ಕಾರವಾರ: ಚುನಾವಣೆ ಯಶಸ್ಸಿಗೆ ಸಹಕರಿಸಿ ಸರ್ವರಿಗೂ ಧನ್ಯವಾದ ತಿಳಿಸಿದ ಜಿಲ್ಲಾಧಿಕಾರಿ ಡಾ.ಹರೀಶ್‍ಕುಮಾರ್ ಕೆ.

Source: S O News Service | By I.G. Bhatkali | Published on 24th April 2019, 8:20 PM | Coastal News |

ಕಾರವಾರ: ಉತ್ತರ ಕನ್ನಡ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಶಾಂತಿಯುತ ಮತದಾನಕ್ಕೆ ಸಹಕರಿಸಿ ಮತದಾನ ಪ್ರಮಾಣ ಹೆಚ್ಚಿಸಿದ ಸರ್ವರಿಗೂ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಹರೀಶ್ ಕುಮಾರ್ ಕೆ. ಧನ್ಯವಾದ ಹೇಳಿದ್ದಾರೆ.

ಮಾರ್ಚ್ 10ರಂದು ಚುನಾವಣಾ ಆಯೋಗ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ದಿನಾಂಕ ನಿಗದಿ ಮಾಡಿ ಘೋಷಣೆ ಮಾಡಿದಾಗಿನಿಂದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಭೌಗೋಳಿಕವಾಗಿ ವಿಶಾಲ ಜಿಲ್ಲೆಯಾಗಿರುವ ಉತ್ತರ ಕನ್ನಡ ಹಲವು ವೈವಿದ್ಯತೆಗಳನ್ನು ಮೈಗೂಡಿಸಿಕೊಂಡಿರುವ ಜಿಲ್ಲೆ. ಇಂತಹ ಪ್ರದೇಶದಲ್ಲಿ ಚುನಾವಣೆ ಎಂಬ ಪ್ರಜಾ ಪ್ರಭುತ್ವದ ಹಬ್ಬವನ್ನು ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ಪೂರೈಸಲಾಗಿದೆ. ಇದಕ್ಕೆ ಸಹಕರಿಸಿದ ಜಿಲ್ಲೆಯ ಎಲ್ಲ ಮತದಾರರಿಗೆ, ರಾಜಕೀಯ ಪಕ್ಷಗಳು, ಪತ್ರಕರ್ತರಿಗೆ, ಚುನಾವಣೆಯಲ್ಲಿ ವಿವಿಧ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ನನ್ನ ಎಲ್ಲ ಅಧಿಕಾರಿಗಳ ನೌಕರ ಬಂಧುಗಳಿಗೆ ಜಿಲ್ಲಾಡಳಿತದಿಂದ ಧನ್ಯವಾದಗಳು ಎಂದು ಅವರು ತಿಳಿಸಿದ್ದಾರೆ.

ವಿಶೇಷವಾಗಿ ಈ ಚುನಾವಣೆಯಲ್ಲಿ ವಿಕಲ ಚೇತನರು, ವಯೋವೃದ್ಧರು ಹಾಗೂ ಯುವಕರು ಹೆಚ್ಚಿನ ಪ್ರಮಾಣದಲ್ಲಿ ಮತದಾನಕ್ಕೆ ಆಗಮಿಸಿದ್ದಾರೆ. ಜಿಲ್ಲಾಡಳಿತದಿಂದ ರಾಜ್ಯದಲ್ಲಿಯೇ ವಿಶೇಷವಾಗಿ ರೂಪಿಸಿದ ತಂತ್ರಾಂಶದಿಂದ ಹಾಗೂ ವಿಕಲ ಚೇತನ ಮತದಾರರಿಗೆ ಸುಗಮ ಮತದಾನಕ್ಕೆ ನೀಡಲಾದ ಸಾರಿಗೆ ಸೌಲಭ್ಯ, ಇನ್ನಿತರ ಅವಕಾಶಗಳಿಂದಾಗಿ ವಿಕಲಚೇತನರ ಮತದಾನ ಪ್ರಮಾಣ ಶೇ.97ರಷ್ಟು ಆಗಿದೆ. ಈ ಸಾಧನೆ ರಾಜ್ಯದಲ್ಲಿ ಪ್ರಶಂಸೆಗೊಳಗಾಗಿದೆ. ಇಂತಹ ಮಾದರಿ ತಂತ್ರಾಂಶವನ್ನು ರೂಪಿಸಿದ ಎನ್‍ಐಸಿ ತಂತ್ರಜ್ಞರಿಗೆ ಹಾಗೂ ಇದಕ್ಕೆ ವಿಶೇಷವಾಗಿ ಆಸಕ್ತಿಯಿಂದ ಎಲ್ಲ ಜವಾಬ್ದಾರಿಗಳನ್ನು ನೋಡಿಕೊಂಡ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಅಭಿನಂದನಾರ್ಹರು. ಮತದಾನದ ಜಾಗೃತಿ ವಿಶೇಷ ಪ್ರಯತ್ನದಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶೇಖಡಾವಾರು ಮತದಾನ ಪ್ರಮಾಣ ಹೆಚ್ಚಾಗಲು ಕಾರಣವಾಯಿತು. ಅದಕ್ಕೆ ಎಲ್ಲ ಮಾಧ್ಯಮಗಳೂ ಸಹಕಾರ ನೀಡಿವೆ ಎಂದು ಅವರು ಸ್ಮರಿಸಿದ್ದಾರೆ.

ಆಯೋಗದ ಮಾರ್ಗಸೂಚಿಯಂತೆ ಚುನಾವಣಾ ಮಾದರಿ ನೀತಿ ಸಂಹಿತೆ ಕಟ್ಟು ನಿಟ್ಟಾಗಿ ಪಾಲಿಸುವುದು ನಮ್ಮ ಕರ್ತವ್ಯ. ಇದಕ್ಕಾಗಿ ನಮ್ಮ ನಿಯೋಜಿತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಹಗಲು-ರಾತ್ರಿ ದುಡಿದಿದ್ದಾರೆ. ಕಟ್ಟು ನಿಟ್ಟಾದರೂ ಸಿಟ್ಟಿಲ್ಲದೆ ಸೌಜನ್ಯದಿಂದ ಜನರೊಂದಿಗೆ ವರ್ತಿಸಿ ನಿಯಮ ಪಾಲಿಸಿದ್ದಾರೆ. ಜನರೂ ಅದೇ ರೀತಿಯ ಪ್ರತಿಸ್ಪಂದನೆ ನೀಡಿದ್ದಾರೆ. ವಿಶೇಷವಾಗಿ ಜಿಲ್ಲೆಯಲ್ಲಿ ಎಲ್ಲೂ ಒಂದೂ ಅಹಿತರ ಘಟನೆಗಳು ನಡೆಯದಂತೆ ಶಾಂತಿಯುತ ಮತದಾನಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರ ನೇತೃತ್ವದ ಇಲಾಖೆಯ ಎಲ್ಲ ಪೊಲೀಸರು ಕರ್ತವ್ಯ ನಿರ್ವಹಿಸಿದ್ದಾರೆ. ಜನರೂ ಕೂಡ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿದ್ದಾರೆ. 

ನಮ್ಮದು ಬಹುದೊಡ್ಡ ಪ್ರಜಾ ಪ್ರಭುತ್ವ ವ್ಯವಸ್ಥೆ. ಅಭಿಪ್ರಾಯ ಭೇದಗಳು ಸಹಜವಾಗಿ ಬರುವುದು ಮನುಕುಲ ಧರ್ಮ, ಅಂತೆಯೇ ಕೊರತೆಗಳೂ ಕಾಣಬಹುದಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಬೇಡಿಕೆಗಳನ್ನು ಮುಂದಿಟ್ಟು ಮತದಾನ ಬಹಿಷ್ಕಾರದ ಕೂಗು ಅಲ್ಲಲ್ಲಿ ಸಹಜವಾಗಿ ಕೇಳಿ ಬಂದವ್ತು. ಆದರೆ ಪ್ರಜಾ ಪ್ರಭುತ್ವದ ಪ್ರಮುಖ ಅಸ್ತ್ರವಾದ ಮತದಾನದ ಮೂಲಕವೇ ಜನರು ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಬೇಕು ಎಂದು ನಮ್ಮ ಅಧಿಕಾರಿಗಳು ಅವರಿಗೆ ಮನವರಿಕೆ ಮಾಡಿಕೊಟ್ಟ ನಂತರ ಎಲ್ಲ ಅಸಮಧಾನಗಳು, ದುಗುಡಗಳು ಮಂಜಿನಂತೆ ಕರಗಿ ನಂಜಾಗದಂತೆ ಪ್ರಜಾಪ್ರಭುತ್ವವನ್ನು ಗೆಲ್ಲಿಸಿದ್ದಾರೆ. ಜಿಲ್ಲಾಡಳಿತ ಎಂದೂ ಜನರ ಸೇವೆಗೆ ಇದೆ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತಾ ಸಹಕರಿಸಿದ ಎಲ್ಲ ಸಂಘ ಸಂಸ್ಥೆಗಳಿಗೆ, ಸಾರ್ವಜನಿಕರಿಗೆ, ಅಧಿಕಾರಿಗಳಿಗೆ, ನೌಕರ ಸಿಬ್ಬಂದಿ ವರ್ಗದವರಿಗೆ, ಮತಗಟ್ಟೆ ಅಧಿಕಾರಿ ಸಿಬ್ಬಂದಿ ವರ್ಗದವರೂ ಸೇರಿದಂತೆ ಎಲ್ಲರಿಗೂ ಜಿಲ್ಲಾಡಳಿತದಿಂದ ಧನ್ಯವಾದಗಳನ್ನು ಹೇಳುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...