ಬಿಜೆಪಿ ಸರಕಾರದಿಂದ ಸಂಘಪರಿವಾರ ಅಂಗ ಸಂಸ್ಥೆಗಳಿಗೆ ಭೂಮಿ, ಸರಕಾರಕ್ಕೆ 152 ಕೋ.ರೂ.ಗೂ ಅಧಿಕ ನಷ್ಟ; ಪರಿಶೀಲನೆಗೆ ಸರಕಾರದ ನಿರ್ಧಾರ

Source: Vb/ಜಿ.ಮಹಾಂತೇಶ್ | By I.G. Bhatkali | Published on 11th June 2023, 8:02 AM | State News |

ಬೆಂಗಳೂರು: ಬಿಜೆಪಿ ನೇತೃತ್ವದ ರಾಜ್ಯ ಸರಕಾರವು ಕಾನೂನು ಮತ್ತು ಆರ್ಥಿಕ ಇಲಾಖೆ ನೀಡಿದ್ದ ಅಭಿಪ್ರಾಯವನ್ನು ಬದಿಗೊತ್ತಿ ಸಂಘಪರಿವಾರದ ಅಂಗ ಸಂಸ್ಥೆಗಳಲ್ಲೊಂದಾದ ರಾಷ್ಟೋತ್ಥಾನ ಪರಿಷತ್, ಜನಸೇವಾ ಟ್ರಸ್ಟ್, ವಿಶ್ವ ಹಿಂದೂ ಪರಿಷತ್ ಸಂಸ್ಥೆಗಳಿಗೆ ಗೋಮಾಳ, ಸಿ ಎ ನಿವೇಶನ ಮಂಜೂರು ಮಾಡುವ ಮೂಲಕ ಸರಕಾರದ ಬೊಕ್ಕಸಕ್ಕೆ 152.09 ಕೋಟಿ ರೂ.ಗೂ ಅಧಿಕ ಮೊತ್ತ ನಷ್ಟವನ್ನುಂಟು ಮಾಡಿರುವ ಪ್ರಕರಣಗಳು ಇದೀಗ ಮುನ್ನೆಲೆಗೆ ಬಂದಿವೆ.

ಹಿಂದಿನ ಸರಕಾರವು 6 ತಿಂಗಳಿನಿಂದ ಈಚೆಗೆ ಮಾಡಿರುವ ಭೂ ಮಂಜೂರಾತಿ ಪಕರಣಗಳ ಕುರಿತು ಪರಿಶೀಲನೆ ನಡೆಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿರುವ ಬೆನ್ನಲ್ಲೇ 2019-20ರಿಂದ 2023ರ ಮಾರ್ಚ್ ವರೆಗೂ ಅಂದಾಜು 86 ಎಕರೆ ಮತ್ತು ಮಾದಾರ ಚೆನ್ನಯ್ಯ ಗುರು ಪೀಠಕ್ಕೆ 81.23 ಎಕರೆ ವಿಸ್ತೀರ್ಣದ ಗೋಮಾಳ ಸೇರಿದಂತೆ ಒಟ್ಟಾರೆಯಾಗಿ 167.23 ಎಕರೆ ಮಂಜೂರು ಮಾಡಿರುವ ಪ್ರಕರಣಗಳು ಮಹತ್ವ ಪಡೆದುಕೊಂಡಿವೆ.

ಚಾಮರಾಜನಗರ, ಮೈಸೂರು, ಚಿಕ್ಕಮಗಳೂರು, ಹೊಸಪೇಟೆ, ಮಂಡ್ಯ, ಯಾದಗಿರಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿರುವ ಅಂದಾಜು 20 ಎಕರೆ ವಿಸ್ತೀರ್ಣದ ಗೋಮಾಳವನ್ನು ರಾಜ್ಯೋತ್ಥಾನ ಪರಿಷತ್‌ಗೆ ಮಂಜೂರು ಮಾಡಿರುವುದು ತಿಳಿದು ಬಂದಿದೆ.

ಶಾಲಾ ಶುಲ್ಕದಿಂದ ಸಂಗ್ರಹವಾದ ಆದಾಯವೂ ಸೇರಿದಂತೆ ಇನ್ನಿತರ ಮೂಲಗಳಿಂದ ಕಳೆದ 5 ವರ್ಷಗಳಲ್ಲಿ 401.86 ಕೋಟಿ ರೂ. ಆದಾಯ ಮತ್ತು ಇದೇ ಅವಧಿಯಲ್ಲಿ 63.64 ಕೋಟಿ ರೂ. ಲಾಭಾಂಶ ಹೊಂದುವ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ ಜಮೀನು ಖರೀದಿಸುವ ಆರ್ಥಿಕ ಸಾಮರ್ಥ್ಯವಿರುವ ರಾಷ್ಟೋತ್ಥಾನ ಪರಿಷತ್‌ಗೆ ಮಾರುಕಟ್ಟೆ ಶುಲ್ಕದಲ್ಲೇ ಶೇ. 25ರಷ್ಟು ರಿಯಾಯಿತಿ ದರದಲ್ಲಿ ಗೋಮಾಳ ಮಂಜೂರು ಮಾಡಿತ್ತು.

ರಾಷ್ಟೋತ್ಥಾನ ಪರಿಷತ್ ಈಗಾಗಲೇ 74-00 ಎಕರೆ ಹೊಂದಿದ್ದರೂ ಯಲಹಂಕ ತಾಲೂಕಿನ ಹೆಸರಘಟ್ಟ ಹೋಬಳಿಯ ಹುರುಳಿಚಿಕ್ಕನಹಳ್ಳಿ ಗ್ರಾಮದಲ್ಲಿ ಪ್ರಚಲಿತ ಮಾರುಕಟ್ಟೆಯಲ್ಲಿ 7.45 ಕೋಟಿ ರೂ. ಬೆಲೆ ಬಾಳುವ ಗೋಮಾಳ ಜಮೀನನ್ನು ರಾಜ್ಯ ಬಿಜೆಪಿ ಸರಕಾರವು ಕೇವಲ 1.86 ಕೋಟಿ ರೂ.ಗೆ ಮಂಜೂರು ಮಾಡಿದೆ. ಈ ಪರಿಷತ್‌ಗೆ ಜಮೀನನ್ನು ಮಂಜೂರು ಮಾಡುವ ಉದ್ದೇಶದಿಂದಲೇ ಗೋಮಾಳ ಶೀರ್ಷಿಕೆಯಿಂದಲೇ ತಗ್ಗಿಸಿ ತನ್ನ ಸಂಘ ನಿಷ್ಠೆ ಮೆರೆದಿರುವ ಸರಕಾರವು 5.59 ಕೋಟಿ ರೂ. ನಷ್ಟಕ್ಕೆ ದಾರಿಮಾಡಿಕೊಟ್ಟಿತ್ತು.

ಅದೇ ರೀತಿ ಕರ್ನಾಟಕ ವಿಧಾನಸಭೆಗೆ ಚುನಾ ವಣೆಯ ಮಾದರಿ ನೀತಿ ಸಂಹಿತೆ ಜಾರಿಯಾದ ಮರುಗಳಿಗೆಯಲ್ಲಿಯೇ ಸಂಘ ಪರಿವಾರದ ಅಂಗಸಂಸ್ಥೆ ಯಾಗಿರುವ ಜನಸೇವಾ ಟ್ರಸ್ಟ್‌ಗೆ ಮಂಜೂರಾಗಿದ್ದ 35.33 ಎಕರೆ ವಿಸ್ತೀರ್ಣದ ಜಮೀನಿಗೆ ಪ್ರಚಲಿತ ಕೃಷಿ ಯೇತರ ಮಾರ್ಗಸೂಚಿ ಮೌಲ್ಯದ ಶೇ.5ರಷ್ಟು ದರ ವನ್ನು ಮರು ನಿಗದಿಗೊಳಿಸಿ ಆದೇಶ ಹೊರಡಿಸಿರುವ ರಾಜ್ಯ ಬಿಜೆಪಿ ಸರಕಾರವು ಬೊಕ್ಕಸಕ್ಕೆ ಅಂದಾಜು 139.21 ಕೋಟಿ ರೂ. ನಷ್ಟವನ್ನು ಹೊರಿಸಿತ್ತು.

ಜನಸೇವಾ ಟ್ರಸ್ಟ್‌ಗೆ 2022ರ ಸೆ.13 ಮತ್ತು 2023ರ ಮಾರ್ಚ್ 16ರಂದು ಕ್ರಮವಾಗಿ 25 ಎಕರೆ ಗೋಮಾಳವನ್ನು ಪ್ರಚಲಿತ ಮಾರ್ಗಸೂಚಿ ಮೌಲ್ಯದ ಶೇ.25ರಷ್ಟು ಮತ್ತು 10.33 ಎಕರೆ ಗೋಮಾಳವನ್ನು ಪ್ರಚಲಿತ ಮಾರುಕಟ್ಟೆ ಮೌಲ್ಯ ವಿಧಿಸಿ ಆದೇಶ ಹೊರಡಿಸಿತ್ತು. ಆದರೆ ಈ ದರವನ್ನು ಭರಿಸಲು ಕಷ್ಟಸಾಧ್ಯ ಎಂದು ಜನಸೇವಾ ಟ್ರಸ್ಟ್ ಕೋರಿಕೆ ಸಲ್ಲಿಸಿದ್ದ ಕೆಲವೇ ಕೆಲವು ದಿನಗಳಲ್ಲಿ ಮಾರ್ಗಸೂಚಿ ಮೌಲ್ಯದ ಶೇ.5ರಷ್ಟು ಎಂದು ಪರಿಷ್ಕರಿಸಿ ಚಿಕ್ಕಾಸು ದರವನ್ನು ನಿಗದಿಗೊಳಿಸಿ ಆದೇಶ ಹೊರಡಿಸಿತ್ತು. ಕೋಟ್ಯಂತರ ರೂ. ಬೆಲೆಬಾಳುವ ಜಮೀನು ಮತ್ತು ನಿವೇಶನಗಳನ್ನು ಮಾರುಕಟ್ಟೆ ಬೆಲೆಗಿಂತಲೂ ಶೇ.25ರ ದರಕ್ಕೆ ರಾಜ್ಯೋತ್ಥಾನ ಪರಿಷತ್, ಜನಸೇವಾ ಟ್ರಸ್ಟ್ ಸೇರಿದಂತೆ ಸಂಘಪರಿವಾರದ ಅಂಗ ಸಂಸ್ಥೆಗಳು ಮಂಜೂರು ಮಾಡಿಸಿಕೊಂಡಿದ್ದರ ಬೆನ್ನಲ್ಲೇ ಶಿವಮೊಗ್ಗ ಘಟಕದ ವಿಶ್ವಹಿಂದೂ ಪರಿಷದ್ ಕೂಡ ನಿವೇಶನಕ್ಕೆ ಬಾಕಿ ಪಾವತಿಸಬೇಕಿರುವ ಮೊತ್ತಕ್ಕೆ ಸಂಪೂರ್ಣ ವಿನಾಯಿತಿ ನೀಡಬೇಕು ಎಂದು ಪ್ರಸ್ತಾವನೆ ಸಲ್ಲಿಸಿತ್ತು.

ನಿವೇಶನದ ಗುತ್ತಿಗೆ ಮೊಬಲಗು ಚದರಮೀಟರ್ ಒಂದಕ್ಕೆ 7,800 ರೂ. ಇದೆ. ನಿವೇಶನದ ಅಳತೆ 1,567.95 ಚ.ಮೀ. ಅನುಗುಣವಾಗಿ 17,00,000 ರೂ.ಗಳನ್ನು ಪ್ರಾರಂಭಿಕ ಠೇವಣಿ ರೂಪದಲ್ಲಿ ಶುಲ್ಕವನ್ನು ಪಾವತಿಸಿದೆ. ಇದೀಗ ಬಾಕಿ ಪಾವತಿಸಬೇಕಿರುವ ಮೊತ್ತಕ್ಕೆ ಸಂಪೂರ್ಣ ವಿನಾಯಿತಿಯನ್ನು ಕೋರಿತ್ತು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಷ್ಟೋತ್ಥಾನ ಪರಿಷತ್‌ಗೆ 6 ಎಕರೆ ಜಮೀನು ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲು ಆರಂಭದಲ್ಲಿ ತಕರಾರು ವ್ಯಕ್ತಪಡಿಸಿದ್ದ ಆರ್ಥಿಕ ಇಲಾಖೆಯು ಕೆಲವೇ ದಿನಗಳಲ್ಲಿ ಸಹಮತಿ ವ್ಯಕ್ತಪಡಿಸಿತ್ತು. ನೂತನ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ ನಿರ್ಮಾಣ ಉದ್ದೇಶಕ್ಕಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಹೆಸರಿನಲ್ಲಿರುವ 20. 17 ಎಕರೆ ಜಮೀನಿನ ಪೈಕಿ 5 ಎಕರೆ ವಿಸ್ತೀರ್ಣದ ಜಮೀನನ್ನು ಬೆಂಗಳೂರಿನ ರಾಷ್ಟೋತ್ಥಾನ ಪರಿಷತ್‌ ಹೆಸರಿಗೆ ಮಂಜೂರು ಮಾಡಿದೆ ಎಂದು ಗೊತ್ತಾಗಿದೆ.

ಕೊಟ್ಟ ಭೂಮಿ ವಾಪಸ್ ಪಡೆಯುವ ಧೋರಣೆ ಸಲ್ಲ; ಕೋಟ ಶ್ರೀನಿವಾಸ ಪೂಜಾರಿ: ಸಂಘ ಪರಿವಾರದವರಿಗೆ ಕೊಟ್ಟ ಭೂಮಿಯನ್ನು ವಾಪಸ್ ಪಡೆಯುತ್ತೇವೆ ಎನ್ನುವ ಸರಕಾರದ ಧೋರಣೆ ಸರಿಯಲ್ಲ. ಎಲ್ಲರನ್ನೂ ಸಮಾನವಾಗಿ ಕಾಣುತ್ತೇವೆ. ಎನ್ನುವವರ ದೃಷ್ಟಿಯಲ್ಲಿ ಸಂಘಪರಿವಾರದವರು ಕಡಿಮೆ ಸಮಾನರೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದರು.

ಶನಿವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರಕಾರದ ಭ್ರಷ್ಟಾಚಾರ, ಅಕ್ರಮಗಳ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಹಾಗಿದ್ದಲ್ಲಿ ರಾಜ್ಯ ಸರಕಾರವು ತಮ್ಮ ಇಲಾಖೆಯಿಂದಲೇ ತನಿಖೆಯನ್ನು ಪ್ರಾರಂಭಿಸಲಿ ಎಂದರು.

ಬಿಜೆಪಿಯವರನ್ನು ದಲಿತ ವಿರೋಧಿಗಳು ಎಂದು ಕರೆದಿರುವ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಪರಿಶಿಷ್ಟ ಜಾತಿಯವರಿಗೆ ಶೇ.15ರ ಬದಲಾಗಿ ಶೇ.17ರಷ್ಟು ಮೀಸಲಾತಿ ನೀಡಿದ್ದು ಬಿಜೆಪಿ ಸರಕಾರ. ಪರಿಶಿಷ್ಟ ಪಂಗಡಕ್ಕೆ ಶೇ.3ರಿಂದ ಶೇ.7ಕ್ಕೆ ಮೀಸಲಾತಿ ಹೆಚ್ಚಿಸಿದ್ದು ಬಿಜೆಪಿ ಸರಕಾರ ಎಂದು ಅವರು ಹೇಳಿದರು.

ಅನರ್ಹರಿಗೆ ಸರಕಾರಿ ಜಮೀನು ಮಂಜೂರಾಗಿದರೆ ಕ್ರಮ; ಕೃಷ್ಣ ಬೈರೇಗೌಡ: ಬಿಜೆಪಿ ನೇತೃತ್ವದ ರಾಜ್ಯ ಸರಕಾರವು ಆರು ತಿಂಗಳಿನಿಂದ ಈಚೆಗೆ ಅನರ್ಹರಿಗೆ ಸರಕಾರಿ ಜಮೀನು ಮಂಜೂರು ಮಾಡಿದ್ದರೆ, ಅವರ ವಿರುದ್ದ ದಿಟ್ಟ ಕ್ರಮ ಕೈಗೊಳ್ಳಲಾಗು ವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಈಗಾಗಲೇ ಭೂ ಮಂಜೂರಾತಿ ಪ್ರಕರಣಗಳ ಕುರಿತು ತನಿಖೆ ಕೈಗೊಳ್ಳಲಾಗಿದೆ. ಯಾವ ಕಾರಣಕ್ಕೆ ಸಂಘ-ಸಂಸ್ಥೆಗಳಿಗೆ ಸರಕಾರಿ ಭೂಮಿಗಳನ್ನು ಮಂಜೂರು ಮಾಡಲಾಗಿದೆ ಎಂಬುದನ್ನು ಪರಿಶೀಲನೆ ಮಾಡಲಾಗುತ್ತಿದೆ. ಒಂದು ವೇಳೆ ನಿಯಮ ಮೀರಿ ಭೂಮಿ ನೀಡಿದ್ದರೆ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದರು.

ಅದು ಅಲ್ಲದೆ, ಈ ಹಿಂದಿನ ಬಿಜೆಪಿ ಸರಕಾರ ಚುನಾವಣೆ ವೇಳೆಗೆ ತೆಗೆದುಕೊಂಡ ನಿರ್ಧಾರಗಳನ್ನು ಸದ್ಯಕ್ಕೆ ಪರಿಶೀಲನೆ ನಡೆಸಲಾಗುತ್ತಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸೂಚನೆ ನೀಡಿದ್ದಾರೆ. 2022 ಡಿಸೆಂಬರ್‌ನಿಂದ ಈಚೆಗೆ ಸಂಘ-ಸಂಸ್ಥೆಗಳಿಗೆ ಭೂಮಿ ಮಂಜೂರು ಮಾಡಿರುವ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ ಎಂದು ಅವರು ಉಲ್ಲೇಖಿಸಿದರು. ಭೂಮಿ ಪಡೆದ ಸಂಘ-ಸಂಸ್ಥೆಗಳು ತಾವು ಪಡೆದ ಉದ್ದೇಶಕ್ಕೆ ಬಳಕೆ ಮಾಡುತ್ತಿದ್ದಾರೆಯೇ ಅಥವಾ ಇಲ್ಲವೋ ಎಂಬುದನ್ನು ಪರಿಶೀಲಿಸಲಾಗುವುದು. ಶೈಕ್ಷಣಿಕ ಉದ್ದೇಶಕ್ಕೆ ಭೂಮಿ ಪಡೆದಿದ್ದರೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಎಲ್ಲ ವಿಚಾರದಲ್ಲಿಯೂ ನಾವು ರಾಜಕೀಯ ಮಾಡಲು ಹೋಗುವುದಿಲ್ಲ ಎಂದು ಕೃಷ್ಣಬೈರೇಗೌಡ ಸ್ಪಷ್ಟನೆ ನೀಡಿದರು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಬಿಜೆಪಿ ಮುಖಂಡನಿಗೆ ಪೆನ್‌ಡ್ರೈವ್ ನೀಡಿದ್ದೆ; ಪ್ರಜ್ವಲ್ ಕಾರು ಚಾಲಕನಿಂದ ಹೇಳಿಕೆ

ಪ್ರಜ್ವ ರೇವಣ್ಣರದ್ದು ಎನ್ನಲಾದ ಅಶ್ಲೀಲ ವೀಡಿಯೊ ಪೆನ್ ಡ್ರೈವ್ ಬಿಜೆಪಿ ಮುಖಂಡರೂ ಆಗಿರುವ ವಕೀಲ ದೇವರಾಜೇಗೌಡ ಬಿಟ್ಟು ಬೇರೆ ಯಾರಿಗೂ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಅವಧಿ ಉಲ್ಲೇಖಿಸದೇ ಪ್ರಜ್ವಲ್ ರೇವಣ್ಣ ಜೆಡಿಎಸ್‌ನಿಂದ ಅಮಾನತು

ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಪ್ರಕರಣ ಸಂಬಂಧ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ರೇವಣ್ಣ, ಪ್ರಜ್ವಲ್ ಉಚ್ಚಾಟನೆಗೆ ಜೆಡಿಎಸ್ ಶಾಸಕರ ಪಟ್ಟು

ರಾಜ್ಯದ ಜನತೆಯ ಮುಂದೆ ತಲೆ ತಗ್ಗಿಸುವಂತಹ ಕೆಲಸ ಮಾಡಿದವರನ್ನು ರಾಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಘನತೆಯನ್ನು ಉಳಿಸಬೇಕಿದೆ ಎಂದು ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ: ಕುಮಾರಸ್ವಾಮಿ

ಜೆಡಿಎಸ್ ಸಂಸದ ಪ್ರಜಿ ಕುಮಾರಸ್ವಾಮಿ ಡ್ರೈವ್ ಪ್ರಕರಣದಲ್ಲಿ ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ' ಎಂದು ಮಾಧ್ಯಮಗಳ ಮುಂದೆ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ತ್ವರಿತಗತಿಯಲ್ಲಿ ತನಿಖೆ ನಡೆಸಿ, ವರದಿ ಸಲ್ಲಿಸಲು ಸೂಚನೆ: ಪರಮೇಶ್ವ‌ರ್

ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಿ, ವರದಿ ಸಲ್ಲಿಸುವಂತೆ ...