ಸುದ್ದಿವಾಹಿನಿಗಳ ಸ್ವಯಂನಿಯಂತ್ರಣ ಕ್ರಮ ಬಲಿಷ್ಠವಾಗಿಲ್ಲ: ಸುಪ್ರೀಂ; ಮಾರ್ಗದರ್ಶಿ ಸೂತ್ರಗಳ ಉಲ್ಲಂಘನೆಗೆ ಕಠಿಣ ದಂಡ ವಿಧಿಸಲು ಸೂಚನೆ

Source: Vb | By I.G. Bhatkali | Published on 16th August 2023, 12:45 AM | National News |

ಹೊಸದಿಲ್ಲಿ: ಸುದ್ದಿಪ್ರಸಾರಕ್ಕೆ ಸಂಬಂಧಿಸಿದಂತೆ ಟಿವಿ ಸುದ್ದಿವಾಹಿನಿಗಳು ರೂಪಿಸಿರುವ ಸ್ವಯಂ ನಿಯಂತ್ರಣ ಕ್ರಮಗಳ ಪರಿಣಾಮಕಾರಿತ್ವವನ್ನು ಸರ್ವೋಚ್ಚ ನ್ಯಾಯಾಲಯವು ಸೋಮವಾರ ಪ್ರಶ್ನಿಸಿದೆ. ಸುದ್ದಿಪ್ರಸಾರಗಳ ನಿಯಂತ್ರಣಕ್ಕೆ ಸ೦ಬ೦ಧಿಸಿದ೦ತೆ ಹಾಲಿ ಕಾರ್ಯವಿಧಾನವನ್ನು ಇನ್ನಷ್ಟು ಬಲಪಡಿಸಬೇಕಾಗಿದೆಯೆಂದು ಅದು ಟಿವಿ ಸುದ್ದಿ ಪ್ರಸಾರ ವಾಹಿನಿಗಳ ಸುದ್ದಿ ನಿಯಂತ್ರಣ ಕಾವಲು ಸಂಸ್ಥೆಯಾದ 'ಬ್ರಾಡ್‌ಕಾಸ್ಟರ್ ಹಾಗೂ ಡಿಜಿಟಲ್ ಅಸೋಸಿಯೇಶನ್' (ಎನ್‌ಬಿಡಿಎ)ಗೆ ಆಗ್ರಹಿಸಿದೆ.

ಸುದ್ದಿವಾಹಿನಿಗಳು ಪ್ರಸಕ್ತ ಕೈಗೊಂಡಿರುವ ಸ್ವಯಂನಿಯಂತ್ರಣಾತ್ಮಕ ಕ್ರಮಗಳು ಪರಿಣಾಮಕಾರಿಯಾಗಿಲ್ಲವೆಂದು ಭಾರತದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಅವರನ್ನೊಳಗೊಡ ನ್ಯಾಯಪೀಠವು ಬಣ್ಣಿಸಿದೆ. ಪ್ರಸಕ್ತ ನಿಯಮಾವಳಿಗಳನ್ನು ಉಲ್ಲಂಘಿಸಿರುವ ಸುದ್ದಿವಾಹಿನಿಗಳಿಗೆ ವಿಧಿಸಲಾಗುವ ದಂಡ ಸಮರ್ಪಕವಾಗಿಲ್ಲವೆಂದೂ ಅದು ಹೇಳಿದೆ.

ಪ್ರಸಕ್ತ ಎನ್‌ಬಿಡಿಎ ಮಾರ್ಗದರ್ಶಿ ಸೂತ್ರಗಳನ್ನು ಸುದ್ದಿವಾಹಿನಿಗಳು ಉಲ್ಲಂಘಿಸಿರುವುದು ದೃಢಪಟ್ಟಲ್ಲಿ ಅವುಗಳಿಗೆ 1 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುವುದು. ಈ ನಿಯಮವು 2008ರಿಂದ ಜಾರಿಗೆ ಬಂದಿದೆ. ನಿಯಮಗಳನ್ನು ಉಲ್ಲಂಘಿಸುವ ಸುದ್ದಿವಾಹಿನಿಗಳು ಟಿವಿ ಕಾರ್ಯಕ್ರಮಗಳ ಮೂಲಕ ಗಳಿಸುವ ಲಾಭಕ್ಕೆ ಅನುಗುಣವಾಗಿ ಆರ್ಥಿಕ ದಂಡವನ್ನು ವಿಧಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ನ್ಯಾಯಪೀಠ ದೃಢಪಡಿಸಿದೆ.

ಹಾಲಿ ನಿಯಮಗಳನ್ನು ಕಟ್ಟುನಿಟ್ಟುಗೊಳಿಸದೆ ಇದ್ದಲ್ಲಿ, ಯಾವುದೇ ಟಿವಿ ವಾಹಿನಿಯು ಅವುಗಳನ್ನು ಅನುಸರಿಸುವ ಬದ್ಧತೆಯನ್ನು ತಾಳುವುದಿಲ್ಲ. ನಿಯಮಗಳ ಉಲ್ಲಂಘನೆಗೆ ಕೇವಲ 1 ಲಕ್ಷ ರೂ. ದಂಡ ವಿಧಿಸಿದಲ್ಲಿ ಅವರನ್ನು ಯಾರು ತಾನೇ ತಡೆಯಬಲ್ಲರು ಎಂದು ಸಿಜೆಐ ಪ್ರಶ್ನಿಸಿದರು.

ಯಾವುದೇ ಪ್ರಕರಣದ ಬಗ್ಗೆ ಮಾಧ್ಯಮಗಳು ನಡೆಸುವ ವಿಚಾರಣೆಯು ಕೇಬಲ್ ಟೆಲಿವಿಷನ್ ನೆಟ್ ವರ್ಕ್ ನಿಯಂತ್ರಣ ಕಾಯ್ದೆ ಸೇರಿದಂತೆ ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದು 2021ರ ಜನವರಿಯಲ್ಲಿ ಬಾಂಬೆ ಹೈಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ಎನ್‌ಬಿಡಿಎ ಸಲ್ಲಿಸಿದ್ದ ಅರ್ಜಿಯ ಆಲಿಕೆಯ ಸಂದರ್ಭ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

2020ರ ಜೂನ್‌ನಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಸುದ್ದಿಗಳ ಪ್ರಸಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಆಲಿಕೆಯ ಸಂದರ್ಭ ಬಾಂಬೆ ಹೈಕೋರ್ಟ್, ಚಿತ್ರನಟನ ಸಾವಿನ ಬಗ್ಗೆ ಪ್ರಮುಖ ಸುದ್ದಿಮಾಧ್ಯಮಗಳು ಪ್ರಕಟಿಸುತ್ತಿರುವ ವರದಿಗಳು ಹಾಗೂ ಅವುಗಳ ಸ್ವರೂಪದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಪೊಲೀಸರು ಪ್ರಕರಣದ ತನಿಖೆಯನ್ನು ಮುಕ್ತಾಯಗೊಳಿಸುವ ಮೊದಲೇ ಚಿತ್ರ ನಟ ಸಾವಿನ ಕಾರಣದ ಕುರಿತು ಸಾಕ್ಷ್ಯಾಧಾರರಹಿತವಾದ ವರದಿಗಳನ್ನು ಪ್ರಸಾರ ಮಾಡುತ್ತಿರುವುದಕ್ಕಾಗಿ ಬಾಂಬೆ ಹೈಕೋರ್ಟ್‌ ಸುದ್ದಿ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿದೆ.

“ಸುದ್ದಿಗಳ ಪ್ರಸಾರಕ್ಕೆ ಸಂಬಂಧಿಸಿದಂತೆ ಸುದ್ದಿವಾಹಿನಿಗಳು ಸ್ವಯಂಪ್ರೇರಿತವಾಗಿ ಸಂಯಮವನ್ನು ವಹಿಸಬೇಕಾಗುತ್ತದೆ. ಸುಶಾಂತ್ ರಜಪೂತ್ ನಿಧನದ ಬಳಿಕ ಮಾಧ್ಯಮಗಳು ಪೊಲೀಸ್ ತನಿಖೆ ಪೂರ್ಣಗೊಳ್ಳುವ ಮೊದಲೇ ಅದನ್ನು ಕೊಲೆಯೆಂಬಂತೆ ಬಿಂಬಿಸಿದವು ಎಂದು ಸಿಜೆಐ ಚಂದ್ರಚೂಡ್ ಹೇಳಿದರು.

ಸುದ್ದಿಪ್ರಸಾರಕ್ಕೆ ಸಂಬಂಧಿಸಿದ ನಿಯಮಾವಳಿಗಳನ್ನು ತಾನು ಬಲಪಡಿಸುವುದಾಗಿ ಸರ್ವೋಚ್ಚ ನ್ಯಾಯಾಲವು ತಿಳಿಸಿತು. ಅಲ್ಲದೆ ಎನ್‌ಬಿಡಿಎ ನಿಯಮಾವಳಿಗಳ ಉಲ್ಲಂಘನೆಗೆ ವಿಧಿಸಲಾಗುವ ದಂಡದ ಮೊತ್ತವನ್ನು ಮರುಪರಿಶೀಲಿಸಬೇಕಾಗಿದೆ ಎಂದು ನ್ಯಾಯಾಲಯ ತಿಳಿಸಿತು.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...