ಕೋವಿಡ್ ಬಗ್ಗೆ ಜನರ ದಾರಿ ತಪ್ಪಿಸಬೇಡಿ, ರಾಮದೇವ್‌ಗೆ ದಿಲ್ಲಿ ಹೈಕೋರ್ಟ್‌ ಕಿವಿಮಾತು

Source: Vb | By I.G. Bhatkali | Published on 19th August 2022, 10:29 AM | National News |

ಹೊಸದಿಲ್ಲಿ: ಕೊರೋನಿಲ್ ಬಗ್ಗೆ ಮಾತನಾಡುವಾಗ ಅಧಿಕೃತಕ್ಕಿಂತ ಹೆಚ್ಚಿನದನ್ನು ಹೇಳುವ ಮೂಲಕ ಜನರನ್ನು ದಾರಿ ತಪ್ಪಿಸಬೇಡಿ ಎಂದು ದಿಲ್ಲಿ ಉಚ್ಚ ನ್ಯಾಯಾಲಯವು ಯೋಗಗುರು ಬಾಬಾ ರಾಮದೇವ್‌ ಅವರಿಗೆ ಸೂಚಿಸಿದೆ. ರಾಮದೇವ್‌ ಅವರ ಪತಂಜಲಿ ಆಯುರ್ವೇದ ಕಂಪೆನಿಯು ಕೋವಿಡ್ ಚಿಕಿತ್ಸೆಗಾಗಿ ಕೊರೋನಿಲ್ ಅನ್ನು ತಯಾರಿಸಿತ್ತು.

'ಆರಂಭದಿಂದಲೂ ನನ್ನ ಕಾಳಜಿಯು ಒಂದೇ. ನೀವು ನಿಮ್ಮ ಅನುಯಾಯಿಗಳನ್ನು ಹೊಂದಿರಲು, ಶಿಷ್ಯರನ್ನು ಹೊಂದಿರಲು,ನೀವು ಹೇಳಿದ್ದನ್ನೆಲ್ಲವನ್ನು ನಂಬುವ ಜನರನ್ನು ಹೊಂದಿರಲು ನಿಮಗೆ ಸ್ವಾಗತವಿದೆ. ಆದರೆ ದಯವಿಟ್ಟು ಅಧಿಕೃತವಾಗಿರುವುದಕ್ಕಿಂತ ಹೆಚ್ಚಿನದನ್ನು ಹೇಳಿ ಜನರನ್ನು ದಾರಿ ತಪ್ಪಿಸಬೇಡಿ' ಎಂದು ನ್ಯಾ. ಅನೂಪ್ ಜೆ.ಭಿಮಾನಿ ಹೇಳಿದರು. 2020 ಜೂನ್‌ನಲ್ಲಿ ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ಕೊರೋನಿಲ್ ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದ ರಾಮದೇವ್, ಅದು ಏಳು ದಿನಗಳಲ್ಲಿ ಕೋವಿಡ್‌ನ್ನು ವಾಸಿಮಾಡುತ್ತದೆ ಎಂದು ಹೇಳಿಕೊಂಡಿದ್ದರು. ಆದರೆ ಈ ಹೇಳಿಕೆಯನ್ನು ಬೆಂಬಲಿಸಿ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳನ್ನು ಅವರ ಕಂಪೆನಿಯು ಒದಗಿಸಿರಲಿಲ್ಲ.

ರಾಮದೇವ್ ತಪ್ಪು ಮಾಹಿತಿಗಳನ್ನು ಹರಡುತ್ತಿದ್ದಾರೆ ಮತ್ತು ಕೋವಿಡ್ ಸಾವುಗಳಿಗೆ ಅಲೋಪತಿ ವೈದ್ಯಕೀಯ ಪದ್ಧತಿ ಕಾರಣವೆಂದು ಹೇಳುವ ಮೂಲಕ ಜನರನ್ನು ಆಸ್ಪತ್ರೆಗಳಿಗೆ ದಾಖಲಾಗದಂತೆ ಆಗ್ರಹಿಸುತ್ತಿದ್ದಾರೆ ಎಂದು ಆರೋಪಿಸಿ ಹಲವಾರು ವೈದ್ಯರ ಸಂಘಗಳು ದಾಖಲಿಸಿರುವ ಮೊಕದ್ದಮೆಯ ವಿಚಾರಣೆಯನ್ನು ನ್ಯಾಯಾಲಯವು ಕೈಗೆತ್ತಿ ಕೊಂಡಿತ್ತು.

ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಲಸಿಕೆಯ ಬೂಸ್ಟರ್ ಡೋಸ್ ಪಡೆದ ಬಳಿಕವೂ ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ ಎಂದು ರಾಮದೇವ್ ಆ.4ರಂದು ನ್ಯಾಯಾಲಯಕ್ಕೆ ತನ್ನ ಉತ್ತರದಲ್ಲಿ ತಿಳಿಸಿದ್ದರು. ಬುಧವಾರದ ವಿಚಾರಣೆ ಸಂದರ್ಭ ಅರ್ಜಿದಾರರ ಪರ ಹಿರಿಯ ವಕೀಲ ಅಖಿಲ್ ಸಿಬಲ್ ಅವರು, ಉತ್ಪನ್ನಕ್ಕೆ ನೀಡಲಾಗಿರುವ ಪರವಾನಿಗೆಯಲ್ಲಿ ಅದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಆಯುರ್ವೇದ ಘಟಕಗಳನ್ನು ಒಳಗೊಂಡಿದೆ ಎಂದಷ್ಟೇ ಉಲ್ಲೇಖಿಸಲಾಗಿದ್ದರೂ ರಾಮದೇವ್ ಕೊರೋನಿಲ್ ಕೋವಿಡ್ ಕಾಯಿಲೆಯನ್ನು ಗುಣಪಡಿಸುತ್ತದೆ ಎಂದು ಹೇಳಿಕೊಳ್ಳುತ್ತಿದ್ದಾರೆ ಮತ್ತು ಲಸಿಕೆಯನ್ನು ಟೀಕಿಸುತ್ತಿದ್ದಾರೆ ಎಂದು ಹೇಳಿದರು.

ಆಯುರ್ವೇದದ ಖ್ಯಾತಿಯನ್ನು ನಾಶಗೊಳಿಸುತ್ತಿರುವುದು ತನಗೆ ಕಳವಳವನ್ನುಂಟು ಮಾಡಿದೆ ಎಂದು ರಾಮದೇವ್ ಪರ ಹಿರಿಯ ವಕೀಲ ಪಿ.ವಿ.ಕಪೂರ್ ಅವರಿಗೆ ತಿಳಿಸಿದ ನ್ಯಾ.ಭಿಮಾನಿ, 'ಆಯುರ್ವೇದವು ಮಾನ್ಯತೆಯನ್ನು ಹೊಂದಿರುವ ಪ್ರಾಚೀನ ವೈದ್ಯಕೀಯ ಪದ್ಧತಿಯಾಗಿದೆ. ಅದರ ಹೆಸರನ್ನು ಹಾಳು ಮಾಡುವ ಯಾವುದೇ ಕೆಲಸವನ್ನು ನಾವು ಮಾಡಬಾರದು' ಎಂದರು.

ಬ್ರೆಡನ್ ಕುರಿತು ರಾಮದೇವ್ ಹೇಳಿಕೆಯನ್ನು ಪ್ರಸ್ತಾಪಿಸಿದ ನ್ಯಾಯಾಧೀಶರು, 'ಅದು ಭಾರತದ ಸಂಬಂಧಗಳ ಮೇಲೆ ಅಂತರ್‌ರಾಷ್ಟ್ರೀಯ ಪರಿಣಾಮಗಳನ್ನು ಬೀರಬಹುದು. ನಾಯಕರನ್ನು ಹೆಸರಿಸಲಾಗುತ್ತಿದೆ ಮತ್ತು ಇದು ವಿದೇಶಗಳೊಂದಿಗೆ ನಮ್ಮ ಉತ್ತಮ ಸಂಬಂಧಗಳ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡಬಹುದು' ಎಂದು ಹೇಳಿದರು.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...