ಕಾರವಾರ: ಮಕ್ಕಳಲ್ಲಿ ಸ್ವಚ್ಚತೆ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಅತ್ಯಗತ್ಯ : ಸಂಗೀತಾ ಭಟ್

Source: S O News Service | By I.G. Bhatkali | Published on 4th June 2019, 8:35 PM | Coastal News |

ಕಾರವಾರ:  ಮಕ್ಕಳು ಆಟೋಟದಲ್ಲಿ ಸ್ವಚ್ಚತೆ ಬಗ್ಗೆ ಗಮನ ನೀಡದೆ ಇರುವದರಿಂದ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಾರೆ.  ಆದ್ದರಿಂದ ಮಕ್ಕಳಲ್ಲಿ ಸ್ವಚ್ಚತೆ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಸಂಗೀತಾ ಭಟ್ ಹೇಳಿದರು.

ಅವರು ಸೋಮವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ  ಹಮ್ಮಿಕೊಳ್ಳಲಾದ ಅತಿಸಾರ ಭೇದಿಯ ತೀವ್ರತರ ನಿಯಂತ್ರಣ ಪಾಕ್ಷಿಕ-2019 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಇಂದಿನ ಮಕ್ಕಳು  ನಾಳೆಯ ಪ್ರಜೆಗಳು,  ನಾಡಿನ ಭವಿಷ್ಯವಾಗಿರುವದರಿಂದ ಮಕ್ಕಳಲ್ಲಿ ಸ್ವಚ್ಚತೆಯ ಅರಿವು ಮೂಡಿಸಬೇಕು, ಶೌಚಾಲಯ ಬಳಕೆ ಮತ್ತು ಶೌಚದ ಬಳಿಕ ಸ್ವಚ್ಚವಾಗಿ ಕೈ ತೊಳೆಯುವದರ ಬಗ್ಗೆ ಹೇಳಿಕೊಡಬೇಕು. ಇದರಿಂದ ಅತಿಸಾರ ಭೇದಿ ಮತ್ತು ಇತರೆ ಕಾಯಿಲೆಗಳು ಮಕ್ಕಳತ್ತ ಸುಳಿಯುವದಿಲ್ಲ. ವಿವಿಧ ಇಲಾಖೆಗಳು ಪರಸ್ಪರ ಸಹಕಾರ ನೀಡಿ, ಅತಿಸಾರ ಭೇದಿಯ ತೀವ್ರತರ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದರು.  

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಿ.ಎನ್ ಅಶೋಕ ಕುಮಾರ ಅವರು ಮಾತನಾಡಿ  ಜಿಲ್ಲೆಯಲ್ಲಿ ಒಟ್ಟೂ 105168,  5 ವರ್ಷದ ಒಳಗಿನ ಮಕ್ಕಳನ್ನು ಗುರುತಿಸಲಾಗಿದ್ದು,  1381 ಆಶಾ ಕಾರ್ಯಕರ್ತೆಯರನ್ನು 5 ವರ್ಷದ ಒಳಗಿನ ಮಕ್ಕಳಿರುವ ಮನೆಗಳಿಗೆ ಓ.ಆರ್.ಎಸ್ ಪೊಟ್ಟಣ ವಿತರಿಸಲು, ಪಾಲಕರಿಗೆ/ಪೋಷಕರಿಗೆ ಮಾಹಿತಿ ನೀಡಲು ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟೂ 22 ಶಾಲಾ ಆರೋಗ್ಯ ತಪಾಸಣಾ ತಂಡಗಳಿದ್ದು, ಸ್ಲಮ್ ಪ್ರದೇಶದಲ್ಲಿರುವ ಶಾಲೆಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷತೆ ಮೂಲಕ ಕೈ-ತೊಳೆಯುವ ವಿಧಾನದ ಕುರಿತು ಮಾಹಿತಿ ನೀಡಲು ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಆಸ್ಪತ್ರೆಗಳಲ್ಲಿ ಅತಿಸಾರ ಭೇದಿ ನಿರ್ವಹಣೆಗೆ ಓ.ಆರ್.ಎಸ್ ಹಾಗೂ ಝಿಂಕ್ ಕಾರ್ನರ್ಸ್ ಸ್ಥಾಪಿಸಲಾಗಿದೆ. ಪಂಚಾಯತ್ ರಾಜ್, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ಆಂದೋಲನದ ಯಶಸ್ಸಿಗೆ ಕೈಜೋಡಿಸಿವೆ ಎಂದರು. 
 

ಕಾರ್ಯಕ್ರಮದಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ಓ.ಆರ್.ಎಸ್ ಪೊಟ್ಟಣ ವಿತರಿಸಲಾಯಿತು.  ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ಶರದ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಾರ್ಯಕ್ರಮ ಸಂಯೋಜಕ ಬಸವರಾಜ ಅವರು ಸ್ವಾಗತಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅನುಪಮಾ ಅಂಕೋಲೆಕರ ವಂದನಾರ್ಪಣೆ ಸಲ್ಲಿಸಿದರು.
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...