ಕೇರಳ, ತ.ನಾ.ನಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ; ತ.ನಾ.ನಲ್ಲಿ ಶಾಲೆಗಳಿಗೆ ರಜೆ

Source: Vb | By I.G. Bhatkali | Published on 25th November 2023, 12:02 AM | Coastal News | National News |

ತಿರುವನಂತಪುರ: ಕೇರಳದ ದಕ್ಷಿಣ ಭಾಗದಲ್ಲಿ ಭಾರೀ ಮಳೆ ಎಡೆಬಿಡದೆ ಸುರಿಯುತ್ತಿರುವುದು ಮುಂದುವರಿದಿದ್ದು, ಹಲವು ನಗರಗಳಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಬೆಟ್ಟ, ಗುಡ್ಡ ಪ್ರದೇಶಗಳು ಹಾಗೂ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವವರಿಗೆ ಆಡಳಿತ ಮುನ್ನೆಚ್ಚರಿಕೆ ನೀಡಿದೆ. ಇಡುಕ್ಕಿ ಹಾಗೂ ಪತ್ತನಂತಿಟ್ಟ ಜಿಲ್ಲೆಗಳ ಬೆಟ್ಟ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಹಲವು ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಸಾಮಾನ್ಯ ಜನಜೀವನಕ್ಕೆ ಅಡ್ಡಿ ಉಂಟಾಗಿದೆ.

ಎಡೆಬಿಡದೆ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪತ್ತನಂತಿಟ್ಟದಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಶಬರಿಮಲೆ ಯಾತ್ರಾರ್ಥಿಗಳ ಭದ್ರತಾ ವ್ಯವಸ್ಥೆಯ ಕುರಿತು ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠರಿಗೆ ದೇವಸ್ವಂ ಸಚಿವ ಕೆ. ರಾಧಾಕೃಷ್ಣನ್ ನಿರ್ದೇಶಿಸಿದ್ದಾರೆ.

ಕೇರಳದ ರಾಜಧಾನಿ ತಿರುವನಂತಪುರದಲ್ಲಿ 15 ಸೆ. ಮೀ. ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಳೆಯಿಂದ ತೀವ್ರ ಹಾನಿಗೀಡಾದ ಇನ್ನೊಂದು ಪ್ರದೇಶ ಕುನ್ನತ್ತಾನಂನಲ್ಲಿ ಕೂಡ 15 ಸೆ.ಮೀ. ಮಳೆ ಬಿದ್ದಿದೆ. ಇದರಿಂದ ಇಲ್ಲಿನ ತಗ್ಗು ಪ್ರದೇಶಗಳು ಜಲಾವೃತವಾಗಿವೆ ಹಾಗೂ ಸಂಚಾರಕ್ಕೆ ಅಡೆ ತಡೆ ಉಂಟಾಗಿದೆ. ಎನಾಡಿಮಂಗಳಂ, ಪೀರ್ಮದೆ ಹಾಗೂ ಒಟ್ಟಪಾಳಂನಲ್ಲಿ ಕ್ರಮವಾಗಿ 13, 12 ಹಾಗೂ 11 ಸೆ.ಮೀ. ಮಳೆ ಬಿದ್ದಿದೆ.

ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದ ಜಲಾನಯನ ಪ್ರದೇಶದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವುದರಿಂದ ಇಡುಕ್ಕಿ ಜಿಲ್ಲೆಯಲ್ಲಿರುವ ಕಲ್ಲರ್ಕುಟ್ಟಿ ಹಾಗೂ ಪಂಬಾ ಅಣೆಕಟ್ಟುಗಳ ಬಾಗಿಲನ್ನು ಇಂದು ಬೆಳಗ್ಗೆ ಆಡಳಿತ ಮೇಲೆಕ್ಕೆತ್ತಿದೆ. ಭಾರೀ ಮಳೆಯಿಂದ ತಿರುವಲ್ಲ ಹಾಗೂ ಕೊನ್ನಿ ಪ್ರದೇಶಗಳಲ್ಲಿ ಕೃಷಿ ಹಾಗೂ ಸೊತ್ತುಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ.

ನೆರೆಯ ರಾಜ್ಯವಾದ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಕೂಡ ಭಾರೀ ಮಳೆ ಸುರಿದಿದೆ. ಈ ಹಿನ್ನೆಲೆಯಲ್ಲಿ ತೆಂಕಾಶಿ, ವಿರುಥುನಗರ್, ಪುದುಕೋಟೆ, ನೀಲಗಿರಿ, ಥೇನಿ, ತಿರುನಲ್ವೇಲಿ, ಕನ್ಯಾಕುಮಾರಿ ಹಾಗೂ ತೂತುಕುಡಿಯಲ್ಲಿಯ ಎಲ್ಲಾ ಸರಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಜಿಲ್ಲಾಧಿಕಾರಿ ಗುರುವಾರ ರಜೆ ಘೋಷಿಸಿದ್ದಾರೆ. ನೀಲಗಿರಿ, ಕೊಯಮತ್ತೂರು, ಥೇನಿ, ದಿಂಡುಗಲ್, ಶಿವಗಂಗೈ ಹಾಗೂ ಪುದುಕೋಟೈ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯಲಿದೆ.

ಶಿವಂಗೆಗೈ, ಪುದುಕೋಟೈ, ರಾಮನಾಥಪುರಂ, ಥೇನಿಯಿಂದ ದಿಂಡುಗಲ್, ಮಧುರೈ, ಕೊಯಮತ್ತೂರು, ವಿರುದ್ದನಗರ್, ತೆಂಕಾಶಿ, ತಿರುನಲ್ವೇಲಿ, ತೂತುಕುಡಿ, ಕನ್ಯಾಕುಮಾರಿಯ ಕೆಲವು ಸ್ಥಳಗಳಲ್ಲಿ ಹಾಗೂ ತಿರುವಳ್ಳೂರು, ಚೆನ್ನೈ, ಚೆಂಗಲ್‌ಪಟ್ಟು, ಕಾಂಚಿಪುರಂ, ರಾಣಿಪೇಟೆ, ವೆಲ್ಲೂರು, ತಿರುಪಟ್ಟೂರು,ತಿರುವನಮಲೈಯ ದುರ್ಗಮ ಪ್ರದೇಶಗಳಲ್ಲಿ ಗುಡುಗಿನಿಂದ ಕೂಡಿದ ಸಾಧಾರಣ ಮಳೆಯಾಗಲಿದೆ ಎಂದು ಚೆನ್ನೈನ ಪ್ರಾದೇಶಿಕ ಹವಾಮಾನ ಇಲಾಖೆ ತಿಳಿಸಿದೆ.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...