕೆ-39,031 ಕೋಟಿ ರೂ., ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ- 80,318 ಕೋಟಿ ರೂ., ಆರ್ಥಿಕ ಅಭಿವೃದ್ಧಿ ಉತ್ತೇಜನ-61,488 ಕೋಟಿ ರೂ., ಬೆಂಗಳೂರು ಸಮಗ್ರ ಅಭಿವೃದ್ಧಿ-9,698 ಕೋಟಿ ರೂ., ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ-3,458 ರೂ. ಹಾಗೂ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆ-68,585 ಕೋಟಿ ರೂ.ಒದಗಿಸಿ ಒಟ್ಟು ಆರು ವಿಭಾಗವಾರು ಬಜೆಟ್ ಮಂಡನೆ ಮಾಡಿದರು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಬಿಜೆಪಿ ಮುಖಂಡನಿಗೆ ಪೆನ್‌ಡ್ರೈವ್ ನೀಡಿದ್ದೆ; ಪ್ರಜ್ವಲ್ ಕಾರು ಚಾಲಕನಿಂದ ಹೇಳಿಕೆ

ಪ್ರಜ್ವ ರೇವಣ್ಣರದ್ದು ಎನ್ನಲಾದ ಅಶ್ಲೀಲ ವೀಡಿಯೊ ಪೆನ್ ಡ್ರೈವ್ ಬಿಜೆಪಿ ಮುಖಂಡರೂ ಆಗಿರುವ ವಕೀಲ ದೇವರಾಜೇಗೌಡ ಬಿಟ್ಟು ಬೇರೆ ಯಾರಿಗೂ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಅವಧಿ ಉಲ್ಲೇಖಿಸದೇ ಪ್ರಜ್ವಲ್ ರೇವಣ್ಣ ಜೆಡಿಎಸ್‌ನಿಂದ ಅಮಾನತು

ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಪ್ರಕರಣ ಸಂಬಂಧ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ರೇವಣ್ಣ, ಪ್ರಜ್ವಲ್ ಉಚ್ಚಾಟನೆಗೆ ಜೆಡಿಎಸ್ ಶಾಸಕರ ಪಟ್ಟು

ರಾಜ್ಯದ ಜನತೆಯ ಮುಂದೆ ತಲೆ ತಗ್ಗಿಸುವಂತಹ ಕೆಲಸ ಮಾಡಿದವರನ್ನು ರಾಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಘನತೆಯನ್ನು ಉಳಿಸಬೇಕಿದೆ ಎಂದು ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ: ಕುಮಾರಸ್ವಾಮಿ

ಜೆಡಿಎಸ್ ಸಂಸದ ಪ್ರಜಿ ಕುಮಾರಸ್ವಾಮಿ ಡ್ರೈವ್ ಪ್ರಕರಣದಲ್ಲಿ ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ' ಎಂದು ಮಾಧ್ಯಮಗಳ ಮುಂದೆ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ತ್ವರಿತಗತಿಯಲ್ಲಿ ತನಿಖೆ ನಡೆಸಿ, ವರದಿ ಸಲ್ಲಿಸಲು ಸೂಚನೆ: ಪರಮೇಶ್ವ‌ರ್

ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಿ, ವರದಿ ಸಲ್ಲಿಸುವಂತೆ ...