ಮಂಗಳೂರು: ಕರಾವಳಿಯಲ್ಲಿ ಸತತ ಮಳೆಗೆ ಜನಜೀವನ ಅಸ್ತವ್ಯಸ್ತ; ರೆಡ್ ಅಲರ್ಟ್; ಅಲ್ಲಲ್ಲಿ ಮನೆಗಳಿಗೆ ಹಾನಿ; ಮರ, ವಿದ್ಯುತ್ ಕಂಬಗಳು ಧರಾಶಾಯಿ / ಉಕ್ಕಿ ಹರಿಯುತ್ತಿರುವ ನದಿಗಳು

Source: Vb | By I.G. Bhatkali | Published on 25th July 2023, 10:28 AM | Coastal News | State News |

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಸೋಮವಾರವೂ ಧಾರಾಕಾರ ಮಳೆ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಬೆಳ್ತಂಗಡಿಯಲ್ಲಿ ಗಾಳಿ-ಮಳೆಗೆ ಮರಬಿದ್ದು ಕೆಲವು ಮನೆಗಳಿಗೆ ಹಾನಿ ಸಂಭವಿಸಿದ್ದರೆ, ಮರಗಳು ವಿದ್ಯುತ್ ತಂತಿಯ ಮೇಲೆ ಉರುಳಿದ ಪರಿಣಾಮ ಹಲವು ವಿದ್ಯುತ್‌ ಕಂಬಗಳು ತುಂಡಾಗಿವೆ. ಇದರಿಂದ ಕೆಲವೆಡೆ ಕಳೆದ 3 ದಿನಗಳಿಂದ ವಿದ್ಯುತ್‌ ಸಂಪರ್ಕ ಅಸ್ತವ್ಯಸ್ತಗೊಂಡಿದೆ. ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಅಪಾರ ಬೆಳೆ ಹಾನಿ ಸಂಭವಿಸಿದೆ.

ಮುನ್ನೆಚ್ಚರಿಕೆ ವಹಿಸಲು ಸೂಚನೆ: ಮುಂಜಾಗ್ರತಾ ಕ್ರಮವಾಗಿ ನೀರು ನಿಲ್ಲುವ ಪ್ರದೇಶ, ಕೆರೆ, ನದಿ, ಸಮುದ್ರ ತೀರಕ್ಕೆ ಮಕ್ಕಳು ತೆರಳದಂತೆ ಪಾಲಕರು ಜಾಗ್ರತೆ ವಹಿಸಬೇಕು, ಮೀನುಗಾರರು ಸಮುದ್ರಕ್ಕೆ ಇಳಿಯಬಾರದು. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ವಿಪತ್ತು ನಿರ್ವಹಣಾ ಕಾರ್ಯ ಕೈಗೊಳ್ಳಬೇಕು., ಜಿಲ್ಲಾಡಳಿತದಿಂದ ವಿವಿಧ ಪ್ರದೇಶಗಳಿಗೆ ನೇಮಿಸಲಾಗಿರುವ ನೋಡಲ್ ಅಧಿಕಾರಿಗಳು ಸದಾ ಜಾಗೃತರಾಗಿದ್ದು ಸಾರ್ವಜನಿಕ ದೂರುಗಳಿಗೆ ತಕ್ಷಣ ಸ್ಪಂದಿಸಬೇಕು ಮತ್ತು ಜಿಲ್ಲಾಧಿಕಾರಿ ಕಚೇರಿ ನಿಯಂತ್ರಣ ಕೊಠಡಿಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಪ್ರವಾಸಿಗರು, ಸಾರ್ವಜನಿಕರು ನದಿ, ಸಮುದ್ರ ತೀರಕ್ಕೆ ತೆರಳದಂತೆ ಸೂಚಿಸಲಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪ್ರತಿ ತಾಲೂಕುಗಳಲ್ಲಿ ಕಾಳಜಿ ಕೇಂದ್ರವನ್ನು ತೆರೆದು ಸನ್ನದ್ದ ಸ್ಥಿತಿಯಲ್ಲಿಟ್ಟುಕೊಳ್ಳುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಇನ್ನು ಉಪ್ಪಿನಂಗಡಿಯಲ್ಲಿ ಜಿಲ್ಲೆಯ ಜೀವನದಿಗಳಾದ ನೇತ್ರಾವತಿ, ಕುಮಾರಾಧಾರ ತುಂಬಿ ಹರಿಯುತ್ತಿದ್ದು, ಅಪಾಯ ಮಟ್ಟವನ್ನು ತಲುಪುವ ಭೀತಿ ಎದುರಾಗಿದೆ.

ಕ್ಷಣಕ್ಷಣಕ್ಕೂ ಬೀಸುವ ಬಿರುಗಾಳಿಯಿಂದಾಗಿ ಜಿಲ್ಲೆಯ ವಿವಿಧೆಡೆ ಮರಗಳು, ಮರಗಳ ಕೊಂಬೆಗಳು, 224 ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ತೋಟ, ಗದ್ದೆಗಳಿಗೆ ನೀರು ನುಗ್ಗಿದ್ದು, ಸಂಪೂರ್ಣ ಜಲಾವೃತಗೊಂಡಿವೆ. ಕೃಷಿಗೂ ಅಪಾರ ಹಾನಿಯಾಗಿದೆ. ಹಲವು ಕಡೆಗಳಲ್ಲಿ ಟ್ರಾನ್ಸ್‌ ಫಾರ್ಮ‌್ರಗಳು ಕೆಟ್ಟುಹೋಗಿದ್ದು, ಬಹುತೇಕ ಕಡೆಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು. ಸಣ್ಣಪುಟ್ಟ 10ಕ್ಕೂ ಅಧಿಕ ಕಾಲು ಸಂಕಗಳಿಗೆ ಹಾನಿಯಾಗಿವೆ. ಅಲ್ಲದೆ ಅನೇಕ ಕಡೆಗಳಲ್ಲಿ ಮರಗಳು ಉರುಳಿಬಿದ್ದು, ಗುಡ್ಡ ಜರಿದು ಬಿದ್ದು ಗ್ರಾಮಾಂತರ ಪ್ರದೇಶದ ಅನೇಕ ಕಡೆಗಳಲ್ಲಿ ಸಂಚಾರಕ್ಕೆ ಅಡ್ಡಿಯಾಗಿದೆ.

ಮಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕೃತಕ ನೆರೆಯಾಗಿವೆ. ನಗರದ ಬಹುತೇಕ ರಸ್ತೆಗಳಲ್ಲಿ ನದಿಯಂತೆ ನೀರು ಹರಿಯುತ್ತಿರುವುದು ಕಂಡುಬಂದಿವೆ. ಬಹುತೇಕ ಕಡೆಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ನಗರದ ಬಜಾಲ್ ಪಕ್ಕಲಡ್ಕ ಮತ್ತು ಬೋಳೂರಿನಲ್ಲಿ ಮನೆಗಳ ಮೇಲೆ ಮರ ಬಿದ್ದಿದ್ದು, ಅಪಾರ ನಷ್ಟ ಉಂಟಾಗಿದೆ.

ನಗರದ ಬೋಳೂರು ಸಮೀಪ ಜಲಾವೃತವಾಗಿದ್ದು, ಜನರು ಸಂಕಷ್ಟಕ್ಕೀಡಾಗಿದ್ದರು. ಜಪ್ಪಿನಮೊಗರುವಿನಲ್ಲೂ ಕೃತಕ ನೆರೆ ಸೃಷ್ಟಿಯಾಗಿತ್ತು. ಸೋಮವಾರ ಸಂಜೆಯ ವೇಳೆಗೆ ನೇತ್ರಾವತಿ ನದಿ 8 ಮೀ.(ಅಪಾಯದ ಮಟ್ಟ 9 ಮೀ.) ಎತ್ತರಕ್ಕೆ ಹರಿಯುತ್ತಿದ್ದು, ಮುನ್ನೆಚ್ಚರಿಕೆ | ಕ್ರಮವಾಗಿ ಪಾಣೆಮಂಗಳೂರು, ಆಲಡ್ಡ ಪ್ರದೇಶದ 15 ಮನೆಗಳ ಜನರು ಸಂಬಂಧಿಕರ ಮನೆಗಳಿಗೆ ಸ್ಥಳಾಂತರಗೊಂಡಿದ್ದಾರೆ. ಕಡಬದಲ್ಲಿ ಕೂಡ 10 ಮಂದಿಯನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿವೆ.

ಉಡುಪಿ: ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಇಂದೂ ತನ್ನ ಪ್ರತಾಪ ಮುಂದುವರಿಸಿದೆ. ಹವಾಮಾನ ಇಲಾಖೆ ಮಂಗಳವಾರ ಮುಂಜಾನೆಯವರೆಗೆ ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಿಸಿದ್ದರೆ, ನಂತರ ಎರಡು ದಿನಗಳಿಗೆ ಆರೆಂಜ್ ಅಲರ್ಟ್‌ನ್ನು ಘೋಷಿಸಿದೆ.

ಫೋಟೊ, ವೀಡಿಯೊ ನಿಷೇಧ

ಉಡುಪಿ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗು ತಿದ್ದು, ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ. ನದಿಗಳು, ಹಳ್ಳ, ತೋಡುಗಳು ಸಹ ತುಂಬಿ ಹರಿಯುತ್ತಿರುವ ಕಾರಣ, ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಸಾರ್ವಜನಿಕರು ಮತ್ತು ಜಿಲ್ಲೆಗೆ ಆಗಮಿಸುವ ಪ್ರವಾಸಿಗರು, ಬೀಚ್‌ಗಳು, ನದಿಗಳು ಹಾಗೂ ಜಲಪಾತಗಳ ಬಳಿ ತೆರಳದಂತೆ ಹಾಗೂ ಫೋಟೊ ಮತ್ತು ವೀಡಿಯೊ ಚಿತ್ರೀಕರಣ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.

50 ಮನೆಗಳಿಗೆ ಹಾನಿ: ಸತತ ಮಳೆಯಿಂದ ಜಿಲ್ಲೆಯಲ್ಲಿ 50 ಮನೆಗಳಿಗೆ ಹಾನಿಯಾಗಿರುವ ವರದಿಗಳು ಬಂದಿವೆ. ಅಲ್ಲದೇ ಮೂರು ಜಾನುವಾರು ಕೊಟ್ಟಿಗೆಗಳಿಗೂ ಭಾಗಶಃ ಹಾನಿಯಾಗಿ ರುವುದಾಗಿ ತಿಳಿದುಬಂದಿದೆ. ಕೆಲವು ಕಡೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಜಾನುವಾರುಗಳನ್ನು ಸುರಕ್ಷಿತ ಪ್ರದೇಶಗಳಿಗೆ ತಲುಪಿಸಲಾಗಿದೆ. ಅಗತ್ಯ ಬಿದ್ದರೆ ಮನೆಯವರನ್ನು ಸಹ ಸುರಕ್ಷಿತ ಪ್ರದೇಶಗಳಿಗೆ ಕರೆದೊಯ್ಯಲು ಎಲ್ಲಾ ಸಿದ್ಧತೆಗಳನ್ನು ಮಾಡಿ ಕೊಳ್ಳಲಾಗಿದೆ. ಜನರಿಗಾಗಿ ತೆರೆಯಲಾದ ಕಾಳಜಿ ಕೇಂದ್ರಗಳಿಗೆ ಯಾರೂ ತೆರಳಿಲ್ಲ. ಕಾಪು ತಾಲೂಕು ಯೇಣಗುಡ್ಡೆ ಗ್ರಾಮದ ಫಾರೆಸ್ಟ್ ಗೇಟ್ ಬಳಿಯ ವಿಶ್ವನಾಥ ಕ್ಷೇತ್ರ ಕಾಳಜಿ ಕೇಂದ್ರದಲ್ಲಿ ಮಾತ್ರ ನಾಲ್ವರು ಆಶ್ರಯ ಪಡೆದಿದ್ದರು.

ರೆಡ್ ಅಲರ್ಟ್ : ಬೆಂಗಳೂರಿನ ಹವಾಮಾನ ಕೇಂದ್ರವು ಕರಾವಳಿಗೆ ನಾಳೆ ಮುಂಜಾನೆಯವರೆಗೆ ರೆಡ್‌ ಅಲರ್ಟ್, 27ರ ಮುಂಜಾನೆಯವರೆಗೆ ಆರೆಂಜ್ ಅಲರ್ಟ್ ಹಾಗೂ ಜು.28 ಮತ್ತು 29ರಂದು ಯೆಲ್ಲೋ ಅಲರ್ಟ್‌ನ್ನು ಘೋಷಿಸಿದೆ. ಕರಾವಳಿಯಲ್ಲಿ ಗಂಟೆಗೆ 40ರಿಂದ 45ಕಿ. ಮೀ. ವೇಗದ ಗಾಳಿಯು ಸಮುದ್ರ ತೀರದುದ್ದಕ್ಕೂ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಮಂಗಳವಾರ ಮಧ್ಯರಾತ್ರಿ 11:30ರವರೆಗೆ ಅರಬಿಸಮುದ್ರ ದಲ್ಲಿ 3.5ರಿಂದ 4ಮೀ. ಎತ್ತರದ ತೆರೆಗಳು ಮಂಗಳೂರಿನಿಂದ ಕಾರವಾರದವರೆಗೆ ದಡವನ್ನು ಅಪ್ಪಳಿಸಲಿದೆ. ಹೀಗಾಗಿ ಮೀನುಗಾರರು ಮೀನುಗಾರಿಕೆಗೆಂದು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಿದೆ.

99.7 ಮಿ.ಮೀ.ಮಳೆ: ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯ ಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 99.7 ಮಿ.ಮೀ. ಮಳೆಯಾಗಿದೆ. ಬೈಂದೂರಿನಲ್ಲಿ ಅತ್ಯಧಿಕ 120.9 ಮಿ.ಮೀ. ಮಳೆಯಾದರೆ, ಉಡುಪಿಯಲ್ಲಿ ಕನಿಷ್ಠ 72.9 ಮಿ.ಮೀ. ಮಳೆಯಾಗಿದೆ.

ಇನ್ನುಳಿದಂತೆ ಹೆಬ್ರಿಯಲ್ಲಿ 110.5 ಮಿ.ಮೀ, ಕುಂದಾಪುರ ದಲ್ಲಿ 104.2, ಕಾರ್ಕಳದಲ್ಲಿ 100.2,ಬ್ರಹ್ಮಾವರದಲ್ಲಿ 77.4 ಹಾಗೂ ಕಾಪುವಿನಲ್ಲಿ 75.0 ಮಿ.ಮೀ. ಮಳೆಯಾಗಿದೆ.

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...

ಕಾರವಾರ: 16.41 ಲಕ್ಷ ಮತದಾರರು: 1977 ಮತಗಟ್ಟೆಗಳು: 6939 ಸಿಬ್ಬಂದಿಗಳು; ಲೋಕಸಭಾ ಚುನಾವಣೆಗೆ ನಾವ್ ರೆಡಿ ಎಂದ ಜಿಲ್ಲಾಡಳಿತ

ಲೋಕಸಭಾ ಸಾರ್ವತ್ರಿಕ ಚುನಾವಣೆ-2024ಕ್ಕೆ ಸಂಬAಧಿಸಿದAತೆ, ಮುಕ್ತ, ಪಾರದರ್ಶಕ ಮತ್ತು ಶಾಂತಿಯುತ ಚುನಾವಣೆಗಾಗಿ ಜಿಲ್ಲೆಯಲ್ಲಿ ಸಕಲ ...

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...

ಮುಂಡಗೋಡ: ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ ವಾಗ್ದಾಳಿ

ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...