ಭಟ್ಕಳ: ರಾಜ್ಯದ ವಿವಿದೆಡೆ ಮುಂದುವರೆದ ಮಳೆ; ಟೊಮ್ಯಾಟೋ ದರ ಮತ್ತೆ ಗಗನಕ್ಕೆ; ಮಹಾರಾಷ್ಟ್ರದತ್ತ ಮಾರಾಟಗಾರರು

Source: S O News | By I.G. Bhatkali | Published on 7th December 2021, 9:07 PM | Coastal News |

ಭಟ್ಕಳ: ರಾಜ್ಯದಲ್ಲಿ ಮುಂದುವರೆದ ಮಳೆ ಕೃಷಿಕನ ಬದುಕಿನ ಮೇಲೆ ಬರೆ ಎಳೆಯುವಂತೆ ಮಾಡಿದೆ. ನಿರಂತರ ಮಳೆಯಿಂದಾಗಿ ವಿಶೇಷವಾಗಿ ಟೊಮ್ಯಾಟೋ ಬೆಳೆ ಕೈಕೊಟ್ಟಿದ್ದು, ದರ ಮತ್ತೆ ಗಗನಕ್ಕೆ ಏರಿದೆ.

ಭಟ್ಕಳ ಸುತ್ತಮುತ್ತಲಿನ ತಾಲೂಕುಗಳ ವ್ಯಾಪಾರಿಗಳು ಟೊಮ್ಯಾಟೋ ಮತ್ತಿತರ ತರಕಾರಿಗಳಿಗಾಗಿ ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ಚಿಕ್ಕಮಗಳೂರು ಪ್ರದೇಶಗಳನ್ನು ಅವಲಂಬಿಸಿಕೊಂಡಿದ್ದಾರೆ. ಅದರಲ್ಲಿಯೂ ಬೆಳಗಾವಿ ಭಾಗಗಳಿಂದ ಹೆಚ್ಚಿನ ತರಕಾರಿ ಭಟ್ಕಳ ಸಂತೆ ಮಾರುಕಟ್ಟೆಗೆ ಬಂದಿಳಿಯುತ್ತವೆ. ಆದರೆ ನಿರಂತರ ಮಳೆಯಿಂದಾಗಿ ಟೊಮ್ಯಾಟೋ ಖರೀದಿಯ ಮೇಲೆ ಪರಿಣಾಮವನ್ನು ಬೀರಿದೆ. ರವಿವಾರ ಭಟ್ಕಳ ಸಂತೆಯಲ್ಲಿ

 ಬೆಳಗಾವಿ, ಹುಬ್ಬಳ್ಳಿ ಕಡೆ ಭಾರೀ ಮಳೆಯಿಂದಾಗಿ ಟೊಮ್ಯಾಟೋ ಗಿಡ ನಾಶವಾಗಿದೆ, ಅದಕ್ಕಾಗಿ ನಿನ್ನೆ ಮಾರುಕಟ್ಟೆಗೆ ಟೊಮ್ಯಾಟೋ ಬಂದಿಲ್ಲ. ಇದರಿಂದ ದರ ಏರಿಕೆಯಾಗಿದೆ.
 ನಾಗೇಶ ನಾಯ್ಕ, ತರಕಾರಿ ವ್ಯಾಪಾರಸ್ಥರು

ನಡೆಯಬೇಕಾಗಿದ್ದ ಟೊಮ್ಯಾಟೋ ಮಾರಾಟ, ವಹಿವಾಟಿನಲ್ಲಿ ವ್ಯತ್ಯಯ ಉಂಟಾಗಿದೆ. ಪರಿಣಾಮವಾಗಿ 3-4 ದಿನಗಳ ಹಿಂದೆಯಷ್ಟೇ ಪ್ರತಿ ಕೆಜಿಗೆ ರು.30-40ಕ್ಕೆ ಕುಸಿದಿದ್ದ ಟೊಮ್ಯಾಟೋ ದರ ರವಿವಾರ ದಿಢೀರನೇ ಪ್ರತಿ ಕೆಜಿಗೆ ರು.80ಕ್ಕೆ ಸೇರಿಕೆ ಕಂಡಿದೆ.

ಇದರಿಂದಾಗಿ ಮಾರುಕಟ್ಟೆಗೆ ಬಂದಿದ್ದ ಜನರು ಟೊಮ್ಯಾಟೋ ದರ ಕೇಳಿ ಕಂಗಾಲಾಗಿದ್ದಾರೆ. ಸಸ್ಯಹಾರಿಯಾಗಿರಲಿ, ಮಾಂಸಹಾರಿಯಾಗಿರಲಿ, ಬಡವ, ಬಲ್ಲಿದ ಯಾರೇ ಆಗಿರಲಿ, ಅಡುಗೆ ಮನೆಯಲ್ಲಿ ಹೆಚ್ಚಾಗಿ ಟೊಮ್ಯಾಟೋ ಬಳಕೆಯಾಗುತ್ತದೆ, ದರ ಈ ಪರಿಯಲ್ಲಿ ಏರಿಕೆ ಕಂಡರೆ ಏನು ಮಾಡುವುದು, ನಮಗೇನೂ ದಿನದ ಸಂಬಳ ಏರಿಕೆಯಾಗಿಲ್ಲ, ಕೇವಲ ಟೊಮ್ಯಾಟೋ ಮಾತ್ರ ಅಲ್ಲ, ಎಲ್ಲ ತರಕಾರಿಯ ದರ ಏರುತ್ತಲೇ ಇದೆ, ಅಲ್ಪಸ್ವಲ್ಪ ದರ ಏರಿಕೆಯಾದರೆ ಸಹಿಸಿಕೊಳ್ಳಬಹುದು, ಆದರೆ 3-4 ಪಟ್ಟು ಏರಿಕೆಯಾದರೆ ಏನಂತ ಖರೀದಿಸುವುದು, ಯಾರಿಗೆ ಹೇಳುವುದು ಎಂದು ಸಂತೆಯಲ್ಲಿಯೇ ಕೆಲವರು ಅವಲತ್ತುಕೊಳ್ಳುತ್ತಿದ್ದುದು ಕಂಡು ಬಂತು. ಈ ಕುರಿತು ತರಕಾರಿ ವ್ಯಾಪಾರಿಗಳನ್ನು ಕೇಳಿದರೆ, ಟೊಮ್ಯಾಟೋ ದರ ಏರಿಕೆ ಬೆಳಗಾವಿ, ಹುಬ್ಬಳ್ಳಿ ಭಾಗದಲ್ಲಿ ವಿಪರೀತ ಮಳೆ, ಟೊಮ್ಯಾಟೋ ಗಿಡ ಸಂಪೂರ್ಣವಾಗಿ ನೆಲ ಕಚ್ಚಿದೆ, ಇದರಿಂದ ಖರೀದಿ ಸಾಧ್ಯವಾಗಿಲ್ಲ ಎನ್ನುತ್ತಾರೆ. ಮಳೆ ಮುಂದುವರೆದರೆ ದರ ಇಳಿಕೆಯಾಗುವುದು ಕಷ್ಟಸಾಧ್ಯ, ಈ ಬಗ್ಗೆ ಸರಕಾರವೇ ಏನನ್ನಾದರೂ ಮಾಡಬೇಕು ಎನ್ನುವ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. 

ನಾಸಿಕ್‍ನಿಂದ ಬಂತು ಟೊಮ್ಯಾಟೋ:
ಟೊಮ್ಯಾಟೋ ಲಭ್ಯತೆ ಇಳಿಮುಖವಾಗುತ್ತಿದ್ದಂತೆಯೇ ಇಲ್ಲಿನ ಟೊಮ್ಯಾಟೋ ಮಾರಾಟಗಾರರು ಮಹಾರಾಷ್ಟ್ರದತ್ತ ಮುಖ ಮಾಡಿದ್ದಾರೆ. ಮಹಾರಾಷ್ಟ್ರ ನಾಸೀಕ್‍ನಿಂದ ಟನ್‍ಗಟ್ಟಲೆ ಟೊಮ್ಯಾಟೋ ಅನ್ನು ಖರೀದಿಸಿ ತರಲಾಗುತ್ತಿದ್ದು, ಹೊನ್ನಾವರ, ಭಟ್ಕಳ, ಕುಂದಾಪುರ, ಉಡುಪಿ, ಮಂಗಳೂರಿನವರೆಗೆ ಅಲ್ಲಿಂದಲೇ ಟೊಮ್ಯಾಟೋ ಸರಬರಾಜಾಗುತ್ತಿದೆ. ಹೊರ ರಾಜ್ಯದಿಂದ ಟೊಮ್ಯಾಟೋ ಆಮದಿಗೆ ಚಾಲನೆ ಸಿಕ್ಕಿದ್ದರೂ ಸದ್ಯಕ್ಕೆ ದರ ಇಳಿಮುಖವಾಗುವ ಸಾಧ್ಯತೆ ಕ್ಷೀಣಿಸಿದೆ.

Read These Next

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭ್ರಮದಿಂದ ಗಣರಾಜ್ಯೋತ್ಸವ ಆಚರಣೆ. ಕೃಷಿ, ಉದ್ಯಮ, ಪ್ರವಾಸೋದ್ಯಮ, ಸಂಸ್ಕೃತಿ ಸ್ನೇಹಿ ಜಿಲ್ಲೆಯನ್ನಾಗಿ ದ. ಕ. ಅಭಿವೃದ್ಧಿ : ಸಚಿವ ವಿ. ಸುನೀಲ್ ಕುಮಾರ್

ಮಂಗಳೂರು : ಮುಂಬರುವ ದಿನಗಳಲ್ಲಿ ಕೃಷಿ, ಉದ್ಯಮ, ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಸ್ನೇಹಿ ಜಿಲ್ಲೆಯನ್ನಾಗಿ ದಕ್ಷಿಣ ಕನ್ನಡವನ್ನು ...

ಬಡವ, ಬಲ್ಲಿದನೆಂಬ ಭೇದ ಮರೆತು ಸಶಕ್ತ ರಾಷ್ಟ್ರ ನಿರ್ಮಾಣ ಮಾಡೋಣ : ಕೋಟ ಶ್ರೀನಿವಾಸ ಪೂಜಾರಿ.

ಕಾರವಾರ : ಸ್ವಾತಂತ್ರ್ಯ ಗಳಿಸಿದ ಏಳು ದಶಕಗಳಲ್ಲಿ ಭಾರತೀಯರು ಅನೇಕ ಕ್ಷೇತ್ರಗಳಲ್ಲಿ ಗಣನೀಯ ಮತ್ತು ಗಂಭೀರ ಸಾಧನೆ ಮಾಡಿದ್ದೇವೆ. ಕೃಷಿ, ...