ಭಟ್ಕಳ: ಕೊಪ್ಪದ ಕಾಡಿನ ನಡುವೆ ಸೃಷ್ಟಿಯ ಆಘಾತಕಾರಿ ಪವಾಡ; ಕಾಲು ರಸ್ತೆಯ ನಡುವೆ ಕಾಣಿಸಿಕೊಂಡ ಕಂದಕ

Source: S O News | By I.G. Bhatkali | Published on 12th August 2022, 8:01 PM | Coastal News |

ಭಟ್ಕಳ: ಕಳೆದ ಆ.2ರ ನಸುಕಿನ ವೇಳೆ ಇಡೀ ಭಟ್ಕಳವನ್ನೇ ನಡುಗಿಸಿ ಬಿಟ್ಟ ಜಲ ಪ್ರಳಯದ ಆಘಾತದಿಂದ ಭಟ್ಕಳದ ಜನರು ಇನ್ನೂ ಹೊರ ಬಂದಿಲ್ಲ. ಸರಕಾರ, ಅಧಿಕಾರಿಗಳು ಇದೊಂದು ಮೇಘ ಸ್ಪೋಟ ಎಂದು ಸ್ಪಷ್ಟವಾಗಿ ಸಾರಿದ್ದರೂ, ಇಲ್ಲಿನ ಗ್ರಾಮೀಣ ಭಾಗದಲ್ಲಿ ಹಲವಾರು ಜನರು ನೆಲದಾಳದಿಂದ ಚಿನ್ನ ವೈಢೂರ್ಯ ಇರುವ ಕೊಪ್ಪರಿಗೆ ಸಮುದ್ರಕ್ಕೆ ಸೇರುವಾಗ ದಾರಿ ಮಧ್ಯೆ ಸಿಕ್ಕಿದ್ದನ್ನೆಲ್ಲ ಎಳೆದು, ತೊಳೆದುಕೊಂಡು ಹೋಯಿತು ಎಂದೇ ನಂಬುತ್ತಾರೆ. ಕಾಕತಾಳೀಯವೋ ಎಂಬಂತೆ ಭಟ್ಕಳ ಜಲಪ್ರಳಯ ನಡೆದ ರಾತ್ರಿಯೇ ತಾಲೂಕಿನ ಕೊಪ್ಪ ಹೊಸಮಕ್ಕಿ ಕಾನಕಿ ಪ್ರದೇಶದಲ್ಲಿ ಕಾಲು ದಾರಿಯಲ್ಲಿ ಇದ್ದಕ್ಕಿದ್ದಂತೆಯೇ ಆಘಾತಕಾರಿ ರೀತಿಯಲ್ಲಿ ಸುರಂಗವೊಂದು ಸೃಷ್ಟಿಯಾಗಿದೆ.

ಕೊಪ್ಪ ಗ್ರಾಮ ಪಂಚಾಯತ ಕಾನಕ್ಕಿ ರಸ್ತೆಯಲ್ಲಿ ಸುರಂಗದಂತೆ ಕಾಣಿಸಿಕೊಂಡಿರುವ ಕಂದಕದ ಬಗ್ಗೆ ಭೂಗರ್ಭ ಶಾಸ್ತ್ರಜ್ಞರೇ ಅಧ್ಯಯನ ನಡೆಸಿ ವರದಿ ನೀಡಬೇಕಾಗಿದೆ. ನಾವು ಮೇಲಿನಿಂದ ಮಣ್ಣು ಮುಚ್ಚಿ ರಸ್ತೆ ಸಮತಟ್ಟು ಮಾಡಲು ಯತ್ನಿಸಿದರೆ ಮುಂದೊಂದು ದಿನ ಮತ್ತೆ ಏನಾದರೂ ಸಂಭವಿಸಬಹುದು
- ಶರತ್ ಶೆಟ್ಟಿ, ಆರ್‍ಎಫ್‍ಓ ಭಟ್ಕಳ

ಮೇಲ್ನೋಟಕ್ಕೆ ಸಾಧಾರಣ ಹೊಂಡದಂತೆ ಕಾಣುವ ಈ ಕಂದಕದ ಸಮೀಪ ಹೋಗಿ ನೋಡಿದರೆ 100 ಅಡಿಗೂ ಆಳದವರೆಗೂ ನೆಲದಾಳದಲ್ಲಿ ಸುರಂಗ ಕೊರೆದುಕೊಂಡು ಹೋಗಿದೆ. ಅದು ಮುಂದಕ್ಕೆ ಆಳದಲ್ಲಿ ಮತ್ತಷ್ಟು ದೂರ ಹೋಗಿರುವ ಸಾಧ್ಯತೆ ದಟ್ಟವಾಗಿದೆ. ವಿಶೇಷ ಎಂದರೆ ಆಗೊಮ್ಮೆ ಈಗೊಮ್ಮೆ ಭೂಮಿಯ ಅಂತರಾಳದಲ್ಲಿ ನೀರು ಹರಿವಿನ ಶಬ್ದ ಬುಸುಗುಟ್ಟಂತೆ ಕೇಳಿಸುತ್ತಿದ್ದು, ಸುತ್ತಮುತ್ತಲಿನವರನ್ನು ದಂಗುಪಡಿಸಿದೆ. ಜೊತೆಗೆ ಭೂಮಿಯ ಮೇಲ್ಮೈ ಮತ್ತಷ್ಟು ಕುಸಿಯುವ ಆತಂಕವೂ ಎದುರಾಗಿದೆ.

ಇದರಿಂದ ಶಾಲಾ ಮಕ್ಕಳು, ಊರಿನವರು ರಸ್ತೆಯಲ್ಲಿ ಹೋಗುವುದಕ್ಕೆ ಭಯಪಡುವಂತಾಗಿದೆ. ಅಷ್ಟೇ ಅಲ್ಲದೇ ಸಮೀಪದ ಬಾಬಣ್ಣ ಹೆಗಡೆ ಎಂಬುವರ ತೋಟದಲ್ಲಿ ಜಲಪ್ರಳಯದ ದಿನವೇ ಭೂಮಿಯ ಆಳದಿಂದ ನೀರು ಹೊಳೆಯಾಗಿ ಕಾರಂಜಿಯಂತೆ ಉಕ್ಕಿ ಭೂಮಿಯ ಮೇಲಕ್ಕೆ ಬಂದು ತೋಟವನ್ನೆಲ್ಲ ಮುಚ್ಚಿ ಬಿಟ್ಟಿದೆ. ಪರಿಣಾಮವಾಗಿ ನೀರಿನೊಂದಿಗೆ ಗದ್ದೆ, ತೋಟದಲ್ಲಿ ಮಣ್ಣು, ಕೆಸರು ಶೇಖರಣೆಗೊಂಡಿದೆ.

ಕೊಪ್ಪ ಗ್ರಾಮದಲ್ಲಿ ಕಂಡು ಬಂದಿರುವ ಕಂದಕದ ಬಗ್ಗೆ ಒಂದೆರಡು ದಿನಗಳಲ್ಲಿ ತಜ್ಞರನ್ನು ಕರೆಯಿಸಿ ವರದಿ ಪಡೆಯುತ್ತೇವೆ. ನಂತರ ಮುಂದಿನ ಕ್ರಮಕ್ಕೆ ಸೂಚನೆ ನೀಡಲಾಗುವುದು 
  ಮಮತಾದೇವಿ, ಸಹಾಯಕ ಆಯುಕ್ತರು ಭಟ್ಕಳ

ಜಲಗಂಡಾಂತರ ಘಟನೆಗೆ ಭಟ್ಕಳದ ಜನರು ಆಕಾಶವನ್ನು ನೋಡಿ ಮತ್ತೆ ಪ್ರವಾಹ ಬೇಡ ಎಂದು ಬೇಡಿಕೊಳ್ಳುತ್ತಿದ್ದರೆ, ಕೊಪ್ಪದಲ್ಲಿ ನೆಲದೊಳಗಿಂದ ಹೊಳೆಯಾಗಿ ಮೇಲೇರಿ ಬಂದಿರುವುದು ಜನರು ಹೌಹಾರುವಂತೆ ಮಾಡಿದೆ. ಕಾನಕ್ಕಿಗೆ ಸಮೀಪ ಇರುವ ಬಸವನಬಾವಿ, ಐನೊಳೆ, ಉತ್ತರಕೊಪ್ಪ ಹೊಳೆ ಎಲ್ಲವೂ ಭಟ್ಕಳದ ಜೀವ ನದಿ ಕಡವಿನಕಟ್ಟೆ ಹೊಳೆಯೊಂದಿಗೆ ಸಂಬಂಧ ಬೆಸೆದುಕೊಂಡಿರುವುದರಿಂದ ಜಲಪ್ರಳಯದ ದಿನವೇ ಕೊಪ್ಪದಲ್ಲಿ ನೂರಾರು ಅಡಿ ಸುರಂಗ ಸೃಷ್ಟಿಯಾಗಿರುವುದು, ಅದರೊಳಗೆ ಹೊಳೆಯಂತೆ ನೀರು ಹರಿದು ಹೋಗುತ್ತಿರುವುದು ಭೂಗರ್ಭ ಅಧ್ಯಯನ ಪ್ರಿಯರಿಗೊಂದು ಅವಕಾಶ ಮಾಡಿಕೊಟ್ಟಿದೆ.

ಘಟನೆಯ ಬಗ್ಗೆ ವಿವರಿಸಿರುವ ಸ್ಥಳೀಯ ನಿವಾಸಿ ಬಾಬಣ್ಣ ಹೆಗಡೆ, ಭೂಮಿಯ ಆಳದಲ್ಲಿ ಜಲ ಒತ್ತಡದಿಂದ ಇಂತಹ ಕಂದಕ, ಅನಾಹುತ ಸೃಷ್ಟಿಯಾಗಿರಬಹುದು. ಈ ಬಗ್ಗೆ ಹೆಚ್ಚಿನ ಅಧ್ಯಯನದ ಅಗತ್ಯ ಇದೆ ಎಂದು ಹೇಳುತ್ತಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...