ಪೂರ್ವಾನುಮತಿ ಇಲ್ಲದೆ ಕೇಂದ್ರಸ್ಥಾನ ತೊರೆದ ಮುಖ್ಯಾಧಿಕಾರಿಗಳಿಗೆ ಡಿಸಿ ನೋಟಿಸ್; ಹೊನ್ನಾವರ ಮುಖ್ಯಾಧಿಕಾರಿಗೆ ಕರ್ತವ್ಯದಿಂದ ಬಿಡುಗಡೆ

Source: sonews | By Staff Correspondent | Published on 23rd July 2019, 5:26 PM | Coastal News |

ಕಾರವಾರ: ಪೂರ್ವಾನುಮತಿ ಇಲ್ಲದೆ ಕೇಂದ್ರಸ್ಥಾನ ತೊರೆದ ನಾಲ್ವರು ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಹರೀಶ್‍ಕುಮಾರ್ ಕೆ. ಕಾರಣ ಕೇಳಿ ನೋಟಿಸ್ ಜಾರಿಗೊಳಸಿದ್ದಾರೆ.

ಕರಾವಳಿ ಭಾಗದಲ್ಲಿ ತೀವ್ರ ಮಳೆ ಬೀಳುತ್ತಿದ್ದು ಕಟ್ಟೆಚ್ಚರ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದರೂ ಯಾವುದೇ ಪೂರ್ವಾನುಮತಿ ಪಡೆಯದೆ ಕೇಂದ್ರ ಸ್ಥಾನ ತೊರೆದಿರುವುದು ತಮ್ಮ ಕರ್ತವ್ಯದಲ್ಲಿರುವ ಬೇಜವಾಬ್ದಾರಿತನವನ್ನು ತೋರಿಸುತ್ತಿದ್ದು 24 ಗಂಟೆಯೊಳಗೆ ಲಿಖಿತ ಸಮಜಾಯಿಷಿ ನೀಡದಿದ್ದರೆ ಶಿಸ್ತುಕ್ರಮ ಜರುಗಿಸುವುದಾಗಿ ಸೋಮವಾರ ಅವರು ನೀಡಿರುವ ನೋಟಿಸ್‍ನಲ್ಲಿ ತಿಳಿಸಿದ್ದಾರೆ.

ಭಟ್ಕಳ ಪುರಸಭೆ ಮುಖ್ಯಾಧಿಕಾರಿ ಡಿ.ದೇವರಾಜು, ಕುಮಟಾ ಪುರಸಭೆ ಮುಖ್ಯಾಧಿಕಾರಿ ಸುರೇಶ್ ಎಂ.ಕೆ., ಅಂಕೋಲಾ ಪುರಸಭೆ ಮುಖ್ಯಾದಿಕಾರಿ ಬಿ.ಪ್ರಹ್ಲಾದ್ ಹಾಗೂ ಹೊನ್ನಾವರ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎಚ್.ವೈ.ಮಣ್ಣವಡ್ಡರ ಇವರಿಗೆ ಕಾರಣಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ.

ಹೊನ್ನಾವರದಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಸ್ಥಿತಿ ಕುರಿತು ಈವರೆಗೂ ಮಾಹಿತಿ ನೀಡದೆ ನಿರ್ಲಕ್ಷ್ಯ ತೋರಿದ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎಚ್.ವೈ..ಮಣ್ಣವಡ್ಡರ ಇವರನ್ನು ಕರ್ತವ್ಯದಿಂದಲೇ ಬಿಡುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ್‍ಕುಮಾರ್ ಕೆ. ತಿಳಿಸಿದರು.

ನಗರ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳು ಜಿಲ್ಲಾಧಿಕಾರಿಗಳ ಆಡಳಿತ ನಿಯಂತ್ರಣಕ್ಕೆ ಒಳಪಟ್ಟಿದ್ದು ಸದರಿ ಅಧಿಕಾರಿಗಳು ಕೇಂದ್ರಸ್ಥಾನ ಬಿಡುವ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಪಡೆಯುವುದು ಅವಶ್ಯ ಇರುತ್ತದೆ. ಆದರೆ ಜುಲೈ 20 ಮತ್ತು 21ರಂದು ಈ ನಾಲ್ವರು ಅಧಿಕಾರಿಗಳು ಯಾವುದೇ ಪೂರ್ವಾನುಮತಿ ಇಲ್ಲದೆ ಕೇಂದ್ರಸ್ಥಾನ ತೊರೆದ ಹಿನ್ನೆಲೆಯಲ್ಲಿ ನೋಟಿಸ್ ಜಾರಿಗೊಳಿಸಲಾಗಿದೆ ಎಂದರು.

ಕರಾವಳಿ ಭಾಗದಲ್ಲಿ ಬಹಳಷ್ಟು ಮಳೆ ಬೀಳುತ್ತಿರುವುದರಿಂದ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ನಗರದ ಸ್ವಚ್ಛತೆ, ಕುಡಿಯುವ ನೀರಿನ ಕುರಿತು ತುರ್ತು ಕ್ರಮ ವಹಿಸುವ ಅಗತ್ಯವಿದೆ. ಇಲ್ಲವಾದರೆ ನಗರದಲ್ಲಿ ರೋಗ ಹರಡುವ ಸಂಭವ ಇರುವುದರಿಂದ ಇಂತಹ ಅವಘಡಗಳು ಆಗದೇ ಇರುವ ಸಲುವಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಕೇಂದ್ರ ಸ್ಥಾನದಲ್ಲಿ ಹಾಜರಿದ್ದು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಪೂರ್ವಾನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡತಕ್ಕದ್ದಲ್ಲ. ಒಂದೊಮ್ಮೆ ಅಂತಹ ಪ್ರಕರಣಗಳು ಕಂಡುಬಂದರೆ ನಿಯಮಾನುಸಾರ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಯವರು ಸೂತ್ತೋಲೆ ಹೊರಡಿಸಿದ್ದಾರೆ ಹಾಗೂ ಹೊನ್ನಾವರ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎಚ್.ವೈ.ಮಣ್ಣವಡ್ಡರ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿದ ಸುತ್ತೋಲೆಯಲ್ಲಿ ಅವರು, ಕಚೇರಿ ಕಾರ್ಯ ಕಲಾಪಗಳ ಬಗ್ಗೆ ತಿಳಿವಳಿಕೆ ಇಲ್ಲದ ಇವರನ್ನು ಮುಖ್ಯಾಧಿಕಾರಿ ಹುದ್ದೆಗೆ ನಿಯುಕ್ತಿಗೊಳಿಸಬಾರದಾಗಿ ಜಿಲ್ಲಾಧಿಕಾರಿಯವರು ಸರ್ಕಾರದ ಅಧೀನ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ ಇವರಿಗೆ ಸಲ್ಲಿಸಿರುವ ಪ್ರತಿಯಲ್ಲಿ ಕೋರಿದ್ದಾರೆ.
 

Read These Next

ಪ್ರಾರ್ಥನಾ ಪ್ರತಿಷ್ಠಾನ ಹಾಗೂ ಆನಂದಾಶ್ರಮ ಪ.ಪೂ. ಕಾಲೇಜಿನ ಸಹಯೋಗದಲ್ಲಿ ರಸಪ್ರಶ್ನೆ ಕಾರ್ಯಕ್ರಮ ಸಂಪನ್ನ 

ಪ್ರಾರ್ಥನಾ ಪ್ರತಿಷ್ಠಾನ ಹಾಗೂ ಆನಂದಾಶ್ರಮ ಪ.ಪೂರ್ವ ಕಾಲೇಜಿನ ಸಹಯೋಗದಲ್ಲಿ ಭಟ್ಕಳ ತಾಲೂಕಿನ ಹೈಸ್ಕೂಲಿನ ಪ್ರೌಢಶಾಲಾ ...