ಮಧ್ಯಪ್ರದೇಶ ಸರಕಾರದ ಕ್ರಮ ಖಂಡನೀಯ: ಸಿದ್ದರಾಮಯ್ಯ
ಬೆಂಗಳೂರು: 'ಹೊಸದಿಲ್ಲಿಯಲ್ಲಿ ಮಂಗಳವಾರ ನಡೆಯಲಿರುವ ಪ್ರತಿಭಟನೆ ಯಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದ ಹುಬ್ಬಳ್ಳಿಯ ರೈತರನ್ನು ಭೋಪಾಲ್‌ನಲ್ಲಿ ಬಂಧಿಸಿರುವ ಮಧ್ಯಪ್ರದೇಶ ಸರಕಾರದ ಕ್ರಮ ಅತ್ಯಂತ ಖಂಡನೀಯ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ಈ ಸಂಬಂಧ ಪ್ರಕಟನೆ ನೀಡಿರುವ ಅವರು, 'ಬಂಧಿಸಲಾದ ರಾಜ್ಯದ ನಮ್ಮ ಎಲ್ಲ ರೈತರನ್ನು ತಕ್ಷಣ ಬಿಡುಗಡೆಗೊಳಿಸಿ ನಾಳೆ ಹೊಸದಿಲ್ಲಿ ಜಂತರ್-ಮಂತರ್‌ನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸಲು ಕಳಿಸಿಕೊಡಬೇಕು ಎಂದು ಮಧ್ಯಪ್ರದೇಶ ಸರಕಾರವನ್ನು ಒತ್ತಾಯಿಸುತ್ತಿದ್ದೇನೆ' ಎಂದು ತಿಳಿಸಿದ್ದಾರೆ.
'ಬಂಧಿಸಿರುವುದು ಮಧ್ಯಪ್ರದೇಶದ ಸರಕಾರವಾದರೂ ಈ ದುಷ್ಕೃತ್ಯದ ಹಿಂದಿನ ಕ್ರಿಮಿನಲ್ ಮೆದುಳು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರಕಾರ ಎನ್ನುವುದು ಸ್ಪಷ್ಟ ಈ ರೀತಿ ಬಂಧಿಸಿ, ಬೆದರಿಸಿ ರೈತರ ಹೋರಾಟವನ್ನು ಹತ್ತಿಕ್ಕಲಾಗದು. ಇಂಥ ದಬ್ಬಾಳಿಕೆಯಿಂದ ಇನ್ನಷ್ಟು ರೈತರು ಬೀದಿಗಿಳಿಯಬಹುದೇ ಹೊರತು ಮಣ್ಣಿನ ಮಕ್ಕಳ ಹೋರಾಟ ನಿಲ್ಲದು. ಶಾಂತಿ-ಸುವ್ಯವಸ್ಥೆಯ ಕಾಳಜಿಯನ್ನು ಕೇಂದ್ರ ಸರಕಾರ ಹೊಂದಿದ್ದರೆ ತಕ್ಷಣ ರೈತರ ಬೇಡಿಕೆಗಳನ್ನು ಈಡೇರಿಸಿ ಸಮಸ್ಯೆ ಬಗೆಹರಿಸಬೇಕೇ ಹೊರತು ಈ ರೀತಿ ದಮನ-ದೌರ್ಜನ್ಯ ನಡೆಸಿ ರೈತರ ಬಾಯಿ ಮುಚ್ಚಿಸುವುದಲ್ಲ' ಎಂದು ಸಲಹೆ ನೀಡಿದ್ದಾರೆ.
ಕೇಂದ್ರದಲ್ಲಿ ಇರಲಿ, ರಾಜ್ಯಗಳಲ್ಲಿ ಇರಲಿ ಬಿಜೆಪಿ ಕೈಗೆ ಅಧಿಕಾರ ಬಂದ ಕೂಡಲೇ ಅವರು ಮೊದಲು ದಂಡ ಪ್ರಯೋಗ ಮಾಡುವುದು ಅನ್ನದಾತರ ಮೇಲೆ ಎನ್ನುವುದಕ್ಕೆ ಇತಿಹಾಸ ಸಾಕ್ಷಿ. ಕರ್ನಾಟಕದಲ್ಲಿ ಮೊದಲ ಬಾರಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿ, ಗೊಬ್ಬರ ಕೇಳಿದ್ದ ರೈತರನ್ನು ಯಡಿಯೂರಪ್ಪ ನೇತೃತ್ವದ ಸರಕಾರ ನಿರ್ದಯವಾಗಿ ಗುಂಡಿಕ್ಕಿ ಕೊಂದಿತ್ತು' ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.