ಚುನಾವಣಾ ಆಯೋಗದಿಂದ ಜ.15ರವರೆಗೆ ಬಹಿರಂಗ ರ‍್ಯಾಲಿಗಳಿಗೆ ನಿಷೇಧ; ಪ್ರಚಾರ ಮಾರ್ಗಸೂಚಿ ಪ್ರಕಟ

Source: Vb | By I.G. Bhatkali | Published on 9th January 2022, 4:34 PM | National News |

ಹೊಸದಿಲ್ಲಿ: ಅಭೂತಪೂರ್ವ ಕ್ರಮವೊ೦ದರಲ್ಲಿ ಶನಿವಾರ ಚುನಾವಣಾ ಆಯೋಗವು ಕೋವಿಡ್ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆಗಳು ನಡೆಯಲಿರುವ ಐದು ರಾಜ್ಯಗಳಲ್ಲಿ ಜ.15ರವರೆಗೆ ಬಹಿರಂಗ    ರ‍್ಯಾಲಿಗಳು, ರೋಡ್ ಶೋಗಳು ಮತ್ತು ಬೀದಿಬದಿ ಸಭೆಗಳನ್ನು ನಿಷೇಧಿಸಿದೆ ಮತ್ತು ಕಟ್ಟುನಿಟ್ಟಾದ ಸುರಕ್ಷತಾ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಉತ್ತರಪ್ರದೇಶ, ಪಂಜಾಬ್, ಉತ್ತ ರಾಖಂಡ, ಗೋವಾ ಮತ್ತು ಮಣಿಪುರ ರಾಜ್ಯ ವಿಧಾನಸಭೆಗಳಿಗೆ ಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸಿದ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚ೦ದ್ರ ಅವರು ಚುನಾವಣಾ ಪ್ರಚಾರವನ್ನು ಡಿಜಿಟಲ್ ವಿಧಾನದಲ್ಲಿ ನಡೆಸುವಂತೆ ರಾಜಕೀಯ ಪಕ್ಷಗಳನ್ನು ಆಗ್ರಹಿಸಿದರಲ್ಲದೆ, ದೂರದರ್ಶನದಲ್ಲಿ ಪ್ರಚಾರಕ್ಕಾಗಿ ರಾಜಕೀಯ ಪಕ್ಷಗಳಿಗೆ ನಿಗದಿಯಾಗಿರುವ ಸಮಯಾವ ಕಾಶವನ್ನು ದ್ವಿಗುಣಗೊಳಿಸುವುದಾಗಿ ಪ್ರಕಟಿಸಿದರು.

ಕಳೆದ ವರ್ಷದ ಮಾರ್ಚ್-ಎಪ್ರಿಲ್ ನಲ್ಲಿ ಭೀಕರ ಕೋವಿಡ್ ಎರಡನೇ ಅಲೆ ಅಪ್ಪಳಿಸಿದ ಬಳಿಕ ಚುನಾವಣಾ ಆಯೋಗವು ತೀವ್ರ ಟೀಕೆಗಳಿಗೆ ಗುರಿಯಾಗಿತ್ತು. ಆ ಸಮಯದಲ್ಲಿ ಪ.ಬಂಗಾಳ, ತಮಿಳುನಾಡು, ಪುದುಚೇರಿ, ಅಸ್ಸಾಂ ಮತ್ತು ಕೇರಳಗಳಲ್ಲಿ ಚುನಾವಣೆಗಳನ್ನು ನಡೆಸಿದ್ದು ಕೋವಿಡ್ ಉಲ್ಬಣಗೊಳ್ಳಲು ಕಾರಣಗಳಲ್ಲೊಂದಾಗಿತ್ತು ಎಂದು ದೂರಲಾಗಿತ್ತು.

ಆಯೋಗವು ಚುನಾವಣಾ ಪ್ರಚಾರಕ್ಕಾಗಿ 16 ಅಂಶಗಳ ಮಾರ್ಗಸೂಚಿಯನ್ನು ಪಟ್ಟಿ ಮಾಡಿದ್ದು, ಸಾರ್ವಜನಿಕ ರಸ್ತೆಗಳಲ್ಲಿ ಮತ್ತು ವೃತ್ತಗಳಲ್ಲಿ ಸಭೆಗಳ ನಿಷೇಧ,ಮನೆಮನೆ ಪ್ರಚಾರಕ್ಕೆ ತೆರಳುವ ವ್ಯಕ್ತಿಗಳ ಸಂಖ್ಯೆ ಅಭ್ಯರ್ಥಿ ಸೇರಿದಂತೆ ಐದಕ್ಕೆ ಸೀಮಿತ ಮತ್ತು ಮತ ಎಣಿಕೆಯ ಬಳಿಕ ವಿಜಯೋತ್ಸವಗಳಿಗೆ ನಿಷೇಧ ಇವುಗಳಲ್ಲಿ ಸೇರಿವೆ.

ಕೋವಿಡ್ ಶಿಷ್ಟಾಚಾರಗಳನ್ನು ಪಾಲಿಸದಿದ್ದರೆ ರಾಜಕೀಯ ಪಕ್ಷಗಳು ಇನ್ನಷ್ಟು ದ್ಯಾಲಿಗಳನ್ನು ನಡೆಸುವುದನ್ನು ನಿಷೇಧಿಸಲು ಆಯೋಗವು ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದ ಸುಶೀಲ್ ಚಂದ್ರ, ಆಯೋಗವು ಜ.15ರಂದು ಕೋವಿಡ್ ಸ್ಥಿತಿಯನ್ನು ಪುನರ್‌ ಪರಿಶೀಲಿಸಿದ ಬಳಿಕ ಬಹಿರಂಗ ರಾಲಿಗಳಿಗೆ ಅವಕಾಶ ನೀಡುವ ಬಗ್ಗೆ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂದರು.

ಮತದಾರರಿಗೆ ಭರವಸೆ ನೀಡುವ ಪ್ರಯತ್ನವಾಗಿ ಸುಶೀಲ್ ಚಂದ್ರ, ಎಲ್ಲ ಚುನಾವಣಾ, ಭದ್ರತಾ ಮತ್ತು ಮತ ಎಣಿಕೆ ಸಿಬ್ಬಂದಿ ಲಸಿಕೆಯ ಎರಡು ಡೋಸ್‌ಗಳನ್ನು ಪಡೆದುಕೊಂಡಿರುವುದು ಅಗತ್ಯವಾಗಿದೆ ಎಂದರು.

ಮತದಾನದ ಅವಧಿಯನ್ನು ಒಂದು ಗಂಟೆ ಹೆಚ್ಚಿಸಲಾಗಿದೆ ಮತ್ತು ಪ್ರತಿ ಮತಗಟ್ಟೆಗೆ ಮತದಾರರ ಸಂಖ್ಯೆಯನ್ನು 1,500ರಿಂದ 1,250ಕ್ಕೆ ತಗ್ಗಿಸಲಾಗಿದೆ. ರಾತ್ರಿ ಎಂಟು ಗಂಟೆಯಿಂದ ಬೆಳಿಗ್ಗೆ ಎಂಟು ಗಂಟೆಯವರೆಗೆ ಪ್ರಚಾರ ಕರ್ಪೂ ಹೇರಲಾಗಿದ್ದು, ಯಾವುದೇ ದಿನ ಈ ಅವಧಿಯಲ್ಲಿ ಚುನಾವಣಾ ಪ್ರಚಾರವನ್ನು ನಡೆಸುವಂತಿಲ್ಲ ಎಂದು ಸುಶೀಲ್ ಚಂದ್ರ ತಿಳಿಸಿದರು.

ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪಕ್ಷಗಳಿಗೆ ಸ್ಟಾರ್ ಪ್ರಚಾರಕರ ಗರಿಷ್ಠ ಸಂಖ್ಯೆಯನ್ನು 40ರಿಂದ 30ಕ್ಕೆ ತಗ್ಗಿಸಿರುವ ಆಯೋಗವು, ಸಣ್ಣ ಮಾನ್ಯತೆ ಹೊಂದಿರದ ಪಕ್ಷಗಳಿಗೆ ಈ ಸಂಖ್ಯೆಯನ್ನು 20ರಿಂದ 15ಕ್ಕೆ ಇಳಿಸಿದೆ.

ಕೋವಿಡ್ ರೋಗಿಗಳು ಮತ್ತು ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳಿಗೆ ಆರೋಗ್ಯ ಅಧಿಕಾರಿಗಳ ಉಸ್ತುವಾರಿಯಡಿ ಕಟ್ಟುನಿಟ್ಟಾದ ಕೋವಿಡ್ ಸಂಬಂಧಿತ ಮುನ್ನೆಚ್ಚರಿಕೆ ಕ್ರಮಗಳ ಪಾಲನೆಯೊಂದಿಗೆ ಮತದಾನದ ದಿನದ ಕೊನೆಯ ಒಂದು ಗಂಟೆಯ ಅವಧಿಯಲ್ಲಿ ಅವರ ಮತಗಟ್ಟೆಗಳಲ್ಲಿ ಮತ ಚಲಾವಣೆಗೆ ಅವಕಾಶ ಕಲ್ಪಿಸಲಾಗುವುದು. ಸೆಕ್ಟರ್ ದಂಡಾಧಿಕಾರಿಗಳು ತಮಗೆ ಹಂಚಿಕೆಯಾಗರುವ ಮತಗಟ್ಟೆಗಳಲ್ಲಿ ಈ ಚಟುವಟಿಕೆಯನ್ನು ಸಂಯೋಜಿಸಲಿದ್ದಾರೆ ಎಂದು ಸುಶೀಲ್ ಚಂದ್ರ ತಿಳಿಸಿದರು.

 ರ‍್ಯಾಲಿಗಳನ್ನೂ ನಡೆಸಲು ಅವಕಾಶ ನೀಡಿದರೆ ಅವುಗಳಲ್ಲಿ ಭಾಗವಹಿಸುವ ಜನರಿಗೆ ಮಾಸ್ಕ್ ಗಳು ಮತ್ತು ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ಒದಗಿಸುವಂತೆ ರಾಜಕೀಯ ಪಕ್ಷಗಳಿಗೆ ಸೂಚಿಸಲಾಗಿದೆ. ವಿಜಯ ಸಂಭ್ರಮಾಚರಣೆಯನ್ನು ನಿಷೇಧಿಸಲಾಗಿದ್ದು, ಗೆಲುವಿನ ಪ್ರಮಾಣಪತ್ರವನ್ನು ಸ್ವೀಕರಿಸಲು ಅಭ್ಯರ್ಥಿಯ ಜೊತೆಯಲ್ಲಿರಲು ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಅವರು ಹೇಳಿದರು.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...