ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಯೋಜನೆಗಳಿಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ.ಜಿಲ್ಲೆಯ ಅಭಿವೃದ್ಧಿಗೆ ಬದ್ಧರಾಗಿದ್ದೇವೆ- ಸಚಿವ ಸಂತೋಷ ಲಾಡ್

Source: SO News | By Laxmi Tanaya | Published on 15th August 2023, 8:30 PM | State News |

ಧಾರವಾಡ :  ರಾಜ್ಯಸರ್ಕಾರವು ಜನಕಲ್ಯಾಣಕ್ಕಾಗಿ ಜಾರಿಗೊಳಿಸಿರುವ ನೂತನ ಮಹತ್ವಾಕಾಂಕ್ಷಿ ಯೋಜನೆಗಳಾದ ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ಸಿಕ್ಕಿದ್ದು, ಯುವನಿಧಿ ಯೋಜನೆ ಜಾರಿಗೆ ಸಿದ್ಧತೆಯಾಗಿದ್ದು, ಜಿಲ್ಲೆಯ ಅಭಿವೃದ್ಧಿಗೆ ಬದ್ಧರಾಗಿದ್ದೇವೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ 77ನೇ ಸ್ವಾತಂತ್ರ್ಯೋತ್ಸವದ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಸಾರ್ವಜನಿಕರಿಗೆ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿ ಮಾತನಾಡಿದರು. 

ರಾಜ್ಯ ಸರಕಾರವು ನುಡಿದಂತೆ ನಡೆದಿದ್ದು, ಜನಪರ ಗ್ಯಾರೆಂಟಿ ಯೋಜನೆಗಳಾದ ಶಕ್ತಿ ಯೋಜನೆ, ಗೃಹ ಲಕ್ಷ್ಮಿ ಯೋಜನೆ, ಗೃಹ ಜ್ಯೋತಿ ಯೋಜನೆ, ಅನ್ನಭಾಗ್ಯ ಯೋಜನೆ ಹಾಗೂ ಯುವನಿಧಿ  ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಶಕ್ತಿ ಯೋಜನೆಯು ಮಹಿಳಾ ಸಬಲೀಕರಣಕ್ಕೆ ಸಹಕಾರಿಯಾಗಿದ್ದು, ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಿದೆ. ಬಡ ಹಾಗೂ ದುಡಿಯುವ ಹೆಣ್ಣುಮಕ್ಕಳಿಗೆ ಈ ಯೋಜನೆ ವರದಾನವಾಗಿದೆ. ಶಕ್ತಿ ಯೋಜನೆಯಡಿ ಧಾರವಾಡ ಜಿಲ್ಲೆಯಲ್ಲಿ ಜುಲೈ ಅಂತ್ಯದವರೆಗೆ 1.51 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿರುತ್ತಾರೆ. ರೂ. 30.77 ಕೋಟಿ ಮೌಲ್ಯದ ಸೌಲಭ್ಯವನ್ನು ಪಡೆದಿರುತ್ತಾರೆ.  

ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಮನೆ ಒಡತಿಗೆ ಮಾಹೆಯಾನ ರೂ.2,000/- ನೀಡುವ ಯೋಜನೆಗೆ ನೋಂದಣಿ ಕಾರ್ಯ ಆರಂಭವಾಗಿರುತ್ತದೆ. ಧಾರವಾಡ ಜಿಲ್ಲೆಯಲ್ಲಿ ಒಟ್ಟು 3,82,523 ಮಹಿಳೆಯರು ಈ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳಲಿದ್ದಾರೆ. 

ಗೃಹಜ್ಯೋತಿ ಯೋಜನೆ ಅಡಿಯಲ್ಲಿ ವಿದ್ಯುತ್ ಬಳಕೆದಾರರಿಗೆ ಗರಿಷ್ಟ 200 ಯುನಿಟ್ ಉಚಿತ ವಿದ್ಯುತ್ ಒದಗಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ಒಟ್ಟು 5,44,181 ಗೃಹ ಬಳಕೆದಾರರಿದ್ದು, ಇದರಲ್ಲಿ 4,18,250 ಗ್ರಾಹಕರು ಈಗಾಗಲೇ ಪ್ರಯೋಜನ ಪಡೆದುಕೊಂಡಿರುತ್ತಾರೆ. ಯುವನಿಧಿ ಯೋಜನೆಯನ್ನು ಸದ್ಯದಲ್ಲಿಯೇ ಜಾರಿಗೊಳಿಸಲಾಗುವುದು.

ಅನ್ನಭಾಗ್ಯ ಯೋಜನೆಯಡಿ ಯಾರೂ ಸಹ ಹಸಿವಿನಿಂದ ಬಳಲದಂತೆ ಕಾರ್ಯಕ್ರಮವನ್ನು ರೂಪಿಸಲಾಗಿದೆ.  ಧಾರವಾಡ ಜಿಲ್ಲೆಯಲ್ಲಿ 3,87,124 ಬಿ.ಪಿ.ಎಲ್. ಕುಟುಂಬಗಳಿಗೆ ಆಹಾರ ಭದ್ರತೆಯನ್ನು ಒದಗಿಸಲಾಗಿದೆ. ಬಿ.ಪಿ.ಎಲ್. ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ರೂ.170/- ಗಳಂತೆ ರೂ.16.67 ಕೋಟಿಯನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಭಾರತವು ಕಳೆದ 77 ವರ್ಷಗಳಲ್ಲಿ ಅಗಾಧವಾಗಿ ಬೆಳೆದಿದೆ. ಪಕ್ಷಾತೀತವಾಗಿ ನಮ್ಮ ಎಲ್ಲ ಹಿರಿಯ ನಾಯಕರು ಮತ್ತು ಮುಖ್ಯಸ್ಥರು ದೇಶವನ್ನು ಅಭಿವೃದ್ಧಿಗಾಗಿ ಮುನ್ನಡೆಸಿದ್ದಾರೆ. ಭಾರತವು ಈಗ ಜಗತ್ತಿನ 5ನೇ ಬಲಿಷ್ಠ ರಾಷ್ಟ್ರವಾಗಿದೆ. ಯುವಕರು ದೇಶ ಸೇವೆಗೆ ಮುಂದಾಳತ್ವ ವಹಿಸಬೇಕು. ರಾಜಕೀಯವನ್ನು ಸೇರುವ ಮೂಲಕ ದೇಶದ ಅಭಿವೃದ್ಧಿಗೆ ಮತ್ತು ಸಮರ್ಥ ನಾಯಕತ್ವಕ್ಕೆ ಮುಂದಾಗಬೇಕೆಂದು ಸಚಿವರು ಯುವ ಸಮೂಹಕ್ಕೆ ಕರೆ ನೀಡಿದರು.

ಜಿಲ್ಲೆಯ ಕಾರ್ಯಕ್ರಮಗಳು: ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಬೇಡಿಕೆಯಲ್ಲಿರುವ 18 ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.  2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 2.57 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇದ್ದು, ಈ ವರೆಗೆ 1.57 ಲಕ್ಷ ಹೆಕ್ಟೇರ್‍ಗಳಷ್ಟು ಬಿತ್ತನೆಯಾಗಿದೆ. 1.1.2023 ರಿಂದ 2.8.2023 ರವರೆಗೆ 415 ಮಿ.ಮೀ. ವಾಡಿಕೆ ಮಳೆಗೆ 391 ಮಿ.ಮೀ. ಮಳೆಯಾಗಿರುತ್ತದೆ. ಮುಂಗಾರು ಹಂಗಾಮಿನಲ್ಲಿ ಒಟ್ಟು 11,300 ಕ್ವಿಂಟಾಲ್ ವಿವಿಧ ಬಿತ್ತನೆ ಬೀಜಗಳನ್ನು ವಿತರಿಸಲಾಗಿದೆ.  ಹಾಗೂ 35,807 ಮೆ.ಟನ್‍ಗಳಷ್ಟು ವಿವಿಧ ರಸಗೊಬ್ಬರಗಳನ್ನು ಪೂರೈಸಲಾಗಿದೆ ಎಂದು ಹೇಳಿದರು.
 
ಜನಪ್ರಿಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಮ್ಮ ಸರ್ಕಾರವು ನುಡಿದಂತೆ ನಡೆಯುವ ಸರ್ಕಾರ ಎಂಬುದನ್ನು ತಾವು ಮಂಡಿಸಿರುವ ಪ್ರಸಕ್ತ ಸಾಲಿನ ಬಜೆಟ್ ಮುಖಾಂತರ ನಾಡಿನ ಜನತೆಗೆ ಕಳೆದ 3 ತಿಂಗಳಲ್ಲಿ ಸ್ಪಷ್ಟಪಡಿಸಿ ರಾಜ್ಯದ ಜನತೆಯ ಪ್ರೀತಿ ಗಳಿಸಿರುತ್ತಾರೆ. ರೈತರು, ಕಾರ್ಮಿಕರು, ಹಿಂದುಳಿದ ವರ್ಗದವರು ಸೇರಿದಂತೆ ಎಲ್ಲಾ ವರ್ಗದ ಬಡ ಜನರಿಗೆ ಭದ್ರತೆಯನ್ನು ಒದಗಿಸಲು ಸರ್ಕಾರ ಸದಾ ಬದ್ಧವಾಗಿದೆ ಹಾಗೂ ಜನರ ನಿರೀಕ್ಷೆಯಂತೆ ನುಡಿದಂತೆ ನಡೆಯುತ್ತಿದ್ದೇವೆ ಎಂದು ಸಚಿವರು ತಿಳಿಸಿದರು.

ಜನಸಾಮಾನ್ಯರ ಕಲ್ಯಾಣಕ್ಕಾಗಿ ಸರ್ಕಾರ ಹಲವು ಅಭಿವೃದ್ಧಿ ಕಾಮಗಾರಿಗಳು ಹಾಗೂ ಯೋಜನೆಗಳನ್ನು ಕೈಗೊಳ್ಳಲಿದೆ. ಅವುಗಳ ಸಂಪೂರ್ಣ ಲಾಭ ಬಡವರು ಮತ್ತು ಅರ್ಹರಿಗೆ ತಲುಪುವಂತೆ ಮಾಡುವಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದು ಸಚಿವರು ಹೇಳಿದರು.

 ದೇಶಕ್ಕೆ ಶಾಂತಿ ಹಾಗೂ ಅಹಿಂಸಾ ಮಾರ್ಗದಿಂದ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾ ಗಾಂಧೀಜಿ ಹಾಗೂ ರಾಷ್ಟ್ರೀಯ ಹೋರಾಟದಲ್ಲಿ ದುಡಿದ ಮತ್ತು ಮಡಿದ ಮಹಾನುಭಾವರನ್ನು ಮತ್ತೊಮ್ಮೆ ನೆನಪಿಸಿಕೊಳ್ಳೋಣ. ಕರೆಗೆ ಓಗೊಟ್ಟು ಸಮಾರಂಭದಲ್ಲಿ ಭಾಗವಹಿಸಿರುವ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿರುವ ಗಣ್ಯ ವ್ಯಕ್ತಿಗಳಿಗೆ ಅಭಿನಂದನೆ ಸಲ್ಲಿಸಿದ ಸಚಿವರು, ಜಿಲ್ಲೆಯ ಅಭಿವೃದ್ಧಿಗೆ ತಮ್ಮ ಸಲಹೆ ಹಾಗೂ ಸಹಕಾರವನ್ನು ನೀಡುವಂತೆ ಸಾರ್ವಜನಿಕರಲ್ಲಿ ವಿನಂತಿಸಿದರು. 

ಸ್ವಾತಂತ್ರ್ಯದ ಹಿನ್ನೆಲೆ: ಭಾರತದ ರಾಷ್ಟ್ರೀಯ ಚಳುವಳಿಯನ್ನು ನೂರಾರು ವರ್ಷಗಳಿಂದ ರೂಪಿಸಿದ ನಮ್ಮ ಹಿರಿಯ ಹೊರಾಟಗಾರರಾದ ರಾಜಾರಾಮ್ ಮೋಹನ್ ರಾಯ್, ದಾದಾಬಾಯಿ ನವರೋಜಿ, ಕವಿ ರವಿಂದ್ರನಾಥ ಠಾಗೋರ್, ಗೋಪಾಲಕೃಷ್ಣ ಗೋಖಲೆ, ಮಹಾತ್ಮ ಗಾಂಧೀಜಿ, ಲಾಲಾ ಲಜಪತರಾಯ್, ಜವಾಹರಲಾಲ್ ನೆಹರು, ನೇತಾಜಿ ಸುಭಾಸಚಂದ್ರ ಬೋಸ್, ಭಗತ್‍ಸಿಂಗ್, ಮೌಲಾನಾ ಆಜಾದ್ ಮೊದಲಾದ ಮಹನೀಯರು ಮಾಡಿದ ತ್ಯಾಗ, ಬಲಿದಾನಗಳ ಫಲದಿಂದ ನಾವೆಲ್ಲರೂ ಸ್ವಾತಂತ್ರ್ಯವನ್ನು ಪಡೆದಿದ್ದೇವೆ.

 ಅಹಿಂಸಾ ಮಾರ್ಗದಲ್ಲಿಯೇ ಸ್ವಾತಂತ್ರ್ಯವನ್ನು ಪಡೆದುಕೊಳ್ಳಬೇಕೆಂಬ ಮಹಾತ್ಮಾ ಗಾಂಧೀಜಿ  ಅವರ ಹೋರಾಟಕ್ಕೆ ಈ ಭಾಗದ ಮೈಲಾರ ಮಹದೇವಪ್ಪ, ಆರ್.ಆರ್.ದಿವಾಕರ್, ಉಮಾಬಾಯಿ ಕುಂದಾಪುರ, ಎನ್.ಎಸ್. ಹರ್ಡಿಕರ್, ಕೆ.ಎಫ್.ಪಾಟೀಲ, ಗೋವಿಂದಾಚಾರ್ಯ ಅಗ್ನಿಹೋತ್ರಿ, ನರಸಿಂಹ ದಾಬಡೆ ಸೇರಿದಂತೆ ಮೊದಲಾದ ನೇತಾರರು ಕೈ ಜೋಡಿಸಿದ್ದರು. 

ನಮ್ಮ ದೇಶದ ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರಲಾಂಛನಗಳು ರಾಷ್ಟ್ರದ ಅಸ್ತಿತ್ವ, ಸಾರ್ವಭೌಮತ್ವವನ್ನು ಸಾರುತ್ತಿವೆ ಹಾಗೂ ರಾಷ್ಟ್ರದ ಹಿನ್ನಲೆ, ಕಲ್ಪನೆ ಮತ್ತು ಸಂಸ್ಕøತಿಯನ್ನು ಪ್ರತಿಪಾದಿಸುತ್ತವೆ. ಈ ಹಿನ್ನೆಲೆಯಲ್ಲಿ ಇವುಗಳಿಗೆ ಗೌರವ ತೋರುವುದು, ಗೌರವ ದೊರಕಿಸಿಕೊಡುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯವಾಗಿದೆ. ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ರವರು ರಚಿಸಿದ ಭಾರತದ ಸಂವಿಧಾನವು ರಾಷ್ಟ್ರದ ಆಡಳಿತ ಮತ್ತು ಅಭಿವೃದ್ಧಿಯ ಬುನಾದಿಯಾಗಿದೆ.

 ನಮ್ಮ ದೇಶದ ಹೆಮ್ಮೆಯ ಸಂಕೇತವಾಗಿರುವ ರಾಷ್ಟ್ರಧ್ವಜವನ್ನು ಧಾರವಾಡದ ಗರಗ ಹಾಗೂ ಹುಬ್ಬಳ್ಳಿಯ ಬೆಂಗೇರಿಯಲ್ಲಿ ಸಿದ್ಧಪಡಿಸಿ ದೇಶಕ್ಕೆ ಒದಗಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ.

ಸ್ವಾತಂತ್ರ್ಯ ಸಂಗ್ರಾಮಕ್ಕೆ ಜಿಲ್ಲೆಯ ಕೊಡುಗೆ: 1934ರಲ್ಲಿ ಮಹಾತ್ಮಾ ಗಾಂಧೀಜಿಯವರು, 1935ರಲ್ಲಿ ಡಾ. ರಾಜೇಂದ್ರ ಪ್ರಸಾದ್ ರವರು ಮತ್ತು 1938ರಲ್ಲಿ ಸುಭಾಷ್ ಚಂದ್ರ ಬೋಸ್ ರವರು ಹುಬ್ಬಳ್ಳಿ ಧಾರವಾಡಕ್ಕೆ ಭೇಟಿ ನೀಡಿ, ಜನರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವಂತೆ ಹುರಿದುಂಬಿಸಿದ್ದರು ಎಂದು ಸಚಿವರು ಹೇಳಿದರು. 

ಸ್ವಾತಂತ್ರ್ಯ ಹೋರಾಟದಲ್ಲಿ ಧಾರವಾಡ ಜಿಲ್ಲೆಯಿಂದ ಪ್ರಕಟವಾಗುತ್ತಿದ್ದ ರಾಜಹಂಸ ಪತ್ರಿಕೆ, ಕನ್ನಡ ಕೇಸರಿ ಹಾಗೂ ಇತರೆ ಪತ್ರಿಕೆಗಳ ಪಾತ್ರವು ಬಹಳ ಮುಖ್ಯವಾಗಿದೆ ಎಂದು ಹೇಳಿದರು. 
 
ಸರ್ ಸಿದ್ದಪ್ಪ ಕಂಬಳಿ, ಡೆಪ್ಯೂಟಿ ಚೆನ್ನಬಸಪ್ಪ, ಅರಟಾಳ ರುದ್ರಗೌಡರು, ಇವರುಗಳು ಈ ಭಾಗದ ಶಿಕ್ಷಣ ಮತ್ತು ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ನಾವು ಸದಾಕಾಲ ನೆನಪಿಸಿಕೊಳ್ಳೋಣ.  

ಕಾರ್ಯಕ್ರಮದಲ್ಲಿ ಮಾಜಿ ಸಭಾಪತಿ ವಿರಣ್ಣ ಮತ್ತಿಗಟ್ಟಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಮಹಾನಗರ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ., ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಉಪಪೊಲೀಸ್ ಆಯುಕ್ತರಾದ ಡಾ. ಗೋಪಾಲ ಬ್ಯಾಕೋಡ, ರಾಜೀವ.ಎಂ., ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ  ಡಾ. ಸಂತೋಷ ಬಿರಾದಾರ, ಉಪವಿಭಾಗಾಧಿಕಾರಿ ಅಶೋಕ ತೇಲಿ, ಸಹಾಯಕ ಪೊಲೀಸ್ ಆಯುಕ್ತರಾದ ವಿಜಯಕುಮಾರ ವಿ.ಟಿ., ವಿನೋದಕುಮಾರ ಮುಕ್ತೇದಾರ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ, ಆರ್‍ಸಿಎಚ್‍ಓ ಅಧಿಕಾರಿ ಡಾ. ಸುಜಾತಾ ಹಸವಿಮಠ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಬಿ.ಎಸ್. ಮೂಗನೂರಮಠ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕೆ.ಸಿ. ಭದ್ರಣ್ಣವರ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ, ಯುವಜನ ಸೇವಾ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ ಸರಶೆಟ್ಟಿ, ಪೊಲೀಸ್ ಇನ್ಸ್‍ಪೆಕ್ಟರ್ ಶಂಕರಗೌಡ ಪಾಟೀಲ, ಎನ್.ಸಿ.ಕಾಡದೇವರಮಠ, ಸಂಚಾರಿ ಇನ್ಸ್‍ಪೆಕ್ಟರ್ ಮಲ್ಲನಗೌಡ ನಾಯ್ಕರ, ತಹಶೀಲ್ದಾರ ದೊಡ್ಡಪ್ಪ ಹೂಗಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

ಕಾರ್ಯಕ್ರಮದ ನಂತರ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಜಂಟೆಷನ್ ಶಾಲೆ, ಕೆಪಿಇಎಸ್ ಶಾಲೆ ಮತ್ತು ಬಸವರೆಡ್ಡಿ ಶಾಲೆಯ ವಿದ್ಯಾರ್ಥಿಗಳು ಸಾಮೂಹಿಕ ನೃತ್ಯವನ್ನು ಪ್ರದರ್ಶಿಸಿದರು. 

ಶಾಲಾ ಶಿಕ್ಷಣ ಇಲಾಖೆಯ ಕನ್ನಡ ವಿಷಯ ಪರಿವೀಕ್ಷಕಿ ಪೂರ್ಣಿಮಾ ಮುಕುಂದಿ ಮತ್ತು ಧಾರವಾಡ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಜಯಲಕ್ಷ್ಮೀ ಎಚ್. ಅವರು ಕಾರ್ಯಕ್ರಮ ನಿರೂಪಿಸಿದರು.

ಸಾಧಕರಿಗೆ ಸನ್ಮಾನ: ಕ್ರೀಡೆಯಲ್ಲಿ ಸಾಧನೆ ಮಾಡಿರುವ ಸದಾನಂದ ಹೆಚ್ ಅಮರಾಪೂರ, ಶಿವಪ್ಪ ಮಾಹಾಂತಪ್ಪ ಸಲಕಿ, ಪವನ ಹುಚ್ಚಪ್ಪ ಹಂಡಿ, ದೇವಪ್ಪ ಮಹದೇವಪ್ಪ ಮೋರೆ ಅವರಿಗೆ ಮತ್ತು ಸಮಾಜ ಸೇವೆಯಲ್ಲಿ ಉತ್ತಮ ಸೇವೆ ಮಾಡಿರುವ ವೈಶಾಲಿ ಎನ್. ಬ್ಯಾಳಿ, ಯಮನಪ್ಪ ಜಾಲಗಾರ ಸಂಗೀತ, ವೈದ್ಯಕೀಯದಲ್ಲಿ ಕವನ ದೇಶಪಾಂಡೆ ಮತ್ತು ಮಂಜುನಾಥ ಭಾಜಗುಂಡಿ ಅವರಿಗೆ ಸನ್ಮಾನಿಸಲಾಯಿತು. 

ಟಾಕಿಂಗ್ ಲ್ಯಾಪ್ ಟಾಪ ಫಲಾನುಭವಿಗಳು: ವಿಕಲಚೇತನರ ಇಲಾಖೆಯಿಂದ ಫಲಾನುಭವಿಗಳಾದ ವಾಸಂತಿ ಫಕೀರಪ್ಪ ಕಾಳಿ ಮತ್ತು ಸಿದ್ದಪ್ಪ ರಾಮಪ್ಪ ಹೆಬ್ಬಳ್ಳಿ ಇವರಿಗೆ ಟಾಕಿಂಗ್ ಲ್ಯಾಪ್ ಟಾಪ ವಿತರಿಸಲಾಯಿತು ಮತ್ತು ಶಂಕರ್ ಗುರುಪ್ಪ ಮಲ್ನಾಡ್, ಮಡಿವಾಳಪ್ಪ ಮರುದ್ರಪ್ಪ ಬಾರ್ಕಿ, ಸುನಂದಾ ಮಂಜುನಾಥ್ ಗುಂಡಗೈ, ಪವಿತ್ರ ಶಿವಾನಂದ ಸವದತ್ತಿ, ರೂಪ ಯಲ್ಲಪ್ಪ ಮುಗಳಿ ಅವರಿಗೆ ಯಂತ್ರ ಚಾಲಿತ ತ್ರಿಚಕ್ರ ವಾಹನ ನೀಡಲಾಯಿತು.  

ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರೈತರಿಗೆ ಸಾಂಕೇತಿಕವಾಗಿ ತಾಳೆ ಸಸಿ ವಿತರಿಸುವ ಮೂಲಕ ತಾಳೆ ಬೆಳೆ ಬೇಸಾಯಕ್ಕೆ ಒತ್ತು ನೀಡುವ ತಾಳೆ ಪ್ರದೇಶವನ್ನು ಹೆಚ್ಚಿಸುವ ಉದ್ದೇಶದ ಆಯಿಲ್ ಪಾಮ್ ಪ್ಲಾಂಟೇಶನ್ ಮೆಗಾ ಡ್ರೈವ್ ಆಂದೋಲನಕ್ಕೆ ಸಚಿವರು ಸೋಮಾಪುರದ ರೈತ ರಮೇಶ ಅಡಿವೆಪ್ಪ ಸಗರಿ ಅವರಿಗೆ ತಾಳೆ ಸಸಿ ವಿತರಿಸುವ ಮೂಲಕ ಚಾಲನೆ ನೀಡಿದರು. 

ಎಬಿಆರ್‍ಕೆ ಸಾಧನೆಗೆ ಸನ್ಮಾನ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅನುಷ್ಠಾನದಲ್ಲಿರುವ ಎಬಿಆರ್‍ಕೆ ಯೋಜನೆಯಲ್ಲಿ ಹೆಚ್ಚು ಸಾಧನೆ ಮಾಡಿರುವ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ (ಕಿಮ್ಸ್) ಸಂಸ್ಥೆಯ ಪರವಾಗಿ ಡಾ: ಲಕ್ಷ್ಮೀಕಾಂತ ಲೋಕರೆ ಮತ್ತು ಎಚ್‍ಸಿಜಿ ಎನ್‍ಎಂಆರ್ ಕ್ಯೂರಿ ಸೆಂಟರ್ ಫಾರ್ ಆಂಕೊಲಜಿ (ಹೆಚ್‍ಸಿಜಿ) ಕೇಂದ್ರದ ಮುಖ್ಯಸ್ಥ ಡಾ: ಅಬ್ದಲ್ ರೇಹಮಾನ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಪ್ರಮಾಣ ಪತ್ರದೊಂದಿಗೆ ಸನ್ಮಾನಿಸಿ ಗೌರವಿಸಿದರು.

ಸಾರ್ವಜನಿಕರ ಗಮನ ಸೇಳೆದ ವಿದ್ಯಾರ್ಥಿಗಳ ಮಲ್ಲಕಂಬ: ಸ್ವಾತಂತ್ರ್ಯ ದಿನೋತ್ಸವದ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರರ್ದಶಿಸಿದ ಮಲ್ಲಕಂಬ ಪ್ರದರ್ಶನವು ಸಾರ್ವಜನಿಕರ ಗಮನ ಸೆಳೆಯಿತು. ಶಾಲೆಯ ಶಿಕ್ಷಕ ಸಿದ್ದಾರೂಡ ಹೂಗಾರ ಅವರ ಮಾರ್ಗದರ್ಶನದಲ್ಲಿ ಶಾಲಾ ಮಕ್ಕಳು ವಿವಿಧ ಬಂಗಿಯ ಮಲ್ಲಕಂಬದ ಕಸರತ್ತುಗಳನ್ನು ಪ್ರದರ್ಶಿಸಿದರು. ಈಗಾಗಲೇ ಸುಮಾರು ಎಂಟು ದೇಶಗಳಲ್ಲಿ ಮಲ್ಲಕಂಬ ಪ್ರದರ್ಶಿಸಿರುವ ವಿದ್ಯಾರ್ಥಿಗಳ ಸಾಧನೆಯನ್ನು ಮೆಚ್ಚಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಪ್ರದರ್ಶನ ಸ್ಥಳಕ್ಕೆ ತೆರಳಿ ಶುಭ ಹಾರೈಸಿದರು ಮತ್ತು ಮಲ್ಲಕಂಬದ ಸುಧಾರಿತ ಪರಿಕರಗಳನ್ನು ನೀಡುವ ಭರವಸೆ ನೀಡಿದರು.

ಆಕರ್ಷಕ ಪಥಸಂಚಲನ: ಪರೇಡ್ ಕಮಾಂಡರ್ ನಾಗರಾಜ ಪಾಟೀಲ್ ಮತ್ತು 2ನೇ ಪರೇಡ್ ಕಮಾಂಡರ್ ಕೆ.ಎಫ್.ಹದ್ದಣ್ಣವರ ನೇತೃತ್ವದಲ್ಲಿ ಆಕರ್ಷಕ ಪಥ ಸಂಚಲನ ಜರುಗಿತು. 

ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಎಸ್.ಬಿ.ನಾಯಕ,  ಗೃಹ ರಕ್ಷಕ ದಳದ ವಾದಿರಾಜ ದೇಶಪಾಂಡೆ, ಸೀನಿಯರ್ ಎನ್.ಸಿ.ಸಿ ಕೆಡೇಟ್  ಆದರ್ಶ ಎನ್.ಪಾಟೀಲ್, ಅಬಕಾರಿ ಇಲಾಖೆಯ ಶಬ್ಬೀರ ಜಮಾದರ, ಅಗ್ನಿಶಾಮಕ ಇಲಾಖೆಯ  ಅರ್ಜುನ್ ವಿ.ಮಾನೆ, ಅರಣ್ಯ ಇಲಾಖೆಯ ಸಂತೋಷ ಕುಮಾರ ಎಂ.ಜಿ, 24 ಕರ್ನಾಟಕ ಎನ್.ಸಿ.ಸಿ. ಯು.ಪಿ.ಎಸ್.ಸಿ.ಶಾಲೆಯ   ಸಂಜಯ ವನಹಳ್ಳಿ, 5 ಕರ್ನಾಟಕ ಗಲ್ರ್ಸ್ ಎನ್.ಸಿ.ಸಿ ಕಮಾಂಡರ್ ಸ್ನೇಹ ನಿಡಗುಂದಿ, ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೆÇಲೀಸ್ ಮಕ್ಕಳ ವಸತಿ ಶಾಲೆಯ ಶ್ರೇಯಸ್ ಹೊಸಮನಿ, ಭಾರತ ಸೇವಾದಳದ ಪ್ರಜ್ವಲಗೌಡ ಪಾಟೀಲ, ಆದರ್ಶ ವಿದ್ಯಾಲಯದ  ವಿದ್ಯಾಶ್ರೀ ಬೆಳವಡಿ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‍ದ ಮೇಘನಾ ಕುಪ್ಪೆಲೂರು ನೇತೃತ್ವದ ತಂಡಗಳು ಪಥ ಸಂಚಲನದಲ್ಲಿ ಭಾಗಿಯಾಗಿದ್ದವು. ಡಿಎಆರ್‍ದ ಎಆರ್‍ಎಸ್‍ಐ ವೈ.ಎಫ್.ಭಜಂತ್ರಿ ಹಾಗೂ ಸ್ಟಿಕ್ ಮೇಜರ್ ಸಾಗರ ಬಸರಿಕೊಡಿ ಅವರ ಆರ್ಕಷಕ ಪೊಲೀಸ್ ವಾದ್ಯ ವೃಂದವು ಪಥ ಸಂಚಲನಕೆ ಸುಮಧುರು ಸಂಗೀತ ನೀಡಿತು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಬಿಜೆಪಿ ಮುಖಂಡನಿಗೆ ಪೆನ್‌ಡ್ರೈವ್ ನೀಡಿದ್ದೆ; ಪ್ರಜ್ವಲ್ ಕಾರು ಚಾಲಕನಿಂದ ಹೇಳಿಕೆ

ಪ್ರಜ್ವ ರೇವಣ್ಣರದ್ದು ಎನ್ನಲಾದ ಅಶ್ಲೀಲ ವೀಡಿಯೊ ಪೆನ್ ಡ್ರೈವ್ ಬಿಜೆಪಿ ಮುಖಂಡರೂ ಆಗಿರುವ ವಕೀಲ ದೇವರಾಜೇಗೌಡ ಬಿಟ್ಟು ಬೇರೆ ಯಾರಿಗೂ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಅವಧಿ ಉಲ್ಲೇಖಿಸದೇ ಪ್ರಜ್ವಲ್ ರೇವಣ್ಣ ಜೆಡಿಎಸ್‌ನಿಂದ ಅಮಾನತು

ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಪ್ರಕರಣ ಸಂಬಂಧ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ರೇವಣ್ಣ, ಪ್ರಜ್ವಲ್ ಉಚ್ಚಾಟನೆಗೆ ಜೆಡಿಎಸ್ ಶಾಸಕರ ಪಟ್ಟು

ರಾಜ್ಯದ ಜನತೆಯ ಮುಂದೆ ತಲೆ ತಗ್ಗಿಸುವಂತಹ ಕೆಲಸ ಮಾಡಿದವರನ್ನು ರಾಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಘನತೆಯನ್ನು ಉಳಿಸಬೇಕಿದೆ ಎಂದು ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ: ಕುಮಾರಸ್ವಾಮಿ

ಜೆಡಿಎಸ್ ಸಂಸದ ಪ್ರಜಿ ಕುಮಾರಸ್ವಾಮಿ ಡ್ರೈವ್ ಪ್ರಕರಣದಲ್ಲಿ ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ' ಎಂದು ಮಾಧ್ಯಮಗಳ ಮುಂದೆ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ತ್ವರಿತಗತಿಯಲ್ಲಿ ತನಿಖೆ ನಡೆಸಿ, ವರದಿ ಸಲ್ಲಿಸಲು ಸೂಚನೆ: ಪರಮೇಶ್ವ‌ರ್

ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಿ, ವರದಿ ಸಲ್ಲಿಸುವಂತೆ ...