ಕೊರೊನಾ ಕಾಲದಲ್ಲಿ ನಿರ್ಗತಿಕರ ನೆರವಿಗೆ ಬಂದ ಭಟ್ಕಳದ ಇಂದಿರಾ ಕ್ಯಾಂಟೀನ್‍ಗೂ ತಪ್ಪದ ಆತಂಕ !

Source: S O News service | By V. D. Bhatkal | Published on 15th May 2021, 12:28 AM | Coastal News |

ಭಟ್ಕಳ: ಕೋವಿಡ್ ತಡೆಗಾಗಿ ರಾಜ್ಯಾದ್ಯಂತ ಹೊಟೆಲ್, ರೆಸ್ಟೋರೆಂಟ್‍ಗಳನ್ನು ಮುಚ್ಚಿಸುವುದರ ಜೊತೆಗೆ ಜನರ ಓಡಾಟದ ಮೇಲೆ ಸರಕಾರ ನಿರ್ಬಂಧ ಹೇರುತ್ತಿದ್ದಂತೆಯೇ ಮೊದಲು ಸಂಕಟಕ್ಕೆ ತಳ್ಳಲ್ಪಟ್ಟವರು ರಸ್ತೆಯ ಅಂಚಿನಲ್ಲಿ ಬದುಕು ಕಟ್ಟಿಕೊಂಡ ನಿರ್ಗತಿಕರು.

ರಸ್ತೆಯ ಮೇಲೆ ಅಡ್ಡಾಡುತ್ತಲೋ, ಮೂಲೆಯಲ್ಲಿ ಕುಳಿತೋ, ಅವರಿವರಿಗೆ ಕೈಯೊಡ್ಡುತ್ತಿದ್ದ ಇವರ ಬದುಕು ಕೊರೊನಾ ತಡೆ ಲಾಕ್‍ಡೌನ್‍ನಿಂದಾಗಿ ಇನ್ನಷ್ಟು ಯಾತನಾಮಯವಾಯಿತು. ಬಹಳಷ್ಟು ನಿರ್ಗತಿಕರು ದಿನಕ್ಕೆ ಒಂದು ಹೊತ್ತಿನ ಊಟಕ್ಕೂ ಪರದಾಡಿದರು. ಕಳೆದ ವರ್ಷ ಪೊಲೀಸರು ನಿರ್ಗತಿಕರನ್ನು ಅರಸಿಕೊಂಡು ಹೋಗಿ ಊಟ

ಕೊರೊನಾ ತಡೆ ಮಾರ್ಗ ಸೂಚಿಯಿಂದಾಗಿ ಇಂದಿರಾ ಕ್ಯಾಂಟೀನ್‍ನಲ್ಲಿ ಮೊದಲಿನಷ್ಟು ಗ್ರಾಹಕರಿಲ್ಲ. ಈಗ ಕೆಲವು ನಿರ್ಗತಿಕರಿಗೆ ನಾವು ಉಚಿತವಾಗಿ ಊಟ ನೀಡುತ್ತಿದ್ದೇವೆ. ಆದರೆ ಕಳೆದ 3 ತಿಂಗಳುಗಳಿಂದ ಸರಕಾರದಿಂದ ಹಣ ಪಾವತಿಯಾಗಿಲ್ಲ. ಇದು ಇನ್ನಷ್ಟು ವಿಳಂಬವಾದರೆ ಕಷ್ಟ
   - ಬಸನಗೌಡ ರಾಯಚೂರು, ಇಂದಿರಾ ಕ್ಯಾಂಟೀನ್ ನಿರ್ವಾಹಕರು

ನೀಡಿದ್ದರು. ಆದರೆ ಈ ವರ್ಷ ಸರಕಾರದ ಗೊತ್ತುಗುರಿಯಿಲ್ಲದ ಆದೇಶದಿಂದಾಗಿ ಲಾಕ್‍ಡೌನ್ ಯಾವ ರೀತಿ ಅನುಷ್ಠಾನಗೊಳಿಸಬೇಕು ಎನ್ನುವುದು ಗೊತ್ತಾಗದೇ ಕೆಲವು ಪೊಲೀಸರು ಮಾತ್ರವಲ್ಲ, ಉಳಿದ ಅಧಿಕಾರಿಗಳಿಗೂ ಎದುರಾಗಿರುವ ಗೊಂದಲ ಇನ್ನೂ ಬಗೆ ಹರಿದಂತೆ ಕಾಣಿಸುತ್ತಿಲ್ಲ. ಅಂತಹುದ್ದರಲ್ಲಿ ಪೊಲೀಸರು ನಿರ್ಗತಿಕರಿಗೆ ಊಟದ ವ್ಯವಸ್ಥೆಯನ್ನಾದರೂ ಹೇಗೆ ಮಾಡಿಯಾರು?

ಅಲ್ಲದೇ ಕಳೆದ 1 ತಿಂಗಳು ರಮಜಾನ್ ಮಾಸಾಚರಣೆ ಇದ್ದ ಕಾರಣ ಭಟ್ಕಳ ಪಟ್ಟಣದಲ್ಲಿ ನೆ ಬಾಗಿಲಗೆ ಹೋಗಿ ಅನ್ನ ಪಡೆಯುವುದೂ ನಿರ್ಗತಿಕರಿಗೆ ಕಷ್ಟವಾಯಿತು. ಒಂದೆರಡು ವಾರ ಅರ್ಧ ಬಾಗಿಲು ಮುಚ್ಚಿಕೊಂಡು ಪಾರ್ಸೆಲ್ ನೀಡುತ್ತಿದ್ದ ಹೊಟೆಲ್ ಮುಂದೆ ನಿಂತು ಕೆಲವು ನಿರ್ಗತಿಕರು ಹಸಿವು ನೀಗಿಸಿಕೊಂಡರು. ಹೊಟೆಲ್ ವ್ಯಾಪಾರವೂ ಅಷ್ಟಕ್ಕಷ್ಟೇ ಎಂಬಂತಾಗಿ ಹೊಟೆಲ್‍ಗಳೂ ಇನ್ನೇನು ಸಂಪೂರ್ಣ ಬಾಗಿಲು ಮುಚ್ಚಿಕೊಳ್ಳಲಿವೆ ಎಂದುಕೊಳ್ಳುವಾಗಲೇ ಸರಕಾರ ಇಂದಿರಾ ಕ್ಯಾಂಟೀನ್‍ನಲ್ಲಿ ಉಚಿತ ಆಹಾರ ಘೋಷಣೆ ಮಾಡಿದೆ.

ಪರಿಣಾಮವಾಗಿ ತಾಲೂಕಿನಲ್ಲಿ ರಸ್ತೆಯಲ್ಲಿ ಓಡಾಡಿಕೊಂಡಿದ್ದ 20ಕ್ಕೂ ಹೆಚ್ಚು ನಿರ್ಗತಿಕರು ಇಂದಿರಾ ಕ್ಯಾಂಟೀನ್‍ನತ್ತ ಮುಖ ಮಾಡಿದರು. 2 ಹೊತ್ತು ಊಟ ಮಾಡಿಕೊಂಡು ಸುಖವಾಗಿರುವ ಕನಸು ಚಿಗುರೊಡೆಯಿತು. ಕೆಲವರು ಇಂದಿರಾ ಕ್ಯಾಂಟೀನ್‍ನಲ್ಲಿಯೇ ವಾಸಕ್ಕೂ ಮುಂದಾಗಿದ್ದಾರೆ! 

ಇಂದಿರಾ ಕ್ಯಾಂಟೀನ್‍ಗೂ ಆತಂಕ!:
ಭಟ್ಕಳದಲ್ಲಿ ಇಂದಿರಾ ಕ್ಯಾಂಟೀನ್ ಆರಂಭವಾದ ನಂತರ ಊಟ, ಬೆಳಿಗ್ಗೆಯ ಉಪಹಾರಕ್ಕೂ ಹೆಚ್ಚಿನ ಬೇಡಿಕೆ ಕಂಡು ಬಂದಿತ್ತು. ಆದರೆ ಕೊರೊನಾ ಹಾವಳಿ ಹೆಚ್ಚಾಗಿ ಸರಕಾರ ಜನರ ಓಡಾಟದ ಮೇಲೆ ನಿರ್ಬಂಧ ಹೇರುತ್ತಿದ್ದಂತೆಯೇ ಇಂದಿರಾ ಕ್ಯಾಂಟೀನ್‍ನಲ್ಲಿ ನಿರಾಸೆ ಆವರಿಸಿಕೊಂಡಿದೆ. ಕೊರೊನಾ ವಾರಿಯರ್ಸ್‍ಗಳಾಗಿ ದುಡಿಯುತ್ತಿರುವ ಕೆಲವು ಸರಕಾರಿ ನೌಕರರನ್ನು ಬಿಟ್ಟರೆ ಹೆಚ್ಚಿನ ಗ್ರಾಹಕರು ಇಲ್ಲವಾಗಿದೆ.

ಈ ನಡುವೆ ಸರಕಾರ ಇಂದಿರಾ ಕ್ಯಾಂಟೀನ್‍ನಿಂದ ನಿರ್ಗತಿಕರಿಗೆ, ಕೈಲಾಗದವರಿಗೆ, ಪರ ಊರಿನಿಂದ ಬಂದವರಿಗೆ ಉಚಿತವಾಗಿ ಊಟ ನೀಡಿ ಎಂದೇನೋ ಹೇಳುತ್ತಿದೆ. ಆದರೆ ಇಂದಿರಾ ಕ್ಯಾಂಟೀನ್ ನಡೆಸುವವರಿಗೆ ಕಳೆದ 3 ತಿಂಗಳುಗಳಿಂದ ಸರಕಾರ ಹಣ ಪಾವತಿ ಮಾಡಿಲ್ಲ ಎಂಬ ಆರೋಪವೂ ಕೇಳಿ ಬರುತ್ತಿದೆ. ಎಲ್ಲರಿಗೂ ಉಚಿತ ಊಟ ನೀಡಿ ಎಂದು ಘೋಷಣೆಯಷ್ಟೇ ಮಾಡಿಕೊಂಡು ಸರಕಾರ ಸುಮ್ಮನೆ ಕುಳಿತರೆ ಮುಂದಿನ ದಿನಗಳನ್ನು ನಿಭಾಯಿಸುವುದು ಹೇಗೆ ಎಂಬ ಚಿಂತೆ ಕ್ಯಾಂಟೀನ್ ನಿರ್ವಾಹಕರದ್ದಾಗಿದೆ.                  

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...