ದಿಲ್ಲಿ ವಿವಿ ಪ್ರೊಫೆಸರ್ ಸಾಯಿಬಾಬಾ ದೋಷಮುಕ್ತ; ಮಾವೋವಾದಿಗಳೊಂದಿಗೆ ನಂಟು ಆರೋಪದ ಪ್ರಕರಣದಲ್ಲಿ ಇತರ ಐವರೂ ಬಿಡುಗಡೆ

Source: Vb | By I.G. Bhatkali | Published on 6th March 2024, 8:45 AM | National News |

ನಾಗಪುರ: ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠವು ಮಂಗಳವಾರ, ಮಾವೋವಾದಿಗಳೊಂದಿಗೆ ನಂಟು ಹೊಂದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ದಿಲ್ಲಿ ವಿಶ್ವವಿದ್ಯಾನಿಲಯದ ಮಾಜಿ ಪ್ರೊಫೆಸರ್ ಜಿ.ಎನ್. ಸಾಯಿಬಾಬಾ ಮತ್ತು ಇತರ ಐವರನ್ನು ದೋಷಮುಕ್ತಗೊಳಿಸಿದೆ ಹಾಗೂ ಅವರಿಗೆ ನೀಡಲಾಗಿರುವ ಜೀವಾವಧಿ ಶಿಕ್ಷೆಯನ್ನು ರದ್ದುಗೊಳಿಸಿದೆ.

ಈ ಪ್ರಕರಣದಲ್ಲಿ ಸಾಯಿಬಾಬಾರನ್ನು ಮೊದಲು 2014 ಮೇ ತಿಂಗಳಿನಲ್ಲಿ ಬಂಧಿಸಲಾಗಿತ್ತು. ಅವರಿಗೆ ಎರಡು ಬಾರಿ ಜಾಮೀನು ನೀಡಲಾಗಿತ್ತು. 2017ರಲ್ಲಿ ಸೆಶನ್ಸ್ ನ್ಯಾಯಾಲಯವೊಂದು ಅವರ ಆರೋಪ ಸಾಬೀತಾಗಿದೆ ಎಂದು ಘೋಷಿಸಿದ ಬಳಿಕ ಅವರನ್ನು ನಾಗಪುರದ ಕೇಂದ್ರೀಯ ಜೈಲಿನಲ್ಲಿ ಇರಿಸಲಾಗಿತ್ತು.

ಆರೋಪಿಗಳ ವಿರುದ್ಧದ ಆರೋಪಗಳನ್ನು ಸಂಶಯಾತೀತವಾಗಿ ಸಾಬೀತುಪಡಿಸಲು . ಪ್ರಾಸಿಕ್ಯೂಶನ್ ವಿಫಲವಾಗಿರುವ ಹಿನ್ನೆಲೆಯಲ್ಲಿ ಪ್ರಕರಣದ ಎಲ್ಲಾ ಆರೋಪಿಗಳನ್ನು ದೋಷ ಮುಕ್ತ ಗೊಳಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ವಿನಯ ಜೋಶಿ ಮತ್ತು ವಾಲ್ಮೀಕಿ ಎಸ್.ಎ. ಮಿನೇಜಸ್ ಅವರನ್ನೊಳಗೊಂಡ ವಿಭಾಗ ಪೀಠವೊಂದು ತೀರ್ಪು ನೀಡಿತು.

ಆರೋಪಿಗಳ ವಿರುದ್ದ ಕಠೋರ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯ ವಿಧಿಗಳಡಿ ಆರೋಪ ಹೊರಿಸಲು ಪ್ರಾಸಿಕ್ಯೂಶನ್ ಪಡೆದುಕೊಂಡಿರುವ ಅನುಮತಿಯೂ ರದ್ದಾಗಿದೆ ಎಂಬುದಾಗಿಯೂ ನ್ಯಾಯಾಲಯ ಆದೇಶಿಸಿತು. ತನ್ನ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಪ್ರಾಸಿಕ್ಯೂಶನ್ ಹೈಕೋರ್ಟ್‌ಗೆ ಮನವಿ ಸಲ್ಲಿಸಿಲ್ಲ. ಆದರೆ, ಅದು ತಕ್ಷಣ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ನಿರೀಕ್ಷೆ ಇದೆ.

2022 ಅಕ್ಟೋಬರ್ 14ರಂದು ಹೈಕೋರ್ಟ್‌ನ ಇನ್ನೊಂದು ಪೀಠವು ಸಾಯಿಬಾಬಾರನ್ನು ದೋಷಮುಕ್ತಗೊಳಿಸಿತ್ತು. 

ಯುಎಪಿಎ ಅಡಿಯಲ್ಲಿ ವಿಚಾರಣೆ ನಡೆಸಲು ಸೂಕ್ತ ಅನುಮತಿ ಯನ್ನು ಪ್ರಾಸಿಕ್ಯೂಶನ್ ಪಡೆದುಕೊಂಡಿಲ್ಲ ಎನ್ನುವುದನ್ನು ಗಮನಿಸಿದ ನ್ಯಾಯಪೀಠವು ಸಾಯಿಬಾಬಾರ ವಿಚಾರಣೆಯನ್ನು “ಅನೂರ್ಜಿತಗೊಳಿಸಿತ್ತು. ಮಹಾರಾಷ್ಟ್ರ ಸರಕಾರವು ಅದೇ ದಿನ ಈ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಆರಂಭದಲ್ಲಿ, ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿತು. ಬಳಿಕ, 2023 ಎಪ್ರಿಲ್‌ನಲ್ಲಿ ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿ, ಸಾಯಿಬಾಬಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೊಸದಾಗಿ ನಡೆಸುವಂತೆ ಹೈಕೋರ್ಟ್‌ಗೆ ಆದೇಶಿಸಿತ್ತು. ಗಾಲಿಕುರ್ಚಿಯಲ್ಲಿ ಓಡಾಡುವ ಸಾಯಿ ಬಾಬಾ (54) 2014ರಿಂದ ನಾಗಪುರ ಕೇಂದ್ರೀಯ ಜೈಲಿನಲ್ಲಿ ಇದ್ದಾರೆ. 2017ರಲ್ಲಿ, ಈ ಪ್ರಕರಣದಲ್ಲಿ ಮಹಾರಾಷ್ಟ್ರದ ಗಡ್ಡಿರೋಳಿ ಜಿಲ್ಲೆಯ ಸೆಶನ್ಸ್ ನ್ಯಾಯಾಲಯವು ಸಾಯಿಬಾಬಾ ಮತ್ತು ಇತರ ಐವರನ್ನು ದೋಷಿ ಎಂಬುದಾಗಿ ಘೋಷಿಸಿತ್ತು. ಓರ್ವ ಪತ್ರಕರ್ತ ಮತ್ತು ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಓರ್ವ ವಿದ್ಯಾರ್ಥಿ ದೋಷಿಗಳಲ್ಲಿ ಸೇರಿದ್ದರು. ಯುಎಪಿಎ ಮತ್ತು ಭಾರತೀಯ ದಂಡ ಸಂಹಿತೆಯಡಿ ಅವರ ವಿಚಾರಣೆಯನ್ನು ಸೆಶನ್ಸ್ ನ್ಯಾಯಾಲಯ ಮಾಡಿತ್ತು.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...