ಡಾ.ಬಿ.ಆರ್. ಅಂಬೇಡ್ಕರ್ ಆಧುನಿಕ ಭಾರತದ ನಿರ್ಮಾತೃ; ನ್ಯಾ.ಮಾಯಣ್ಣ ಬಿ.ಎಲ್

Source: SO News | By MV Bhatkal | Published on 14th April 2024, 11:49 PM | Coastal News |

ಕಾರವಾರ: ಜ್ಞಾನದ ಹಿಮಾಲಯ, ಜ್ಞಾನದ ರತ್ನವಾಗಿದ್ದ ಡಾ. ಬಿ.ಆರ್.ಅಂಬೇಡ್ಕರ್ ಅವರ ಚಿಂತನೆ, ಸಿದ್ದಾಂತ, ಅವರು ಹಾಕಿಕೊಟ್ಟ ಮಾರ್ಗ ಹಾಗೂ ಅವರ ದೂರದೃಷ್ಟಿ ನೋಡಿದಾಗ ಅವರನ್ನು ಆಧುನಿಕ ಭಾರತದ ನಿರ್ಮಾತೃ ಎಂದು ಕರೆಯಲಾಗುತ್ತದೆ ಎಂದು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಾಯಣ್ಣ ಬಿ.ಎಲ್ ಹೇಳಿದರು.

ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ರಂಗಮದಿರದಲ್ಲಿ ಆಯೋಜಿಸಿದ ಡಾ. ಬಿ.ಆರ್. ಅಂಬೇಡ್ಕರ್ ರವರ 133ನೇ ಜಯಂತಿ ಕಾರ್ಯಕ್ರಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಡಾ.ಬಾಬುಜಗಜೀವನ ರಾಮ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಮರ್ಪಿಸಿ ಮಾತನಾಡಿದರು.

ಡಾ. ಬಿ.ಆರ್ ಅಂಬೇಡ್ಕರ್ ಅವರು ಅಪಾರ ಜ್ಞಾನ ಸಂಪತ್ತನ್ನು ಹೊಂದಿದ್ದು, 32 ಕ್ಕೂ ಅಧಿಕ ಪದವಿ ಪಡೆದ ಏಕೈಕ ವ್ಯಕ್ತಿ. ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿ, ಅರ್ಥಶಾಸ್ತಜ್ಞ, ನ್ಯಾಯಶಾಸ್ತಜ್ಞ ಹಾಗೂ ಸಮಾಜ ಸುದಾಕರಾಗಿದ್ದವರು, ಆಗಿನ ಕಾಲದಲ್ಲಿ ಶಿಕ್ಷಣ ಪಡೆಯುವುದು ಅತ್ಯಂತ ಕಠಿಣವಾಗಿತ್ತು ಅಂತಹ ಸಂದರ್ಭದಲ್ಲಿ ಉನ್ನತ ಶಿಕ್ಷಣ ಪಡೆದು ದೀನದಲಿತರು, ಶೋಷಿತರು ಹಾಗೂ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿ ಎಲ್ಲರಿಗೂ ಸಮಾನತೆ ದೊರಕಿಸಿಕೊಡಲು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ಮಹಾನ ವ್ಯಕ್ತಿ ಎಂದರು.

ಸವಿಧಾನ ರಚನಾ ಕರಡು ಸಮಿತಿಯ ಅಧ್ಯಕ್ಷರಾಗಿ ವೈವಿದ್ಯಮಯ ಸಂಸ್ಕೃತಿ, ಆಚಾರ ವಿಚಾರ ಹೊಂದಿದ ಬೃಹತ್ ಭಾರತ ರಾಷ್ಟಕ್ಕೆ ಸಂವಿಧಾನ ರಚಿಸುವುದು ಸಾಮಾನ್ಯ ಮಾತಲ್ಲ ಅಂತಹ ಶ್ರೇಷ್ಠ ಸಂವಿಧಾನವನ್ನು ರಚಿಸುವ ಮೂಲಕ ಸುಭದ್ರ ರಾಷ್ಟಕ್ಕೆ ಅವರ ನೀಡಿದ ಕೊಡುಗೆ ಇಂದಿಗೂ ಪ್ರಸ್ತುತ ಎಂದರು.  

ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಿ ಸಮಾನತೆ ಪಡೆಯಲು ಶಿಕ್ಷಣ ಮುಖ್ಯ ಎಂದು ನಂಬಿದ ಅವರು ಸಂವಿಧಾನದಲ್ಲಿ ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು ಎಂದು ಪ್ರತಿಪಾದಿಸಿದ್ದರು. ಮಹಿಳೆಯರು ಸಮಾಜದಲ್ಲಿ ಅನುಭವಿಸಿದ ಅನ್ಯಾಯವನ್ನು ಮನಗಂಡು ಸಮಾಜದಲ್ಲಿನ ತಾರತಮ್ಯ ಹೋಗಲಾಡಿಸಿ ಸಮಾನತೆಯನ್ನು ತರುವ ಉದ್ದೇಶದಿಂದ ಕಾನೂನು ಮಂತ್ರಿಯಾಗಿದ್ದಾಗ ಹಿಂದೂ ಕೋಡ್ ಬಿಲ್ ಸಂಸತ್ತಿನಲ್ಲಿ ಅಂಗೀಕಾರವಾಗದಿದ್ದರಿದ ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ದೇಶದ ಪ್ರತಿಯೊಬ್ಬರಿಗೂ ರಕ್ಷಣೆ ನೀಡುವುದು ಸಂವಿಧಾನ, ಅಂತಹ ಶ್ರೇಷ್ಠ ಸಂವಿಧಾನ ರಚಿಸುವ ಮೂಲಕ ಸಮಾಜದಲ್ಲಿನ ಅಸ್ಪೃಶ್ಯತೆ ನಿವಾರಿಸಿ ಎಲ್ಲರಿಗೂ ಸಮಾನತೆ ಒದಗಿಸಲು ಶ್ರಮಿಸಿದ ಮಹಾನ ನಾಯಕ. ಇಂತಹ ಮಹಾನ ನಾಯಕ ರಚಿಸಿದ ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರು ಅರ್ಥಮಾಡಿಕೊಂಡಾಗ ಮತ್ರ ಸಂವಿಧಾನದ ಆಶಯಗಳಿಗೆ ಗೌರವ ಸೂಚಿಸಿದಂತಾಗುತ್ತದೆ ಎಂದರು.

ಸಂವಿಧಾನದ ಆಶಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಸರ್ಕಾರ ರಾಜ್ಯದ ಪ್ರತಿಯೊದು ಹಳ್ಳಿಗಳ್ಳಿ ಸಂವಿಧಾನ ಜಾಗೃತಿ ಜಾಥಾ ಪ್ರಾರಂಭಿಸುವ ಮೂಲಕ ಸಂವಿಧಾನದ ಆಶಯಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ.
ದೇಶದಲ್ಲಿ ಪ್ರತಿಯೊಬ್ಬರಿಗೂ ಸಮಾನತೆ ಸಿಗಬೇಕು ಎಂಬುದು ಅಂಬೇಡ್ಕರ್ ಆಶಯವಾಗಿತ್ತು. ಸಮಾಜದಲ್ಲಿ ಜಾತಿ ವ್ಯವಸ್ಥೆಯಿಂದ ಅವರು ಅನೇಕ ಕಷ್ಟ ಅನುಭಿಸಿದರೂ ಅಪಾರ ಜ್ಞಾನ ಸಂಪತ್ತನ್ನು ಹೊಂದಿದ್ದರು. ಇಂದು ಅವರ ಜನ್ಮ ದಿನವನ್ನು ವಿಶ್ವ ಜ್ಞಾನ ದಿನ ಎಂದು ದೇಶ ವಿದೇಶದಲ್ಲಿ ಆಚರಿಸಲಾಗುತ್ತಿದೆ. ಜನರ ಮನಸ್ಸಿನಲ್ಲಿರುವ ಜಾತಿಯನ್ನು ತೊಡೆದು ಹಾಕಿದಾಗ ಮಾತ್ರ ಸಮಾಜದಲ್ಲಿ ಸಮಾನತೆ ಬರಲು ಸಾಧ್ಯ ಎಂದರು.

ನಿವೃತ್ತ ಪ್ರಾಧ್ಯಾಪಕ ಎಂ.ಆರ್. ನಾಯಕ ಉಪನ್ಯಾಸ ನೀಡಿ, ದೀನದಲಿತರ, ದುರ್ಬಲರ, ಶೋಷಿತರ ಹಾಗೂ ಮಹಿಳೆಯರ ಅಭ್ಯುದಯಕ್ಕಾಗಿ ಶ್ರಮಿಸಿದ ಮಹಾನ ನಾಯಕ ಡಾ.ಬಿ.ಆರ್.ಅಂಬೇಡ್ಕರ್, ವಿಶ್ವ ಸಂಸ್ಥೆ ಅಂಬೇಡ್ಕರ್ ಜನ್ಮ ದಿನವನ್ನು “ವಿಶ್ವ ಜ್ಞಾನ ದಿನ” ಎಂದು ಘೋಷಿಸುವ ಮೂಲಕ ವಿಶ್ವಾದ್ಯಂತ ಅವರ ಜನ್ಮ ದಿನವನ್ನು ವಿಶ್ವ ಜ್ಞಾನ ದಿನ ಎಂದು ಆಚರಿಸಲಾಗುತ್ತಿದೆ ಎಂದರು.
ಜ್ಞಾನವನ್ನು ಪಡೆಯಬೆಕಾದರೆ ಅಧ್ಯಯನ ಅವಶ್ಯ ಎಂದು ಪ್ರತಿಪಾದಿಸಿದ್ದ ಅಂಬೇಡ್ಕರ್ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ, ಸಮಾಜದಲ್ಲಿ ಪ್ರತಿಯೊಬರು ಶಿಕ್ಷಣ ಪಡೆಯಬೇಕು. ಸಮಾಜದಲ್ಲಿನ ಅಸ್ಪೃಶ್ಯತೆ ತೊಲಗಿಸಿ ಸಮಾನತೆಯನ್ನು ತರಲು ಶ್ರಮಿಸಿದ ಅವರು ಸಮಾಜದಲ್ಲಿನ ಅಸಮಾನತೆ ಹಾಗೂ ಲಿಂಗ ಬೇಧಗಳ ವಿರೋಧಿಸಿದ್ದರು ಎಂದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ ರವರ ಹಾಗೂ ಡಾ.ಬಾಬುಜಗಜೀವನ ರಾಮ್ ರವರ ಭಾವಚಿತ್ರಗಳ ಮೇರವಣಿಗೆಗೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಈಶ್ವರ ಕುಮಾರ್ ಕಾಂದೂ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ ಜಯಕುಮಾರ್ ಪುಷ್ಪಾರ್ಚನೆ ಮಾಡಿ ಹಸಿರು ನಿಶಾನೆ ನೀಡಿದರು.  
 ಡಾ.ಬಿ.ಆರ್. ಅಂಬೇಡ್ಕರ ರವರ ಹಾಗೂ ಡಾ.ಬಾಬುಜಗಜೀವನ ರಾಮ್ ರವರ ಭಾವಚಿತ್ರಗಳ ಮೆರವಣಿಗೆಯಲ್ಲಿ ಡೊಳುಕುಣಿತ , ವೀರಗಾಸೆ, ಲಂಬಾಣಿ ನೃತ್ಯ, ಕುಂಬ ಕಳಸ ಸೇರಿದಂತೆ ವಿವಿಧ ಕಲಾ ತಂಡಗಳು ನಗರದ ಪ್ರಮುಖ ಬೀದಿಗಳ ಮೂಲಕ ಸಾಗಿ ಜಿಲ್ಲಾ ರಂಗಮ0ದಿರದಲ್ಲಿ ಮುಕ್ತಾಯವಾಯಿತು.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಿವಿಧ ಯೋಜನೆಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಸಹಾಯಧನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರೇಣುಕಾ ಡಿ ರಾಯ್ಕರ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ ಸಿ, ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ ಜಯಕುಮಾರ ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಉಪವಿಭಾಗಾಧಿಕಾರಿ ಕನಿಷ್ಕ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಅಜ್ಜಪ್ಪ ಸೊಗಲದ್, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಮತ್ತಿತ್ತರು ಉಪಸ್ಥಿತರಿದ್ದರು.

Read These Next